*- ಚಿದ್ರೂಪ ಅಂತಃಕರಣ*

“ರಾಷ್ಟ್ರಕವಿ ಕುವೆಂಪು ಅವರು ಸಾರಿದ ವಿಶ್ವಮಾನವ, ನನ್ನ ವಿದ್ಯಾರ್ಥಿ ಮತ್ತು ಸಹೋದ್ಯೋಗಿ ಮಿತ್ರರಾದ ಹಾ.ತಿ ಕೃಷ್ಣೇಗೌಡರು ಹೌದಲ್ಲವೋ ಗೊತ್ತಿಲ್ಲ ಆದರೆ ಖಂಡಿತವಾಗಿ ಅವರೊಬ್ಬ ವಿಶ್ವಕೋಶಮಾನವರಾಗಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ದೊರೆತದ್ದು ಸ್ಮರಣೀಯ ದಾಖಲೆ‌ ಹಾಗೂ ಕನ್ನಡಿಗರಾದ ನಮ್ಮೆಲ್ಲರ ಸೌಭಾಗ್ಯ” ಎಂದವರು ನಾಡಿನ ಹೆಸರಾಂತ ಕನ್ನಡ ಸಾರಸ್ವತ ಲೋಕದ ವಿದ್ವಾಂಸರಾದ ಡಾ. ಸಿ.ಪಿ ಕೃಷ್ಣಕುಮಾರ್ ಅವರು. ಈ ಬಗೆಯಲ್ಲಿ ಡಾ. ಸಿಪಿಕೆ ಅವರು ಸ್ತುತಿಸಿದ್ದು ಡಾ. ಹಾತಿಕೃ ಅವರ ‘ಕೃಷ್ಣಯಾನ’ ಅಭಿನಂದನಾ ಕಾರ್ಯಕ್ರಮದಲ್ಲಿ. ಈ ಹೇಳಿಕೆಗೆ ಕಾರಣ ಹಿನ್ನೆಲೆಯ ಸಂಕ್ಷಿಪ್ತ ವಿವರಣೆಯನ್ನು ಗಮನಿಸುವುದಾದರೆ; ಕನ್ನಡ ವಿಶ್ವಕೋಶ ಯೋಜನೆ ಮೈಸೂರು ಸರ್ಕಾರದಲ್ಲಿ 1954ರಲ್ಲಿ ತನ್ನ ಹುಟ್ಟು ಪಡೆದರೂ 1968ರ ವರೆಗೆ ಯಾವುದೇ ಸಂಪುಟಗಳು ಪ್ರಕಟವಾಗದೆ ಬೆಳೆವಣಿಗೆ ಕಂಡಿರಲಿಲ್ಲ. ಪ್ರೊ. ದೇ. ಜವರೇಗೌಡ ಅವರು ಈ ಯೋಜನೆಯನ್ನು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಗೆ ಹಸ್ತಾಂತರಿಸಿಕೊಂಡ ಮೇಲೆ ಡಾ. ಹಾ.ಮಾ. ನಾಯಕರ ಮುತುವರ್ಜಿಯ ಕೂಸಾಗಿ ಕನ್ನಡ ವಿಶ್ವಕೋಶ ಯೋಜನೆಯ ಕೆಲಸ ಮುಂದುವರೆಯಿತು. ತತ್ಕಾಲದ ಕನ್ನಡ ವಿದ್ವಜ್ಜನರು ಕನ್ನಡ ವಿಶ್ವಕೋಶದ ಅಡಿಪಾಯಕ್ಕೆ ಶ್ರಮಿಸಿದರು. ಹೀಗಿರುವಾಗಲೇ ಡಾ. ಹಾ. ತಿ ಕೃಷ್ಣೇಗೌಡ ಅವರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ವಿಶ್ವಕೋಶ ವಿಭಾಗಕ್ಕೆ 1974ರಲ್ಲಿ ಕನ್ನಡ ವಿಷಯ ವಿಶ್ವಕೋಶ ಯೋಜನೆಗೆ ಹಂಗಾಮಿ ಸಹಾಯಕ ಸಂಪಾದಕರಾಗಿ ನೇಮಕಗೊಂಡರು. ಮುಂಚೆಯೇ ಹಾ. ಮಾ ನಾಯಕರ ನೆಚ್ಚಿನ ವಿದ್ಯಾರ್ಥಿಯಾಗಿದ್ದ ಹಾತಿಕೃ ಅವರು ಮಂಡ್ಯ ಜಿಲ್ಲೆಯ ಅರ್ಜನಪುರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ಅದೇಕೋ ತದನಂತರ ಕೃಷ್ಣೇಗೌಡರು ಮೈಸೂರು ಮಣ್ಣಿನಲ್ಲೇ ಬೀಡುಬಿಡುವ ಪ್ರೇಮ ಮತ್ತು ಕನ್ನಡ ಅಧ್ಯಯನ ಸಂಸ್ಥೆಯ ಸದಾ ಒಡನಾಡಿಯಾಗಿರಲು ಬಯಸಿ ಹಾ.ಮಾ ನಾಯಕರಲ್ಲಿ ತಮ್ಮ ಇಚ್ಛೆಯನ್ನು ತಿಳಿಸಲಾಗಿ ಅವಕಾಶ ದೊರೆತು ಅಧ್ಯಾಪಕ ಹುದ್ದೆಗೆ ರಾಜೀನಾಮೆ ಕೊಟ್ಟು ಗುರುಗಳ ಮಾರ್ಗದರ್ಶನದಲ್ಲಿ ಕನ್ನಡ ಸೇವೆಗಾಗಿ ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ವಕೋಶ ಕುಟುಂಬಕ್ಕೆ ಸೇರಿಕೊಂಡರು.

