ಬೆಂಗಳೂರು: ಕೆಎಸ್ಆರ್ ಟಿಸಿ ಟ್ರೇಡ್ ಮಾರ್ಕ್ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ ಮತ್ತು ಕರ್ನಾಟಕದ ನಡುವೆ ಕಳೆದ ಏಳು ವರ್ಷಗಳಿಂದ ನಡೆಯುತ್ತಿದ್ದ ವಾಜ್ಯ ಮುಗಿಯುವ ಹಂತಕ್ಕೆ ಬಂದಿದ್ದು ಇನ್ಮುಂದೆ ಅದು ಕೇರಳಕ್ಕೆ ಅಧಿಕೃತವಾಗಲಿದ್ದು, ಕರ್ನಾಟಕ ಮುಂದೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಇದುವರೆಗೂ ಕರ್ನಾಟಕ ಮತ್ತು ಕೇರಳ ಸಾರಿಗೆ ಸಂಸ್ಥೆಗಳೆರಡೂ ‘ಕೆಎಸ್ಆರ್ಟಿಸಿ’ ಎಂದು ತಮ್ಮ ಹೆಸರಿನ ಸಂಕ್ಷಿಪ್ತ ರೂಪವನ್ನು ಬಳಸಿಕೊಳ್ಳುತ್ತಿದ್ದವು. ಇದು ಎರಡು ರಾಜ್ಯಗಳ ನಡುವಿನ ಕಿತ್ತಾಟಕ್ಕೂ ಕಾರಣವಾಗಿತ್ತು. ಹೀಗಾಗಿ ಅದು ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಬಗ್ಗೆ ನೋಡುವುದಾದರೆ ಕೆಎಸ್ಆರ್ ಟಿಸಿ ಟ್ರೇಡ್ ಮಾರ್ಕ್ ನ್ನು ಕರ್ನಾಟಕಕ್ಕಿಂತ ಮೊದಲೇ ಕೇರಳ ಬಳಸಿದ್ದನ್ನು ಕಾಣಬಹುದು. ಮೈಸೂರು ರಾಜ್ಯ ಬದಲಾಗಿ ಕರ್ನಾಟಕವಾಗಿದ್ದು ಆ ನಂತರ ಕರ್ನಾಟಕದಲ್ಲಿ ಕೆಎಸ್ ಆರ್ ಟಿಸಿ ಟ್ರೇಡ್ ಮಾರ್ಕ್ ಬಳಕೆಗೆ ತರಲಾಗಿದೆ.
ಈ ಕುರಿತಂತೆ ಕೇರಳದ ಸಾರಿಗೆ ಸಚಿವ ಆ್ಯಂಟನಿ ರಾಜು ಮಾತನಾಡಿ ಟ್ರೇಡ್ ಮಾರ್ಕ್ ರಿಜಿಸ್ಟ್ರಿ ಸಂಸ್ಥೆಯು ಟ್ರೇಡ್ಮಾರ್ಕ್ ಕಾಯ್ದೆ 1999ರ ಅನ್ವಯ ಕೆಎಸ್ಆರ್ಟಿಸಿ, ಅದರ ಲಾಂಛನ ಮತ್ತು ವ್ಯಾಪಕವಾಗಿ ಬಳಕೆಯಲ್ಲಿರುವ ‘ಆನ ವಂಡಿ’ ಎಂಬ ಹೆಸರನ್ನು ಕೇರಳ ರಸ್ತೆ ಸಾರಿಗೆ ನಿಗಮಕ್ಕೆ ನೀಡಿದೆ ಎಂದು ಹೇಳಿದ್ದಾರೆ. ಇನ್ನು ಕೇರಳ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಬಿಜು ಪ್ರಭಾಕರ್ ಅವರು, ʻಕೆಎಸ್ಆರ್ಟಿಸಿ ಹೆಸರನ್ನು ಬಳಸದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ನೋಟಿಸ್ ನೀಡಲಾಗುವುದು ಎಂದಿದ್ದಾರೆ.
ಕೆಎಸ್ಆರ್ಟಿಸಿ ಸಂಕ್ಷಿಪ್ತ ಹೆಸರಿಗಾಗಿ ಕರ್ನಾಟಕ ಮತ್ತು ಕೇರಳದ ನಡುವೆ 7 ವರ್ಷಗಳಿಂದಲೂ ವಿವಾದ ಇದೆ. ಈ ಹೆಸರನ್ನು ಬಳಸಬಾರದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಕೇರಳ ರಸ್ತೆ ಸಾರಿಗೆ ನಿಗಮಕ್ಕೆ ನೋಟಿಸ್ ನೀಡಿತ್ತು. ತಾವು 1965ರಿಂದಲೇ ಪದ ಬಳಕೆ ಮಾಡುತ್ತಿದ್ದು, ನಮಗೆ ಅವಕಾಶ ನೀಡಬೇಕು ಎಂದು ಕೇರಳ ರಸ್ತೆ ಸಾರಿಗೆ ನಿಗಮವು ಟ್ರೇಡ್ ಮಾರ್ಕ್ ರಿಜಿಸ್ಟ್ರಿಗೆ ಅರ್ಜಿ ಕೊಟ್ಟಿತು. ಅಲ್ಲದೆ 1973ರ ಬಳಿಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೆಎಸ್ಆರ್ಟಿಸಿ ಎಂದು ಬಳಕೆ ಮಾಡುತ್ತಿದೆ. ಹೀಗಾಗಿ ಮೊದಲು ನಾವು ಕೆಎಸ್ಆರ್ಟಿಸಿ ಪದ ಬಳಕೆ ಮಾಡುತ್ತಿದ್ದು ನಮಗೇ ನೀಡಬೇಕು ಎಂದು ಕೇಳಿತ್ತು. ಈಗ ಹಲವು ವರ್ಷಗಳ ಕಾನೂನು ಹೋರಾಟದ ಬಳಿಕ ಕೆಎಸ್ಆರ್ಟಿಸಿ ಕೇರಳಕ್ಕೆ ಸಿಕ್ಕಿದೆ ಎಂದು ಕೇರಳ ರಸ್ತೆ ಸಾರಿಗೆ ನಿಗಮ ತಿಳಿಸಿದೆ.
ಈ ಸಂಬಂಧ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಪ್ರತಿಕ್ರಿಯಿಸಿ, ಇನ್ನೂ ಅಧಿಕೃತ ಮಾಹಿತಿ ತಲುಪಿಲ್ಲ. ಮೊದಲು ಮೈಸೂರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎಂಎಸ್ಆರ್ಟಿಸಿ) ಆಗಿತ್ತು. ಬಳಿಕ ಕೆಎಸ್ಆರ್ಟಿಸಿ ಎಂದು ಬದಲಿಸಿಕೊಳ್ಳಲಾಗಿದೆ. ಅದಕ್ಕೂ ಮೊದಲೇ ಕೇರಳದಲ್ಲಿ ಕೆಎಸ್ಆರ್ಟಿಸಿ ಎಂದು ಬಳಕೆಯಲ್ಲಿದ್ದ ಕಾರಣ ಅವರ ಪರವಾಗಿ ಆದೇಶ ನೀಡಿರಬಹುದು. ಅಧಿಕೃತವಾಗಿ ಆದೇಶ ತಲುಪಿದ ಬಳಿಕ ಕಾನೂನು ಅಭಿಪ್ರಾಯ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.