ಹೆಚ್.ಡಿ.ಕೋಟೆ ತಾಲ್ಲೂಕಿನ ಗಡಿ ಭಾಗದಲ್ಲಿರುವ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯತಿಯಲ್ಲಿ ಮಂಗಳವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಅಲ್ಲಿನ ಸಮಸ್ಯೆಗಳನ್ನು ಸಚಿವರು ಆಲಿಸಿದರು.

ವಾರದೊಳಗೆ 5 ಕೆರೆಗಳನ್ನು ಹೂಳೆತ್ತುವ ಕಾಮಗಾರಿಗಳು, ಅಂಗನವಾಡಿ ಕಟ್ಟಡ ನಿರ್ಮಾಣ, ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡ ನಿರ್ಮಾಣ, ಮೆಟ್ಲಿಂಗ್ ರಸ್ತೆ, ಚರಂಡಿ ಕಾಮಗಾರಿಗಳನ್ನು ಆರಂಭಿಸಬೇಕು‌ ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.

ನೆರೆಯ ಕೇರಳಕ್ಕೆ ಕೆಲಸಕ್ಕೆ ಹೋಗಲು ದೋಣಿ ಸಂಚಾರಕ್ಕೆ ಅನುಮತಿ, ಏಕ್ ಸಾಲ್ ಭೂಮಿ ಹಕ್ಕು ಪತ್ರ, ಆನೆಮಾಳ, ಹೊಸೂರು ಏತ ನೀರಾವರಿಗೆ 60 ಲಕ್ಷ ರೂ. ಮಂಜೂರಾಗಿರುವ ಕಾಮಗಾರಿ ಆರಂಭ, ರೈಲುಕಂಬಿ ಹಾಕಿ ವನ್ಯಪ್ರಾಣಿಗಳಿಂದ ರಕ್ಷಣೆ ಮುಂತಾದ ಸಮಸ್ಯೆಗಳ ಕುರಿತು ಫೆ.14ರಿಂದ ಆರಂಭವಾಗುವ ವಿಧಾನ ಮಂಡಲ ಅಧಿವೇಶನ ಸಂದರ್ಭದಲ್ಲಿ, ಸಮಯಾವಕಾಶ ಮಾಡಿಕೊಂಡು ಸಂಬಂಧಪಟ್ಟ ಸಚಿವರೊಂದಿಗೆ ಇಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಿ ಇತ್ಯರ್ಥಕ್ಕೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಮಾರ್ಚ್ ತಿಂಗಳ ಒಳಗಡೆ ಮತ್ತೆ ಇಲ್ಲಿನ ಕಬಿನಿ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಅಭಿವೃದ್ಧಿ ಕುರಿತಂತೆ ಚರ್ಚಿಸಲಾಗುವುದು. ಸಭೆಯಲ್ಲಿ ಅಧಿಕಾರಿಗಳ ಕಾರ್ಯಕ್ಷಮತೆ ಗೊತ್ತಾಗಲಿದೆ ಎಂದರು.

ಕಾರ್ಯಕ್ರಮಕ್ಕೆ ಆಗಮಿಸಿದ ಮಾನ್ಯ ಸಚಿವರನ್ನು
ಜೈನು ಕರುಬರ ಪಾರಂಪರಿಕ ನೃತ್ಯ ಹಾಗೂ ಕೋಲಾಟ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಇದಕ್ಕೂ ಮುನ್ನ ಗ್ರಾಪಂ ಸದಸ್ಯ ವೆಂಕಟೇಗೌಡ ಅವರು ಮಾತನಾಡಿ, ಏಕ್ ಸಾಲ್ ಭೂಮಿ ಹಕ್ಕು ಪತ್ರ ಕೊಡಬೇಕು. ಆನೆಮಾಳ, ಹೊಸೂರು ಏತ ನೀರಾವರಿಗೆ 60 ಲಕ್ಷ ರೂ. ಮಂಜೂರಾಗಿದೆ. ಕಾಮಗಾರಿ ಆರಂಭವಾಗಿಲ್ಲ. ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಆದೇಶ ಕೊಡಬೇಕು. ರೈಲುಕಂಬಿ ಹಾಕಿ ವನ್ಯಪ್ರಾಣಿಗಳಿಂದ ರಕ್ಷಣೆ ಕೊಡಿಸಬೇಕು. ನೆರೆಯ ಕೇರಳಕ್ಕೆ ಕೆಲಸಕ್ಕೆ ಹೋಗಲು ದೋಣಿ ಸಂಚಾರಕ್ಕೆ ಅನುಮತಿ ನೀಡಬೇಕೆಂದು ಮನವಿ ಮಾಡಿದರು.

ಇನ್ನೋರ್ವ ಗ್ರಾ.ಪಂ‌ ಸದಸ್ಯ ರಮೇಶ್ ಮಾತನಾಡಿ, ಆದಿವಾಸಿ ಮಕ್ಕಳಿಗೆ ಉಚಿತ ಉನ್ನತ ಶಿಕ್ಷಣ ಕೊಡಬೇಕು. ಕ್ರೀಡಾ ವಸತಿ ಶಾಲೆ ಆರಂಭಿಸಬೇಕು. ಸೋಲಾರ್ ಬದಲು ವಿದ್ಯುತ್ ಸೌಲಭ್ಯ ಕಲ್ಪಿಸಬೇಕು‌ ಎಂದು ಮನವಿ ಮಾಡಿದರು.

ಉಪ ವಿಭಾಗಾಧಿಕಾರಿ ವರ್ಣೀತ್ ನೇಗಿ ಅವರು ಮಾತನಾಡಿ, ಈ ಬಗ್ಗೆ ಶೀಘ್ರದಲ್ಲೇ ಸಭೆ ನಡೆಸಿ ಜಿಲ್ಲಾಧಿಕಾರಿಗಳ ಸಮಿತಿಗೆ ಕಳುಹಿಸಿಕೊಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಅನಿಲ್ ಚಿಕ್ಕಮಾದು, ವಿಧಾನಪರಿಷತ್ ಸದಸ್ಯರಾದ ಶಾಂತರಾಮ್ ಬುಡ್ನಾ ಸಿದ್ಧಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಎಂ.ಯೋಗೀಶ್, ಹುಣಸೂರು ಉಪ ವಿಭಾಗಾಧಿಕಾರಿ ವರ್ಣಿತ್ ನೇಗಿ, ಡಿಬಿ ಕುಪ್ಪೆ ಗ್ರಾ.ಪಂ ಅಧ್ಯಕ್ಷರಾದ ಚಿಕ್ಕಮ್ಮಣಿ, ಉಪಾಧ್ಯಕ್ಷ ಜಯಮ್ಮ, ಕಾರ್ಯನಿರ್ವಾಹಕ ಅಧಿಕಾರಿ ಜರಾಲ್ಡ್ ರಾಜೇಶ್, ಗ್ರಾಮ ಪಂಚಾಯತಿ ಸದಸ್ಯರು, ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.