ಹಾತಿಕೃ ಅವರ ವಿಶ್ವಕೋಶ ಕೆಲಸದ ಆರಂಭಕ್ಕೂ ಮುನ್ನ ಸಾಮಾನ್ಯ ಕನ್ನಡ ವಿಶ್ವಕೋಶ ಯೋಜನೆಯಲ್ಲಿ ಆರು ಸಂಪುಟಗಳು ಪ್ರಕಟವಾಗಿ ಏಳನೆಯ ಸಂಪುಟದ ಕೆಲಸ ಅಂತಿಮದಲ್ಲಿತ್ತು. ಎಂಟನೆಯ ಸಂಪುಟದಿಂದ ಕೆಲಸ ಆರಂಭಿಸಿದ ಇವರು ಖಾಯಂ ಸಹಾಯಕ ಸಂಪಾದಕ, ಸಹ ಸಂಪಾದಕ, ಸಂಯೋಜಕ ಸಂಪಾದಕ, ಕಾರ್ಯನಿರ್ವಾಹಕ ಸಂಪಾದಕರಾಗಿ ಹದಿನಾಲ್ಕು ಸಂಪುಟಗಳನ್ನು ಮತ್ತು ವಿಷಯ ವಿಶ್ವಕೋಶ ಯೋಜನೆಯಲ್ಲಿ ಏಳು ಸಂಪುಟಗಳನ್ನು ಒಟ್ಟು ಇಪ್ಪತ್ತು ಸಂಪುಟಗಳನ್ನು ಹೊರತರುವ ಹೊತ್ತಿಗೆ ಸುಮಾರು ನಲವತ್ತು ವರ್ಷಗಳ ಸೇವಾನುಭವದ ಅಂತಿಮಕ್ಕೆ 2014ರಲ್ಲಿ ನಿವೃತ್ತಿಯನ್ನು ಪಡೆದರು. ನಂತರ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಜಾನಪದ ವಿಶ್ವಕೋಶ ಯೋಜನೆಯಲ್ಲಿ ಪ್ರಪಂಚದ ಜಾನಪದ ವಿಚಾರಗಳನ್ನು ಹತ್ತು ಸಂಪುಟಗಳಲ್ಲಿ ಕನ್ನಡದಲ್ಲಿ ಕನ್ನಡಿಗರಿಗೆ ದೊರಕಿಸಿಕೊಡಲು ಪ್ರಸ್ತಾವನೆ ಸಲ್ಲಿಸಿ ಅದರಂತೆ ಆ ವಿಶ್ವವಿದ್ಯಾಲಯಕ್ಕೆ   ಕರ್ನಾಟಕ ಜಾನಪದ ಸಂಪುಟ(ಭಾಗ -೧) ಮತ್ತು ಆಫ್ರಿಕನ್ ಜಾನಪದ ಸಂಪುಟ ಎಂಬ ಎರಡು ಸಂಪುಟಗಳನ್ನು ಪೂರ್ಣವಾಗಿ ರಚಿಸಿಕೊಟ್ಟರು. ನಂತರ 2019ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಎನ್. ಎಮ್ ತಳವಾರ ಮತ್ತು ಕುಲಪತಿಗಳಾದ ಜಿ. ಹೇಮಂತ್ ಕುಮಾರ್ ಅವರುಗಳು ಕನ್ನಡ ವಿಶ್ವಕೋಶ ಪರಿಷ್ಕಾರ ಮತ್ತು ಮುದ್ರಣಕ್ಕಾಗಿ ಮತ್ತೊಮ್ಮೆ ಹಾತಿಕೃ ಅವರನ್ನು ಆಹ್ವಾನಿಸಿದ್ದರಿಂದ ಕನ್ನಡದ ಕೆಲಸಕ್ಕಾಗಿ ಸದಾ ಸಿದ್ಧ ಮನಸ್ಥಿತಿಯಲ್ಲಿ ಕನ್ನಡ ವಿಶ್ವಕೋಶ ವಿಭಾಗದ ಗೌರವ ಸಂಪಾದಕರಾಗಿ ಹಾ.ತಿ.ಕೃ ಅವರು ಸೇವಾನಿರತರಾದರು. ಪ್ರಸ್ತುತ ಕನ್ನಡ ವಿಶ್ವಕೋಶ ಪರಿಷ್ಕಾರ ಮತ್ತು ಮುದ್ರಣದ ಉಳಿದ ಏಳು ಸಂಪುಟಗಳಲ್ಲಿ ನಾಲ್ಕು ಸಂಪುಟಗಳನ್ನು ಪೂರ್ಣಗೊಳಿಸಿದ್ದಾರೆ. 

