ಮೈಸೂರು: ಸಿನಿ ಪ್ರಿಯರ ಮನತಣಿಸುತ್ತಿದ್ದ ಮೈಸೂರಿನ ಚಿತ್ರಮಂದಿರಗಳು ಒಂದರ ಮೇಲೊಂದರಂತೆ ಬಾಗಿಲು ಹಾಕುತ್ತಿವೆ. ಈಗಾಗಲೇ ಕೆಲವು ಚಿತ್ರಮಂದಿರಗಳು ಮಾಲ್ ಆಗಿ ಮಾರ್ಪಾಡುಗೊಂಡು ಎದ್ದು ನಿಂತಿವೆ. ಇದಕ್ಕೆ ಕಾರಣಗಳು ಅನೇಕ ಇವೆ.

ಕೆಲವು ಸಮಯಗಳ ಹಿಂದೆಯೇ ಶಾಂತಲ ಚಿತ್ರಮಂದಿರ ಮುಚ್ಚಿತ್ತು. ಕಳೆದೊಂದು ವರ್ಷದಿಂದ ಕೊರೊನಾ ಸೋಂಕಿನ ಕಾರಣ ಚಿತ್ರಮಂದಿರಗಳಿಗೆ  ಚಿತ್ರಗಳ ಪ್ರದರ್ಶನ ನೀಡಲು ಅವಕಾಶವೇ ಇಲ್ಲದಾಗಿದೆ. ಇದರಿಂದ ಚಿತ್ರಮಂದಿರದ ಮಾಲೀಕರು ನಷ್ಟ ಅನುಭವಿಸುವಂತಾಗಿದೆ. ಇದರಿಂದಾಗಿ ಒಂದರ ಮೇಲೊಂದರಂತೆ ಚಿತ್ರಮಂದಿರಗಳನ್ನು ಮುಚ್ಚುವ ತೀರ್ಮಾನಕ್ಕೆ ಮಾಲೀಕರು ಬರುತ್ತಿದ್ದಾರೆ ಎಂದರೆ ತಪ್ಪಾಗಲಾರದು.

ಈಗ ನಗರದ ಚಾಮರಾಜ (ನೂರಡಿ) ಜೋಡಿ ರಸ್ತೆಯಲ್ಲಿದ್ದ ಲಕ್ಷ್ಮಿ ಚಿತ್ರಮಂದಿರ ಬಾಗಿಲು ಮುಚ್ಚುವಂತಾಗಿದ್ದು, ಈಗಾಗಲೇ ಮುಚ್ಚಿರುವ ಚಿತ್ರಮಂದಿರಗಳ ಸಾಲಿಗೆ ಇದು ಸೇರಿವಂತಾಗಿದೆ. ಕೊರೊನಾ ಕಾರಣದಿಂದಾಗಿ ಕಳೆದ ಒಂದು ವರ್ಷದಿಂದ ಬಾಗಿಲು ತೆರೆದಿರಲಿಲ್ಲ. ಆದರೆ ಇನ್ನು ಮುಂದೆ ಶಾಶ್ವತ ಬಾಗಿಲು ಮುಚ್ಚುತ್ತಿರುವ ವಿಚಾರ ಇದೀಗ ಹರಡಿದ್ದು ಚಿತ್ರ ಪ್ರೇಮಿಗಳಲ್ಲಿ ಬೇಸರ ಮೂಡಿದೆ. ಕಳೆದ ಏಳು ದಶಕಗಳಿಂದ ಚಿತ್ರ ಪದರ್ಶನ ನೀಡುತ್ತಾ ಚಿತ್ರ ರಸಿಕರ ಮನತಣಿಸಿದ ಚಿತ್ರ ಮಂದಿರ ಇನ್ನು ಮುಂದೆ ಪ್ರದರ್ಶನ ನೀಡುವುದಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ನಗರದ ಜನಕ್ಕೆ ಸಾಧ್ಯವಾಗುತ್ತಿಲ್ಲ.

ಬಹಳಷ್ಟು ಮಂದಿ ತಾವು ಲಕ್ಷ್ಮಿ ಚಿತ್ರಮಂದಿರದಲ್ಲಿ ನೋಡಿದ ಮೆಚ್ಚಿನ ಸಿನಿಮಾಗಳನ್ನು ಮತ್ತು ಆ ಕ್ಷಣಗಳನ್ನು ಮೆಲುಕು ಹಾಕುತ್ತಾ ಹಳೆಯ ನೆನಪುಗಳನ್ನು ಮತ್ತೆ ಕಣ್ಮುಂದೆ ತಂದು ಕೊಳ್ಳುತ್ತಿದ್ದಾರೆ. ಇನ್ನು ಏನಿದ್ದರೂ ಎಲ್ಲವೂ ನೆನಪು ಮಾತ್ರ…

 

By admin