ಮೈಸೂರು: ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು, ಸೋಂಕಿನ ಸರಪಳಿಯನ್ನು ತುಂಡರಿಸುವ ಸಲುವಾಗಿ ಸರ್ಕಾರ ಲಾಕ್ ಡೌನ್ ಜಾರಿ ಮಾಡಿದ್ದು ಇದರಿಂದ ಮನುಷ್ಯರು ನೀಡುವ ಆಹಾರವನ್ನೇ ನಂಬಿ ಬದುಕುತ್ತಿದ್ದ ಮೂಕ ಪ್ರಾಣಿಗಳು ಹಸಿವಿನಿಂದ ಸಂಕಷ್ಟಕ್ಕೀಡಾಗುತ್ತಿವೆ. ಇವುಗಳ ನೆರವಿಗೆ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಮುಂದಾಗಿ ಆಹಾರ ವಿತರಿಸುತ್ತಿದೆ.
ನಗರದಲ್ಲಿ ಜಾನುವಾರುಗಳು, ಕುದುರೆಗಳು, ಬೀದಿನಾಯಿಗಳು, ಕೋತಿಗಳು, ಅಳಿಲುಗಳು, ಪಾರಿವಾಳಗಳು ಹೀಗೆ ಹಲವು ಪ್ರಾಣಿಪಕ್ಷಿಗಳು ಮನುಷ್ಯರು ನೀಡುತ್ತಿದ್ದ ಆಹಾರದಿಂದಲೇ ಬದುಕನ್ನು ಕಂಡುಕೊಂಡಿದ್ದವು. ಆದರೆ ಈಗ ಮನುಷ್ಯರು ಮನೆಯಿಂದ ಹೊರಬರದ ಕಾರಣದಿಂದಾಗಿ ಬೀದಿನಾಯಿಗಳು ಸೇರಿದಂತೆ ಮೂಕ ಪ್ರಾಣಿಗಳು ಹಸಿವಿನಿಂದ ದಿನಕಳೆಯುವಂತಾಗಿದೆ.
ಇತರೆ ದಿನಗಳಲ್ಲಿ ಜನ ಜಾನುವಾರುಗಳಿಗೆ ಹುಲ್ಲು, ನಾಯಿಗಳಿಗೆ ಬಿಸ್ಕೆಟ್, ಪಾರಿವಾಳಗಳಿಗೆ ಕಾಳುಗಳನ್ನು ಹಾಕುವ ಅಭ್ಯಾಸ ಮಾಡಿಕೊಂಡಿದ್ದರು. ಈಗ ಕೊರೋನಾ ಭಯ ಜತೆಗೆ ಲಾಕ್ ಡೌನ್‌ನಿಂದ ಮನೆಯಿಂದ ಹೊರಬರಲಾಗುತ್ತಿಲ್ಲ. ಇದರಿಂದ ಮೂಕ ಪ್ರಾಣಿಗಳು ಹಸಿವಿನಿಂದ ತತ್ತರಿಸಿದ್ದು, ಅಲ್ಲಲ್ಲಿ ಮಲಗಿ ಕೊಂಡಿರುವ ದೃಶ್ಯ ಎದುರಾಗಿದೆ. ಇದನ್ನು ನೋಡಿದ ಕೆಲವು ಸಂಘ ಸಂಸ್ಥೆಗಳು ಮೂಕ ಪ್ರಾಣಿಗಳಿಗೆ ಆಹಾರ, ನೀರು ನೀಡುವ ಕಾರ್ಯಕ್ಕೆ ಮುಂದಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಕಳೆದ ಹದಿಮೂರು ದಿನಗಳಿಂದ ಮಹಾರಾಜ ಮೈದಾನ, ಚಾಮುಂಡಿಬೆಟ್ಟ ತಪ್ಪಲು ಹಾಗೂ ಮೈಸೂರಿನ ಸುತ್ತಮುತ್ತ ಪ್ರದೇಶಗಳಿಗೆ ತೆರಳಿ ಪ್ರಾಣಿಗಳಿಗೆ ಬಿಸ್ಕೆಟ್, ಬ್ರೆಡ್ ಹಾಲು ನೀರು ಹಾಗೂ ಇನ್ನಿತರ ಆಹಾರ ವಸ್ತುಗಳನ್ನು ನೀಡಲಾಗುತ್ತಿದೆ. ಇದನ್ನು ಸೇವಿಸುವ ಮೂಕ ಪ್ರಾಣಿಗಳ ಮುಖದಲ್ಲಿ ಧನ್ಯತೆ ಮೂಡುತ್ತಿದೆ.
ಈ ಕುರಿತಂತೆ ಮಾತನಾಡಿರುವ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಅವರು ಸಾರ್ವಜನಿಕರು ತಮ್ಮ ಮನೆಯ ಮುಂಭಾಗ ಅಥವಾ ತಾರಸಿ ಮೇಲೆ ಪ್ರಾಣಿ ಪಕ್ಷಿಗಳಿಗೆ ನೀರು, ಆಹಾರವನ್ನು ಇಡುವ ಮೂಲಕ ಮೂಕ ಪ್ರಾಣಿ ಪಕ್ಷಿಗಳಿಗೆ ಎದುರಾಗಿರುವ ನೀರು ಮತ್ತು ಆಹಾರದ ಸಮಸ್ಯೆ ನೀಗಿಸುವಂತೆ ಮನವಿ ಮಾಡಿದ್ದಾರೆ. ಪ್ರಾಣಿಗಳಿಗೆ ಆಹಾರ ನೀಡುವ ವೇಳೆ ಮಹಾ ನಗರ ಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ವಿಕ್ರಮ ಅಯ್ಯಂಗಾರ್, ಕಲಾವಿದರಾದ ಪವನ್ ತೇಜ್, ಹರೀಶ್ ನಾಯ್ಡು ಸೇರಿದಂತೆ ಹಲವರು ಇದ್ದರು.