ಮಂಡ್ಯ: ಪ್ರತಿಯೊಬ್ಬ ಕೃಷಿ ಕೂಲಿಕಾರರಿಗೆ ತಿಂಗಳಿಗೆ 25 ಸಾವಿರ ರೂ. ಲಭಿಸುವ ಕೂಲಿಕಾಯಕ ಸೃಷ್ಠಿಯಾಗಬೇಕಿದೆ ಎಂದು ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಎಸ್. ನಾಗರಾಜು ಹೇಳಿದರು.

ನಗರದ ಗಾಂಧಿಭವನದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಸಮಿತಿ ಆಯೋಜಿಸಿದ್ದ ಉದ್ಯೋಗ ಖಾತ್ರಿ ಕಾಯಕ ಬಂಧುಗಳ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಪಾಲ್ಗೊಂಡು ಅವರು ಹೇಳಿದರು. ಕೃಷಿ ಮತ್ತು ರೈತರ ಉಳಿದರೆ ಮಾತ್ರ ಕೃಷಿಕೂಲಿಕಾರರು ಬದುಕುತ್ತಾರೆ, ರೈತಾಪಿಜನ ಮತ್ತು ಕೃಷಿಕೂಲಿಕಾರರ ಅನ್ಯೂನ್ಯತೆ ಹೆಚ್ಚಾದರೆ ಆರ್ಥಿಕಮಟ್ಟ ಸುಧಾರಿಸುತ್ತದೆ, ತಿಂಗಳಿಗೆ ೨೫ ಸಾವಿರ ರೂ. ಲಭಿಸುವ ಕೂಲಿಕಾಯಕ ಹೆಚ್ಚಾಗಬೇಕಿದೆ ಎಂದು ತಿಳಿಸಿದರು.

ಪ್ರಸ್ತುತ ದಿನಗಳಲ್ಲಿ ರೈತರ ಆರ್ಥಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ. ಬೆಳೆಗೆ ವೈಜ್ಞಾನಿಕ ಬೆಲೆ ಕೇಳಿದರೆ ನೀಡುವುದಿಲ್ಲ, ಸರ್ಕಾರಗಳು ಬೆಂಬಲಬೆಲೆ ಘೋಷಿಸುವುದಿಲ್ಲ, ರೈತರು-ಕೂಲಿಕಾರರ ಸಮಸ್ಯೆ ನೀಗಿಸುವ ಭರವಸೆ ನೀಡಿ ಅಧಿಕಾರ ಹಿಡಿಯುವ ಸರ್ಕಾರಗಳು ಅವರನ್ನೇ ಕಡೆಗಣಿಸಿ, ಕಾರ್ಪೋರೇಟ್‌ಕುಳಗಳ ಪರ ನಿಲ್ಲುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೂತನ ಕೃಷಿನೀತಿ ವಿರೋಧಿ ದೆಹಲಿ-ಕರ್ನಾಟಕಗಳಲ್ಲಿ ರೈತರು ಕೊರೆಯುವ ಚಳಿಯಲ್ಲೂ ಹಗಲು ರಾತ್ರಿ ಎನ್ನದೆ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಮೊಂಡತನ ತೋರುತ್ತಿದ್ದಾರೆ, ರೈತ ಬದುಕನ್ನು ಕಸಿದು, ಉದ್ಯಮಿಗಳ ಪರ ಕೃಷಿಕಾಯ್ದೆ ರೂಪಿಸಿರುವುದನ್ನು ವಿರೋಧಿಸಿದರೆ ಜೈಲಿಗೆ ಹಾಕುತ್ತಾರೆ ಎಂತಹ ದುರಂತ ಸರ್ಕಾರದ ಆಡಳಿತ ನೋಡುತ್ತಿದ್ದೇವೆ ಎಂದು ವಿಷಾಧಿಸಿದರು.

ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಓ ಎಸ್.ಎಂ. ಜುಲ್‌ಫಿಖಾರ್ ಉಲ್ಲಾ ಅವರನ್ನು ಕೂಲಿಕಾರರು ಅಭಿನಂದಿಸಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಉದ್ಯೋಗಖಾತ್ರಿ ಬಂದ ಮೇಲೆ ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ, ಬಹುದಿನಗಳ ಕಾಯಕ ಲಭಿಸುತ್ತಿದೆ, ಸಮಸ್ಯೆಗಳು ಇವೆ, ಹಂತ ಹಂತವಾಗಿ ಬಗೆಹರಿಯುತ್ತವೆ, ಸರ್ಕಾರಿ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.

ವೇದಿಕೆಯಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಎಂ.ಪುಟ್ಟಮಾದು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹುನುಮೇಶ್, ರಾಜ್ಯ ಸಹ ಕಾರ್ಯದರ್ಶಿ ಹನುಮೇಗೌಡ, ಸಿ.ಕುಮಾರಿ ಮತ್ತು ಪದಾಧಿಕಾರಿಗಳು ಹಾಜರಿದ್ದರು.

By admin