ಕೃಷ್ಣರಾಜಪೇಟೆ: ಕೆರೆಯಲ್ಲಿ ಈಜಲು ಹೋದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಬೂಕನಕೆರೆ ಹೋಬಳಿ ಮೋದೂರು ಗ್ರಾಮದಲ್ಲಿ ನಡೆದಿದೆ.
ಮೋದೂರು ಗ್ರಾಮದ ದಲಿತ ಮುಖಂಡ ರಮೇಶ ಅವರ ಪುತ್ರ ರಾಜು(18) ಮತ್ತು ದಲಿತ ಕಾಲೋನಿಯ ರಮೇಶ ಅವರ ಪುತ್ರ ಪ್ರದೀಪ(22) ಎಂಬುವರೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದುರ್ದೈವಿಗಳು. ಇವರಿಬ್ಬರು ಸ್ನೇಹಿತರಾಗಿದ್ದು ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ದೊಡ್ಡಕೆರೆಯಲ್ಲಿ ಈಜಾಡಿ ಸ್ನಾನಮಾಡಿ ಕೊಂಡು ಕೈಕಾಲು ಮುಖತೊಳೆದು ಬರಲು ತೆರಳಿದ್ದರು.
ರಾಜುವಿಗೆ ಈಜು ಅಷ್ಟೇನು ಚೆನ್ನಾಗಿ ಬರುತ್ತಿರಲಿಲ್ಲವಾದ್ದರಿಂದ ನೀರಿನಲ್ಲಿ ಮುಳುಗಿದ್ದಾನೆ. ಆ ವೇಳೆ ಆತನನ್ನು ರಕ್ಷಿಸಲು ಪ್ರದೀಪ ತೆರಳಿದ್ದು ಆತನೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಇದನ್ನು ನೋಡಿದ ಜನರು ಮನೆಯವರಿಗೆ ಮಾಹಿತಿ ನೀಡಿದ ಮೇರೆಗೆ ಗ್ರಾಮಸ್ಥರು ಸ್ಥಳಕ್ಕೆ ಬಂದು ಕೆರೆಯಲ್ಲಿ ಶವಕ್ಕಾಗಿ ಹುಡುಕಾಟ ನಡೆಸಿದರೂ ಶವದೊರೆಯಲಿಲ್ಲ. ಸ್ಥಳಕ್ಕೆ ಬಂದ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಶಿವಣ್ಣ ಮತ್ತು ಸಿಬ್ಬಂದಿ ಸತತವಾಗಿ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಪ್ರದೀಪ ಮತ್ತು ರಾಜು ಅವರ ಮೃತ ದೇಹಗಳನ್ನು ಶೋಧಿಸಿ ಹೊರಕ್ಕೆ ತೆಗೆದಿದ್ದಾರೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ನೀಡಲಾಗಿದೆ.