ಭಾರತದ ಭೂಮಿಯೇ ಹಾಗೆ ಹಲವಾರು ಶ್ರೇಷ್ಠತೆ ಮತ್ತು ವಿಶಿಷ್ಠತೆಗಳ ಆಗರ. ಅದು ಈ ದೇಶದ ಪ್ರಕೃತಿಯ ಘಮವೇ ಹಾಗೂ ಮಹತ್ವದ ಫಲವೇ ಇದಕ್ಕೆ ಕಾರಣ ಎನ್ನಬಹುದು. ಇತಿಹಾಸದಲ್ಲಿನ ಸಿಂಹ ಹೆಜ್ಜೆಗಳ ದಾರಿಯಲೆಲ್ಲ ಇಂದು ವಿಶ್ವದ ಗಮನ ಸೆಳೆತವಿದೆ.
ದೇಶದ ದಕ್ಷಿಣದ ಹಿರಿಮೆ, ಏಷ್ಯಾದ ಮೊದಲ ವಿದ್ಯುತ್ ನಗರ ಬೆಂಗಳೂರು, ಕೆಂಪೇಗೌಡರ ಮನಸ್ಸಿನ ಹಸ್ತಾಕ್ಷರದ ಮಹಾಕಾವ್ಯ. ಮಹಾಕಾವ್ಯದ ರೂಪವು ಸರ್ವ ಲಕ್ಷಣಗಳ ಸೊಗಡಿನಿಂದಾದಂತೆ ಕೆಂಪೇಗೌಡರ ನನಸಾದ ಬೆಂಗಳೂರು ಸರ್ವ ವಿಶ್ವವಿಷಯಗಳ ಮಹಾಕಾವ್ಯವಾಗಿದೆ. ಬದುಕಿನಲ್ಲಿ ಬೆಂದು ಬಂದವರಗೆ ಬೆಂದಕಾಳೂರು ಬದುಕು ನೀಡಲಿದೆ. ಅದು ಈ ದೇಶದ ಈ ಭಾಷೆಯ ಜನರಿಗೆ ಮಾತ್ರವಲ್ಲದೆ, ವಿಶ್ವದ ಜನತೆಗೆ, ವಿಶ್ವಕ್ಕೆ ವಿಶಾಲದಂತೆ ಕಾಣಿಸುವ ಕೆಂಪೇಗೌಡರ ಕೂಸು ಬೆಂದಕಾಳೂರು.
ಗುರುಕುಲದ ಕೆಂಪರಾಯನಿದ್ದ ಈ ಸ್ಥಳ ವಿಶ್ವವಿಖ್ಯಾತಿ ವಿಶ್ವವಿದ್ಯಾನಿಲಯದ ಹಲವು ವಿದ್ಯಾಸಂಸ್ಥೆಗಳ ಜ್ಞಾನ ಸಾಗರವಾಗಿದೆ. ಶಿಕ್ಷಣದ ಮಹಾ ಅಡಿಪಾಯದೊಂದಿಗೆ ಲೋಕಜ್ಞಾನ ಹೊಂದಿದ ಕೆಂಪೆಗೌಡರ ಜ್ಞಾನ ಪ್ರತಿಮೆ ನಮ್ಮ ಹೆಮ್ಮೆಯ ಬೆಂಗಳೂರು. ಮೊಲವೇ ಬೇಟೆನಾಯಿಯನ್ನು ಎದುರಿಸಿನಿಂತ ಸ್ಥಳದ ಮಹಾಶಕ್ತಿಯನ್ನು ಅರಿತು ಕ್ರಿ.ಶ 1537 ರಲ್ಲಿ ಬೆಂಗಳೂರು ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ಮಾಡುತ್ತಾರೆ. ಬೆಂಗಳೂರು ನಿರ್ಮಾಣಕ್ಕೆ ಯಾವುದೋ ರಾಜ್ಯವನ್ನು ಸಂಸ್ಥಾನವನ್ನು ದೋಚಿ ಅಥವಾ ಗೆದ್ದು ನಾಶಪಡಿಸಿ ಹಣವಿನಿಯೋಗಿಸಿದ್ದಲ್ಲ.
