ಕ್ರಿ.ಶ.೧೨ನೇ ಡಿಸೆಂಬರ್ ೧೯೩೧ರಂದು ಅಂದಿನ ಬ್ರಿಟಿಷ್ ಕಾಲದ ಮದ್ರಾಸ್ ಪ್ರೆಸಿಡೆನ್ಸಿಯ ಇಂದಿನ ಆಂಧ್ರ ಮೂಲದ ರಾಜಮಂಡ್ರಿಯ ಮಧ್ಯಮ ವರ್ಗದ ಸುಸಂಸ್ಕೃತ ಮಾಧ್ವ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಟಿ.ವೆಂಕೋಜೀರಾವ್ ಮತ್ತು ತಾಯಿ ಶ್ರೀಮತಿ ಸಚೀದೇವಿ ದಂಪತಿಯು ಇವರಿಗೆ ಇಟ್ಟ ಹೆಸರು ಶಂಕರಮಂಚಿ ಟಿ.ಜಾನಕಿ! ಆದರೆ, ಇವರು ಸಾಹುಕಾರ್ ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕಾರಣ ಸಾಹುಕಾರ್ ಜಾನಕಿ ಎಂದು ಪುನರ್ ನಾಮಕರಣಗೊಂಡು ದೇಶದಾದ್ಯಂತ ಜನಪ್ರಿಯತೆ ಗಳಿಸಿದರು. ಕನ್ನಡ ತೆಲುಗು ತಮಿಳು ಮಲಯಾಳಂ ಹಿಂದಿ; ಐದು ಭಾಷೆಯ ಚಿತ್ರಗಳಲ್ಲಿ ನಟಿಸಿ ಖ್ಯಾತ ಹೀರೋಯಿನ್ ಆದರು! ಕಾಲಕ್ರಮೇಣ ಪೋಷಕನಟಿಯಾಗಿ ತಾಯಿ-ಅತ್ತೆ ಪಾತ್ರಗಳಲ್ಲಿ ಅಭಿನಯಿಸಿ ಕನ್ನಡ ಚಿತ್ರಗಳು ಸೇರಿದಂತೆ ಒಟ್ಟಾರೆ ೩೫೦ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬೇರೆಬೇರೆ ರಾಜ್ಯಗಳ ಪ್ರಶಸ್ತಿ ಪಡೆಯುವುದರ ಜತೆಗೆ ನಾಲ್ಕಾರು ರಾಷ್ಟ್ರ ಪ್ರಶಸ್ತಿ ಫಿಲಂಫೇರ್ ಅವಾರ್ಡ್, ಸೈಮಾ,ಪ್ರಶಸ್ತಿ, ತಮಿಳುನಾಡಿನ ಅತ್ಯುನ್ನತ ಕಲೈಮಾಮಣಿ ಪುರಸ್ಕಾರ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಪ್ರತಿಷ್ಠಿತ ನಂದಿ ಅವಾರ್ಡ್, ಮಹಾನಟಿ ಸಾವಿತ್ರಿ ಅವಾರ್ಡ್, ಅಕ್ಕಿನೇನಿ ನಾಗೇಶ್ವರರಾವ್ ಸ್ಮರಣಾರ್ಥ ಅವಾರ್ಡ್, ಶಿವಾಜಿಗಣೇಶನ್ ಸ್ಮರಣಾರ್ಥ ಅವಾರ್ಡ್, ಇಂಡಿಯನ್ ಎಕ್ಸ್‌ಪ್ರೆಸ್ ಡಯೊನರ ಗೋಲ್ಡನ್ ಅವಾರ್ಡ್ ಸೇರಿದಂತೆ ಜೀವಮಾನ ಸಾಧನೆಗೆ ಕೊಡಮಾಡುವ ಹತ್ತಾರು ಉನ್ನತ ಪ್ರಶಸ್ತಿ ಬಹುಮಾನ ಬಿರುದು ಸನ್ಮಾನಗಳನ್ನು ಪಡೆದಿದ್ದಾರೆ ಹಾಗೂ ಭಾರತದ ಅತ್ಯುನ್ನತ ನಾಗರಿಕ ಪುರಸ್ಕಾರಗಳಲ್ಲಿ ನಾಲ್ಕನೇ ಸ್ಥಾನದ ಪದ್ಮಶ್ರೀ ಗೌರವವೂ ಲಭಿಸಿದೆ. ಇಡೀ ದೇಶದಲ್ಲೆ ೭೦ ವರ್ಷ ಧೀರ್ಘಕಾಲ ಸಿನಿಮಾ ರಂಗದಲ್ಲಿ ಅಮೋಘ ಸೇವೆ ಸಲ್ಲಿಸಿರುವ ಅಶೋಕ್‌ಕುಮಾರ್, ದೇವಾನಂದ್, ಪ್ರಾಣ್, ಎ.ನಾಗೇಶ್ವರರಾವ್, ಕಾಮಿನಿಕೌಶಲ್, ಎಂ.ಲೀಲಾವತಿ ಅವರಂಥ ದಿಗ್ಗಜ ನಟ-ನಟಿಯರ ಸಾಲಿಗೆ ಸೇರಿದ್ದಾರೆ ಈ ಅಪರೂಪದ ಅಭಿನೇತ್ರಿ. ೧೯೮೫ರಲ್ಲಿ ಅಮೆರಿಕಾ ದೇಶದ ಪ್ರತಿಷ್ಠಿತ ಅರಿಜೋನ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿದ ಭಾರತೀಯ ಚಿತ್ರರಂಗದ ನಾಯಕಿ ನಟಿಯರ ಪೈಕಿ ಪ್ರಪ್ರಥಮ ಹಾಗೂ ಏಕೈಕ ಹೀರೋಯಿನ್ ಸಾಹುಕಾರ್ ಜಾನಕಿ! 

    ಇವರು ತಮ್ಮ ಹದಿವಯಸ್ಸಿನ ಪ್ರಾರಂಭ ಕಾಲದಲ್ಲಿ ನೂರಾರು ನಾಟಕಗಳಲ್ಲಿ ಪಾತ್ರ ವಹಿಸಿದ ನಂತರ ಮತ್ತು ಸಿನಿಮಾ ಕ್ಷೇತ್ರಕ್ಕೆ ಬರುವ ಮುನ್ನವೆ ಕೇವಲ ೧೪ವರ್ಷದವರಿದ್ದಾಗ ಆಕಾಶವಾಣಿ ಮದ್ರಾಸ್ ರೇಡಿಯೋ ಕಲಾವಿದೆಯಾಗಿ ಕೆಲವಾರು ವರ್ಷ ಸೇವೆ ಸಲ್ಲಿಸಿದ್ದರು. ಸಾವಕಾಶವಾಗಿ ನಾಟಕ ಮತ್ತು ಸಿನಿಮಾ ಎರಡೂ ರಂಗದಲ್ಲಿ ಉತ್ತಮ ನಟಿಯಾಗಿ ಗುರುತಿಸಿ ಕೊಂಡರು. ದಕ್ಷಿಣ ಭಾರತದ ಅತಿರಥ ಮಹಾರಥ ಹೀರೋಗಳಾದ ರಾಜಕುಮಾರ್, ಎಂ.ಜಿ.ರಾಮಚಂದ್ರನ್, ಎನ್.ಟಿ.ರಾಮರಾವ್, ಶಿವಾಜಿಗಣೇಶನ್, ಜೆಮಿನಿಗಣೇಶನ್, ಶ್ರೀಕಾಂತ್, ಕೃಷ್ಣ, ಮುಮ್ಮುಟ್ಟಿ ಮುಂತಾದ ದಿಗ್ಗಜರ ಚಿತ್ರಗಳಲ್ಲಿ ನಟಿಸಿ ಬಹಳ ಎತ್ತರಕ್ಕೆ ತಲುಪಿದರು. ಹೀರೋ ಯಾರೇ ಇದ್ದರೂ, ಸಾಹುಕಾರ್ ಜಾನಕಿ ಹೀರೋಯಿನ್ ಆಗಿದ್ದರೆ ಮಾತ್ರ ಸಿನಿಮಾ ನೋಡುವಂಥ ಇವರ ಅಭಿಮಾನಿಗಳು ಆ ಕಾಲದಲ್ಲೂ ಇದ್ದರೆಂಬುದು ಅಚ್ಚರಿಯ ಸಂಗತಿ! ಮತ್ತೊಂದು ವಿಶೇಷತೆ ಎಂದರೆ ದಕ್ಷಿಣಭಾರತದ ಜನಪ್ರಿಯ ಚಿತ್ರನಟಿ ಕೃಷ್ಣಕುಮಾರಿ ಇವರ ಕಿರಿಯ ಸಹೋದರಿ[ತಂಗಿ] ಲಕ್ಷ್ಮೀಬಾಯಿ-ಕಮಲಬಾಯಿ, ಪಂಡರಿಬಾಯಿ-ಮೈನಾವತಿ, ಪದ್ಮಿನಿ-ರಾಗಿಣಿ ಎಂಬುವ ಅಪೂರ್ವ ತಾರಾ ಸೋದರಿಯರ ನಂತರ ಈ ಸಾಹುಕಾರ್ ಜಾನಕಿ ಮತ್ತು ಕೃಷ್ಣಕುಮಾರಿ ಎಂಬ ಒಡಹುಟ್ಟಿದವರು ಮಹಾನ್ ಜೋಡಿ ನಟೀಮಣಿ ಎನಿಸಿದರು. ೧೯೫೪ರಲ್ಲಿ ಬಿಡುಗಡೆ ಯಾದ ದೇವಕನ್ನಿಕಾ ಕನ್ನಡ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದರು. ಸಾಹುಕಾರ್ ಜಾನಕಿಯವರು ನಟಿಸಿದ ಕಟ್ಟಕಡೆಯ ಸಿನಿಮಾ ೨೦೧೪ರಲ್ಲಿ ರಿಲೀಸ್ ಆದ ಕನ್ನಡ ಫಿಲಂ ಪುಂಗಿದಾಸ! ೯೨ವಯಸ್ಸಿನ ಹಿರಿಯ ನಟಿ ಇವತ್ತಿಗೂ ಚೆನ್ನೈ[ಮದ್ರಾಸ್]ನಲ್ಲಿ ತಮ್ಮ ತುಂಬು ಕುಟುಂಬ ಸದಸ್ಯರೊಡನೆ ಆರೋಗ್ಯವಂತರಾಗಿ ಜೀವನ ಸಾಗಿಸುತ್ತಿದ್ದಾರೆ. ಇವರ ಮೊಮ್ಮಗಳು ವೈಷ್ಣವಿಅರವಿಂದ್ ಸಹ ಕನ್ನಡ ತಮಿಳು ತೆಲುಗು ಭಾಷೆಯ ಚಿತ್ರಗಳಲ್ಲಿ ನಟಿಸುತ್ತಿರುವ ದ.ಭಾರತದ ಜನಪ್ರಿಯ ಹೀರೋಯಿನ್!

ಸಾಹುಕಾರ್ ಜಾನಕಿ ನಟಿಸಿರುವ ಕನ್ನಡ ಫಿಲಮ್ಸ್:- ದೇವಕನ್ನಿಕಾ(೧೯೫೪) ಭಾಗ್ಯಚಕ್ರ, ಆದರ್ಶಸತಿ, ಸದಾರಮೆ, ಭಾಗ್ಯೋದಯ, ಸತಿಶಕ್ತಿ, ರತ್ನಗಿರಿ ರಹಸ್ಯ, ಮಹಿಷಾಸುರ ಮರ್ಧಿನಿ, ದೈವಲೀಲೆ, ದೇವಸುಂದರಿ, ಮಲ್ಲಿಮದುವೆ, ಕನ್ಯಾರತ್ನ, ಸಾಕುಮಗಳು, ಗೌರಿ, ನವಕೋಟಿನಾರಾಯಣ, ಅರುಣೋದಯ, ಮನಸ್ಸಾಕ್ಷಿ, ನಿರಪರಾಧಿ, ತಾಯಿಗೆತಕ್ಕಮಗ, ಆರದಗಾಯ, ಗೀತಾ, ಶಭ್ದವೇದಿ, ಕುಲಪುತ್ರ, ಒಂದೇಗುರಿ, ಅಭಿ, ಸೈ, ಪುಂಗಿದಾಸ(೨೦೧೪)

ಕುಮಾರಕವಿ ಬಿ.ಎನ್.ನಟರಾಜ್
ಬೆಂಗಳೂರು ೫೬೦೦೭೨
೯೦೩೬೯೭೬೪೭೧