ಗುಂಡ್ಲುಪೇಟೆ: ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸಿಸುವ ಜೊತೆಗೆ ಕೂಡಲೇ ಬಂಧಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಲಕ್ಕೂರು ಆರ್.ಗಿರೀಶ್ ಆಗ್ರಹಿಸಿದರು.
ಮಾಧ್ಯಮದೊಂದಿಗೆ ಮಾತಾನಾಡಿ, ಈ ಹಿಂದೆ ಗುತ್ತಿಗೆದಾರ ಸಂತೋಷ ಪಾಟೀಲ್ ಪ್ರಧಾನಿ ಮಂತ್ರಿಗೆ ಈಶ್ವರಪ್ಪ ಮೇಲೆ ಶೇ.40% ಕಮೀಷನ್ ಆರೋಪದ ಕುರಿತು ಪತ್ರ ಬರೆದಿದ್ದರು. ಜೊತೆಗೆ ಸಂತೋಷ ಪಾಟೀಲ್ ರಸ್ತೆ ನಿರ್ಮಾಣಕ್ಕೆ ಕೋಟ್ಯಾಂತರ ರೂ. ಹಣ ವ್ಯಯ ಮಾಡಿದ್ದು, ಇದರಲ್ಲಿ ಶೇ.40% ಕಮೀಷನ್ ಕೊಡುವಂತೆ ಈಶ್ವರಪ್ಪ ಆಪ್ತ ಬೆಂಬಲಿಗರು ಹಾಗೂ ಅಧಿಕಾರಿಗಳು ಪೀಡಿಸುತ್ತಿದ್ದರು ಎನ್ನಲಾಗಿದೆ. ಈ ಕಾರಣದಿಂದಲೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ದಟ್ಟವಾಗಿ ವ್ಯಕ್ತವಾಗಿದೆ. ಅದ್ದರಿಂದ ಸಚಿವ ಕೆ.ಎಸ್.ಈಶ್ವರಪ್ಪ ಪ್ರಕರಣದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಹಾಗೂ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಮೃತನ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕು. ಇದರೊಂದಿಗೆ ಅವರ ಕುಟುಂಬ ವರ್ಗಕ್ಕೆ ಸೂಕ್ತ ಪರಿಹಾರ ಜೊತೆಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಒತ್ತಾಯಿಸಿದರು.
ವರದಿ: ಬಸವರಾಜು ಎಸ್.ಹಂಗಳ