ಜನಸಾಮಾನ್ಯರ ಹೃದಯವನ್ನು ಗೆದ್ದು, ಅಕ್ಕಪಕ್ಕದ ಸಾಮಂತ ಅರಸರ ಸ್ನೇಹವನ್ನು ಪಡೆದು, ವಿಜಯನಗರ ಮಹಾ ಸಂಸ್ಥಾನದ ವೈಭವೋಪೇತ ಲಕ್ಷಣದ ಕೊಡುಗೆಯಲ್ಲಿ ಅರಳಿ ನಿಂತದ್ದು ಬೆಂಗಳೂರು. ಸಾಮಾನ್ಯ ಜನರೇ ನಗರ ನಿರ್ಮಾಣಕ್ಕೆ ಎತ್ತಿನ ಬಂಡಿಗಳಲ್ಲಿ ಕಚ್ಛಾ ಸರಕುಗಳನ್ನು ಸ್ವ ಇಚ್ಛೆಯಿಂದ ಸಾಗಿಸಿದರು. ಕೆಂಪೇಗೌಡರ ಹೃದಯ ವಿಶಾಲತೆಗೆ ಮನಸೋತ ಎಲ್ಲರೂ ನಗರದ ಅಡಿಗಲ್ಲಿನ ಭಾರ ಹೊತ್ತರು. ಉದ್ಯಾನ ನಗರಿಯ ಹೆಸರಿನ ಹಿಂದೆ ಕೆಂಪೇಗೌಡರ ಹಸಿರಿನ ಮೇಲಿನ ಪ್ರೀತಿ ,ಪ್ರೇಮ ,ಪ್ರಕೃತಿ ವೈಶಾಲ್ಯತೆಯ ಕರುಹುಗಳಿದೆ.ಪಳ್ಳಿಗಳೆಂಬ ತಿಗಳ ಸಮುದಾಯದವರನ್ನು ಕರೆತಂದು ಆಶ್ರಯ ನೀಡಿ ಇವರ ಶ್ರಮದ ಸಹಾಯ ಪಡೆದು ಬೆಂಗಳೂರಿನ ಮುಖ್ಯ ಸ್ಥಳಗಳಲೆಲ್ಲ ಹೂ ತೋಟ, ಮಾವಿನ ತೋಟ, ಹಲವಾರು ತೋಟಗಾರಿಕಾ ಯೋಜನೆಗಳಲ್ಲಿ ಬೆಂಗಳೂರನ್ನು ಹಸಿರಿನ ಮಡಿಲಿನಲ್ಲೇ ಇರಿಸುತ್ತಾರೆ.
ಧಾರ್ಮಿಕ ತಜ್ಞನಂತೆ ಹಲವು ದೇವಸ್ಥಾನಗಳ ನಿರ್ಮಾಣಕ್ಕೆ ಅಗತ್ಯ ಸನ್ನಿವೇಶಗಳನ್ನು ಒದಗಿಸಿಕೊಟ್ಟು ನಗರದ ಭದ್ರತೆಗೆ ಸ್ವಾಸ್ಥ್ಯ ಕ್ಕೆ ಸಂಸ್ಕೃತಿಯ ನಿರಂತರತೆಗೆ ಹಾದಿ ತೋರಿದ ಕೆಂಪೆಗೌಡರ ಮನೋಧರ್ಮ ಜನತೆಯ ಸರ್ವಕ್ಷೇಮವನ್ನು ಬಯಸಿ ನಿಂತಿತ್ತಷ್ಟೇ ಎಂದು ಹೇಳಬಹುದು.ದುಡಿಮೆಯ ರೈತರನ್ನೇ ದೇಶಕಾಯುವ ಸೈನಿಕರನ್ನಾಗಿ ಪಡೆದ ಹೆಮ್ಮೆಯ ಕೆಂಪೇಗೌಡರು ಮಾನವ ಶ್ರಮದ ಸೂಕ್ಷ್ಮ ಗ್ರಹಿಕೆ ಉಳ್ಳವರು.ಸರ್ವರನ್ನು ಉತ್ತಮದಲ್ಲಿ ಬಳಸಿಕೊಳ್ಳುವ ಅವರ ಔದಾರ್ಯತೆಯಲ್ಲಿ ವೀರತನದ ಜೊತೆಗೆ ವಿನಯತೆಯನ್ನು ವಿಶ್ವಾಸವನ್ನು ಮಾನವೀಯತೆಯನ್ನು ಕಾಣಬಹುದು. ತೆರಿಗೆಯ ನಿಟ್ಟಿನಲ್ಲಿ ಅರಮನೆಯ ಬೊಕ್ಕಸದ ಭರ್ತಿಗೆ ದಾರಿಕೊಡಲಿಲ್ಲ.
