
ಧಾರ್ಮಿಕ ಮತಾಂತರ, ರಾಜಕೀಯ ಪಕ್ಷಾಂತರ ಹೀಗೆ ಹಲವು ಮತಾಂತರಗಳು, ಪಕ್ಷಾಂತರಗಳು ಏರ್ಪಡುತ್ತಲೇ ಇವೆ. ನಾವು ನೀವೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಈ ವಿಷಯವನ್ನು ಕೇಳುತ್ತಲೇ ಇದ್ದೇವೆ, ಅವರವರ ಸ್ವಾರ್ಥಗಳಿಗೆ ಸಾಮಾಜಿಕ ವ್ಯವಸ್ಥೆಗಳನ್ನು ತಿರುಚುವುದು ಜೊತೆಗೆ ತಮಗಿಷ್ಟ ಬಂದಕಡೆ ತಿರುವಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ. ಈ ಭಾಷಾ ಮತಾಂತರ ಮತ್ತು ಅದರ ಸಮಸ್ಯೆಗಳು ಈ ಧಾರ್ಮಿಕ ಮತಾಂತರದ ರೀತಿ ಎಲ್ಲಿಯೂ, ಯಾರಿಗೂ ಕಾಣಿಸುತ್ತಲೇ ಇಲ್ಲ. ಈ ಭಾಷಾ ಮತಾಂತರವೇ ಬೇರೆ. ಮರೆಯಾಗಿ ನಡೆಯುತ್ತಿರುವ ಈ ಭಾಷಾ ಮತಾಂತರಕ್ಕೆ ಮಾತ್ರ ಯಾವುದೇ ಹೆಗ್ಗುರುತುಗಳು ಇಲ್ಲ. ಏಕೆಂದರೆ ನಮ್ಮಲ್ಲಿ ಸಾಂವಿಧಾನಿಕ ವಿಧಿ ನಿಯಮಗಳಿದೆ. ಅಲ್ಲಿ ತಿಳಿಸಿರುವ ವಾಕ್ ಸ್ವಾತಂತ್ರ್ಯ, ಹಕ್ಕು, ಕರ್ತವ್ಯ ನೀತಿಗಳು ನಮಗೆ ಪ್ರಪಂಚವನ್ನು ತೆರೆದಷ್ಟು ನಾವುಗಳು ಸದಾ ದುರ್ಲಾಭಿಗಳೆಂದು ರುಜುವಾತನ್ನು ಈ ರೀತಿ ಪ್ರಸ್ತುತ ಪಡಿಸಿಕೊಳ್ಳುತ್ತಿರುತ್ತೇವೆ.

ನಮ್ಮಲ್ಲಿ ಎಷ್ಟೆಲ್ಲಾ ಆಧುನಿಕ ತಂತ್ರಜ್ಞಾನಗಳು ಸಮಾಜದ ಒಳಿತಿಗಾಗಿ ಆವಿಷ್ಕಾರಗೊಂಡರೂ ಅದರ ಸಧ್ಬಳಕೆಗಿಂತ ದುರ್ಬಳಕೆಯೇ ಹೆಚ್ಚು. ಉದಾಹರಣೆಗೆ ಮೊಬೈಲ್, ಕಂಪ್ಯೂಟರ್ ಇತ್ಯಾದಿ. ಇದರಲ್ಲಿನ ಸದ್ಭಳಕೆ ದುರ್ಬಳಕೆಗಳ ಬಗ್ಗೆ ನಿಮಗೆ ವಿವರಿಸಬೇಕಾದ ಅವಶ್ಯಕತೆ ಇಲ್ಲ. ನಿಮಗೆಯೇ ತಿಳಿದ ವಿಚಾರವಿದು. ಇದೇ ಮಾದರಿಯಲ್ಲಿ ಸಂವಿಧಾನದ ವಿಧಿ ವಿಧಾನಗಳನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವವರ ಪಾಲೇ ಹೆಚ್ಚು ಎಂದರೆ ತಪ್ಪಾಗಲಾರದು. ಇದಕ್ಕೆ ಸಮರ್ಥನೀಯವಾಗಿ ಇನ್ನೊಂದು ಉದಾಹರಣೆ; ಒಬ್ಬ ಮಹಿಳೆಗೆ ವರದಕ್ಷಿಣೆ ಕಿರುಕುಳ ನೀಡುವುದು ಕಾನೂನಾತ್ಮಕ ಅಪರಾಧ. ಇದನ್ನೇ ಬಂಡವಾಳವಾಗಿ ಇಟ್ಟುಕೊಂಡು ಅದೆಷ್ಟೋ ಮಹಿಳೆಯರು ವರದಕ್ಷಿಣೆ ಕಿರುಕುಳ ಇಲ್ಲದಿದ್ದರೂ ನ್ಯಾಯಾಲಯದ, ಆರಕ್ಷಕ ಠಾಣೆಯ ಮೆಟ್ಟಿಲೇರಿದ್ದಾರೆ. ತಮ್ಮ ಗಂಡಂದಿರನ್ನು ಅವರ ಕುಟುಂಬದವರನ್ನು ಬೆದರಿಸಿದ್ದಾರೆ. ನ್ಯಾಯ ದೇವತೆಗೆ ಕಣ್ಣು ಕಟ್ಟಿದ ಉದ್ದೇಶ ಯಾರನ್ನೂ ತಮ್ಮವರು, ಬೇರೆಯವರು ಎಂದು ಭೇದವಿಕ್ಕದೇ ಸಮಾನವಾಗಿ ತೀರ್ಪು ನೀಡುವುದೇ ಆಗಿದೆ. ಆದರೆ ಈ ಮಹಾ ಉದ್ದೇಶದ ಕಣ್ಣು ಕಟ್ಟಿರುವ ನ್ಯಾಯದೇವತೆಯನ್ನು ಮೋಸಗೊಳಿಸುವ ಮತ್ತು ಅದರ ಲಾಭ ಪಡೆಯುತ್ತಿರುವವರ ಕುತಂತ್ರ ಬುದ್ಧಿ ಪಾಪ ಈ ಸಮಾಜಕ್ಕೆ ತಿಳಿದರೂ ಸಾಮಾನ್ಯ ಜನತೆಯನ್ನು ಕೈಕಟ್ಟಿ ಕೂರಿಸಿದೆ. ಅನ್ಯಾಯದ ವಿರುದ್ಧ ಕೈ ಎತ್ತುವವರ ಕೈ ಮುರಿದಿದೆ, ಧ್ವನಿ ಎತ್ತುವವರ ಸೊಲ್ಲು ಅಡಗಿಸಿದೆ.
ಧಾರ್ಮಿಕ ಮತಾಂತರ ನಿಷೇಧ ಕಾಯ್ದೆ ತಿಳಿಸುವುದೇನೆಂದರೆ ಬಲವಂತ, ವಂಚನೆ, ಒತ್ತಾಯ ಹಾಗೂ ಆಮಿಷದ ಮೂಲಕ ಧಾರ್ಮಿಕ ಮತಾಂತರ ಮಾಡುವುದು ಕಾನೂನಾತ್ಮಕ ಅಪರಾಧ. ಅದೇ ಕಾನೂನಿನಲ್ಲಿ ವ್ಯಕ್ತಿಯ ಇಚ್ಛೆಗೆ ಧರ್ಮವನ್ನು ಆಯ್ಕೆಮಾಡಿಕೊಳ್ಳುವ ಸ್ವಾತಂತ್ರ್ಯವಿರುವುದು ತಿಳಿದ ಸಂಗತಿಯಾಗಿದೆ. ಹಾಗಾದರೆ ಇಲ್ಲಿ ಬಲವಂತದ್ದು ಮಾತ್ರ ಅಪರಾಧ. ಹೌದು ಈ ಬಲವಂತ ಎನ್ನುವುದು ಪ್ರತ್ಯಕ್ಷವಾಗಿಯೇ ನಡೆಯುತ್ತಿಲ್ಲ ಪರೋಕ್ಷವಾಗಿಯೂ ಜರುಗುತ್ತಿದೆ.
