ಮೈಸೂರು: ಲಾಕ್ ಡೌನ್ ಸಮಯದಲ್ಲಿ ಬೀದಿಬದಿಯಲ್ಲಿರುವ ಮೂಕ ಪ್ರಾಣಿಗಳಿಗೆ ಆಹಾರ ನೀಡುತ್ತಾ ಬಂದಿರುವ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ಹಾಗೂ ಪ್ರಾಣಿ ಪಕ್ಷಿಗಳ ಸಂರಕ್ಷಣಾ ಸಮಿತಿಯು ಐವತ್ತು ದಿನಗಳು ಪೂರೈಸಿದ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರದ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ವಲಯ ಅಧ್ಯಕ್ಷರಾಗಿ ನೇಮಕಗೊಂಡ ದತ್ತ ಶ್ರೀ ಕೃಷ್ಣ ಮಿತ್ತಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ವಲಯ ಅಧ್ಯಕ್ಷ ಡಾ. ಶ್ರೀಕೃಷ್ಣ ಮಿತ್ತಲ್ ಅವರು ಮಹಾರಾಜ ಮೈದಾನದಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುತ್ತಾ ಬಂದಿರುವ ಟ್ರಸ್ಟ್ ನ ಕಾರ್ಯವನ್ನು ಶ್ಲಾಘಿಸಿದರು.
ಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧ್ಯಕ್ಷರಾದ ಎಲ್. ಆರ್ ಮಹದೇವಸ್ವಾಮಿ ಮಾತನಾಡಿ ನಗರದ ಬಡಾವಣೆಗಳಲ್ಲಿ ಸಾಕು ಪ್ರಾಣಿಗಳ ಮತ್ತು ಬೀದಿ ಪ್ರಾಣಿಗಳ ಆರೈಕೆ ಮತ್ತು ನಿರ್ವಹಣೆಗೆ ಪ್ರಾಣಿ ಸೇವಾ ಸಂಘವನ್ನು ಬಳಸಿಕೊಂಡು ನಗರಪಾಲಿಕೆ ಯೋಜನೆ ರೂಪಿಸುವ ಅಗತ್ಯವಿದೆ. ನಟ ದರ್ಶನ್ ರವರ ಸಂದೇಶದಂತೆ ಮೃಗಾಲಯದ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆಯುವುದೊಂದಿಗೆ ಕೋಟ್ಯಂತರ ರೂ ಆದಾಯ ಬರುವಂತಾಯಿತು ಎಂದು ಹೇಳಿದರು.
ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನಗರಪಾಲಿಕೆಯು ವಲಯ ಮಟ್ಟದಲ್ಲಿ ವಾರ್ಡ್ ವಾರು ಪ್ರಾಣಿ ಪಕ್ಷಿಗಳ ಸೇವಾ ಸಂಘಗಳನ್ನ ಮತ್ತು ಸ್ವಯಂ ಸೇವಕರನ್ನ ಗುರುತಿಸಿ ಪ್ರಾಣಿಪಕ್ಷಿ ರಕ್ಷಣೆಗೆ ಆಹಾರ ಆರೋಗ್ಯ ತಪಾಸಣೆಗೆ ಮುಂದಾಗಬೇಕು, ಕೇವಲ ಬೀದಿನಾಯಿ, ಹಸು, ಕೋತಿಗಳನ್ನ ಹಿಡಿಯುವುದಕ್ಕೆ ತಂಡ ರಚಿಸಿದರೆ ಪ್ರಯೋಜನವಿಲ್ಲ ಇವುಗಳ ಆರೈಕೆಯತ್ತಲೂ ಚಿಂತನೆ ನಡೆಸಬೇಕೆಂದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ ಲಕ್ಷ್ಮೀದೇವಿ, ನವೀನ್ ಕುಮಾರ್ , ಬಿಜೆಪಿ ಮೈಸೂರು ನಗರ ಹಿಂದುಳಿದ ಮೋರ್ಚಾ ಅಧ್ಯಕ್ಷ ಜೋಗಿ ಮಂಜು , ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ , ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ , ಬಿಜೆಪಿ ನರಸಿಂಹರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಲೋಹಿತ್ , ರಾಕೇಶ್ ಕುಂಚಿಟಿಗ , ನವೀನ್, ಚಂದ್ರು ,ಜೀವನ್ ಇನ್ನಿತರರು ಇದ್ದರು