ಮಡಿಕೇರಿ: ಪ್ರಕೃತಿ ವಿಕೋಪ ಉಂಟಾದ ಸಂದರ್ಭದಲ್ಲಿ ಮಾನವ ರಕ್ಷಣೆ ಮಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಅಣಕು ಪ್ರದರ್ಶನ ನಡೆಸಲಾಯಿತಲ್ಲದೆ, ಆ ಮೂಲಕ ಜಿಲ್ಲಾಡಳಿತ ಸರ್ವ ರೀತಿಯಲ್ಲಿಯೂ ಸಜ್ಜಾಗಿದೆ ಎಂಬ ಸಂದೇಶವನ್ನು ಜಿಲ್ಲೆಯ ಜನತೆಗೆ ರವಾನಿಸಲಾಯಿತು.

ಜಿಲ್ಲಾಡಳಿತ, ಎನ್.ಡಿಅರ್.ಎಫ್, ಅಗ್ನಿಶಾಮಕ ಪೊಲೀಸ್ ಇಲಾಖೆ ಮೂಲಕ ನಡೆದ  ಅಣಕು ಪ್ರದರ್ಶನದಲ್ಲಿ 4 ಜನರನ್ನು ರಕ್ಷಣಾ ಕಾರ್ಯಾಚರಣೆ ಮಾಡಿ  ಪ್ರಥಮ ಚಿಕಿತ್ಸೆ ನೀಡಿ ಆಂಬ್ಯುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ರವಾನಿಸಿ, ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಲಾಖೆಯಿಂದ ಸಿಬ್ಬಂದಿಗಳ  ಇಂದಿನ ಹಾಜರಾತಿ ಮಾಹಿತಿ ಪಡೆದು, ಕಟ್ಟಡದ ಒಳಗೆ ಯಾರು ಇಲ್ಲವೆಂದು ಖಾತರಿಪಡಿಸಿಕೊಂಡ ನಂತರ ರಕ್ಷಣಾ ಕಾರ್ಯಾಚರಣೆ ಮುಕ್ತಾಯಗೊಳಿಸಿದ್ದನ್ನು ಪ್ರದರ್ಶಿಸಲಾಯಿತು.

ಈ ವೇಳೆ ಮಾತನಾಡಿದ ಹೆಚ್ಚುವರಿ ಜಲ್ಲಾಧಿಕಾರಿ ರಾಜು ಮೊಗವೀರ  ಅವರು ಪ್ರಕೃತಿ ವಿಕೋಪದಿಂದ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಭೂಕುಸಿತ ಹಾಗೂ ಪ್ರವಾಹ ಪೀಡಿತ ಸೂಕ್ಷ್ಮ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸಬೇಕಿರುವ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ. ಜಿಲ್ಲಾಡಳಿತ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ ಎಂದರು.

ಪೊಲೀಸ್, ಅಗ್ನಿಶಾಮಕ ಮತ್ತು ಆರೋಗ್ಯ ಇಲಾಖೆಯ ಸಹಕಾರದಿಂದ  ರಕ್ಷಣಾ ಕಾರ್ಯಚರಣೆ 15 ನಿಮಿಷದಲ್ಲಿ ಮುಕ್ತಾಯಗೊಂಡಿದ್ದು ತೃಪ್ತಿ ತಂದಿದೆ  ಎಂದು ಅವರು ಹೇಳಿದರು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪಿ.ಚಂದನ ಮಾತನಾಡಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ತುರ್ತು ಸಂದೇಶ ಬಂದ ಕೂಡಲೇ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದಿಂದ ತುರ್ತು ಇಲಾಖೆಗಳಾದ ಪೊಲೀಸ್, ಅಗ್ನಿಶಾಮಕ ಮತ್ತು ಆರೋಗ್ಯ ಇಲಾಖೆಗೆ ತಕ್ಷಣವೇ ಸಂದೇಶ ರವಾನಿಸಲಾಗುತ್ತದೆ ಎಂದು ಹೇಳಿದರು.

ಭೂ ದಾಖಲೆಗಳ ಉಪ ನಿರ್ದೇಶಕರಾದ ಶ್ರೀನಿವಾಸ, ಅನನ್ಯ ವಾಸುದೇವ ಇತರರು ಇದ್ದರು.

By admin