ತಮ್ಮ ನಲವತ್ತು ವರ್ಷಗಳ ಕನ್ನಡ ವಿಶ್ವಕೋಶ ಸೇವೆಯಲ್ಲಿ ಹಾ.ಮಾ.ನಾಯಕರ ಆಡಳಿತ ಕಾಲವನ್ನು ಕನ್ನಡ ಅಧ್ಯಯನ ಸಂಸ್ಥೆಯ ಸುವರ್ಣಯುಗವೆಂದು ಕರೆದಿರುವುದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಅಂಬಳಿಕೆ ಹಿರಿಯಣ್ಣ ಅವರು ಸಂಪಾದಿಸಿರುವ ‘ಕೃಷ್ಣಯಾನ’ ಕೃತಿಯ “ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ : ನಾನು ಮತ್ತು ವಿಶ್ವಕೋಶ ತೆನೆ – 1″ರಲ್ಲಿ ಹಾತಿಕೃ ಅವರು ನುಡಿದಿರುವುದನ್ನು ಕಾಣಬಹುದು. ಹಾ.ಮಾ ನಾಯಕರ ತರುವಾಯ ಹಾತಿಕೃ ಅವರ ನೇರಮಾತು, ಕಾಯಕನಿಷ್ಠೆ, ಪ್ರಾಮಾಣಿಕ ಬದುಕು, ಸಮಯ ಪ್ರಜ್ಞೆಗೆ ಪೂರಕವಾದ ಕನ್ನಡ ಅಧ್ಯಯನ ಸಂಸ್ಥೆಯ ವಾತಾವರಣ ನಿಧಾನವಾಗಿ ಕಲುಷಿತಗೊಳ್ಳುತ್ತಲೇ ಸಾಗಿದೆ ಎಂಬುವುದು ಅವರ ನಿಲುವು. ಈ ವಿಚಾರಕ್ಕೆ ಸಿಪಿಕೆ ಅವರು ಕೃಷ್ಣಯಾನ ಕೃತಿಯಲ್ಲಿನ ಅವರ ಕುರಿತಾಗಿ ಪ್ರೀತಿಯ ಶಿಷ್ಯ ಕೃಷ್ಣೇಗೌಡರು ಹೇಳಿದ ಮಾತನ್ನು ಕಾರ್ಯಕ್ರಮದಲ್ಲಿ ಮೆಲುಕು ಹಾಕಿ ಕೃಷ್ಣೇಗೌಡರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿದದ್ದು ಅರ್ಥ ಸಂದರ್ಭವಾಗಿತ್ತು. “ಜೀಶಂಪ ಅವರು ನಿವೃತ್ತರಾದ ಅನಂತರ ಸಿ.ಪಿ.ಕೆ ಯವರು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದರು( ೧೯೮೯ – ೯೧). ಸಿ.ಪಿ.ಕೆ ಕನ್ನಡದ ಘನ ವಿದ್ವಾಂಸರು, ಆದರೆ ದುರ್ಬಲ ಆಡಳಿತಗಾರರು. ಕನ್ನಡ ಅಧ್ಯಯನ ಸಂಸ್ಥೆಯ ಇಂಥ ಕೆಲಸ ಕಾರ್ಯಗಳನ್ನು ಮಾಮೂಲು ಸರಿದೂಗಿಸಿಕೊಂಡು ಹೋಗುವುದೇ ಅವರ ದೊಡ್ಡ ಕೆಲಸವಾಯಿತು”. ಈ ರೀತಿಯಾಗಿ ಇದ್ದದ್ದನ್ನು, ಕಂಡದ್ದನ್ನು, ಸರಿ – ತಪ್ಪು ಎನಿಸಿದ್ದನ್ನು ಯಾರಾದರೂ ಆಗಲಿ ನೇರವಾಗಿ ತಿಳಿಸಿಬಿಡುವ ನನ್ನ ವಿದ್ಯಾರ್ಥಿ ನನಗೆ ಪ್ರಿಯ ಎಂದು ಸಿಪಿಕೆ ಅವರು ಉದ್ಗರಿಸಿದರು. ನನಗೆ ಈ ಆಡಳಿತವೆಂದರೆ ಅಷ್ಟಕಷ್ಟೇ ಅದನ್ನು ಕೃಷ್ಣೇಗೌಡರು ಹೀಗೆ ಹೇಳಿರುವುದು ಒಂದು ರೀತಿ ಸರಿಯೇ ಎಂದು ತಮ್ಮ ನೆಚ್ಚಿನ ವಿದ್ಯಾರ್ಥಿಯ ಮುಕ್ತ ಅಭಿವ್ಯಕ್ತಿ ಗುಣಕ್ಕೆ ಮುದ್ರೆಹಾಕಿದಂತೆ ಸ್ಮರಿಸಿದರು.

