ಮೂಡುವನು ರವಿ ಮೂಡುವನು
ಕತ್ತಲೊಡನೆ ಜಗಳಾಡುವನು
ಮೂಡಣ ರಂಗಸ್ಥಳದಲಿ ನೆತ್ತರ
ಮಾಡುವನು ಕುಣಿದಾಡುವನು.

ಶನಿವಾರ ಬಂತೆಂದರೆ ಶಾಲೆಯಲ್ಲಿ ಪದ್ಯಗಳದ್ದೇ ಸದ್ದು ಮೊಳಗುತ್ತಿದ್ದ ಕಾಲವದು. ಕಂಠಪಾಠ ಮಾಡಿ ಒಪ್ಪಿಸದಿದ್ದರೆ ಶಿಕ್ಷಕರ ಬೆತ್ತದ ಏಟೂ ಮಾರ್ನಿಂಗ್ ಕ್ಲಾಸಿನ ಚಳಿಗೆ ಬಿಸಿಹುಟ್ಟಿಸುವಂತೆಯೇ ಇರುತ್ತಿತ್ತು. ’ಸುರಸುಂದರ ತರುಲತೆಗಳ ಬೃಂದಾವನ ಲೀಲೆ’, ’ಗೋವಿನಹಾಡು’, ’ಪುಣ್ಯಕೋಟಿ’, ಒಂದೊಂದೂ ಮುತ್ತುಗಳಂತೆ ಪೋಣಿಸಲ್ಪಟ್ಟಿದ್ದವು. ಪಠ್ಯದಲ್ಲೂ ಯಾವುದೇ ಕೊರತೆ ಕಾಣದ ಸಮೃದ್ಧತೆ ಇದ್ದುದನ್ನು ನಾವು ಕಂಡಿದ್ದೇವೆ.

ಕಾಲ ಬದಲಾದಂತೆಲ್ಲ ಅರಿವಿನ ವ್ಯಾಪ್ತಿ ವಿಸ್ತಾರವಾದಂತೆ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಹೊಸ ನೀತಿಗಳು ರೂಪಿಸಲ್ಪಟ್ಟು ಪಠ್ಯದಲ್ಲೂ ಸಾಕಷ್ಟು ಬದಲಾವಣೆಗಳು, ಮಾರ್ಪಾಡುಗಳಾಗುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಸಮಕಾಲೀನ ಲೇಖಕರ ಪಠ್ಯಗಳೂ ಜಾಗ ಪಡೆದಿದ್ದು ಸ್ವಾಗತಾರ್ಹ. ’ಪಠ್ಯ ಪರಿಷ್ಕರಣೆ’ ಕಾಲಕ್ಕನುಗುಣವಾಗಿ ಸಮಿತಿಯಲ್ಲಿ ನೆಡೆಯುತ್ತಿದೆ. ನನ್ನ ವಿಚಾರ ಇದರ ಪರವಾಗಿ ಅಥವಾ ವಿರುದ್ಧವಾಗಿ ಅಲ್ಲ! ಬದಲಾವಣೆ ಜಗದ ನಿಯಮವಾಗಿರುವಾಗಎಂದೋ ಕೊಟ್ಟ ಪಠ್ಯಗಳೇ ಇಡೀ ಬದುಕಿನ ಪರ್ಯಂತ ಇರಬೇಕೆನ್ನುವುದು ತಪ್ಪು.

ಬದಲಾಗುತ್ತಿರುವ ಜಗತ್ತಿನ ವಿದ್ಯಮಾನಕ್ಕನುಗುಣವಾಗಿ ಮುಂದಿನ ತಲೆಮಾರನ್ನು ಸದೃಢವಾಗಿಸುವ, ಸಮರ್ಥರನ್ನಾಗಿಸುವ ನಿಟ್ಟಿನಲ್ಲಿ ಹೊಸ ವಿಚಾರಗಳನ್ನು ಪಠ್ಯ ರೂಪದಲ್ಲಿ ಕೊಡಬೇಕಾದ ಜವಾಬ್ದಾರಿ ಘನ ಸರ್ಕಾರದ ಮೇಲಿದೆ; ಆದರೆ ಬದಲಾವಣೆಯ ವೇಗದಲ್ಲಿ ಈ ನೆಲದ ಸಂಸ್ಕೃತಿ ಮತ್ತು ಆದರ್ಶಗಳು ಮರೆಯಾಗದಿರಲಿ ಅನ್ನುವುದು ನನ್ನಂತಹವರ ಕಳಕಳಿ, ಅಷ್ಟೇ ಅಲ್ಲ ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಪ್ರತೀ ರಾಜ್ಯಗಳಿಗೂ ತಮ್ಮದೇ ಆದ ಅಸ್ಮಿತೆಯಿದ್ದು ರಾಷ್ಟ್ರೀಯತೆಯನ್ನು ಹೇಳುವಲ್ಲಿ ಪ್ರಾದೇಶಿಕತೆಗಾಗಲಿ, ಪ್ರಾದೇಶಿಕತೆ ರೂಪಿಸುವಲ್ಲಿ ರಾಷ್ಟ್ರೀಯ ಏಕತೆಗಾಗಲಿ ಧಕ್ಕೆಯಾಗದಿರಲಿ ಅನ್ನುವ ಭಾವನೆ ನನ್ನದು. ಇದಿಷ್ಟೇ ಆಗಿದ್ದರೆ ಬಹುಶಃ ಈ ಲೇಖನ ಮೂಡುತ್ತಿರಲಿಲ್ಲ, ಅಗತ್ಯವೂ ಇರಲಿಲ್ಲ. ಮೇಲೆ ಹೇಳಿದ ಪದ್ಯದ ಕೊನೆಯ ಸಾಲುಗಳು ಇಂತಿವೆ,,,,

