ಕೆ.ಆರ್.ನಗರ: ಕೊರೋನಾ ಸೋಂಕಿತರಿಗೆ ಅನುಕೂಲವಾಗುವಂತೆ ಸಾ.ರಾ.ಸ್ನೇಹ ಬಳಗದ ವತಿಯಿಂದ ತಾಲೂಕಿನ ಕೆಗ್ಗೆರೆ ಗ್ರಾಮದ ಬಳಿ 200 ಹಾಸಿಗೆಗಳ ಕೋವಿಡ್ ಕೇರ್ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದ್ದು, ತಾಲೂಕು ಆಡಳಿತಕ್ಕೆ ಮೇ 10ರಂದು ಹಸ್ತಾಂತರ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.
ಈ ಕುರಿತಂತೆ ಶಾಸಕ ಸಾ.ರಾ.ಮಹೇಶ್ ಅವರು ಮಾಹಿತಿ ನೀಡಿದ್ದು, ತಾಲೂಕು ಆಸ್ಪತ್ರೆಯಲ್ಲಿ ಕೇವಲ 50 ಮತ್ತು ಕೋವಿಡ್ ಆಸ್ಪತ್ರೆಯಲ್ಲಿ 75 ಹಾಸಿಗೆಗಳು ಲಭ್ಯವಿದ್ದು ಅರಕೆರೆ ಮೊರಾರ್ಜಿ ವಸತಿ ಶಾಲೆಯಲ್ಲಿ ಕೋವಿಡ್ ಆಸ್ಪತ್ರೆ ತೆರೆಯಲಾಗಿದ್ದು ಇದರ ಜೊತೆಗೆ ಸೋಂಕಿತರಿಗೆ ಅನುಕೂಲವಾಗುವಂತೆ ಸಾ.ರಾ.ಬಳಗದ ವತಿಯಿಂದ ಕೆಗ್ಗೆರೆ ಗ್ರಾಮದ ಬಳಿ ಸುಸಜ್ಜಿತವಾದ ಕೋವಿಡ್ ಆಸ್ಪತ್ರೆ ಆರಂಭಿಸಿದ್ದು ಅದನ್ನು ತಾಲೂಕು ಆಡಳಿತಕ್ಕೆ ನೀಡುವುದರ ಜತೆಗೆ ಅಗತ್ಯವಿದ್ದರೆ ಮತ್ತಷ್ಟು ಕಡೆಗಳಲ್ಲಿ ಆಸ್ಪತ್ರೆ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅವಶ್ಯಕತೆ ಕಂಡು ಬಂದರೆ ಮುಳ್ಳೂರು ರಸ್ತೆಯಲ್ಲಿರುವ ಮಹಿಳಾ ವಿದ್ಯಾರ್ಥಿ ನಿಲಯದಲ್ಲಿ ಕೋವಿಡ್ ಆಸ್ಪತ್ರೆ ತೆರೆಯಲು ಅಧಿಕಾರಿಗಳು ಎಲ್ಲಾ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.
ಇದೇ ವೇಳೆ ನಡೆದ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳು ಪರಸ್ಪರ ಸಮನ್ವ ಯತೆಯಿಂದ ಕೆಲಸ ಮಾಡಿ ಕೊರೋನಾ ಸೋಂಕು ಹರಡುವುದನ್ನು ತಡೆಯಬೇಕು. ಯಾವುದೇ ಸಮಸ್ಯೆಗಳಿದ್ದರೆ ಕೂಡಲೇ ನನ್ನ ಗಮನಕ್ಕೆ ತರುವಂತೆ ಹೇಳಿದ್ದಾರೆ. ಈ ಸಭೆಯಲ್ಲಿ ತಹಸೀಲ್ದಾರ್ ಎಂ.ಮಂಜುಳ, ಪುರಸಭೆ ಮುಖ್ಯಾಧಿಕಾರಿ ಡಿ.ಪುಟ್ಟಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಆರ್.ಮಹೇಂದ್ರಪ್ಪ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ನಾಗೇಂದ್ರ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.