ಬ್ರಿಟಿಷ್ ಆಡಳಿತ ಕಾಲದಲ್ಲಿ ಭಾರತ ದೇಶದ ಅವಿಭಜಿತ ಬಂಗಾಳ ರಾಜ್ಯದ ೨೪ ಪರಗಣ ಜಿಲ್ಲೆಯ ನೌಹಾತಿಯಲ್ಲಿ ದಿನಾಂಕ ೬ನೇ ಮಾರ್ಚಿ ೧೯೩೩ರಂದು ಜನಿಸಿದರೂ ಸಹ ಕಾರಣಾಂತರದಿಂದ ಕಾಲಕ್ರಮೇಣ ಆಂಧ್ರದಲ್ಲಿ ನೆಲೆಸಿದರು. ಇವರ ಒಡಹುಟ್ಟಿದ ಸಹೋದರಿ ಸಾಹುಕಾರ್‌ಜಾನಕಿ ಕೂಡ ದಕ್ಷಿಣಭಾರತದ ಓರ್ವ ಖ್ಯಾತ ನಟಿ ಎಂಬುದು ವಿಶೇಷ! ಲಕ್ಷ್ಮೀಬಾಯಿ-ಕಮಲಾಬಾಯಿ ಸೋದರಿಯರ ಮತ್ತು ಪಂಡರಿಬಾಯಿ-ಮೈನಾವತಿ ಸೋದರಿಯರ ನಂತರದ ೩ನೇ ಸೋದರೀ ಜೋಡಿ ಇವರದು. ಈ ಅಪೂರ್ವ ಜೋಡಿ ನಟಿಯರು ೧೯೫೦ ಮತ್ತು ೧೯೬೦ರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಸಾಮ್ರಾಜ್ಞಿಯಂತೆ ಮೆರೆದರು. ಕೃಷ್ಣಕುಮಾರಿ ತಮ್ಮ ೧೬ನೇ ವಯಸ್ಸಿನಲ್ಲೆ ೧೯೫೧ರಲ್ಲಿ ತೆರೆಕಂಡ ’ನವ್ವಿತೆ ನವರತ್ನಾಲು’ ತೆಲುಗು ಫ಼ಿಲಂ ಮೂಲಕ ಪಾದಾರ್ಪಣೆ ಮಾಡಿದರು. ಆದರೆ ಇವರು ಖ್ಯಾತರಾಗಿದ್ದು ಅದೇ ವರ್ಷ ತೆರೆಕಂಡ ಇವರು ನಟಿಸಿದ ೨ನೇ ಸಿನಿಮಾ ಪಾತಾಳಭೈರವಿ ತೆಲುಗು ಚಿತ್ರದ ಮೂಲಕ. ನೂತನ ದಾಖಲೆ ನಿರ್ಮಿಸಿದ ಈಚಿತ್ರದ ಕಥೆ ಆಧಾರಿಸಿ ನಿರ್ಮಿಸಿದ ೮ ವಿವಿಧ ಭಾಷೆಗಳಲ್ಲಿ ರೀಮೇಕ್ ಅಥವಾ ಡಬ್ಡ್ ಚಿತ್ರವು ಭಾರತದಾದ್ಯಂತ ರಿಲೀಸ್ ಆಗಿ ಧೂಳೆಬ್ಬಿಸಿದ್ದು ಅಮೋಘ ಇತಿಹಾಸ!