ಭಾಷಾ ಮಾಧ್ಯಮ ಸ್ವಾತಂತ್ರ್ಯ ಇರುವುದು ಖಚಿತ. ಈ ಸ್ವಾತಂತ್ರ್ಯವನ್ನು ಬಂಡವಾಳವಾಗಿ ಬಳಸಿಕೊಳ್ಳುತ್ತ ತನ್ನತ್ತ ಸೆಳೆದುಕೊಳ್ಳುತ್ತಿರುವ ಭಾಷೆಯ ರೀತಿಯೊಂದಿದೆ ಇದನ್ನು ಭಾಷಾ ಮತಾಂತರ ಎನ್ನಬಹುದು. ಅನ್ಯಭಾಷಿಗರನ್ನು ಸ್ವಭಾಷಿಗರನ್ನಾಗಿ ಸೃಷ್ಟಿಸಿಕೊಳ್ಳುವ ಬಗೆಯೊಂದಿದೆ. ಒಂದು ಭಾಷೆಯನ್ನು ಹಿಂದಿಕ್ಕಿ ತಮ್ಮ ಭಾಷಾ ಅಸ್ತಿತ್ವವನ್ನು ಉನ್ನತ ಸ್ತರದಲ್ಲಿ ಸ್ಥಾಪಿಸುವ ಸ್ವಾರ್ಥದ ಪ್ರತಿಪಾದನೆ ಈ ಭಾಷಾ ಮತಾಂತರದ ಸ್ವರೂಪವಾಗಿದೆ. ಬ್ರಿಟಿಷರು ಭಾರತೀಯರಿಗೆ ಇಂಗ್ಲಿಷ್ ಭಾಷೆಯನ್ನು ಶಿಕ್ಷಣದ ಕಲಿಕಾ ವಿಷಯವಾಗಿ ಸೇರ್ಪಡಿಸುವುದರ ಉದ್ದೇಶ ಭಾರತೀಯರು ಪ್ರಪಂಚಕ್ಕೆ ತೆರೆದುಕೊಳ್ಳಲಿ ಅಥವಾ ಅತೀವ ಜ್ಞಾನ ಉಳ್ಳವರಾಗಲಿ ಎಂದಲ್ಲ. ಬದಲಿಗೆ ತಮ್ಮ ಆಡಳಿತಕ್ಕೆ ಸುಲಭವಾಗಲಿ ಎಂದು. ಆದರೆ ಸ್ವಾತಂತ್ರ್ಯ ದೃಷ್ಟಿಯಲ್ಲಿ ಮತ್ತು ಜ್ಞಾನದ ದೃಷ್ಟಿಯಲ್ಲಿ ಒಳಿತಾಗಿದ್ದು ಭಾರತೀಯರ ಬೌದ್ಧಿಕ ಮನಸ್ಸಿನ ವಿಕಾಸದ ಫಲ ಎನ್ನಬಹುದು.
ಪ್ರಾದೇಶಿಕತೆಯಲ್ಲಿಯೇ ಇರುವ ಭಾಷೆಯನ್ನು ಮಾತನಾಡಬೇಕು, ಉಳಿದ ಭಾಷೆಯನ್ನು ಮಾತನಾಡದೆ ತಿರಸ್ಕರಿಸಬೇಕು ಅಥವಾ ಮಾತನಾಡುವವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವ ತಪ್ಪು ಚಿಂತನೆ ಈ ಬರವಣಿಗೆಯ ಉದ್ದೇಶವಲ್ಲ. ಮನುಷ್ಯ ಮನುಷ್ಯನೊಂದಿಗೆ ಸಂಪರ್ಕ ಸಾಧಿಸಲು ಭಾಷೆ ಒಂದು ಸಂವಹನ ಮಾಧ್ಯಮವಾಗಿರುವುದರಿಂದ ಅನ್ಯ ಭಾಷೆಗಳನ್ನು ಕಲಿಯುವುದು ಅಗತ್ಯ ಮತ್ತು ಅನ್ಯಗರಿಗೆ ನಮ್ಮ ಭಾಷೆಯನ್ನು ಕಲಿಯಲು ಅವಕಾಶ ಕೊಡುವುದು ಅಷ್ಟೇ ಅಗತ್ಯ.