ಬೊಕ್ಕಸದ ತುಂಬೆಲ್ಲಾ ಲೋಕೋಪಯೋಗಿ ಯೋಜನೆಗಳ ರೂಪ ಹೊತ್ತ ಹಲವು ಸೇವೆಗಳೇ ತುಂಬಿದ್ದವು. ಬೊಕ್ಕಸಕ್ಕೆ ಬಂದ ತೆರಿಗೆಗಳು ಕೆರೆಯ ನೀರು ಕೆರೆಗೆ ಎಂಬಂತೆ ಸಾಮಾನ್ಯ ಜನರ ತೆರಿಗೆಗಳು ಲೋಕದ ಉಧ್ದಾರಕ್ಕೆ ಖರ್ಚಾಗುವಂತೆ ನಿಯಮ ಖಚಿತಪಡಿಸಿದ್ದರು.ಅವರ ಆಡಳಿತದಲ್ಲಿ ನೊಂದವರಿಲ್ಲ ನಂದನವಾಗಿ ಬದುಕಿದವರೇ ಹೆಚ್ಚು.
ನಾಡಿನ ಭದ್ರತೆಗಾಗಿ ಕೆಂಪೇಗೌಡರು ಬೆಂಗಳೂರಿನ ಕೋಟೆ, ಮಾಗಡಿ ಕೋಟೆ, ಸಾವನದುರ್ಗ ಮತ್ತು ನೆಲಪಟ್ಟಣ ಕೋಟೆ, ಹುತ್ರಿ ದುರ್ಗದ ಏಳುಸುತ್ತಿನ ಕೋಟೆ, ಹುಲಿಯೂರು ದುರ್ಗದ ಕೋಟೆ, ಕುದೂರಿನ ಬೈರವನ ದುರ್ಗದ ಕೋಟೆ, ರಾಮನಗರದ ರಾಮದುರ್ಗ ಕೋಟೆ ಹೀಗೆ ಭದ್ರ ಆಯಕಟ್ಟಿನ ಕೋಟೆಗಳನ್ನು ನಿರ್ಮಿಸಿ ಅನ್ಯ ಸಂಸ್ಥಾನಗಳಿಂದ ಜನತೆಯ ಪ್ರಾಣಕ್ಕೆ ಮಾನಕ್ಕೆ ಯಾವುದೇ ಅಪಾಯಗಳು ಎದುರಾಗದಂತೆ ರಕ್ಷಣೆ ನೀಡಿದವರು ನಮ್ಮ ಹೆಮ್ಮೆಯ ಕೆಂಪೇಗೌಡರು. 1565 ರ ತಾಳಿಕೋಟೆ ಕದನಕ್ಕೆ ವಿಜಯ ನಗರ ಸಂಸ್ಥಾನದ ಪರವಾಗಿ ಎರಡು ಸಾವಿರ ಸೈನಿಕರೊಡನೆ ಯುದ್ಧವನ್ನು ಎದುರಿಸುತ್ತಾರೆ. ಯುದ್ಧದಲ್ಲಿ ಸೋತ ಮತ್ತು ವೀರ ಮರಣಹೊಂದಿದ ನಾಡಿನ ಸೈನಿಕರನ್ನು ಕಂಡು ಹೆತ್ತತಾಯಿಯಂತೆ ಮರುಗಿ ಸಂತಾಪ ವ್ಯಕ್ತಪಡಿಸಿದರು.