ಕೃಷ್ಣಕುಮಾರಿ ತಮ್ಮ ಚಿತ್ರರಂಗದ ಜೀವಿತಾವಧಿಯಲ್ಲಿ ಒಟ್ಟು ೨೦೦ಕ್ಕೂ ಹೆಚ್ಚಿನ ಆರು [ಕನ್ನಡ,ಹಿಂದಿ,ತಮಿಳು,ತೆಲುಗು,ಬಂಗಾಲಿ ಹಾಗೂ ಮಲಯಾಳಂ]ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದರು. ಈ ಪೈಕಿ ಹತ್ತಾರು ಕನ್ನಡ ಚಿತ್ರಗಳೂ ಒಳಗೊಂಡಿವೆ. ಇವರು ನಟಿಸಿದ ಚೊಚ್ಚಲ ಕನ್ನಡ ಸಿನಿಮಾ ೧೯೫೩ರಲ್ಲಿ ತೆರೆಕಂಡ ಬ್ಲಾಕ್ ಬಸ್ಟರ್ ಫಿಲಂ ಗುಣಸಾಗರಿ. ಆದರೆ ಇವರು ಕನ್ನಡನಾಡಿನ ಜನಮನಗೆದ್ದು ಮನೆ ಮಾತಾದುದು ೧೯೫೪ರಲ್ಲಿ ಬಿಡುಗಡೆಯಾದ ’ಜಲದುರ್ಗ’ ಕನ್ನಡ ಚಿತ್ರದ ಮೂಲಕ. ವರನಟ ರಾಜಕುಮಾರ್ ಮತ್ತು ಕಲಾರತ್ನ ರಾಜೇಶ್ ಸೇರಿದಂತೆ ಭಾರತದ ದಿಗ್ಗಜ ನಟರಾದ ಕಿಶೋರ್‌ಕುಮಾರ್, ಎಂ.ಜಿ.ರಾಮಚಂದ್ರನ್, ಶಿವಾಜಿಗಣೇಶನ್, ಎನ್.ಟಿ.ರಾಮರಾವ್, ಎ.ನಾಗೇಶ್ವರರಾವ್, ಕಾಂತಾರಾವ್, ಜಗ್ಗಯ್ಯ, ಕೃಷ್ಣ, ಕೃಷ್ಣಂರಾಜು, ಮುಂತಾದವರ ಜತೆ ನಟಿಸಿದ್ದ ಅದ್ಭುತ ಕಲಾವಿದೆ. ಇವರ ಅತ್ಯುತ್ತಮ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಜತೆಗೆ ವಿವಿಧ ರಾಜ್ಯಗಳ ರಾಜ್ಯಪ್ರಶಸ್ತಿ ಹಾಗೂ ಪ್ರತಿಷ್ಠಿತ ಫಿಲಂಫೇರ್ ಪ್ರಶಸ್ತಿ ದೊರಕಿತ್ತು.

ಇಂಡಿಯಾ ದೇಶದ ಸುಪ್ರಸಿದ್ಧ ಹಾಗೂ ಅತ್ಯಧಿಕ ಪ್ರಸಾರದ ಆ ಕಾಲದ ಟಾಪ್ ನಂಬರ್ ಒನ್ ವೀಕ್ಲೀ ’ಸ್ಕ್ರೀನ್’ [ಬಿಸಿನೆಸ್‌ಮನ್, ಇಂಡಿಯನ್ ಎಕ್ಸ್‌ಪ್ರೆಸ್ ಸಮೂಹ ಸಂಸ್ಥೆಯ] ಸಿನಿಮಾ ವಾರಪತ್ರಿಕೆಯ ಸಂಪಾದಕ ಅಜಯ್‌ಮೋಹನ್‌ಖೇತಾನ್‌ರನ್ನು ೧೯೬೯ರಲ್ಲಿ ವಿವಾಹವಾದರು. ಈ ದಂಪತಿಯ ಏಕೈಕ ಮಗಳು ದೀಪಿಕಾಳನ್ನು ಸುಪ್ರಸಿದ್ಧ ಎಂ.ಟಿ.ಆರ್.ಹೋಟೆಲ್, ಮಸಾಲಾಪುಡಿ ಇತ್ಯಾದಿ ಖ್ಯಾತಿಯ ತಯಾರಿಕಾ ಸಂಸ್ಥೆಯ ವಿಕ್ರಂಮಯ್ಯ ಅವರೊಡನೆ ಮದುವೆ ಮಾಡಿಕೊಡಲಾಯಿತು. ತದನಂತರ ತಮ್ಮ ಮಗಳು ಮೊಮ್ಮಕ್ಕಳ ಜತೆಗೂಡಿ ಬೆಂಗಳೂರಿನಲ್ಲಿ ವಾಸಮಾಡುತ್ತಿದ್ದರು. ಕೃಷ್ಣಕುಮಾರಿಯ ಪತಿ ಅಜಯ್‌ಮೋಹನ್‌ಖೇತಾನ್ ೨೦೧೨ರಲ್ಲಿ ದಿವಂಗತರಾದರು.