                ಏರುವನು ರವಿ ಏರುವನು
              ಬಾನೊಳು ಸಣ್ಣಗೆ ತೋರುವನು
              ಏರಿದವನು ಚಿಕ್ಕವನಿರಬೇಕಲೆ 
              ಎಂಬಾ ಮಾತನು ಸಾರುವನು. 

ಯಾವುದೆ ಎಡ – ಬಲ ಪಂಥಗಳ ಗೋಜಿಗೂ ಹೋಗದೆ; ಹೋಗುವುದಿರಲಿ ಅದರ ಅರಿವೂ ಇಲ್ಲದೆ ತಿಳಿಯಾಗಿ ಬಾಳಿದ ನಮ್ಮ ಪೂರ್ವಿಕರು’ ನಮಗೆಲ್ಲ ಎಂತೆಂಥ ಒಳ್ಳೊಳ್ಳೆ ಪಾಠಗಳಿದ್ದವು, ಪದ್ಯಗಳಿದ್ದವು’ ಎಂದು ಲೋಕ ರೂಢಿಯಾಗಿ ಮಾತನಾಡಿದ್ದನ್ನು ಕೇಳಿದ್ದೇವೆ.
ಅದೇನೆ ಇರಲಿ ಇದೀಗ ಮಾತ್ರ ಎಲ್ಲೆಡೆ ಚರ್ಚೆಯಾಗುತ್ತಿರುವ, ವಿವಾದವನ್ನೇ ಸೃಷ್ಟಿಸಿರುವ ವಿಷಯ ’ಪಠ್ಯ ಪರಿಷ್ಕರಣೆ’ ಈ ವಿವಾದದಲ್ಲಿ ರಾಜಕೀಯ ಪಕ್ಷಗಳು ಸುಮ್ಮನೆ ಕುಳಿತಿಲ್ಲ! ಉರಿಯುವ ಬೆಂಕಿಯಲ್ಲಿ ಚಳಿಕಾಯಿಸಿಕೊಳ್ಳವ ಕೆಲಸವನ್ನು ನಿಷ್ಠೆಯಿಂದ ಮಾಡಿತ್ತಿವೆ! ಇದನ್ನು ಹೊರತು ಪಡಿಸಿ ಯಾವುದೇ ಸೈದ್ಧಾಂತಿಕ ನಿಲುವುಗಳು ಕಂಡುಬರುತ್ತಿಲ್ಲವೆನಿಸುತ್ತಿದೆ. ಸೈದ್ಧಾಂತಿಕ ನಿಲುವುಗಳು ಅಲ್ಲೊಂದು ಇಲ್ಲೊಂದು ಧ್ವನಿ ಮಾಡಿದರೂ ಎಡ- ಬಲ ಪಂಥಗಳ ತಿಕ್ಕಾಟಕ್ಕೆ ಮಂಕಾಗಿರುವುದನ್ನು ಕಾಣುತ್ತೇವೆ. ಪಠ್ಯಪುಸ್ತಕ ಅಂದರೆ ಸರಸ್ವತಿಯ ಸ್ವರೂಪ ಎಂದು ಪೂಜಿಸಿ ಆರಾಧಿಸುತ್ತಿದ್ದ ನಾವುಗಳು ಅದೇ ಸರಸ್ವತಿಯನ್ನು ಬೀದಿಗೆ ತಂದು ಧೂಳೆಬ್ಬಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಯಾವುದೇ ಚರ್ಚೆಗಳು ವೈಚಾರಿಕ ಹಾಗೂ ವೈಜ್ಞಾನಿಕ ನೆಲೆಗಟ್ಟಿನಲ್ಲಿ ನೆಡೆದರೆ ಅದಕ್ಕೆ ಯಾರ ಆಕ್ಷೇಪವಿಲ್ಲ. ಆದರೆ ಇಲ್ಲಿ ನೆಡೆದಿರುವುದು ಕೇವಲ ಎಡ-ಬಲ ರಾಜಕಾರಣ! ಸರ್ಕಾರಗಳು ಬದಲಾದಂತೆ ಪಠ್ಯಗಳೂ ಬದಲಾಗಬೇಕೆ!? ಹಿಂದೆಂದೂ ನಮಗೆ ಹಾಗನಿಸಿರಲಿಲ್ಲ. ಇತ್ತೀಚೆಗೆ ರಾಷ್ಟ್ರೀಯ ಪಕ್ಷವೂಂದರ ಹಿರಿಯ ರಾಜಕಾರಣಿಯೊಬ್ಬರು “ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪಠ್ಯದಲ್ಲಿ ಬದಲಾವಣೆ ಮಾಡುತ್ತೇವೆ” ಈ ಮಾತು ಸರ್ಕಾರ ಬದಲಾದರೆ ಪಠ್ಯವೂ ಬದಲಾವಣೆಯಾಗಬಹುದೆಂಬ ಮುನ್ಸೂಚನೆಗೆ ಪುಷ್ಟಿ ನೀಡುವಂತಿದೆ. ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಪಠ್ಯಪುಸ್ತಕದ ವಿಚಾರವನ್ನೂ ಒಂದು ಅಸ್ತ್ರವಾಗಿ ಮಾಡಿಕೊಂಡಾರೇನೋ ಎಂಬ ಆತಂಕವೂ ಪ್ರಜ್ಞಾವಂತ ನಾಗರೀಕರಲ್ಲಿ ಮನೆಮಾಡಿದೆ.

