:

  • ಡಾ. ಹಾ.ತಿ. ಕೃಷ್ಣಗೌಡ

ಕನ್ನಡವನ್ನು ಕೇಳುವವರಿಲ್ಲದ ಹೊತ್ತಿನಲ್ಲಿ ಅನೇಕ ಆಂಗ್ಲ ವಿದ್ವಾಂಸರು ಕನ್ನಡವನ್ನು ಕಲಿತು ಕನ್ನಡಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಫರ್ಡಿನೆಂಡ್ ಕಿಟ್ಟಲ್, ಬಿ.ಎಲ್. ರೈಸ್ ಅವರನ್ನು ಕನ್ನಡಿಗರು ಎಂದೆಂದೂ ಮರೆಯುವಂತಿಲ್ಲ. ಕಿಟಲ್ಲರ ಕನ್ನಡ-ಕನ್ನಡ ನಿಘಂಟು, ರೈಸ್ ಅವರ ಶಾಸನ ಸಂಪುಟಗಳಾದ ಎಪಿಗ್ರಾಫಿಯ ಕರ್ನಾಟಿಕ – ಇವು ಪಾಶ್ಚಾತ್ಯರ ಕನ್ನಡದ ಕೊಡುಗೆಗಳು. ಇದೇ ಸಾಲಿನಲ್ಲಿ ಈ ಹೊತ್ತು ನೆನೆಯಬೇಕಾದ ವ್ಯಕ್ತಿ ವಾಲ್ಟರ್ ಎಲಿಯಟ್. ಈತ ಧಾರವಾಡದಲ್ಲಿ ಮೊದಲ ಕನ್ನಡ ಸರ್ಕಾರಿ ಪ್ರಾಥಮಿಕ ಶಾಲೆ ತೆರೆದ ಮಹನೀಯರು.

ಈತ ಇಂಗ್ಲೆಂಡಿನ ಎಡಿನ್ಬರೋ ಎಂಬಲ್ಲಿ ೧೬ ಜನವರಿ ೧೮೧೩ರಂದು ಜನಿಸಿದ. ಇವನ ತಂದೆ ಜೇಮ್ಸ್ ಎಲಿಯಟ್, ತಾಯಿ ಕೆರೊಲಿನ್, ಇವನದು ಕುಲೀನ ಶ್ರೀಮಂತ ಮನೆತನ. ಅಲ್ಲಿನ ಡಾನ್ ಕಾಸ್ಟರ್ ಬಳಿಯ ಶಾಲೆಯೊಂದರಲ್ಲಿ ಇವನ ಆರಂಭದ ವಿದ್ಯಾಭ್ಯಾಸ ನಡೆಯಿತು. ಅನಂತರ ಈತ ಹೈಲಿಬರಿಯ ಈಸ್ಟ್ ಇಂಡಿಯ ಕಂಪನಿಯ ಕಾಲೇಜಿನಲ್ಲಿ ವ್ಯಾಸಂಗಮಾಡಿ ಪದವಿ ಪಡೆದ (೧೮೧೯). ೧೪ ಜೂನ್ ೧೮೨೦ ರಂದು ಭಾರತಕ್ಕೆ, ಮದರಾಸಿಗೆ ಬಂದು ಈಸ್ಟ್ ಇಂಡಿಯ ಕಂಪನಿಯ ಸೈನ್ಯಶಾಖೆಗೆ ಸೇರಿದ. ಮದರಾಸಿನ ಪೋರ್ಟ್ ಸೇಂಟ್ ಜಾರ್ಜ್ ಕಾಲೇಜಿನಲ್ಲಿ ತರಬೇತಿ ಪಡೆದ. ಇಲ್ಲಿರುವಾಗ ತಮಿಳು ಮತ್ತು ಹಿಂದುಸ್ಥಾನಿ ಭಾಷೆಗಳಲ್ಲಿ ಪರಿಣತಿಯನ್ನು ಪಡೆದುಕೊಂಡ. ಅನಂತರದ ದಿನಗಳಲ್ಲಿ ಮರಾಠಿ, ಅರಾಬಿಕ್, ಪರ್ಷಿಯನ್, ತೆಲುಗು, ಕನ್ನಡ – ಈ ಭಾಷೆಗಳಲ್ಲಿಯೂ ಪರಿಣತಿ ಪಡೆದುಕೊಂಡ. ಎರಡು ವರ್ಷಗಳ ಕಾಲ ಸೇಲಂ ಜಿಲ್ಲೆಯ ಕಲೆಕ್ಟರ್ ಅವರಿಗೆ ಸಹಾಯಕನಾಗಿ ದುಡಿದ. ಅನಂತರ ಇವನನ್ನು ಸದರನ್ ಮರಾಠ ಪ್ರದೇಶಕ್ಕೆ (ಬೊಂಬಾಯಿ ಪ್ರೆಸಿಡೆನ್ಸಿ) ವರ್ಗ ಮಾಡಲಾಯಿತು. ಅಲ್ಲಿ ಇವನು ಧಾರವಾಡದ ಕಲೆಕ್ಟರ್ಗೆ ಸಹಾಯಕನಾಗಿ ಕೆಲಸ ಮಾಡತೊಡಗಿದ.