ಆದರೆ ಭಾಷಾ ಸಂಸ್ಕೃತಿಯ ಕಗ್ಗೊಲೆ ಒಂದಿದೆ, ಅದು ಒಂದು ಭಾಷೆಯ ಬೇರುಗಳನ್ನು ಒಂದೊಂದಾಗೆ ಸಡಿಲಗೊಳಿಸಿ ವರ್ತಮಾನದಲ್ಲಿ ಮತ್ತು ಭವಿಷ್ಯದಲ್ಲಿ ಅದರ ಸ್ಥಾನಮಾನಗಳನ್ನು ಕಸಿಯುವ ಪ್ರಯತ್ನ. ಇದು ಒಂದು ಪ್ರಾದೇಶಿಕ ಭಾಷೆಯ ಒಳಸಂಚುದಾರರಿಂದ ಇನ್ನೊಂದು ಭಾಷೆಯ ಬೆಳವಣಿಗೆಗೆ ಸದಾ ತೊಂದರೆ ಆಗುತ್ತಿರುತ್ತದೆ. ಒಳಿತಿಗಿಂತ ಕೆಡುಕು ಹೆಚ್ಚು ಇರುವ ಹಾಗೆಯೇ, ಈ ತೊಡಕು ನಮ್ಮ ಕನ್ನಡ ಭಾಷೆಗೆ ಹೆಚ್ಚು ಎನ್ನಬಹುದು. ಕನ್ನಡ ಮಾತನಾಡುವವರಿಗೆ ಉದ್ಯೋಗದ ಕೊರತೆಯನ್ನು ಸೃಷ್ಟಿಸಿರುವುದು, ಅನ್ಯ ಭಾಷೆಯಲ್ಲಿ ವ್ಯವಹಾರಿಕ ಪ್ರಜ್ಞೆಯನ್ನು, ಆಡಳಿತ ಪ್ರಜ್ಞೆಯನ್ನು ಎತೇಚ್ಛಗೊಳಿಸಿ ಕನ್ನಡಿಗರು ಭಾಷಾ ವಲಸಿಗರಾಗಿ ನಿಲ್ಲುವಂತೆ ಸನ್ನಿವೇಶ ಸೃಷ್ಟಿಸುವುದು ಎಲ್ಲವೂ ಕನ್ನಡ ಭಾಷೆಯ ತೊಡಕುಗಳೇ ಮತ್ತು ಭಾಷಾ ಮತಾಂತರದ ರೀತಿಗಳೇ. ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಮಾನ್ಯತೆ ಇಲ್ಲದ ಖಾಸಗಿ ಸಂಸ್ಥೆಗಳನ್ನು ಮುಚ್ಚುವ ಕೆಲಸವೊಂದು ತಕ್ಷಣ ಆಗಬೇಕಿದೆ. ಖಾಸಗಿ ಸಂಸ್ಥೆಗಳ ಮಾರುಕಟ್ಟೆಗೆ ಕನ್ನಡಿಗರು, ಕನ್ನಡ ನಾಡು ಬೇಕು ಆದರೆ ಅಲ್ಲಿ ಉನ್ನತ ಹಂತದಲ್ಲಿ ಕೆಲಸ ನಿರ್ವಹಿಸಲು ಮಾತ್ರ ಕನ್ನಡಿಗರು, ಕನ್ನಡ ಭಾಷೆ ಬೇಡ ಇದೆಂಥಾ ಧೋರಣೆ.
ಭಾಷಾ ಕೊಡುಕೊಳ್ಳುವಿಕೆ ಇಲ್ಲದಿದ್ದರೆ ಮನುಷ್ಯ ಪ್ರಪಂಚದ ವಿಕಾಸಕ್ಕೆ ದೊಡ್ಡ ತಿರುವು ಬೀಳಬಹುದು. ಹಾಗೆಂದು ಒಂದು ಪ್ರಾದೇಶಿಕ ಭಾಷೆಯ ಜೀವಂತಿಕೆಗೆ ತೊಡಕಾಗುವುದು ಭಾಷಾ ನಿಟ್ಟಿನಲ್ಲಾಗುವ ಅಪರಾಧ. ಪ್ರಾದೇಶಿಕ ಭಾಷೆಗಳನ್ನು ಶಿಕ್ಷಣದಲ್ಲಿ ಐಚ್ಛಿಕಗೊಳಿಸುವುದು. ಪ್ರಾದೇಶಿಕ ಭಾಷೆಗಿಂತ ಅನ್ಯಭಾಷೆಯಲ್ಲಿ ಆಡಳಿತ ಕಾರ್ಯ ವೈಖರಿಗಳನ್ನು ಕೈಗೊಳ್ಳುವುದು. ಸರ್ಕಾರ ಮಾತ್ರ ಪ್ರಾದೇಶಿಕ ಭಾಷೆಯನ್ನು ಆಡಳಿತ ಭಾಷೆಯಾಗಿ ಪಾಲಿಸಿ ಖಾಸಗಿಯವರು ಪಾಲಿಸದಿರುವುದು ಎಲ್ಲವೂ ಭಾಷೆಯ ಕ್ಷೀಣಿಸುವಿಕೆಗೆ ಅಥವಾ ಅನ್ಯ ಭಾಷೆಯ ಭಾರಕ್ಕೆ ಪ್ರಾದೇಶಿಕ ಭಾಷೆ ತಳಕೂರುವುದಾಗಿದೆ.