“ಉದಾತ್ತ ಚಿಂತನೆಗಳು ನಮಗೆ ಎಲ್ಲಾ ಕಡೆಯಿಂದಲೂ ಬರಲಿ” ಈ ವಾಕ್ಯ ’ಬಲ’ ದ ಕಡೆಯಿಂದ ಬಂದರೂ ಭಲವಾದುದೇ! ಸರ್ವರೂ ಒಪ್ಪುವಂತದ್ದು. ಹಾಗೆಯೇ ಎಡ ಪಂಥೀಯ ಎಂದು ಗುರ್ತಿಸಲ್ಪಟ್ಟ ಎಷ್ಟೋ ನಿಲುವುಗಳು ಜನಪರ ಕಾಳಜಿಯಿಂದ ಕೂಡಿವೆ ಅನ್ನುವುದೂ ಸತ್ಯ. ಒಳ್ಳೆಯ ಅಂಶಗಳು ಎಲ್ಲಿಂದ ಬಂದರೇನು, ಸ್ವೀಕರಿಸುವ ವಿಶಾಲ ಮನೋಭಾವ ನಮ್ಮದಾಗಬೇಕು.
ಹಿರಿಯ ಸಾಹಿತಿಗಳು ಹಾಗೂ ಲೇಖಕರ ಮಾರ್ಗದಲ್ಲಿ ಯುವ ಸಾಹಿತಿ ಹಾಗೂ ಲೇಖಕರ ಹೊಸ ಚಿಂತನೆಗಳು ಪಠ್ಯದಲ್ಲಿ ಬರಬೇಕು. ಇದರಿಂದ ಮುಂದಿನ ತಲೆಮಾರಿಗೆ ಪ್ರೇರಣೆ ದೊರೆಯುತ್ತದೆ. ಅದನ್ನು ಬಿಟ್ಟು ಹಿರಿಯ ಕವಿ, ಲೇಖಕರು ಹಾಗೂ ಚಿಂತಕರ ವಿಚಾರಗಳನ್ನಿಟ್ಟುಕೊಂಡು ತಮ ತಮಗೆ ಬೇಕಾದಂತೆ ನಾಲಿಗೆ ಹರಿಬಿಡುತ್ತಾ ಹೋಗುವುದು ಈ ನಾಡಿಗೆ ಮಾಡಿದ ಅಪಮಾನವಲ್ಲವೆ? ಇವರಿಬ್ಬರ ಎಳೆದಾಟದಲ್ಲಿ ಈ ನಾಡಿನ ಧೀ:ಶಕ್ತಿಗಳನ್ನು ಬೀದಿಗೆ ತಳ್ಳಿದಂತಾಗುವುದಿಲ್ಲವೆ? ಹೀಗಿರುವಾಗ ಮಕ್ಕಳಲ್ಲಿ ಈ ನಾಡಿನ ಸಾಹಿತ್ಯ ಸಂಸ್ಕೃತಿಯ ಬಗ್ಗೆ ಗೌರವ,ಅಭಿಮಾನವಾದರೂ ಹೇಗೆ ಬರಬೇಕು? ನಮ್ಮ ಮಕ್ಕಳಿಗೆ ಬೇಕಿರುವುದು ಮೌಲ್ಯಯುತ, ಗುಣಮಟ್ಟದ ಶಿಕ್ಷಣ. ಅದು ಯಾವ ಪಂಥದ್ದಾದರೇನಂತೆ. ಕಲಿಸುವ ಇತಿಹಾಸ ಶುದ್ಧವಾಗಿದ್ದರಷ್ಟೇ ಸಾಕು! ಪಟ್ಟ ಭದ್ರ ಹಿತಾಸಕ್ತಿಗಳು ತಮ್ಮ ಇಚ್ಚೆಗನುಗುಣವಾಗಿ ತಿರುಚಿ,ತಿದ್ದಿರುವ ಪಾಠಗಳು ಜಗತ್ತಿಗೆ ಮಾರಕ!

-ಡಾ.ಕಿರಣ್ ಸಿಡ್ಲೇಹಳ್ಳಿ
ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