ಮೈಸೂರು: ಮೈಸೂರು ಜಿಲ್ಲೆಯಲ್ಲಿ ಜಾರಿಯಲ್ಲಿರುವ ವಾರದ ಐದು ದಿನಗಳ ಲಾಕ್‌ಡೌನ್ ಜೂ. 7ರ ನಂತರ ತೆರವುಗೊಳಿಸಿ ನಿತ್ಯ ಬೆಳಿಗ್ಗೆ 6ರಿಂದ 10ರ ವರೆಗೆ ಅಗತ್ಯ ವಸ್ತುಗಳ ಕೊಳ್ಳುವಿಕೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದಾರೆ.
ಕೆ.ಆರ್.ನಗರ ತಾಲೂಕಿನ ಕೆಗ್ಗೆರೆ ಗ್ರಾಮದಲ್ಲಿ ಸಾ.ರಾ.ಬಳಗದ ವತಿಯಿಂದ ಆರಂಭಿಸಿರುವ ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಚಾರ ತಿಳಿಸಿದ ಅವರು ಜಿಲ್ಲೆಯ ಶಾಸಕರು ಮತ್ತು ಇತರ ಮುಖಂಡರ ಒತ್ತಾಯದ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಲಾಗಿದೆ ಎಂದರು.
ಜಿಲ್ಲಾಧಿಕಾರಿ ಮತ್ತು ನಗರ ಪಾಲಿಕೆ ಆಯುಕ್ತರ ನಡುವಿನ ಜಗಳದ ವಿಚಾರದಲ್ಲಿ ಮುಖ್ಯಮಂತ್ರಿಗಳು ನಿರ್ಧಾರ ತೆಗೆದುಕೊಳ್ಳಲಿದ್ದಾರೆಂದ ಅವರು, ಪಿಯುಸಿ ಪರೀಕ್ಷೆ ರದ್ದುಪಡಿಸಿರುವಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ರದ್ದು ಮಾಡಬೇಕು ಎಂದು ಒತ್ತಾಯ ಕೇಳಿ ಬರುತ್ತಿರುವ ವಿಚಾರದಲ್ಲಿ ಶಿಕ್ಷಣ ಸಚಿವರು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದಕ್ಕೂ ಮುನ್ನ ಅವರು ಮಾತನಾಡಿ ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದ್ದು ಅದನ್ನು ಶೂನ್ಯಕ್ಕಿಳಿಸಲು ಸರ್ಕಾರ ಕಾರ್ಯ ಯೋಜನೆ ಹಮ್ಮಿಕೊಂಡಿದೆ.
ಪ್ರತಿ ಮನೆ ಮನೆಗೆ ಭೇಟಿ ನೀಡುತ್ತಿರುವ ಆರೋಗ್ಯ ಸಿಬ್ಬಂದಿ ಸೋಂಕಿನ ಲಕ್ಷಣ ಇರುವವರಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಮಾಡುತ್ತಿದ್ದು, ಅದರ ಪರಿಣಾಮ ಸೋಂಕಿನ ಇಳಿಕೆಯಲ್ಲಿ ಪ್ರಗತಿ ಕಾಣುತ್ತಿದ್ದು, ಸಾರ್ವಜನಿಕರು ನಮಗೆ ಸಹಕಾರ ನೀಡಿ ಎಂದು ಸಚಿವರು ಕೋರಿದರು.
ಈ ಸಂದರ್ಭದಲ್ಲಿ ಕೋವಿಡ್ ಕೇರ್ ಸೆಂಟರ್‌ನಲ್ಲಿ ದಾಖಲಾಗಿರುವ ಸೋಂಕಿತರ ಆರೋಗ್ಯ ವಿಚಾರಿಸಿದ ಉಸ್ತುವಾರಿ ಸಚಿವರು ನಿಮ್ಮೊಂದಿಗೆ ನಾವು ಇದ್ದು ಉತ್ತಮ ಚಿಕಿತ್ಸೆ ನೀಡುತ್ತಿರುವುದರಿಂದ ಯಾವುದೇ ಕಾರಣಕ್ಕೂ ಭಯಪಡದೆ ಧೈರ್ಯದಿಂದ ಶೀಘ್ರದಲ್ಲಿಯೇ ಚೇತರಿಸಿಕೊಳ್ಳಿ ಎಂದು ಹಾರೈಸಿದರು.
ಇದೇ ವೇಳೆ ಸಾ.ರಾ.ಸ್ನೇಹ ಬಳಗದ ವತಿಯಿಂದ ಕೋವಿಡ್ ಕೇರ್ ಸೆಂಟರ್‌ಗೆ ನೇಮಕ ಮಾಡಿಕೊಂಡಿದ್ದ ವೈದ್ಯರಿಗೆ ಶಾಸಕ ಸಾ.ರಾ.ಮಹೇಶ್ ಅವರು ನೀಡಿದ ವೇತನದ ಚೆಕ್ಕುಗಳನ್ನು ಸಚಿವರು ವಿತರಿಸಿದರಲ್ಲದೆ, ಮೃತ ಸೋಂಕಿತರ ಶವ ಸಂಸ್ಕಾರಕ್ಕೆ ಬಳಕೆ ಮಾಡಿಕೊಳ್ಳಲು ಶಾಸಕರು ಉಚಿತವಾಗಿ ನೀಡಿರುವ ಜೆಸಿಬಿ ಯಂತ್ರವನ್ನು ಸೇವೆಗೆ ಸಮರ್ಪಣೆ ಮಾಡಿದರು.
ಶಾಸಕ ಸಾ.ರಾ.ಮಹೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷೆ ಮಂಗಳಸೋಮಶೇಖರ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ದಾಕ್ಷಾಯಿಣಿ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ತಾಲೂಕು ಕಾರ್ಯದರ್ಶಿ ಕೆ.ಟಿ.ತ್ಯಾಗರಾಜು, ವಕ್ತಾರ ಕೆ.ಎಲ್.ರಮೇಶ್, ತಾಲೂಕು ಬಿಜೆಪಿ ಅಧ್ಯಕ್ಷ ಕೆ.ವೈ.ಮಂಜು, ಪ್ರಧಾನ ಕಾರ್ಯದರ್ಶಿ ಮಾರ್ಕಂಡೇಯಸ್ವಾಮಿ, ಟಿಎಪಿಸಿಎಂಎಸ್ ಅಧ್ಯಕ್ಷ ಪ್ರಭಾಕರ್ ಜೈನ್, ಜಿಲ್ಲಾ ವಕ್ತಾರ ಹೆಚ್.ಪಿ.ಗೋಪಾಲ್, ಸಾ.ರಾ.ಸ್ನೇಹ ಬಳಗದ ಅಧ್ಯಕ್ಷ ವಿಜಯಕುಮಾರ್, ಕಾರ್ಯದರ್ಶಿ ಸಿ.ಜೆ.ಆನಂದ್ ಇದ್ದರು.