ಕೆ.ಆರ್.ನಗರ: ಅನ್ ಲಾಕ್ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಎಲ್ಲರೂ ಖುಷಿಯಾಗಿ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ದೃಶ್ಯ ನಗರದಲ್ಲಿ ಕಂಡು ಬಂದಿತು.

ಕಳೆದ ಒಂದೂವರೆ ದಿನಗಳಿಂದ ಪಟ್ಟಣ ಸೇರಿದಂತೆ ತಾಲೂಕಿನಾsದ್ಯಂತ ಅಗತ್ಯ ವಸ್ತುಗಳ ಖರೀದಿಗೆ ನಿಗದಿತ ಸಮಯ ಹೊರತು ಪಡಿಸಿ ಉಳಿದ ವೇಳೆ ಲಾಕ್‌ಡೌನ್ ಘೋಷಣೆ ಮಾಡಿದ್ದನ್ನು ಸೋಮವಾರದಿಂದ ಸಂರ್ಪೂಣವಾಗಿ ತೆರವು ಮಾಡಿದ್ದರಿಂದ ಎಲ್ಲೆಡೆ ಜನ ಜಂಗುಳಿ ಕಂಡು ಬಂತು.

ಪ್ರಮುಖವಾಗಿ ಬಟ್ಟೆ, ಟಿವಿ. ಚಪ್ಪಲಿ, ಚಿನ್ನ ಬೆಳ್ಳಿ, ಮೊಬೈಲ್, ಟೈರ್, ಎಲೆಕ್ಟ್ರಿಕ್ ಮತ್ತು ಇತರ ಅಂಗಡಿಗಳ ಮುಂದೆ ಸಾಲು ಸಾಲು ಜನರು ಸೇರಿ ಖರೀದಿಯಲ್ಲಿ ತೊಡಗಿದ್ದರು. ಬಸ್ ಘಟಕದಿಂದ ಹೊರ ಜಿಲ್ಲೆಗಳು, ಜಿಲ್ಲಾ ಕೇಂದ್ರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಿಗೆ   53 ಬಸ್‌ಗಳ ಸೇವೆ ಆರಂಭಿಸಿದ್ದು ಹಿಂದಿನ ದಿನಗಳಿಗಿಂತ ಸೋಮವಾರ ಹೆಚ್ಚು ಜನರು ಪ್ರಯಾಣ ಮಾಡಿದರು.

ಮಾಂಸಹಾರದ ಹೋಟೆಲ್‌ಗಳು, ಬಾರ್ ಅಂಡ್ ರೆಸ್ಟೋರೆಂಟ್ ಸೇರಿದಂತೆ ಇತರ ಹೋಟೆಲ್‌ಗಳಿಗೆ ಪಾನ ಹಾಗೂ ಬೋಜನ ಪ್ರಿಯರು ಬೆಳಿಗ್ಗೆಯಿಂದಲೇ ಲಗ್ಗೆಯಿಟ್ಟು ತಮಗೆ ಬೇಕಾದ ಆಹಾರವನ್ನು ಸವಿದರು.

ಲಾಕ್‌ಡೌನ್ ನಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ರಸ್ತೆ ಬದಿಯ ವ್ಯಾಪಾರಿಗಳು ನಿಟ್ಟುಸಿರು ಬಿಟ್ಟು ವ್ಯಾಪಾರದಲ್ಲಿ ತೊಡಗಿದ್ದರಲ್ಲದೆ ಮತ್ತೆ ಇಂತಹ ಕಷ್ಟದ ದಿನಗಳು ಬಾರದಿರಲೆಂದು ಪ್ರಾರ್ಥಿಸುತ್ತಿದ್ದರು.

ಪಟ್ಟಣದ ಮಲೆ ಮಹದೇಶ್ವರ ದೇವಾಲಯದಲ್ಲಿ ಮುಂಜಾನೆಯೆ ವಿಶೇಷ ಪೂಜೆ ನೆರವೇರಿಸಿ ತಳಿರು ತೋರಣಗಳಿಂದ ಸಿಂಗರಿಸಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಒಟ್ಟಾರೆ ಲಾಕ್ ಡೌನ್ ನಿಂದ ಹೊರ ಬಂದ ಜನ ಮೈಕೊಡವಿಕೊಂಡು ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿರುವುದಂತು ಸತ್ಯ.

 

 

 

 

By admin