ವಿಜಯನಗರ ಸಂಸ್ಥಾನ ಶಕ್ತಿಗುಂದಿದಂತೆಲ್ಲ ಹಲವು ಸಾಮಂತ ಅರಸರು ಸ್ವತಂತ್ರರಾಗಲು ಬಯಸುತ್ತಾರೆ. ತೆರಿಗೆ ಕಟ್ಟುವುದನ್ನು ನಿಲ್ಲಿಸುತ್ತಾರೆ. ಆದರೆ ನಮ್ಮ ಕೆಂಪೇಗೌಡರು ನಿಷ್ಠೆ ಪ್ರಿಯರಾಗಿದ್ದು, ವಿಜಯನಗರ ಅರಸರಿಗೆ ಕೊನೆಯವರೆಗೂ ತೆರಿಗೆ ನೀಡಿ ನಿಷ್ಠಾವಂತ ಸಾಮಂತ ಅರಸನಾಗಿ ರಾಜಧರ್ಮವನ್ನು ಪ್ರದರ್ಶಿಸಿಸುತ್ತಾರೆ. ಆದರೂ ಹಲವು ಸಾಮಂತರ ಕುತಂತ್ರಕ್ಕೆ ಒಳಗಾಗಿ ಹಾಗು ಅಳಿಯ ರಾಮರಾಯ ಮತ್ತು ಅರಸ ಸದಾಶಿವರೊಡನೆ ಸಂವಹನದ ಕೊರತೆಯಿಂದಾಗಿ ಐದು ವರ್ಷ ಸರೆಮನೆವಾಸವಾಗುತ್ತದೆ. ಕೆಂಪೆಗೌಡರ ವಾಸ್ತವ ಸತ್ಯವನ್ನು ಅರಿತ ಅರಸರು ಬಿಡುಗಡೆ ಮಾಡುತ್ತಾರೆ.
ಅಷ್ಟೊತ್ತಿಗಾಗಲೇ ವಿಜಯನಗರ ಸಂಸ್ಥಾನವು ಅವನತಿಯತ್ತ ಸಾಗಿರುತ್ತದೆ.ಇಷ್ಟಾದರೂ ಕೆಂಪೇಗೌಡರು ನಿಷ್ಠೆಗೆ ಶರಣಾಗಿ ವಿಜಯನಗರ ಅರಸರ ಪರವಾಗಿಯೇ ಇರುತ್ತಾರೆ. ನಂತರ ಹಲವು ಸಾಮಂತ ಅರಸರ ಶತ್ರುತ್ವಕ್ಕೆ ಗುರಿಯಾಗಿ 1569-70 ರಲ್ಲಿ ಕೆಂಪಾಪುರ ಸ್ಥಳದಲ್ಲಿ ಯುದ್ಧ ಮಾಡುತ್ತಲೇ ವೀರ ಮರಣವನ್ನು ಹೊಂದುತ್ತಾರೆ. ಸರ್ವಲಕ್ಷಣಗಳಲ್ಲೂ ಪರಿಪೂರ್ಣರಾದ ಕೆಂಪೇಗೌಡರನ್ನು ನಾಡಿನ ಅರಸನನ್ನಾಗಿ ಪಡೆದ ನಾವುಗಳೇ ಧನ್ಯ.
ಕೆಂಪೇಗೌಡರ ಮನುಷ್ಯತ್ವದ ನೆಲೆಯಲ್ಲಿ ಅರಳಿದ ಬೆಂಗಳೂರು ವಿಶ್ವಕ್ಕೆ ಮಾದರಿಯಲ್ಲದೇ ಇನ್ನೇನು.ಎಷ್ಟೇ ಅವಘಡಗಳು ಸಂಭವಿಸಲಿ, ಬೇಡದ ಕೆಟ್ಟಸಸಿಗಳೇ ಬೆಂಗಳೂರಿನಲ್ಲಿ ಬೇರೂರಲಿ ಕೆಂಪೇಗೌಡರ ನಿರ್ಮಾಣದ ಬೆಂಗಳೂರು ಬೆಳೆಯುತ್ತದೆಯೇ ವಿನಃ ಬೆಂದು ಹೋಗುವುದಿಲ್ಲ. ಏಕೆಂದರೆ ಅದು ಚೆನ್ನಾಗಿ ಹದವಾಗಿಯೇ ಬೆಂದು ಬೆಂದಕಾಳೂರಾಗಿರುವುದು. ಇಲ್ಲಿ ಇನ್ನೊಂದು ವಿವೇಚನೆ ಅಗತ್ಯ. ನಾನಿಲ್ಲಿ ಹೇಳಿರುವುದು ಕೆಂಪೆಗೌಡರ ಸಂಪೂರ್ಣ ಶ್ರೇಯಸ್ಸಿನ ಬದುಕಿನಲ್ಲಿ ಸಾಸಿವೆಯಷ್ಟು ಮಾತ್ರ. ಇದರಲ್ಲೇ ಇಷ್ಟೆಲ್ಲ ಮಹತ್ವವಿರುವ ವ್ಯಕ್ತಿಯ ನನಸ್ಸಾದ ಕನಸ್ಸಿನ ಬೆಂಗಳೂರನ್ನು ಊರ್ಜಿತಗೊಳಿಸುವುದು ನಮ್ಮ ನಿಮ್ಮೆಲ್ಲರ ಆದ್ಯತೆ ಮುಖ್ಯವಾಗಿ ಅಡಗಿದೆ.
