ಮೈಸೂರು: ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಮುಂಭಾಗದಲ್ಲಿ ಹರಿಯುತ್ತಿರುವ ಕಪಿಲ ನದಿಯನ್ನು ಸ್ವಚ್ಛತಾ ಅಭಿಯಾನದ ಮೂಲಕ ಶುಚಿ ಗೊಳಿಸುವ ಕಾರ್ಯವನ್ನು ನಗರಸಭೆ ವತಿಯಿಂದ ಮಾಡಲಾಯಿತು.
ಮುಂದಿನ ದಿನಗಳಲ್ಲಿ ಕೇರಳದಲ್ಲಿ ಮುಂಗಾರು ಬಿರುಸುಗೊಂಡು ವೈನಾಡು ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾದರೆ ಕಪಿಲ ನದಿಯಲ್ಲಿ ಪ್ರವಾಹವುಂಟಾಗುವುದು ಮಾಮೂಲಿಯಾಗಿದೆ. ಆದರೆ ನದಿಗೆ ತ್ಯಾಜ್ಯ ಸೇರಿದಂತೆ ಇತರೆ ವಸ್ತುಗಳನ್ನು ಎಸೆಯುವುದರಿಂದ ಬೇಸಿಗೆಯಲ್ಲಿ ನೀರಿನ ಮಟ್ಟ ಕಡಿಮೆಯಾಗುವುದರಿಂದ ತ್ಯಾಜ್ಯವನ್ನೆಲ್ಲ ತಂದು ಹಾಕುತ್ತದೆ. ಅದರಲ್ಲೂ ದೇವಾಲಯದ ಮುಂಭಾಗ ನದಿ ಹರಿಯುವ ಪ್ರದೇಶದಲ್ಲಿ ಪೂಜಾ ಕೈಂಕರ್ಯ, ಸ್ನಾನ, ಇನ್ನಿತರ ಕಾರ್ಯಗಳನ್ನು ಮಾಡುವುದರಿಂದ ಈ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವಂತೆ ಭಕ್ತರಿಗೆ ಸೂಚನೆ ನೀಡಿದರೂ ಕಸಗಳನ್ನು ಎಸೆದು ಹೋಗುವವರಿಗೆ ಕೊರತೆಯಿಲ್ಲ. ಹೀಗಾಗಿ ಈ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯಗಳು ಸಂಗ್ರಹವಾಗುತ್ತವೆ. ಮತ್ತೊಂದೆಡೆ ನದಿ ದಡದಲ್ಲಿ ಜೊಂಡು ಹುಲ್ಲುಗಳು ಬೆಳೆಯುವುದರಿಂದ ನೀರು ಸರಾಗವಾಗಿ ಹರಿಯಲು ತೊಂದರೆಯಾಗುತ್ತದೆ. ಇದೆಲ್ಲವನ್ನು ಮನಗಂಡು ವರ್ಷಕ್ಕೊಮ್ಮೆ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಲಾಗುತ್ತದೆ.
ಈ ಬಾರಿ ನಡೆದ ಸ್ವಚ್ಛತಾ ಕಾರ್ಯದ ಅಭಿಯಾನಕ್ಕೆ ತಾಲ್ಲೂಕು ದಂಡಾಧಿಕಾರಿ ಮೋಹನ ಕುಮಾರಿಯವರು ಜೊಂಡು ಮತ್ತಿತರ ಅನಾವಶ್ಯಕ ವಸ್ತುಗಳನ್ನು ತೆಗೆಯುವ ಮೂಲಕ ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ಕೊರೊನಾ ಸಂಕಷ್ಟ ಸಮಯದಲ್ಲಿ ನಿರಾಶ್ರಿತರಿಗೆ ಆಶ್ರಯ, ತಾಲ್ಲೂಕಿನ ಪ್ರತಿಯೊಬ್ಬ ಜನಸಾಮಾನ್ಯರು ಲಸಿಕೆ ಪಡೆಯುತ್ತಾ ತೀವ್ರ ಗಮನ, ಕೊರೊನಾ ಸಂಕಷ್ಟದಲ್ಲಿರುವವರಿಗೆ ಸ್ಪಂದನೆ ಸೇರಿದಂತೆ ಸದಾ ಸಮಾಜಮುಖಿ ಕಾರ್ಯಕ್ರಮಗಳತ್ತ ಗಮನ ಹರಿಸಿ, ಆಡಳಿತದಲ್ಲಿ ಸುಧಾರಣೆ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಿ ಕರ್ತವ್ಯ ನಿರ್ವಹಿಸಿ ತಾಲ್ಲೂಕಿನಾದ್ಯಂತ ಉತ್ತಮ ಕೆಲಸ ವನ್ನು ನಗರಸಭಾ ಅಧ್ಯಕ್ಷ ಮಹದೇವಸ್ವಾಮಿ ರವರು ಮಾಡುತ್ತಿದ್ದು, ನಗರದ ಅಭಿವೃದ್ಧಿಗೆ ಹೆಚ್ಚು ಗಮನ ನೀಡುತ್ತಿದ್ದಾರೆ ಎಂದರು.
ಈ ವೇಳೆ ನಗರಸಭಾ ಅಧ್ಯಕ್ಷ ಮಹದೇವಸ್ವಾಮಿ, ನಗರಸಭೆ ಆಯುಕ್ತ ರಾಜಣ್ಣ, ಇಂಜಿನಿಯರ್ ಶ್ರೀನಿವಾಸ್, ನಗರಸಭಾ ಸದಸ್ಯರಾದ ಖಾಲಿದ್, ಮಹದೇವಪ್ರಸಾದ್, ಮೀನಾಕ್ಷಿ ನಾಗರಾಜ್, ಗಿರೀಶ್ ಶಶಿಕಲಾ, ಯೋಗೀಶ್, ರಂಗಸ್ವಾಮಿ, ನಂದಿನಿವೆಂಕಟೇಶ್, ಸಿದ್ಧರಾಜು, ಮುಖಂಡರಾದ ಬಾಲಚಂದ್ರ, ಶ್ರೀಕಂಠ ಮೊದಲಾದವರು ಇದ್ದರು.