ವಿಶ್ವಕೋಶದ ಕೆಲಸ ಅನಾಯಾಸವಾಗಿ ನಡೆವ ಕೆಲಸವಲ್ಲ, ಬಹುಶಿಸ್ತಿನ ಬದ್ಧತೆಯ ಕೆಲಸ. ಈ ಬದ್ಧತೆ, ಆಯಾಸ ಎಲ್ಲರಿಗೂ ಹಿಡಿಸಿದ್ದಲ್ಲ ಹಾಗಾಗಿ ಹಲವು ಸಂದರ್ಭಗಳಲ್ಲಿ ಈ ಹಿಡಿಸದ ನಡೆವಳಿಕೆಗಳುಳ್ಳವರಿಂದ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಕೆಲಸವು ಸವಾಲುಗಳಾಗಿ ಕಂಡುಬಂದಾಗ ಅದನ್ನೂ ಸಹ ಕೃಷ್ಣೇಗೌಡರು ಅನಾಯಾಸವಾಗಿ ಸರಿದೂಗಿಸಿಕೊಂಡು ವಿಶ್ವಕೋಶದ ಒಳಗೆ ಸುದೀರ್ಘ ವಿಜಯ ಯಾತ್ರೆಯನ್ನು ಕೈಗೊಂಡ ಹಲವು ಘಟನೆಗಳನ್ನು ಸ್ವತಃ ಅವರೇ ನೆನವು ಮಾಡಿಕೊಂಡಿದ್ದಾರೆ. ಈಗಿನವರಿಗೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಚರಿತ್ರೆ ಅಷ್ಟಾಗಿ ತಿಳಿದಿಲ್ಲ ಬೆಳ್ಳಗಿರುವುದನ್ನೆಲ್ಲ ಹಾಲೆಂದು ಭ್ರಮಿಸಿದ್ದಾರೆ. ಆದರೆ ಕೃಷ್ಣೇಗೌಡರು ತಮ್ಮ ಅನುಭವ ಚೌಕಟ್ಟಿನಲ್ಲಿ ನ್ಯಾಯಪರವಾಗಿ ಕಂಡದ್ದನ್ನೆಲ್ಲ ನೇರ-ನಿಷ್ಠುರವಾಗಿಯೇ ಬರೆದಿದ್ದಾರೆ. ಓದಿದವರ ಭ್ರಮೆಯನ್ನು ತೆಗೆಯುವ ಬುದ್ಧಿ ಬೆಳಕಾಗಿ ಗೋಚರಿಸಿದ್ದಾರೆ‌.

