ಚಾಮರಾಜನಗರ: ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ ಆಗಿ ರೂಪಿತವಾಗುತ್ತಿದೆ. ಕನ್ನಡ ನಾಡು, ನುಡಿ, ಜಲ, ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಶಕ್ತಿಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕನ್ನಡಿಗರ ಬಹುದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಸಾಹಿತಿ ಸೋಮಶೇಖರ ಬಿಸಲ್ವಾಡಿ ತಿಳಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ೧೦೮ ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡುತ್ತಾ ೧೯೧೫ ರಲ್ಲಿ ಆರಂಭವಾದ ಕನ್ನಡ ಸಾಹಿತ್ಯ ಪರಿಷತ್ ೧೦೮ ವರ್ಷಗಳ ಕಾಲ ನಿರಂತರವಾಗಿ ಕನ್ನಡ-ಕನ್ನಡಿಗ-ಕರ್ನಾಟಕವನ್ನ ರಕ್ಷಿಸುತ್ತಿದೆ. ಆಲೂರು ವೆಂಕಟರಾಯರು, ಬಿಎಂ ಶ್ರೀಕಂಠಯ್ಯನವರು ದೇಶಪಾಂಡೆಯವರು, ಸರ್ ಎಂ ವಿಶ್ವೇಶ್ವರಯ್ಯನವರು ,ನಾಲ್ವಡಿ ಕೃಷ್ಣರಾಜ ಒಡೆಯರು, ನಂಜುಂಡಯ್ಯನವರು ಕಟ್ಟಿದ ಕನ್ನಡ ಸಾಹಿತ್ಯ ಪರಿಷತ್ ಇಂದು ಇಡೀ ಕನ್ನಡಿಗರ ಸಾಂಸ್ಕೃತಿಕ ಸಾಹಿತ್ಯ ಸಂಘಟನೆಯಾಗಿ ಕರ್ನಾಟಕವಲ್ಲದೆ ಕೇರಳ ,ತಮಿಳುನಾಡು, ಮಹಾರಾಷ್ಟ್ರ ,ಗೋವಾ ಮತ್ತು ಹೊರ ರಾಜ್ಯಗಳಲ್ಲಿ ಕೂಡ ತನ್ನ ವಿಸ್ತೃತವಾದ ಸಂಘಟನೆಯನ್ನು ಹೊಂದಿದೆ .ಮೂರೂವರೆ ಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ ವರ್ಷವರ್ಷ ಸಾಹಿತ್ಯದ ಪರಿಣಾಮಕಾರಿ ಯುವ ಸಾಹಿತಿಗಳನ್ನು ರೂಪಿಸುತ್ತಿದೆಎಂದು ತಿಳಿಸಿದರು.
ಜಿಲ್ಲೆಯಲ್ಲೂ ೪೮೦೦ ಹೆಚ್ಚು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಿದ್ದಾರೆ.ಇವರೆಲ್ಲರ ಪೂರ್ಣ ಸಹಕಾರದೊಂದಿಗೆ ಸಾಹಿತ್ಯ ಭವನವನ್ನು ನಿರ್ಮಿಸುವ ಕಾರ್ಯವನ್ನು ಮಾಡಬೇಕಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನದ ಅಂಗವಾಗಿ ಕನ್ನಡಸಾಹಿತ್ಯಪರಿಷತ್ತಿನ ಹಿರಿಯರಾದ ಸುಗುಣ ಲೀಲಾ ವೆಂಕಟರತ್ನಂ ಶೆಟ್ಟಿ, ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕರಾದ ಡಿಎಸ್ ಕೃಷ್ಣಮೂರ್ತಿ, ಹಿಂದುಳಿದ ವರ್ಗಗಳ ಇಲಾಖೆಯ ಚಿಕ್ಕ ಬಸವಯ್ಯ ಮಣಗಳ್ಳಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಪುಟ್ಟಮಲ್ಲಪ್ಪ, ನಿವೃತ್ತ ಮುಖ್ಯ ಶಿಕ್ಷಕರಾದ ವೆಂಕಟ ರಂಗ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕನ್ನಡ ಸಾಹಿತ್ಯಪರಿಷತ್ತಿನ ತಾಲೂಕು ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಗಡಿಭಾಗವಾದ ಚಾಮರಾಜನಗರ ಕೇರಳ, ತಮಿಳುನಾಡು ಸರಹದ್ದುಗಳನ್ನು ಹೊಂದಿದ್ದು ಬೆಟ್ಟಗುಡ್ಡಗಳಿಂದ ಕೂಡಿರುವ ಪ್ರದೇಶಗಳಲ್ಲಿ ಕನ್ನಡದ ಸುಂದರ ವಾತಾವರಣವಿದೆ. ಗಡಿಪ್ರದೇಶಗಳಲ್ಲಿ ಕನ್ನಡವನ್ನು ಪ್ರಸರಿಸುವ ಹಾಗೂ ಮೂಲ ಕನ್ನಡದ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಯುವ ಪೀಳಿಗೆಗೆ ಮಾರ್ಗದರ್ಶನ ನೀಡುವ ಅವಶ್ಯಕತೆ ಇದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನದ ಮೂಲಕ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದ ಹಿರಿಯರನ್ನು ಗೌರವಿಸುವುದು ಹೆಮ್ಮೆ, ಇಡೀ ರಾಜ್ಯದ ಎಲ್ಲ ತಾಲ್ಲೂಕು ಮತ್ತು ಜಿಲ್ಲಾ ಘಟಕಗಳಲ್ಲಿ ಸಂಸ್ಥಾಪನಾ ದಿನ ಆಚರಿಸಲು ಮಾರ್ಗದರ್ಶನ ನೀಡಿದ ರಾಜ್ಯಾಧ್ಯಕ್ಷರಾದ ಮಹೇಶ್ ಜೋಶಿ ಅವರನ್ನು ಅಭಿನಂದಿಸಿ, ಹಿರಿಯ ಮತ್ತು ಕಿರಿಯ ಕನ್ನಡ ಸಾಹಿತ್ಯ ಕಾರ್ಯಕರ್ತರನ್ನು ಒಂದುಗೂಡಿಸುವ ಸಂಸ್ಥಾಪನಾ ದಿನ ಉತ್ತಮವಾದದ್ದು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಮಹಾಲಿಂಗ ಗಿರಿಜೆ ನಾಗಲಕ್ಷ್ಮಿ, ಕನ್ನಡ ಸಾಹಿತ್ಯ ಪರಿಷತ್ತಿನ ನಂಜುಂಡಸ್ವಾಮಿ ಶ್ರೀನಿವಾಸ್ ,ಬಾಬು ಮುಂತಾದವರು ಉಪಸ್ಥಿತರಿದ್ದರು.