ಹೀಗಿರುವಲ್ಲಿ ಕಿತ್ತೂರಿನ ಪ್ರಜೆಗಳು ೨೩ ಅಕ್ಟೋಬರ್ ೧೮೨೪ರಂದು ಬ್ರಿಟಿಷರ ವಿರುದ್ಧ ದಂಗೆಯೆದ್ದರು. ಈ ಸಂದರ್ಭದಲ್ಲಿ ಎಲಿಯಟ್ ಪಾತ್ರವೂ ಇತ್ತು. ಈತ ಸಂಧಾನಕ್ಕಾಗಿ ಸ್ಟೀವನ್ಸನ್ ಎಂಬ ಇನ್ನೊಬ್ಬ ಅಧಿಕಾರಿಯೊಂದಿಗೆ ಕಿತ್ತೂರು ಕೋಟೆಯೊಳಗೆ ಹೋದ. ಸಂಧಾನ ಪ್ರಯತ್ನದ ಸಂದರ್ಭದಲ್ಲಿ ಕಿತ್ತೂರಿನ ಪ್ರಜೆಗಳು ಇವರಿಬ್ಬರನ್ನೂ ಕೊಂದುಹಾಕಲು ಪ್ರಯತ್ನಿಸಿದಾಗ ತೇಲಿ ಬಸವಲಿಂಗಪ್ಪ ಎಂಬಾತ ಇವರಿಬ್ಬರನ್ನೂ ಪಾರುಮಾಡಿದ. ಸುಮಾರು ಆರುವಾರಗಳ ಕಾಲ ಎಲಿಯಟ್ ಸ್ಥಾನಬದ್ಧತೆಯಲ್ಲಿರಬೇಕಾಯಿತು. ಆಗ ಧಾರವಾಡದ ಕಮಿಷನರ್ ಆಗಿದ್ದ ಚಾಪ್ಲಿನ್ ಎಂಬಾತ ಎಲಿಯಟ್ ಮತ್ತು ಸ್ಟೀವನ್ಸನ್ನರ ಸುರಕ್ಷತೆಯ ಬಗೆಗೆ ಚಿಂತಿತನಾಗಿದ್ದ. ಆದರೆ ಧಾರವಾಡದಿಂದ ಇವರಿಬ್ಬರಿಗೆ ಎಲ್ಲಾ ಬಗೆಯ, ದಿನನಿತ್ಯದ ಬಳಕೆಗೆ ಬೇಕಾದ ವಸ್ತುಗಳು ಸರಬರಾಜಾಗುತ್ತಿದ್ದವು. ಧಾರವಾಡದಲ್ಲಿ ಥ್ಯಾಕರೆಯು ಕಿತ್ತೂರ ಚನ್ನಮ್ಮನ ಆಪ್ತನಾದ ಗುರುಸಿದ್ಧಪ್ಪ ಎಂಬಾತನಿಗೆ ಮಾಡಿದ ಅವಮಾನವೂ ಸೇರಿಕೊಂಡು ಬ್ರಿಟಿಷರ ದ್ವೇಷಕ್ಕೆ ಕಾರಣವಾಗಿತ್ತು. ಕಿತ್ತೂರು ಸಮರದಲ್ಲಿ ಥ್ಯಾಕರೆ ಮಡಿದ, ಚನ್ನಮ್ಮ ಸೆರೆಸಿಕ್ಕಳು. ಎಲಿಯಟ್ ಬಿಡುಗಡೆಗೊಂಡು ಧಾರವಾಡದಲ್ಲಿ ಕರ್ತವ್ಯ ನಿರತನಾದ.

