ಚಾಮರಾಜನಗರ: ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಕಣ್ಗಾವಲು ಘಟಕ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಕೋಟ್ಪಾ ತನಿಖಾ ತಂಡದ ಸಹಯೋಗದೊಂದಿಗೆ ಏಪ್ರಿಲ್ ತಿಂಗಳಲ್ಲಿ ಕೋಟ್ಪಾ ದಾಳಿಯನ್ನು ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಸಲಾಗಿದೆ.
ಕೋಟ್ಪಾ ದಾಳಿಯ ವೇಳೆ ನಿಯಮ ಉಲ್ಲಂಘನೆ ಮಾಡಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳು, ಕೋಟ್ಪಾ ಸೆಕ್ಷನ್-೪ ಎಚ್ಚರಿಕೆ ನಾಮಫಲಕವನ್ನು ಪ್ರದರ್ಶಿಸದ ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್‌ಗಳು, ಟೀ ಸ್ಟಾಲ್, ಚಿಲ್ಲರೆ ಅಂಗಡಿಗಳು ಹಾಗೂ ಇತರೆ ಅಂಗಡಿಗಳು, ಕೋಟ್ಪಾ ಸೆಕ್ಷನ್-೬ (ಎ) ನಾಮಫಲಕವನ್ನು ಪ್ರದರ್ಶಿಸದ ತಂಬಾಕು ಮಾರಾಟವಿರುವ ಅಂಗಡಿಗಳು, ಶಿಕ್ಷಣ ಸಂಸ್ಥೆಯ ೧೦೦ ಗಜಗಳ ಅಂತರದ ಒಳಗೆ ತಂಬಾಕು ಪದಾರ್ಥಗಳನ್ನು ಮಾರಾಟ ಮತ್ತು ಸೇವನೆಗೆ ಉತ್ತೇಜನ ನೀಡುವ ಅಂಗಡಿಗಳಿಗೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದ ವ್ಯಕ್ತಿಗಳಿಗೆ ಸ್ಥಳದಲ್ಲೇ ಕೋಟ್ಪಾ-೨೦೦೩ರಡಿ ಪ್ರಕರಣ ದಾಖಲಿಸಿ ದಂಡ ವಿಧಿಸಲಾಯಿತು. ಕರಪತ್ರ ವಿತರಿಸಿ ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳು ಮತ್ತು ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ-೨೦೦೩ರ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಕೊಳ್ಳೇಗಾಲ ತಾಲೂಕಿನ ಜಕ್ಕಳಿ, ಗುಂಡ್ಲುಪೇಟೆ ತಾಲೂಕಿನ ಕೂತನೂರು, ಕನ್ನೇಗಾಲ ಮತ್ತು ಭೀಮನಬೀಡು, ಯಳಂದೂರು ಮತ್ತು ಹನೂರು ಪಟ್ಟಣ ವ್ಯಾಪ್ತಿಯಲ್ಲಿ ದಾಳಿ ನಡೆಸಿದ ವೇಳೆ ಕೋಟ್ಪಾ-೨೦೦೩ರಡಿ ಒಟ್ಟು ೧೬೯ ಪ್ರಕರಣಗಳಿಗೆ ೨೮೬೦೦ ರೂ.ಗಳ ದಂಡ ವಿಧಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ದಾಳಿ ನಡೆಸಲಾಗುವುದು. ಜಿಲ್ಲೆಯಲ್ಲಿರುವ ಎಲ್ಲಾ ಸಾರ್ವಜನಿಕ ಸ್ಥಳದ ಮಾಲೀಕರು, ಮುಖ್ಯಸ್ಥರು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಕೋಟ್ಪಾ ಕಾಯ್ದೆ ಉಲ್ಲಂಘನೆಯಾಗದಂತೆ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಕಾರ್ಯಕ್ರಮಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.