
ಚಾಮರಾಜನಗರ:ಭಾರತ ಸ್ವಾತಂತ್ರ್ಯಕ್ಕೆ ಕರ್ನಾಟಕದ ಕೊಡುಗೆ ಅಪಾರವಾಗಿದೆ ಎಂದು ನಗರಸಭಾ ಅಧ್ಯಕ್ಷರಾದ ಆಶಾ ನಟರಾಜು ಅವರು ಅಭಿಪ್ರಾಯಪಟ್ಟರು.
ನಗರದ ಮಾರಿಗುಡಿ ಮುಂಭಾಗದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾರತ ಅಮೃತ ಸ್ವಾತಂತ್ರ್ಯದ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳು ತುಂಬಿರುವ ನಿಟ್ಟಿನಲ್ಲಿ ಸರ್ಕಾರದ ನಿರ್ದೇಶನದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಹಾಗೂ ಜಿಲ್ಲೆಯ ಕೊಡುಗೆಯು ಅಪಾರವಾಗಿದೆ. ಈ ಸುಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಎಂದರು.

ಬೆಂಗಳೂರಿನ ವಿದ್ಯಾಭಾರತಿ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಿ.ಆರ್. ಜಗದೀಶ್ ಅವರು ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿ ಭಾರತೀಯ ಸ್ವಾತಂತ್ರ್ಯ ಹೋರಾಟದ ಪ್ರತಿಯೊಂದು ಕಾಲಘಟ್ಟವು ರೋಚಕವಾಗಿದೆ. ಸ್ವಾತಂತ್ರ್ಯವೆನ್ನುವುದು ಭಾರತೀಯರಿಗೆ ಸಾರಾಸಗಟಾಗಿ ಸಿಕ್ಕಿಲ್ಲ. ಅದಕ್ಕಾಗಿ ಸಾಕಷ್ಟು ವೀರಯೋಧರು, ದೇಶಪ್ರೇಮಿಗಳು ಬಲಿದಾನಗೈದಿದ್ದಾರೆ. ಸ್ವಾತಂತ್ರ್ಯನಂತರ ಭಾರತ ಎಲ್ಲಾ ಕ್ಷೇತ್ರಗಳಲ್ಲಿಯೂ ಮುನ್ನಡೆ ಸಾಧಿಸಿದೆ. ೭೫ ವರ್ಷಗಳ ಇತಿಹಾಸದ ಚಿಂತನೆಯನ್ನು ಪ್ರಜ್ಞಾವಂತರಾದ ನಾವೆಲ್ಲರೂ ಮಾಡಬೇಕಿದೆ ಎಂದರು.
ಅಮೃತ ಭಾರತಿ ಎಂದರೇ ಭಾರತಕ್ಕೆ ಸಾವಿಲ್ಲ ಎಂದರ್ಥ. ಪ್ರಪಂಚದ ಅನೇಕ ದೇಶಗಳು ಇತರೆ ದೇಶಗಳ ಒಂದೇ ದಾಳಿಗೆ ದ್ವಂಸಗೊಂಡಿದ್ದವು. ಭಾರತದ ಮೇಲೆ ಪರಕೀಯರು ನಿರಂತರ ದಾಳಿ ನಡೆದರೂ ಭಾರತ ಭಾರತವಾಗಿಯೇ ಗಟ್ಟಿಯಾಗಿ ಉಳಿದಿದೆ. ಭಾರತ ಸಾಧು ಸಂತರ, ತತ್ವಜ್ಞಾನಿಗಳ ನಾಡಾಗಿದೆ. ಭಾರತಕ್ಕೆ ವಿಶ್ವಮಟ್ಟದಲ್ಲಿ ಗೌರವದ ಸ್ಥಾನವಿದೆ. ಭಾರತ ಸಂಸ್ಕೃತಿ, ಪರಂಪರೆ ಜಾಗತಿಕ ಮನ್ನಣೆ ಪಡೆದಿವೆ. ರಾಷ್ಟ್ರಕವಿ ಕುವೆಂಪುರವರು ಅಮೃತ ಭಾರತಿಗೆ ಕನ್ನಡದ ಆರತಿ ಗೀತೆ ರಚಿಸುವ ಮೂಲಕ ದೇಶವನ್ನು ಒಗ್ಗೂಡಿಸುವ, ಜೋಡಿಸುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಭಾರತದ್ದು ಸಂಘರ್ಷಮಯ ಇತಿಹಾಸವಾಗಿದೆ. ಗಾಂಧೀಜೀಯವರ ಅಹಿಂಸಾತ್ಮಕ ಚಳವಳಿ ಮೂಲಕ ದೇಶದ ಮೂಲೆಮೂಲೆಗಳಲ್ಲೂ ಸ್ವಾತಂತ್ರ್ಯದ ಕಿಡಿ ಹಚ್ಚಿದ್ದರು. ಅಲ್ಲದೇ ಸುಭಾಷ್‌ಚಂದ್ರ ಬೋಸ್, ಭಗತ್‌ಸಿಂಗ್, ಅಜಾದ್ ಸೇರಿದಂತೆ ಇನ್ನಿತರೆ ಕ್ರಾಂತಿಕಾರಿಗಳ ಹೋರಾಟವು ಸಹ ದೇಶದ ಸ್ವಾತಂತ್ರ್ಯಕ್ಕೆ ಮುನ್ನುಡಿ ಬರೆಯಿತು ಎಂದು ಜಿ.ಆರ್. ಜಗದೀಶ್ ಅವರು ತಿಳಿಸಿದರು.
ಮುಖ್ಯ ಅತಿಥಿಗಲಾಗಿ ಭಾಗವಹಿಸಿದ್ದ ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಮಾತನಾಡಿ ಭಾರತ ದೇಶ ಸ್ವಾತಂತ್ರ್ಯಗೊಂಡು ೭೫ ವರ್ಷಗಳು ತುಂಬಿರುವ ಅಮೃತ ಮಹೋತ್ಸವ ಆಚರಣೆ ದೇಶದ ಪ್ರತಿಯೊಬ್ಬರ ಜಾಗೃತಿಗೆ ಅವಶ್ಯವಾಗಿದೆ. ಭಾರತೀಯ ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನು ಇಂದಿನ ವಿದ್ಯಾರ್ಥಿಗಳು ಅರಿಯಬೇಕು. ದೇಶದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಕೊಡುಗೆ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಾಂತಮೂರ್ತಿ ಕುಲಗಾಣ ಅವರು ಸ್ವಾತಂತ್ರ್ಯಗೊಂಡು ೭೫ ವರ್ಷಗಳನ್ನು ಪೂರೈಸಿರುವ ಭಾರತವನ್ನು ಇಡೀ ಜಗತ್ತು ಭಾವನಾತ್ಮಕವಾಗಿ ಅಪ್ಪಿಕೊಂಡಿದೆ. ಸ್ವಾತಂತ್ರ್ಯ ಹೋರಾಟಗಾರರು ಎಂದೂ, ಯಾವತ್ತೂ ಸಹ ಸ್ವಾರ್ಥಿಗಳಾಗಲಿಲ್ಲ. ಅವರ ಹೋರಾಟದ ಫಲವನ್ನು ನೆಮ್ಮದಿಯಿಂದ ಅನುಭವಿಸುತ್ತಿದ್ದೇವೆ. ಭಾರತೀಯರಾದ ನಾವೆಲ್ಲರೂ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವ ಮೂಲಕ ದೇಶವನ್ನು ಇನ್ನಷ್ಟು ಉತ್ತಮ ಸ್ಥಿತಿಗೆ ಕೊಂಡೊಯ್ಯಬೇಕಾಗಿದೆ ಎಂದರು.
ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಜಾನಪದ ಅಕಾಡಮಿ ಸದಸ್ಯರಾದ ಸಿ.ಎಂ. ನರಸಿಂಹಮೂರ್ತಿ ಅವರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಕೊಡುಗೆ ನೀಡಿದ ಜಿಲ್ಲೆಯ ವೆಂಕಟಸುಬ್ಬಶೆಟ್ಟಿ, ಕುದೇರು ಪುಟ್ಟಸ್ವಾಮಿ, ಆಲೂರು ನೀಲಮ್ಮ, ರಂಗಸ್ವಾಮಿ, ಕೆ.ಎಂ. ತೋಟಪ್ಪ, ಸಿದ್ದಲಿಂಗಮ್ಮ, ಲಲಿತಾ ಜಿ. ಟ್ಯಾಗೇಟ್, ಮಹಾದೇವಪ್ಪ, ಪುಟ್ಟಮಾದಯ್ಯ, ಜಯಮ್ಮ, ಗಜಲಕ್ಷ್ಮೀಬಾಯಿ, ಎಂ.ಮಾದಯ್ಯ, ನಾಗೇಶ್ವರರಾವ್ ಸೇರಿದಂತೆ ೪೦ ಮಂದಿ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು.
ನಗರಸಭೆ ಸದಸ್ಯರಾದ ಗಾಯತ್ರಿ ಚಂದ್ರಶೇಖರ್, ಭಾಗ್ಯಮ್ಮ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ನಗರಸಭೆ ಪೌರಾಯುಕ್ತರಾದ ಕರಿಬಸವಯ್ಯ, ನಾಮನಿರ್ದೇಶಿತ ಸದಸ್ಯರಾದ ಚಂದ್ರು, ತಹಶೀಲ್ದಾರ್ ಬಸವರಾಜು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರೇಮ್‌ಕುಮಾರ್, ಮೈಸೂರು ವಿ.ವಿ.ಸಿಂಡಿಕೇಟ್ ಸದಸ್ಯರಾದ ಪ್ರದೀಪ್‌ಕುಮಾರ್ ದೀಕ್ಷಿತ್, ಕಾರ್ಯಕ್ರಮ ಸಂಯೋಜಕರಾದ ಅಶ್ವಿನ್, ಇತರರು ಕಾರ್ಯಕ್ರಮದಲ್ಲಿಹಾಜರಿದ್ದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಗಣ್ಯರು ಎನ್. ಸುಂದ್ರೇಶ್ ಅವರು ರಚಿಸಿರುವ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಕರ್ನಾಟಕದ ಕೊಡುಗೆ ಕುರಿತ ಪುಸ್ತಕ ಬಿಡುಗಡೆ ಮಾಡಿದರು. ಬಳಿಕ ಸಮಾರಂಭದಲ್ಲಿ ನೆರೆದಿದ್ದ ಜನಸಮೂಹಕ್ಕೆ ಭಾರತ ಸ್ವಾತಂತ್ರ್ಯ ಹೋರಾಟದ ಸಂಕಲ್ಪ ವಿಧಿಯನ್ನು ಬೋಧಿಸಲಾಯಿತು.
ವೇದಿಕೆಯ ಒಂದು ಭಾಗದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲು ಸ್ವಾತಂತ್ರ ಚಳವಳಿಗೆ ಈ ನಾಡು ಹಾಗೂ ನೆಲದ ಹೋರಾಟಗಾರರ ನೆನಪುಗಳ ಕುರಿತ ೩೦ ನಿಮಿಷಗಳ ಕಿರುಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.