ಬ್ರಿಟಿಷರ ಆಡಳಿತದಲ್ಲಿ ಉತ್ತರ ಕರ್ನಾಟಕ ಪ್ರದೇಶದಲ್ಲಿ ದೇಸಾಯಿ, ಇನಾಂದರ್, ಕುಲಕರ್ಣಿಗಳು ಮರಾಠಭಾಷೆಯ ಪ್ರೇಮಿಗಳಾಗಿದ್ದರು. ಇಡೀ ಪ್ರದೇಶದಲ್ಲಿ ಕನ್ನಡದ ಸೊಲ್ಲು ಅಡಗಿಹೋಗಿತ್ತು. ಅಲ್ಲಿನ ಜನರು ಕನ್ನಡಿಗರಾದರೂ ಮರಾಠಿ ಮಾತನಾಡುವುದು ಪ್ರತಿಷ್ಠೆಯ ವಿಷಯವಾಗಿತ್ತು. ಬೊಂಬಾಯಿ ಸರ್ಕಾರಕ್ಕೂ ಮರಾಠಿಯಲ್ಲಿ ಆಡಳಿತದ ಬಗ್ಗೆ ಒಲವಿತ್ತು. ಇಂಥ ಹೊತ್ತಿನಲ್ಲಿ ಎಲಿಯಟ್ ಸಾಹೇಬ ಕನ್ನಡವನ್ನು ಗುರುತಿಸಿದ. ಈ ಪ್ರದೇಶದ ಸಾಮಾನ್ಯ ಜನರಿಗೆ ತಿಳಿದಿರುವ ಭಾಷೆ ಕನ್ನಡ. ಮರಾಠಿ ಭಾಷೆಯಲ್ಲಿ ಆಡಳಿತ ವ್ಯವಹಾರ ನಡೆಸಿದರೆ ಅದರಿಂದ ಅವರಿಗೆ ಪ್ರಯೋಜನ ಇಲ್ಲವೆಂದು ಮನಗಂಡ, ಆಗಿನ ಬೊಂಬಾಯಿ ಕರ್ನಾಟಕದಲ್ಲಿ ಎಲ್ಲಂದರಲ್ಲಿ ಮರಾಠಿ ಶಾಲೆಗಳಿದ್ದವು. ಎಲ್ಲವೂ ಖಾಸಗಿ ಶಾಲೆಗಳು. ಕನ್ನಡದ ಶಾಲೆಗಳು ಕೂಲಿ ಮಠಗಳು. ಈ ಹೊತ್ತಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ತೀರ್ಮಾನಿಸಲಾಯಿತು (೧೮೨೬). ಬಾಂಬೆ ನೇಟಿವ್ ಎಜುಕೇಷನ್ ಸೊಸೈಟಿ ಎಂಬ ಸಂಸ್ಥೆಯನ್ನು ಸರ್ಕಾರಿ ಶಿಕ್ಷಣ ಕ್ಷೇತ್ರವನ್ನು ನಡೆಸಿಕೊಂಡು ಹೋಗಲು ಸರ್ಕಾರ ನೇಮಿಸಿತು. ಈ ಸೊಸೈಟಿಯು ಹುಬ್ಬಳ್ಳಿ ಮತ್ತು ಧಾರವಾಡಗಳಲ್ಲಿ ಕನ್ನಡ ಶಾಲೆಯನ್ನು ತೆರೆಯಬೇಕೆಂದು ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಹಿಂದೆ ಧಾರವಾಡದಂತಹ ಸಂಪೂರ್ಣ ಕನ್ನಡ ಪ್ರದೇಶದಲ್ಲಿ ಮರಾಠಿ ಶಾಲೆಯನ್ನು ಸ್ಥಾಪಿಸಿದಾಗ ?ಇದು ತಪ್ಪು, ಇಲ್ಲಿಯ ಜನರ ಮಾತೃಭಾಷೆ ಕನ್ನಡ. ಮಾತೃಭಾಷೆಯಲ್ಲಿಯೇ ಶಿಕ್ಷಣ ನಡೆಯಬೇಕಾದದ್ದು ನ್ಯಾಯವಾದುದು” ಎಂದು ಎಲಿಯಟ್ ಸರ್ಕಾರಕ್ಕೆ ವರದಿ ಮಾಡಿದ. ಅಷ್ಟೇ ಅಲ್ಲ, ತಾನೇ ಒಂದು ಕನ್ನಡ ಪ್ರಾಥಮಿಕ ಶಾಲೆಯನ್ನು ಆರಂಭಮಾಡಿ, ಕನ್ನಡ ಪಂಡಿತನೊಬ್ಬನನ್ನು ಸಂಬಳಕ್ಕೆ ನೇಮಿಸಿದ. ಈ ಶಾಲೆಯನ್ನು ಎಲಿಯಟ್ ಸ್ವಂತ ಹಣದಿಂದ ಸ್ಥಾಪಿಸಿದ್ದ (೧೮೩೧). ಕನ್ನಡ ಪಂಡಿತನಿಗೆ ತನ್ನ ಸ್ವಂತ ಹಣದಿಂದ ಮೂರು ವರ್ಷಗಳ ಕಾಲ ಸಂಬಳ ನೀಡಿ ಶಾಲೆ ನಡೆಸಿದ. ಅನಂತರದಲ್ಲಿ ಆ ಶಾಲೆಗೆ ಸರ್ಕಾರದ ಅನುಮತಿ ದೊರೆತು ಮುಂದುವರಿದುಕೊಂಡು ಹೋಯಿತು. ಈ ಶಾಲೆಯ ಆರಂಭದಿಂದ ಬೊಂಬಾಯಿ ಕರ್ನಾಟಕ ಪ್ರದೇಶದಲ್ಲಿ ಅನೇಕ ಕಡೆ ಕನ್ನಡ ಶಾಲೆಗಳು ಆರಂಭವಾಗಲು ಕಾರಣನಾದ, ಜೊತೆಗೆ ಕನ್ನಡ ಪಠ್ಯಪುಸ್ತಕಗಳ ರಚನೆಯಲ್ಲಿಯೂ ಈತನೇ ಮೊಟ್ಟಮೊದಲಿಗೆ ತೊಡಗಿದ (೧೮೩೮).

