ರಾಷ್ಟ್ರಿಕವಿ ಕುವೆಂಪು ಅವರು ಕನ್ನಡ ಹಾಗೂ ಕನ್ನಡಿಗರ ಪಾಲಿನ ಆಸ್ತಿ. ಅವರ ಅಗಾಧ ಜ್ಞಾನ ಸಂಪತ್ತು ಇಂದಿನ ಹಾಗೂ ಮುಂದಿನ ಪೀಳಿಗೆಗೆ ದಾರಿದೀಪವಾಗಿದೆ. ಶ್ರೀಯುತರು ನಾಡುಕಂಡ ಶ್ರೇಷ್ಠ ಕವಿಗಳು, ಕಾಂದಂಬರಿಕಾರರು, ನಾಟಕಕಾರರು, ವಿಮರ್ಶಕರು ಹಾಗೂ ಚಿಂತಕರೂ ಆಗಿದ್ದಾರೆ. ಕುವೆಂಪು ಅವರು ಬಹುಮುಖ ಪ್ರತಿಭೆಯನ್ನು ಹೊಂದಿದ್ದರೂ ತುಂಬಾ ಸರಳ ವ್ಯಕ್ತಿತ್ವವನ್ನು ರೂಢಿಸಿಕೊಂಡಿದ್ದರು.
ಕುವೆಂಪು ಅವರು ಕನ್ನಡದ ಎರಡನೇ ರಾಷ್ಟ್ರ ಕವಿಗಳಾಗಿದ್ದಾರೆ. ಅತ್ಯುನ್ನತ ಜ್ಞಾನಪೀಠ ಪ್ರಶಸ್ತಿಯೂ ಇವರನ್ನು ಒಲಿದು ಬಂದಿದೆ ಎಂದರೆ ಇಂಥ ಶ್ರೇಷ್ಠರನ್ನು ಹೊಂದಿದ ನಾವು ಕನ್ನಡಿಗರೇ ಧನ್ಯ. ಇನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರ್ಕಾರ ಕೊಡಮಾಡುವ ಕರ್ನಾಟಕ ರತ್ನ ಹಾಗೂ ಪಂಪ ಪ್ರಶಸ್ತಿಯನ್ನು ಮೊದಲ ಬಾರಿಗೆ ಪಡೆದ ಕನ್ನಡದ ಹೆಮ್ಮೆಯ ಪುತ್ರರು ನಮ್ಮ ಕುವೆಂಪು ಅವರು.
ಕುವೆಂಪು ಅವರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯವರಾಗಿದ್ದು, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಅಲ್ಲಿಯೇ ಪಡೆದರೂ ಸಹ ಮುಂದಿನ ಶಿಕ್ಷಣವನ್ನು ಎಂ.ಎ. ವರೆಗೂ ಸಹ ಮೈಸೂರಿನಲ್ಲಿಯೇ ಪೂರೈಸಿದರು. ಹೀಗಾಗಿ ಅವರಿಗೂ ಸಾಂಸ್ಕೃತಿಕ – ಅರಮನೆ ನಗರಿಯಂದು ನಾವು ಏನೆಲ್ಲ ಕರೆಯುವ ಮೈಸೂರಿಗೂ ಬಹಳ ನಂಟಿದೆ. ಕೊನೆಗೆ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದೂ ಸಹ ಇದೇ ಮೈಸೂರಿನಲ್ಲಾಗಿದೆ.
ಕುವೆಂಪು ಅವರು ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಮೈಸೂರು ವಿಶ್ವವಿದ್ಯಾಲಯಕ್ಕೆ ಕುಲಪತಿಗಳಾಗಿದ್ದಲ್ಲದೆ, ಮಾನಸ ಗಂಗೋತ್ರಿಯನ್ನು ಕಟ್ಟಿ ಬೆಳೆಸಿದ ಆ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದರು.
ಇವರ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಕಾದಂಬರಿಗಳು, ಅನೇಕ ನಾಟಕಗಳು, ಕವನ ಸಂಕಲನಗಳು, ಕಥಾ ಸಂಕಲನಗಳು ಹೀಗೆ ಅನೇಕ ಕೃತಿಗಳು ಓದುಗರನ್ನು ಕಾಡಿದ್ದಿದೆ. ಅಷ್ಟರಮಟ್ಟಿಗೆ ವಿಷಯದ ಆಳ ಹಾಗೂ ಬರವಣಿಗೆಯ ಗತ್ತು ಅಡಗಿರುತ್ತಿತ್ತು.
ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಅಷ್ಟೇ ಗಟ್ಟಿತನದ ಬರವಣಿಗೆಯನ್ನು ಹೊಂದಿದ್ದ ಕುವೆಂಪು ಅವರು ದೇಶದಲ್ಲಿಯೇ ವಿಶಿಷ್ಠ ಲೇಖಕರ ಸಾಲಿನಲ್ಲಿ ನಿಲ್ಲುವವರು. ಅವರ ಸಾಹಿತ್ಯದ ಕೊಡುಗೆ ಅಂಥದ್ದು. ಕನ್ನಡ ಸಾರಸ್ವತ ಲೋಕದಲ್ಲಿ ಕುವೆಂಪು ಅವರು ಎಂದಿಗೂ ಜಿರಂಜೀವಿ. ಅವರಿಗೆ ಅವರೇ ಸಾಟಿ… ಸಹಕಾರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರ ಸಂದೇಶ.