ಭಾರತ ದೇಶದಾದ್ಯಂತ ಬಹುತೇಕ ಎಲ್ಲ ಪ್ರಮುಖ ನಗರ/ಜಿಲ್ಲೆ/ರಾಜ್ಯಗಳನ್ನು ಕಣ್ಣಾರೆ ಕಂಡು ಅಲ್ಲೆಲ್ಲ ವಸತಿಯೂಡಿ ಅನುಭವ ಪಡೆದ ಈ ಹಿರಿಯ ಕಲಾವಿದೆ ಕನ್ನಡನಾಡು ಮತ್ತು ಕನ್ನಡಿಗರನ್ನು ತುಂಬಾ ಇಷ್ಟಪಡುತ್ತಿದ್ದರು. ಇವರಂತೆಯೇ ಈಕೆಯ ಸಹೋದರಿ ಸಾಹುಕಾರ್ ಜಾನಕಿಯವರೂ ಸಹ ಕರ್ನಾಟಕ-ಕನ್ನಡ ಎರಡನ್ನೂ ಬಹಳವಾಗಿ ಮೆಚ್ಚಿಕೊಂಡ ತೆಲುಗು ಚಿತ್ರರಂಗದವರಲ್ಲಿ ಪ್ರಮುಖರಾಗಿದ್ದರು. ಇದೇ ಕಾರಣಕ್ಕಾಗಿಯೇ ಕೃಷ್ಣಕುಮಾರಿಯು ಕನ್ನಡನಾಡಿನ ರಾಜಧಾನಿಯಲ್ಲಿ ತಮ್ಮ ಜೀವಿತದ ಕಡೆಯತನಕ ನೆಲೆಸಿದ್ದರು. ಕಾಲಾಯ ತಸ್ಮೈ ನಮಃ ಎಂಬಂತೆ ಈ ಖ್ಯಾತ ಹಿರಿಯ ನಟಿ ಕೃಷ್ಣಕುಮಾರಿ ವಯೋಸಹಜ ಖಾಯಿಲೆಯಿಂದಾಗಿ ದಿನಾಂಕ ೨೪ನೆ ಜನವರಿ ೨೦೧೮ ರಂದು ತಮ್ಮ ೮೪ನೆಯ ವಯಸ್ಸಲ್ಲಿ ಬೆಂಗಳೂರಿನ ತಮ್ಮದೇ ಸ್ವಂತ ಫ಼ಾರಮ್ ಹೌಸ್‌ನ ನಿವಾಸದಲ್ಲಿ ದೈವಾಧೀನರಾದರು! ಇಂಥ ಓರ್ವ ಶ್ರೇಷ್ಠ ಹಿರಿಯ ಅಭಿನೇತ್ರಿ ಕಣ್ಮರೆಯಾದ ಪರಿಣಾಮವಾಗಿ ಚಂದನವನಕ್ಕೆ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಯಿತು ಎಂಬುದರಲ್ಲಿ ಅತಿಶಯೋಕ್ತಿ ಇಲ್ಲ! ಕೃಷ್ಣಕುಮಾರಿಯವರು ಎಂದೂ ಪ್ರಶಸ್ತಿ ಬಹುಮಾನ ಬಿರುದು ಜನಪ್ರಿಯತೆಯನ್ನು ಹಿಂಬಾಲಿಸಿ ಹೋದವರಲ್ಲ, ಬದಲಿಗೆ ಅವೆಲ್ಲವೂ ಸಹ ಇವರನ್ನೆ ಹುಡುಕಿ ಬಂದು ಇವರ ಪ್ರತಿಭಾ ಕಿರೀಟಕ್ಕೆ ಸೇರಿದವು.

ಕೃಷ್ಣಕುಮಾರಿ ನಟಿಸಿದ ಕನ್ನಡ ಫಿಲಂಸ್:- ಗುಣಸಾಗರಿ, ಜಲದುರ್ಗ, ಆಶಾಸುಂದರಿ, ದಶಾವತಾರ, ಭಕ್ತಕನಕದಾಸ, ಶ್ರೀಶೈಲಮಹಾತ್ಮೆ, ಸ್ವರ್ಣಗೌರಿ, ಸಂಪೂರ್ಣರಾಮಾಯಣ, ಮಹಾತ್ಮಕಬೀರ್, ಚಂದ್ರಕುಮಾರ, ಸತಿಸಾವಿತ್ರಿ, ನಮ್ಮಊರು, ಮುಂತಾದವು.

ಕುಮಾರಕವಿ ಬಿ.ಎನ್.ನಟರಾಜ್
ಬೆಂಗಳೂರು ೫೬೦೦೭೨
೯೦೩೬೯೭೬೪೭೧