ಎಲಿಯಟ್ ಬೊಂಬಾಯಿ ಕರ್ನಾಟಕ ಪ್ರದೇಶದಲ್ಲಿ ಸುಮಾರು ಎಂಟು ವರ್ಷಗಳ ಕಾಲ ಕೆಲಸ ಮಾಡಿದ. ಶಿಕ್ಷಣ ಕ್ಷೇತ್ರ, ಪಠ್ಯಪುಸ್ತಕ ರಚನೆ, ಶಾಸನ ಸಂಗ್ರಹ, ಇತಿಹಾಸ ಲೇಖನ, ಕನ್ನಡ ಕೃತಿಗಳ ಸಂಪಾದನೆ – ಹೀಗೆ ನಾನಾ ಕ್ಷೇತ್ರಗಳಲ್ಲಿ ಈತ ಸಲ್ಲಿಸಿದ ಸೇವೆ ಅನುಪಮವಾದುದು. ಸುಮಾರು ೩೦೦ ಶಾಸನಗಳನ್ನು, ಹಲವಾರು ತಾಮ್ರ ಶಾಸನಗಳನ್ನು ಪತ್ತೆ ಹಚ್ಚಿದ ಈತ ಆಧುನಿಕ ದೃಷ್ಟಿಕೋನದ ಉದಾರವಾದಿ ಅಧಿಕಾರಿಯೂ ವಿದ್ವಾಂಸನೂ ಲೇಖಕನೂ ಆಗಿದ್ದ. ರಾಯಲ್ ಏಷಿಯಾಟಿಕ್ ಸೊಸೈಟಿಗೆ `ಹಿಂದೂ ಇನ್ಸ್ಕ್ರಿಪ್ಷನ್ಸ್’ ಎಂಬ ಪ್ರಬಂಧವನ್ನು ಬರೆದು ಸಾದರಪಡಿಸಿದ (೧೮೩೬). ಶಾಸನ ಆಧಾರಿತ ಕರ್ನಾಟಕ ಇತಿಹಾಸ ರಚನೆಯ ಪ್ರಯತ್ನದಲ್ಲಿ ಈತನೇ ಮೊದಲಿಗನಾದ. ಅನಂತರ ಶಾಸನಶಾಸ್ತ್ರ ಅಧ್ಯಯನ ನಿರಂತರವಾಗಿ ಸಾಗಿತು.

