ಮೈಸೂರು: ರಾಜ್ಯಕ್ಕೆ ಕೆಂಪೇಗೌಡರ ಕೊಡುಗೆ ಅಪಾರವಾಗಿದ್ದು ಅಂತಹ ಮಹಾನ್ ಪುರುಷರ ಜಯಂತಿ ಕೇವಲ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗದೆ, ಅವರ ಜೀವನದ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅವಡಿಸಿಕೊಳ್ಳಬೇಕು ಎಂದು ಶಾಸಕ ಜಿ.ಟಿ.ದೇವೆಗೌಡ ಹೇಳಿದರು.
ರಾಷ್ಟ್ರೀಯ ಹಿಂದೂ ಸಮಿತಿ ಹಾಗೂ ವಿ.ಕೆ.ಎಸ್ ಫ಼ೌಂಡೇಷನ್ ವತಿಯಿಂದ ನಗರದ ಬೋಗಾದಿಯ ಕೆಂಪೇಗೌಡ ವೃತ್ತದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ 512ನೇ ಜಯಂತಿಯನ್ನು ಕೊರೋನ ನಿಯಮಾನುಸಾರ ಮಾಸ್ಕ್ ಹಾಗೂ ಸಿಹಿ ಹಂಚಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಕೆಂಪೇಗೌಡರ ದೂರದೃಷ್ಟಿಯಿಂದ ಬೆಂಗಳೂರು ನಗರವನ್ನು ನಿರ್ಮಿಸಿದ್ದರು. ಈಗ ಈ ನಗರ ಕರ್ನಾಟಕ ರಾಜ್ಯದ ರಾಜಧಾನಿಯಾಗಿರುವುದಲ್ಲದೆ, ಭಾರತದ ಪ್ರಮುಖ ನಗರಗಳಲ್ಲಿ ಒಂದಾಗಿದ್ದು, ಇದು ಕೆಂಪೇಗೌಡರು ನೀಡಿದ ಕೊಡುಗೆಯಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಹಿಂದೂ ಸಮಿತಿ ಅಧ್ಯಕ್ಷ ವಿಕಾಸ್ ಶಾಸ್ತ್ರಿಕೆಂಪೇಗೌಡರು ಮಾತನಾಡಿ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ ಯಲಹಂಕದ ಪಾಳೇಗಾರರಾಗಿದ್ದರು. ಪರಶುರಾಮನ ಹಾದಿಯಲ್ಲಿ ನಡೆದು ಬಂದ ಮಹಾನ್ ವೀರ. ಕೆಂಪೇಗೌಡರು ಯಾವುದೇ ಒಂದು ಜನಾಂಗದ ನಾಯಕರಲ್ಲ ಅವರು ಮಾಡಿರುವ ಕೆಲಸಗಳನ್ನು ಈ ದಿನ ಸ್ಮರಿಸುವುದು ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಗ್ಯಾರೆಜ್ ರವಿ, ಶಂಕರಣ್ಣ, ನಗರಾಧ್ಯಕ್ಷ ಪ್ರದೀಪ್, ಕಾರ್ಯದರ್ಶಿ ತೇಜಸ್, ಸಹಕಾರ್ಯದರ್ಶಿ ಶಿವಣ್ಣ, ಕಿರಣ, ರಕ್ಷಿತ್, ಪ್ರಜ್ವಲ್ ಯೋಗೇಶ್, ಶಶಿಕುಮಾರ್, ಆನಂದ್, ದಿಲೀಪ್ ಕುಮಾರ್, ಮಹೇಶ್ ಮೊದಲಾದವರು ಇದ್ದರು.