-ಪ್ರೊ. ಹಾ.ತಿ ಕೃಷ್ಣೇಗೌಡ
ಕನ್ನಡವೆನೆ ಕುಣಿದಾಡುವುದೆನ್ನೆದೆ ಕನ್ನಡವೆನೆ ಕಿವಿನಿಮಿರುವುದು ಕಾಮನಬಿಲ್ಲನು ಕಾಣುವ ಕವಿಯೊಲು ತೆಕ್ಕನೆ ಮನ ಮೈಮರೆಯುವುದು, ಇದು ಕುವೆಂಪು ಅವರ ಮಾತು. ಇವತ್ತಿನ, ಈ ಹತ್ತನೆಯ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಾವೆಲ್ಲ ಸೇರಿದ್ದೇವೆ. ಯಾವುದು ಚಿಕ್ಕದು, ಯಾವುದು ದೊಡ್ಡದು ಅನ್ನುವಂತದ್ದು ಪ್ರಶ್ನೆ ಬರುವುದೇ ಇಲ್ಲ ಜೀವನದಲ್ಲಿ. ಯಾವುದು ಬೆಲೆಯುಳ್ಳದ್ದೋ, ಯಾವುದು ಬೆಲೆಯಿಲ್ಲದ್ದೋ ಎನ್ನುವಂತದಷ್ಟೇ ಈ ಸಂದರ್ಭದಲ್ಲಿ ನಾವು ನೆನಪು ಮಾಡಿಕೊಳ್ಳುವಂತಹ ಮಾತು. ಸ್ನೇಹಿತರೇ ದಿವಾಕರ ಅವರು ನನ್ನನ್ನ ಆಹ್ವಾನಿಸಲು, ನನ್ನ ಮನೆಗೆ ಬಂದರು. ಅವರು ಯಾರು ಅಂತಲೂ ಗೊತ್ತಿಲ್ಲ, ನನ್ನ ಹೆಸರು ಅವರಿಗೆ ಹೇಗೆ ಪರಿಚಯ ಅಂತಲೂ ಗೊತ್ತಿಲ್ಲ. ಆದ್ರೆ ಒಂದಿದೆ, ಕನ್ನಡ ಅಂದ್ರೆ ಯಾವತ್ತೂ ಮುಂಚೂಣಿಯಲ್ಲಿ ಇರುವಂತದ್ದು. ಅದು ಸಣ್ಣದಿರಬಹುದು, ದೊಡ್ಡದಿರಬಹುದು, ಅದು ವಿಜೃಂಭಣೆಯದ್ದಿರಬಹುದು, ಸಾಧಾರಣ ಇರಬಹುದು. ಕನ್ನಡದ ಕರೆ ಅಂದ್ರೆ ನಾವು ಅದನ್ನು ಓಗೊಡಬೇಕು. ಇದು ನಮ್ಮ ಜೀವಮಾನದಲ್ಲಿ ನಾವು ಪಾಲಿಸಿಕೊಂಡು ಬಂದಿರುವ ಒಂದು ತತ್ವ.
ನಾನು ಇಲ್ಲಿ ಒಂದು ಮಾತನ್ನು ಹೇಳುವುದಕ್ಕೆ ಇಷ್ಟಪಡುತ್ತೇನೆ. ಕನ್ನಡ ನಮ್ಮ ಉಸಿರು, ಅದು ತೋರಿಕೆಯದ್ದಲ್ಲ, ಅದು ಅಂತರಂಗದ್ದು. ಇವತ್ತು ಒಂದು ಗಂಟೆ, ಈ ಕಾರ್ಯಕ್ರಮ ನಾನಾ ಕಾರಣದಿಂದ ತಡವಾಗಿದೆ. ನನಗೆ ಬೇಸರ ಇಲ್ಲ. ಕನ್ನಡಕ್ಕೋಸ್ಕರ ಎಷ್ಟೇ ತಡವಾದರೂ ನಾನು ಇರಬಲ್ಲೇ ಎನ್ನುವಂತದ್ದು ನನ್ನ ಮನಸ್ಸು. ಸ್ನೇಹಿತರೇ, ಈ ಮೈಸೂರು ಜಿಲ್ಲಾ ಪ್ರವಾಸಿ ವಾಹನ ಚಾಲಕರು ಮತ್ತು ಮಾಲೀಕರ ಯೋಗಕ್ಷೇಮಾಭಿವೃದ್ಧಿ ಸಂಘ, ಇವರು ಹಮ್ಮಿಕೊಂಡಿರುವಂಥ ಇಂಥಾ ಒಂದು ಕಾರ್ಯಕ್ರಮ ಬಹಳ ಸಂತೋಷವನ್ನು ಕೊಡುವಂತದ್ದು. ಕನ್ನಡ ಅಂದ್ರೆ ಏನು? ಹೇಗ್ ಬಂತು ಆ ಪದ? ಕಮ್ಮಿತ್ತು ನಾಡು, ಕಮ್ ನಾಡು, ಕಮ್ನಡ ನಾಡು, ಆ ಕನ್ನಡ ಪದ ಬಂದಿರುವಂತದ್ದು. ಕಮ್ಮಿತ್ತು ನಾಡು ಅಂದರೆ ಏನು? ಕರ್ನಾಟಕ ಪರಿಮಳದ ನಾಡು. ಕನ್ನಡ ನಾಡಿನಲ್ಲಿ ಶ್ರೀಗಂಧ ಬೆಳಿತಾ ಇತ್ತು. ಒಂದು ಕಾಲಕ್ಕೆ ಅತ್ಯಂತ ಸಂಮೃದ್ಧವಾದ ಶ್ರೀಗಂಧದ ಬೆಳೆ ಕರ್ನಾಟಕದಲ್ಲಿತ್ತು. ಎರಡನೇದೇನಂದ್ರೆ ಲಕ್ಷಾಂತರ ಕೆರೆಗಳಿದ್ದವು ಕರ್ನಾಟಕದಲ್ಲಿ. ಆ ಕೆರೆಗಳಲ್ಲಿ ತಾವರೆ ಹೂಗಳು ಅರಳುತ್ತಾ ಇದ್ದವು, ತಾವರೆ ಹೂವಿನ ಪರಿಮಳದಿಂದ ಕನ್ನಡ ನಾಡಿಗೆ ಕನ್ನಡ ಅನ್ನುವ ಹೆಸರು ಬಂತು.