೧೮೩೭ರ ಅನಂತರ ಎಲಿಯಟ್ ಮದರಾಸು ಪ್ರಾಂತದ ಗೌರ್ನರ್ನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ. ಕೆಲವು ಕಾಲ ಪರ್ಷಿಯನ್ ಭಾಷೆಯ ಭಾಷಾಂತರಕಾರನಾಗಿ ದುಡಿದ. ಮದರಾಸು ಪ್ರಾಂತದಲ್ಲಿ ಕೆಲಸ ಮಾಡಿದ ಅವಧಿಯಲ್ಲಿ (೧೮೫೪-೫೯) ಉತ್ತಮ ಹಿರಿಯ ಅಧಿಕಾರಿ ಎಂದು ಹೆಸರು ಗಳಿಸಿದ. ಇಲ್ಲಿರುವಾಗ ಕನ್ನಡ ಪುಸ್ತಕಗಳ ಪ್ರಕಟಣೆಗೂ ಕಾರಣನಾದ. ಅಡಕಿ ಸುಬ್ಬರಾಯ ಎಂಬ ವಿದ್ವಾಂಸನಿಂದ, ಆಗಿನ ಆಡಳಿತಗಾರರಿಗೆ ಉಪಯೋಗವಾಗುವಂತಹ ಪುಸ್ತಕಗಳನ್ನು ರಚನೆ ಮಾಡಲು ಪ್ರೋತ್ಸಾಹ ನೀಡಿದ. ಕೆಲವು ಕನ್ನಡ ಕತೆಗಳು, ರೆವಿನ್ಯೂ ಕಾಗದಗಳ ಸಂಗ್ರಹ ಎಂಬ ಎರಡು ಗ್ರಂಥಗಳು ಪ್ರಕಟವಾದವು.

ಎಲಿಯಟ್ ಒಳ್ಳೆಯ ಶಿಕಾರಿಯೂ ಆಗಿದ್ದನೆಂದು ತಿಳಿದುಬರುತ್ತದೆ. ಈತ ಧಾರವಾಡದಲ್ಲಿದ್ದಾಗ ಧಾರವಾಡದ ಸುತ್ತಮುತ್ತ ದಟ್ಟ ಅರಣ್ಯ ಪ್ರದೇಶವಿದ್ದು ಈಗ ಸಾಧನಕೇರಿ ಎಂದು ಕರೆಯುವ ಪ್ರದೇಶಕ್ಕೆ ಹುಲಿಗಳು ಬಂದು ಹೋಗುತ್ತಿದ್ದವಂತೆ. ವಾಲ್ವರ್ ಕ್ಯಾಂಬೆಲ್ ಎಂಬಾತ ತನ್ನ ‘ಮೈ ಇಂಡಿಯ ಜರ್ನಲ್’ ಎಂಬ ಕೃತಿಯಲ್ಲಿ ಈ ಮೇಲಿನ ವಿಚಾರವನ್ನು ಪ್ರಸ್ತಾಪಿಸಿರುವನೆಂದು ತಿಳಿದುಬರುತ್ತದೆ.

ಪ್ರಸಿದ್ಧ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಇವನ ಸ್ನೇಹಿತನಾಗಿದ್ದ. ಕರ್ನಾಟಕ ಸಸ್ಯ ಮತ್ತು ಪ್ರಾಣಿಗಳ ಬಗೆಗೆ ಕೆಲವು ಮಾಹಿತಿ ಸಂಗ್ರಹಿಸಿ ಆತನ ಸಂಶೋಧನೆಗೆ ಪೂರಕವಾಗಿ ಕೆಲಸಮಾಡಿದ್ದ (೧೮೫೬). ಈತ ರಾಬರ್ಟ್ ಕಾಲ್ಡ್ ವೆಲ್ ಮತ್ತು ಫರ್ಡಿನೆಂಡ್ ಕಿಟ್ಟಲ್ ಮೊದಲಾದ ವಿದ್ವಾಂಸರುಗಳನ್ನು ಪ್ರೋತ್ಸಾಹಿಸಿದ್ದ.

