ಹಾಸನ: ಪ್ರತಿಯೊಬ್ಬ ಪ್ರಜೆಗೂ ಉಚಿತವಾಗಿ ಕೊವೀಡ್ ಲಸಿಕೆ ನೀಡಬೇಕು ಎಂದು ಎಐಸಿಸಿ ಮಾರ್ಗದರ್ಶನದ ಮೇರೆಗೆ ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೋನಾ ವೈರಸ್ ನಿಂದ ಪ್ರತಿಯೊಬ್ಬರು ಆತಂಕಗೊಂಡಿದ್ದಾರೆ. ಸರ್ಕಾರ ಜನರ ಪ್ರಾಣ ಉಳಿಸಲು ಮುಂದಾಗಬೇಕು. ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಮೊದಲು ಜನರಿಗೆ ಅನುಕೂಲವಾಗುವ ಆರೋಗ್ಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕೋವಿಡ್ ಒಂದು ಮತ್ತು ಎರಡನೇ ಅಲೆ ಸಾಕಷ್ಟು ಜನರ ಪ್ರಾಣವನ್ನು ಬಲಿ ಪಡೆದಿದೆ. ಎರಡನೇ ಅಲೆಯಲ್ಲಿ ಮಧ್ಯ ವಯಸ್ಕರು, ಯುವಕರೇ ಸಾಕಷ್ಟು ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಂಡರು. ಮೂರನೇ ಅಲೆ ಇನ್ನಷ್ಟು ಜನರ ಬಲಿ ಪಡೆಯುವ ಸಾಧ್ಯತೆ ಇದೆ ಎಂಬ ವರದಿಗಳಿವೆ. ದೇಶದ ಜನರ ಪ್ರಾಣ ರಕ್ಷಣೆ ಮಾಡಬೇಕೆಂದರೆ ಪ್ರತಿಯೊಬ್ಬ ಪ್ರಜೆಗೂ ಲಸಿಕೆ ನೀಡುವುದೊಂದೇ ಉಳಿದಿರುವ ದಾರಿ ಎಂದು ಮನವಿ ಪತ್ರದಲ್ಲಿ ತಿಳಿಸಿದರು.ದೇಶದ ಜನ ಕೋವಿಡ್‌ನಿಂದ ಪ್ರಾಣ ಕಳೆದುಕೊಳ್ಳುತ್ತಿದ್ದರೆ ಲಸಿಕೆಯನ್ನು ವಿದೇಶಗಳಿಗೆ ರಫ್ತು ಮಾಡುವಲ್ಲಿ ಪ್ರಧಾನಿ ಬ್ಯುಸಿಯಾಗಿದ್ದರು. 6.63 ಕೋಟಿ ಡೋಸ್ ಅನ್ನು ಈವರೆಗೆ ಕೇಂದ್ರ ಸರ್ಕಾರ ಬೇರೆ ದೇಶಗಳಿಗೆ ರಫ್ತು ಮಾಡಿದೆ. ದೇಶದ ಜನರಿಗೆ ಮಾಡುತ್ತಿರುವ ದೊಡ್ಡ ಮೋಸ ಎಂದು ಅವರು ಹೇಳಿದರು.
2021ರ ಡಿಸೆಂಬರ್ ಅಂತ್ಯದ ವೇಳೆಗಾದರೂ ದೇಶದ ಎಲ್ಲಾ 18 ವರ್ಷ ಮೇಲ್ಪಟ್ಟ ವಯಸ್ಕರಿಗೆ ಲಸಿಕೆ ನೀಡಬೇಕು. ಜನರ ಜೀವ ರಕ್ಷಣೆ ಮಾಡಲು ಇರುವುದು ಇದೊಂದೇ ಮಾರ್ಗ. ಈ ಗುರಿಯನ್ನು ತಲುಪಬೇಕೆಂದರೆ ದಿನಕ್ಕೆ ಕನಿಷ್ಟ 1 ಕೋಟಿ ಜನರಿಗೆ ಲಸಿಕೆ ನೀಡಬೇಕು. ಕೋವಿಡ್ ಲಸಿಕೆಯನ್ನು ಎಲ್ಲರಿಗೂ ನೀಡಲು ಕಾರ್ಯಪ್ರವೃತ್ತರಾಗುವಂತೆ ಕೇಂದ್ರ ಸರ್ಕಾರಕ್ಕೆ ರಾಷ್ಟ್ರಪತಿ ಅವರು ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ದುದ್ದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಕೀಲ ಗೌರಿಪುರ ವಿಶ್ವನಾಥ್, ಮೇಳಗೋಡು ಗ್ರಾಪಂ ಅಧ್ಯಕ್ಷ ಲೋಕೇಶ್, ವಕೀಲರು ಹಾಗೂ ಕಾಂಗ್ರೆಸ್ ಕಾಂಗ್ರೆಸ್ ಮುಖಂಡ ಹರೀಶ್ ಇದ್ದರು