ಇದೆಲ್ಲಾ ಅವರ ಹೊಗಳಿಕೆ ಅಲ್ಲ ಅವರ ನೈಜ ಸ್ವಭಾವ. ಯಾವಾಗಲೂ ನನ್ನ ಜೊತೆ ಒಂದು ಮಾತನ್ನು ಹೇಳುತ್ತಿರುತ್ತಾರೆ; “ಈ ಜನ ನನ್ನನ್ನು ನೀವು ಬಿಡಿ ಕೃಷ್ಣೇಗೌಡರೇ ಮಹಾ ಆದರ್ಶವಾದಿ ನಿಮ್ಮ ಹಾಗೆ ಇರಲು ಸಾಧ್ಯವೇ ಇಲ್ಲ, ನೀವದಕ್ಕೆ ವಿಚಿತ್ರ” ಎನ್ನುತ್ತಾರೆ. “ಅಲ್ಲ ಸತ್ಯದಿಂದಿರುವುದು ಆದರ್ಶವೇ? ಸಹಜ ಮತ್ತು ವಾಸ್ತವ ಬದುಕು ಅಲ್ಲವಾ! ಈ ಜನ ನನ್ನನ್ನೇ ನೀವು ಸರಿಯಿಲ್ಲ ಬಿಡಿ ಸರ್. ನಿಮ್ಮ ರೀತಿ ಇದ್ದರೆ ಇಲ್ಲಿ ಬದುಕೋಕೆ ಆಗಲ್ಲ ಅಂತಾರೆ. ನೀನೆ ಹೇಳಪ್ಪ ಏನ್ ಹೇಳೋದು ಈ ಜನಕ್ಕೆ” ಎಂದು ಹೇಳುವಾಗ ನನಗೆ, ನಾನು ಹೌದೌದೆಂದು  ಪ್ರತಿಕ್ರಿಯೆ ನೀಡಿದ್ದು ಸಹಮತ ಮತ್ತು ಅವರ ನಿಲುವು ಸತ್ಯವಾದ್ದರಿಂದ ನಾನು ಅವರ ನಿಲುವುಗಳ ಅನುಚಾಲಕ‌.

ಈ ಚಿಕ್ಕ ಬರೆವಣಿಗೆಯಲ್ಲಿ ಅವರ ಬಗ್ಗೆ ಏನೇನೂ ಪೂರ್ಣವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಆದರೆ ಸಿಪಿಕೆ ಅವರು ಆಡಿದ ಹೇಳಿಕೆಯನ್ನು ಪುನರ್ ಸ್ಮರಿಸಿ ಸಮಾಧಾನ ಪಟ್ಟುಕೊಳ್ಳುತ್ತಿರುವೆ. ‘ಕೃಷ್ಣಯಾನ’ ಶೀರ್ಷಿಕೆಯನ್ನು ಸಿಪಿಕೆ ಅವರೇ ನಾಮಕರಣ ಮಾಡಿದ್ದು. ಈ ಪುಸ್ತಕದ ಒಳಹೊಕ್ಕರೆ ಕೇವಲ ಕೃಷ್ಣೇಗೌಡರ ಕುರಿತಾದ ಪ್ರಪಂಚವಷ್ಟೇ ಅಲ್ಲದೇ ಅದಕ್ಕೂ ಮಿಗಿಲಾದ ಹಲವು ಶಾಸ್ತ್ರಗಳ ಜ್ಞಾನ ಓದುಗರದ್ದಾಗುತ್ತದೆ. ಈ ಪುಸ್ತಕ ದೊಡ್ಡ ಆಕರಗ್ರಂಥ. ಈ ಪುಸ್ತಕವನ್ನು ಓದಿದವರು ಕನ್ನಡಕ್ಕೆ, ಕಾಯಕ ನಿಷ್ಠೆಗೆ ಶರಣಾಗುವರು. 

ಚಿಮಬಿಆರ್ (ಮಂಜುನಾಥ ಬಿ.ಆರ್)*

*ಯುವಸಾಹಿತಿ, ಸಂಶೋಧಕ, ವಿಮರ್ಶಕ*

 *ಎಚ್.ಡಿ ಕೋಟೆ, ಮೈಸೂರು.*

*ಮೊ.ಸಂಖ್ಯೆ:- 8884684726*

*Gmail I’d:- manjunathabr709@gmail.com*