ಎಲಿಯಟ್ ಕೆಲವು ಕೃತಿಗಳನ್ನು ರಚಿಸಿದ್ದಾನೆ. ನಾಣ್ಯಕ್ಷೇತ್ರಕ್ಕೆ ಸಂಬಂಧಿಸಿದಂತೆ ಬೆಲೆಯುಳ್ಳ ಕೆಲಸ ಮಾಡಿರುವ ಈತ ‘ಕಾಯಿನ್ಸ್ ಆಫ್ ಸೌತ್ ಇಂಡಿಯ’ ಎಂಬ ಕೃತಿಯನ್ನು ಪ್ರಕಟಿಸಿದ್ದಾನೆ. (೧೮೮೬). ‘ಮಿಸಲೇನಿಯಸ್ ನೋಟ್ಸ್’ ಎಂಬುದು ಇವನ ಸ್ಮೃತಿಚಿತ್ರಗಳನ್ನು ದಾಖಲಿಸುವ ಕೃತಿ. ಇದನ್ನು ರಾಬರ್ಟ್ ಸಿವೆಲ್ ಎಂಬಾತ ಸಂಪಾದಿಸಿ ಪ್ರಕಟಿಸಿದ್ದಾನೆ. ಎಲಿಯಟ್ ೧೮೫೯-೬೦ರಲ್ಲಿ ನಿವೃತ್ತನಾಗಿ ತನ್ನ ತಾಯ್ನಾಡಾದ ಇಂಗ್ಲೆಂಡಿಗೆ ತೆರಳಿದ. ಅಲ್ಲಿ ದಕ್ಷಿಣ ಭಾರತದ ಪ್ರಾಚೀನ ಸಂಗತಿಗಳನ್ನು ಕುರಿತು ಲೇಖನಗಳನ್ನು ಬರೆಯತೊಡಗಿದ.

ಇವನು ಮಾಡಿದ ಸೇವೆಗಾಗಿ ಅನೇಕ ಮನ್ನಣೆಗಳಿಗೆ ಈತ ಪಾತ್ರನಾಗಿದ್ದಾನೆ. ೧೮೬೬ರಲ್ಲಿ ಬ್ರಿಟಿಷ್ ಸರ್ಕಾರ ಈತನಿಗೆ ನೈಟ್ ಕಮಾಂಡರ್ (KCSI – ಆರ್ಡರ್ ಆಫ್ ದಿ ಸ್ಟಾರ್ ಆಫ್ ಇಂಡಿಯ) ಪದವಿ ನೀಡಿ ಗೌರವಿಸಿದೆ. ಫೆಲೋ ಆಫ್ ರಾಯಲ್ ಸೊಸೈಟಿ (೧೮೭೮), ಎಲ್.ಎಲ್.ಡಿ. ಪದವಿ (೧೮೭೯- ಏಡನ್ಬರ್ಗ್ ವಿಶ್ವವಿದ್ಯಾನಿಲಯ) ಇವನಿಗೆ ಸಂದ ಇತರ ಗೌರವಗಳು, ಎಲಿಯಟ್ ತನ್ನ ಕಡೆಯ ದಿನಗಳಲ್ಲಿ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡು ಕುರುಡನಾಗಿದ್ದ. ಹೀಗಿದ್ದರೂ ತಮಿಳಿನ ‘ಕುರುಳ’ ಕಾವ್ಯವನ್ನು ಇಂಗ್ಲಿಷ್ಗೆ ಅನುವಾದ ಮಾಡಿಸುವ ಸಂಬಂಧವಾಗಿ ಆಗಿನ ಪೋಪ್ಗೆ ಪತ್ರ ಬರೆದಿದ್ದ. ಮಾರಿಯ ಡರೋತಿ ಹಂಟರ್ ಈತನ ಪತ್ನಿ, ಈ ದಂಪತಿಗಳಿಗೆ ನಾಲ್ವರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಇದ್ದರು. ಎಲಿಯಟ್ ೧ ಮಾರ್ಚ್ ೧೮೮೭ ರಂದು ನಿಧನನಾದ. ಇವನ ನೆನಪಿನಲ್ಲಿ ಚರ್ಚ್ ಆಫ್ ಹಾಬ್ಕಿರ್ಕ್ನಲ್ಲಿ ಸ್ಮಾರಕಶಿಲೆಯನ್ನು ನಿಲ್ಲಿಸಲಾಗಿದೆ. ಆಂಗ್ಲನಾದರೂ ಈತ ತೋರಿದ ಕನ್ನಡದ ಪ್ರೀತಿ ಕನ್ನಡಿಗರು ಸ್ಮರಿಸುವಂತದ್ದಾಗಿದೆ.

ಪ್ರೊ. ಹಾ.ತಿ. ಕೃಷ್ಣೇಗೌಡ
ಗೌರವ ಸಂಪಾದಕರು, ವಿಶ್ವಕೋಶ,

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
ಮೈಸೂರು ವಿಶ್ವವಿದ್ಯಾನಿಲಯ.
ದೂರವಾಣಿ ಸಂಖ್ಯೆ:-
೮೨೭೭೪ ೨೩೯೮೯

ss