ಬಲವಂತದ್ದು ಯಾವುದೇ ಆದರೂ ಅದಕ್ಕೆ ಕಾನೂನಾತ್ಮಕ ತಿರಸ್ಕಾರವಿದೆ. ಪ್ರತಿಯೊಂದು ಭಾಷೆಗೆ ಅದರದ್ದೇ ಆದ ಮಹತ್ವವಿದೆ ಯಾವುದೂ ಮೇಲಲ್ಲ ಯಾವುದೂ ಕೀಳಲ್ಲ. ಕೊಡುಕೊಳ್ಳುವಿಕೆಯಲ್ಲಾಗುವ ಭಾಷಾ ವ್ಯವಹಾರ ಆರೋಗ್ಯಕರ ಆದರೆ ಸ್ಪರ್ಧೆ ಮತ್ತು ಸ್ವಾರ್ಥ ಚಿಂತನೆಯಲ್ಲಿ ಯಾವುದೇ ಪ್ರಾದೇಶಿಕ ಭಾಷೆಯ ನೀತಿ ನಿಯಮಗಳನ್ನು ಬದಲಾಯಿಸಿಕೊಳ್ಳಲು ಒತ್ತಾಯ ಹೇರುವುದು ಅಪರಾಧ.ಅಸ್ತಿತ್ವವಾದ ಹೇಳುವುದು ಸ್ವಂತಿಕೆಯೊಂದನ್ನು ಉಳಿಸಿಕೊಳ್ಳುವುದೇ ಆಗಿದೆ. ನಮ್ಮ ತನವನ್ನು ಪ್ರತಿನಿಧಿಸುವಲ್ಲಿ ಪ್ರಾದೇಶಿಕ ಭಾಷೆಯ ಪಾತ್ರ ಮಹತ್ವದ್ದು. ಈ ಮಹತ್ವದ್ದನ್ನೇ ಕಳೆದುಕೊಂಡು ಬದುಕುವುದು ದಾಸ್ಯದ ಬದುಕು. ಸ್ವಾಭಿಮಾನ, ಸ್ವಂತಿಕೆ ಎಲ್ಲರಿಗೂ ಅವರವರ ಶಕ್ತಿ. ಆ ಶಕ್ತಿಯನ್ನು ಕಳೆದುಕೊಂಡರೆ ಗುಲಾಮರಾಗಿ ಬಾಳಬೇಕಾಗುತ್ತದೆ. ತಮ್ಮ ತಮ್ಮ ಪ್ರಾದೇಶಿಕ ಭಾಷೆಯನ್ನು ಮರೆತವರು ಗುಲಾಮಗಿರಿಯಲ್ಲಿರುತ್ತಾರೆ.
ನಮ್ಮ ಉಳಿವಿಗಾಗಿ ನಮ್ಮ ಪ್ರಾದೇಶಿಕ ಭಾಷೆಯ ಜಾಡನ್ನು ಬಲವಾಗಿ ಹಿಡಿಯುವುದು ಬುದ್ಧಿವಂತಿಕೆ. ಕನ್ನಡಿಗರನ್ನು ಕಣ್ಣಿಗೆ ಬಟ್ಟೆ ಕಟ್ಟಿದಂತೆ ಭಾಷಾ ಮತಾಂತರಗೊಳಿಸಿಕೊಂಡು ಗುಲಾಮಗಿರಿ ತನಕ್ಕೆ ಒಳಪಡಿಸುತ್ತಿರುವ ಬಗ್ಗೆ ನನ್ನದೊಂದು ಎಚ್ಚರ ಚಿಂತನೆ. ಜೈ ಕರ್ನಾಟಕ ಮಾತೆ.

ಚಿಮಬಿಆರ್ (ಮಂಜುನಾಥ ಬಿ.ಆರ್)
ಯುವಸಾಹಿತಿ, ಲೇಖಕ, ವಿಮರ್ಶಕ
ಹೆಚ್.ಡಿ.ಕೋಟೆ ಮೈಸೂರು
ದೂರವಾಣಿ ಸಂಖ್ಯೆ:-8884684726