ಚಾಮರಾಜನಗರ: ಅಭಿವೃದ್ಧಿಯ ಹೆಸರಿನಲ್ಲಿ ಭೂಮಿಯನ್ನು ದುರ್ಬಳಕೆ ಮಾಡುವುದನ್ನು ತಪ್ಪಿಸಿ ಭೂ ಸಂರಕ್ಷಣೆ ಮಾಡುವ ಹೊಣೆ ಎಲ್ಲರದ್ದಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಎಂ. ಶ್ರೀಧರ ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪಾಧಿಕಾರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ ಮತ್ತು ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭೂಮಿ ಕೇವಲ ಮನುಜ ಕುಲಕ್ಕೆ ಮಾತ್ರ ಸೀಮಿತವಲ್ಲ ಅದು ಇಡೀ ಜೀವಸಂಕುಲಕ್ಕೆ ಸೇರಿದೆ ಎಂಬುದನ್ನು ತಿಳಿದುಕೊಳ್ಳಬೇಕು. ನಗರೀಕರಣದ ನೆಪದಲ್ಲಿ ಅಗತ್ಯಕ್ಕೂ ಮೀರಿ ಗಣಿಗಾರಿಕೆ, ಅರಣ್ಯ ನಾಶ ಮಾಡಿ ಭೂಮಿಗೆ ದಾಳಿ ಮಾಡಬಾರದು. ಹಿಂದಿನಿಂದಲೂ ಪ್ರಕೃತಿಯನ್ನು ಭಾರತೀಯ ಸಂಸ್ಕೃತಿಯಲ್ಲಿ ದೇವರೆಂದು ಭಾವಿಸಲಾಗಿದೆ ಎಂದರು.
ಸಂವಿಧಾನ ಕೇವಲ ಮನುಷ್ಯರಿಗಷ್ಟೇ ಅಲ್ಲ ಅದು ಪರಿಸರ ಸಂರಕ್ಷಣೆ ನಿಟ್ಟಿನಲ್ಲಿಯೂ ರಚಿತವಾಗಿದೆ. ವಿಶ್ವದ ೧೯೩ ರಾಷ್ಟ್ರಗಳು ವಿಶ್ವ ಭೂಮಿ ದಿನಾಚರಣೆಯನ್ನು ಆಚರಿಸುತ್ತಿದೆ. ಇದು ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗಬಾರದು. ಪ್ರತಿದಿನವೂ ಭೂಮಿ ರಕ್ಷಿಸುವಂತಹ ಕೆಲಸವಾಗಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಎಂ. ಶ್ರೀಧರ ಅವರು ತಿಳಿಸಿದರು.
ಜಿಲ್ಲಾ ಕಲ್ಲು ಕ್ವಾರೆ ಗುತ್ತಿಗೆಗಳ ಸಂಘದ ಅಧ್ಯಕ್ಷರಾದ ಜಿ.ಎಂ. ಹೆಗಡೆ ಅವರು ಮಾತನಾಡಿ ವೇದಗಳ ಕಾಲದಿಂದಲೂ ಭೂಮಿಯನ್ನು ಸತ್ಕರಿಸಿಕೊಂಡು ಬರಲಾಗುತ್ತಿದೆ. ಭೂಮಿಯನ್ನು ಬಳಕೆ ಮಾಡಿಕೊಂಡು ಅಭಿವೃದ್ಧಿಯಾಗಬೇಕೇ ಹೊರತು ದುರ್ಬಳಕೆ ಮಾಡಿಕೊಂಡಲ್ಲ. ಭೂಮಿಯಲ್ಲಿರುವ ಖನಿಜ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಳ್ಳುವುದರ ಜೊತೆಗೆ ಅದನ್ನು ಸರಿದೂಗಿಸಿ ಭೂಮಿಯನ್ನು ಸಮತೋಲನದಲ್ಲಿಡುವ ಕೆಲಸ ಆಗಬೇಕು. ನಿತ್ಯ ಜೀವನದಲ್ಲಿ ಪರಿಸರಕ್ಕೆ ಪೂರಕವಾದ ಕೆಲಸ ಮಾಡಿ ಭೂಮಿಯನ್ನು ರಕ್ಷಿಸೋಣ ಎಂದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಇಲಾಖೆಯ ಜಿಲ್ಲಾ ಪರಿಸರ ಅಧಿಕಾರಿಯಾದ ರಘುರಾಮ್ ಮಾತನಾಡಿ ಪರಿಸರಕ್ಕೆ ಮಾರಕವಾದ ಪಾಸ್ಟಿಕ್ ಅನ್ನು ನಿಷೇಧಿಸಲಾಗಿದೆ. ವಿಶ್ವ ಭೂಮಿ ದಿನಾಚರಣೆಯ ಈ ಸಂದರ್ಭದಲ್ಲಿ ಭೂಮಿಯ ರಕ್ಷಣೆ ಬಗ್ಗೆ ಹೆಚ್ಚು ಅರಿವು ಹೊಂದಬೇಕಿದೆ. ಭೂಮಿಯ ಸಂರಕ್ಷಣೆಗೆ ಒತ್ತು ನೀಡಬೇಕಿದೆ ಎಂದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕರಾದ ಕೆ.ಎಂ. ನಂಜುಂಡಸಾಮಿ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಕೆ. ಸುರೇಶ್, ಅಂತರ್ಜಲ ನಿರ್ದೇಶನಾಲಯದ ಹಿರಿಯ ಭೂ ವಿಜ್ಞಾನಿ ಧನಲಕ್ಷ್ಮಿ, ಕ್ರಷರ್ ನ ಅಸೋಸಿಯೇಸನ್ ಅಧ್ಯಕ್ಷರಾದ ಸೋiಶೇಖರ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಇದ್ದರು.
