ಕೆ.ಆರ್.ಪೇಟೆ: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಗ್ರಾಮೀಣ ಪ್ರದೇಶಕ್ಕೆ ವ್ಯಾಪಕವಾಗಿ ಹರಡುವ ಸೂಚನೆಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಜನರ ಆರೋಗ್ಯದ ಹಿತದೃಷ್ಠಿಯಿಂದ ಕೆ.ಆರ್.ಪೇಟೆ ಟೌನ್ ಸೇರಿದಂತೆ ತಾಲೂಕಿನಾದ್ಯಂತ ವಾರದಲ್ಲಿ ನಾಲ್ಕು ದಿನಗಳು ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ತಹಶೀಲ್ದಾರ್ ಶಿವಮೂರ್ತಿ ಅವರು ಇನ್ಮುಂದೆ ಸೋಮವಾರ, ಬುಧವಾರ, ಗುರುವಾರ, ಶನಿವಾರ ಗಳಂದು ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿರುತ್ತದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಅವರ ಆದೇಶದ ಮೇರೆಗೆ ಕೊರೋನಾ ಸೋಂಕು ಕಡಿಮೆ ಮಾಡಿ ಜನರ ಆರೋಗ್ಯವನ್ನು ಕಾಪಾಡಬೇಕು. ಸೋಂಕಿನ ಚೈನ್‌ಲಿಂಕ್ ಅನ್ನು ಕಟ್ ಮಾಡಲು ಲಾಕ್‌ಡೌನ್ ಮಾಡುವುದೊಂದೇ ದಾರಿ ಎಂದು ಸಚಿವರು ಸೂಚನೆ ನೀಡದ ಹಿನ್ನೆಲೆಯಲ್ಲಿ ಇಂದಿನಿಂದ ಸರಕಾರದ ಮುಂದಿನ ಆದೇಶದವರೆಗೆ ಸೋಮವಾರ, ಬುಧವಾರ, ಗುರುವಾರ ಮತ್ತು ಶನಿವಾರ ಸಂಪೂರ್ಣ ಲಾಕ್‌ಡೌನ್ ತಾಲ್ಲೂಕಿನ ಪ್ರತಿ ಹಳ್ಳಿಯಲ್ಲಿಯೂ ಜಾರಿಯಲ್ಲಿ ಇರುತ್ತದೆ. ಉಳಿದ ದಿನಗಳಾದ ಭಾನುವಾರ, ಮಂಗಳವಾರ, ಶುಕ್ರವಾರಗಳಂದು ಬೆಳಿಗ್ಗೆ ೬ರಿಂದ ೧೦ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಕೊಳ್ಳಲು ಅವಕಾಶ ಇರುತ್ತದೆ. ಅನಗತ್ಯ ವಸ್ತುಗಳಿಗೆ ಯಾವುದೇ ಅವಕಾಶ ಇರುವುದಿಲ್ಲ. ಲಾಕ್‌ಡೌನ್ ಅವಧಿಯಲ್ಲಿ ಮೆಡಿಕಲ್ ಸ್ಟೋರ‍್ಸ್ ಮತ್ತು ಆಸ್ಪತ್ರೆ, ನಂದಿನಿ ಹಾಲಿನ ಕೇಂದ್ರ, ಪೆಟ್ರೋಲ್ ಬಂಕ್ ಹೊರತು ಪಡಿಸಿ ಇತರೆ ಯಾವುದೇ ಅಂಗಡಿಗಳನ್ನು ತೆರಯಲು ಯಾವುದೇ ಅವಕಾಶ ಇರುವುದಿಲ್ಲ. ಹೋಬಳಿ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಆಯಾಯಾ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಲಾಕ್ ಡೌನ್ ಯಶಸ್ಸಿಗೆ ಅಗತ್ಯ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ ಲಾಕ್‌ಡೌನ್ ನಿಯಮಗಳನ್ನು ಮೀರುವವರ ಮೇಲೆ ಎಫ್.ಐ.ಆರ್.ದಾಖಲಿಸುವ ಜೊತೆಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತಾಲೂಕಿನಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿದೆ. ಹಾಗಾಗಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಜನಸಾಮಾನ್ಯರು ಕೆಲಸವಿಲ್ಲದ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ ಈ ಸಂದರ್ಭದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಗ್ರಾಮಗಳಿಗೆ ಹೋಗಿ ಗುಂಪು ಸಭೆ ನಡೆಸಿ ಜನರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಹಾಗಾಗಿ ಲಾಕ್‌ಡೌನ್ ಮುಗಿಯುವರೆಗೂ ತಾಲ್ಲೂಕಿನ ಯಾವುದೇ ಗ್ರಾಮಗಳಿಗೆ ಹೋಗಿ ಜನರಿಂದ ಸಾಲದ ಕಂತು ವಸೂಲಿಗೆ ಹೋಗಬಾರದು ಎಂದು ತಹಸೀಲ್ದಾರ್ ಎಂ.ಶಿವಮೂರ್ತಿ ಅವರು ಫೈನಾನ್ಸ್ ಸಂಸ್ಥೆಗಳಿಗೆ ಸೂಚನೆ ನೀಡಿದ್ದಾರೆ.

By admin