ಇಂದು(ಜೂ.27) ಕೆಂಪೇಗೌಡರ ಜಯಂತಿಯಾಗಿದೆ. ನಾವು ಅವರು ಅಷ್ಟು ಶ್ರಮವಹಿಸಿದ ಬೆಂಗಳೂರನ್ನು ಯಾವ ಮಟ್ಟಕ್ಕೆ ತಲುಪಿಸಿದ್ದೇವೆ ಮತ್ತು ಮುಂದೆ ಕೊಂಡೊಯ್ಯಲಿದ್ದೇವೆ ಎನ್ನುವ ಅಂಶವು ಅವರಿಗೆ ನಾವು ನೀಡುವ ಗೌರವ ಮತ್ತು ಅಗೌರವನ್ನು ಸೂಚಿಸುತ್ತದೆ. ಎಲ್ಲರೂ ಅವರಿಗೆ ಗೌರವ ಅರ್ಪಿಸುವ ದೃಷ್ಟಿಯಲ್ಲಿ ಬೆಂಗಳೂರನ್ನು ಸಂರಕ್ಷಿಸೋಣ. ಬೆಂಗಳೂರನ್ನು ಉತ್ತಮಗೊಳಿಸುವುದರ ಮೂಲಕ ಕೆಂಪೇಗೌಡರಿಗೆ ಗೌರವ ಸಲ್ಲಿಸೋಣ.
ಬೆಂಗಳೂರನ್ನು ಹಾಳುಮಾಡಿ ಕೆಂಪೇಗೌಡರಿಗೆ ಅಗೌರವ ಸೂಚಿಸುವುದು ಸರಿಯಲ್ಲ. ಕೆಂಪೇಗೌಡರ ಕೂಸಾದ ಬೆಂದಕಾಳೂರನ್ನು ಚೆನ್ನಾಗಿ ಬೆಳೆಸಿ ವಿಶ್ವಕ್ಜೆ ಶ್ರೇಷ್ಠ ಕೊಡುಗೆಯನ್ನು ಅದರಿಂದ ನೀಡೋಣ. ಕೆಂಪೆಗೌಡರನ್ನು ಬೆಂಗಳೂರಿನ ಶಾಶ್ವತ ಅಭಿವೃದ್ಧಿ ಪ್ರಜ್ಞೆಯಲ್ಲಿ ನೆನೆಯೋಣ. ನಮ್ಮ ನಾಡ ಪ್ರಭು ಕೆಂಪೇಗೌಡರು ನಮ್ಮ ಹೆಮ್ಮೆ ಎನ್ನುವಂತೆ ಐಕ್ಯತೆಗೂಡಿ ಬಾಳೋಣ. ಬೆಂದಕಾಳೂರೆಂಬ ಮಹಾಕಾವ್ಯದ ನಿರ್ಮಾತೃವಿನ ಜಯಂತಿಯ ಈ ಶುಭ ಸಂದರ್ಭದಲ್ಲಿ ನಾಡಿನ ಸಮಸ್ತ ಬಂಧುಗಳಿಗೆ ಶುಭಾಶಯಗಳು..