ಮೈಸೂರು, ಡಿಸೆಂಬರ್ – ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 2021-22ನೇ ಸಾಲಿನ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ವೀರ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ವ್ಯಕ್ತಿ ಅಥವಾ ಸಂಸ್ಥೆಯು ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ, ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಕನಿಷ್ಠ ಐದು ವರ್ಷ ಉತ್ತಮ ಸೇವೆ ಸಲ್ಲಿಸಿರಬೇಕು. 18 ರಿಂದ 45 ವಯೋಮಿತಿಯೊಳಗಿನ ಮಹಿಳೆಯರು ಆಪತ್ಕಾಲದಲ್ಲಿರುವ ಮತ್ತೊಬ್ಬ ವ್ಯಕ್ತಿಯ ಜೀವ ಕಾಪಾಡುವಲ್ಲಿ ಅಥವಾ ಪ್ರಾಣ ರಕ್ಷಿಸುವಲ್ಲಿ ತನ್ನ ಜೀವದ ಹಂಗನ್ನು ತೊರೆದು ಸಮಯ ಪ್ರಜ್ಞೆಯಿಂದ ಧೈರ್ಯ, ಸಾಹಸದೊಂದಿಗೆ ಅಪಾಯದಲ್ಲಿರುವ ವ್ಯಕ್ತಿಯ ಜೀವ ಕಾಪಾಡುವಂತಹ ಕಾರ್ಯ ಹಾಗೂ ವಿಶೇಷ ಶೌರ್ಯ ಸಾಧನೆ ಮಾಡಿರುವವರು ವೀರ ಮಹಿಳೆ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು.

ನಿಗದಿತ ಅರ್ಜಿಯನ್ನು ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪಿ.ಎಸ್-1, ಹೈಟೆನ್ಷನ್ ಲೈನ್‌ರಸ್ತೆ, ಕೃಷ್ಣದೇವರಾಯ ಸರ್ಕಲ್, ವಿಜಯನಗರ, 2ನೇ ಹಂತ, ಮೈಸೂರು ಇಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ದ್ವಿಪ್ರತಿಯಲ್ಲಿ ರಕ್ಷ ಕವಚ (ಸ್ಫೆರಲ್ ಬೈಂಡಿಂಗ್) ಯೊಂದಿಗೆ 2021ರ ಡಿಸೆಂಬರ್ 31ರೊಳಗಾಗಿ ಸಲ್ಲಿಸಬಹುದು. ನಂತರ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ದೂ.ಸಂ: 0821-2495432 ಅನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.