ನಮ್ಮ ಪರಂಪರೆನ ನಾವು ನೆನಪು ಮಾಡ್ಕೊಂಡ್ರೆ ಬಹಳ ಸುದೀರ್ಘವಾದ್ದು ಕನ್ನಡ ಪರಂಪರೆ. ಅದನ್ನು ಅರಿಯುವಲ್ಲಿ ತಿಳಿಯುವಲ್ಲಿ ನಾವೂ ಒಂದಾಗುವಂತಹ ಸಂದರ್ಭಗಳು ನಮಗೆ ಬಹಳಷ್ಟು ಕಡಿಮೆ ಸಿಗ್ತಾವೆ. ಕನ್ನಡ ರಾಜ್ಯೋತ್ಸವ ಆರಂಭವಾಗಿ ಅರವತೈದು ಅರವತ್ತಾರು ವರ್ಷಗಳಾಯ್ತು. ಸಾವಿರದ ಒಂಬೈನೂರ ಐವತ್ತಾರು ನವೆಂಬರ್ ಒಂದರಂದು ಕನ್ನಡ ನಾಡು ಉದಿಸಿತು. ಅದಕ್ಕಿಂತ ಹಿಂದೆ ಕನ್ನಡ ನಾಡು ಇರಲಿಲ್ವೇ! ಕನ್ನಡಕ್ಕೆ ೨೫೦೦ ವರ್ಷಗಳ ಸು. ದೀರ್ಘ ಇತಿಹಾಸವಿದೆ. ನಾನು ಅಷ್ಟೋ ಇಷ್ಟೋ ಜಗತ್ತಿನ ಸಾಹಿತ್ಯವನ್ನು ತಿಳಿದವನು. ನನ್ನ ಕ್ಷೇತ್ರವೇ ಅದು. ನಾನು ಕನ್ನಡ ವಿಶ್ವಕೋಶದಲ್ಲಿ ಕೆಲಸ ಮಾಡುವಂತವನು. ಇಡೀ ಜಗತ್ತಿನಲ್ಲಿ ಕನ್ನಡವನ್ನು ಪ್ರಪಂಚದ ಯಾವ್ದೇ ಭಾಷೆಯ ಜೊತೆ ನೀವು ಹೋಲಿಸ್ ಬಹ್ದು, ಒಂದ್ ಬೆರಳು ಮೇಲಿರುತ್ತೆ. ಇದು ಕನ್ನಡದ ಒಂದು ಗುಣ, ಕನ್ನಡ, ಸಾಹಿತ್ಯದ ಒಂದು ಗುಣ. ನಾವು ಅನೇಕ ಸರಿ ಹೇಳ್ತಾ ಇರ್ತೀವಿ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ ಅನ್ನುವಂತದ್ದು ನಿಜ. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವಂತಹ ಒಂದು ಖ್ಯಾತಿ ಹೆಮ್ಮೆ ಕನ್ನಡದ್ದು. ಅದಕ್ಕಿಂತ ಹೆಚ್ಚಾಗಿ ಕನ್ನಡ ಪರಂಪರೆಯನ್ನು ಉಳ್ಳಂತದ್ದು ನಮ್ಮ ಕನ್ನಡ ಭಾಷೆ.
ನೋಡಿ, ಕರ್ನಾಟಕ ಎಷ್ಟು ಸಂಮೃದ್ಧಿಯ ನಾಡಾಗಿತ್ತು ಎನ್ನುವಂತದ್ದು ನೀವು ಶಾಸನಗಳಿಗೆ ಹೋದರೆ ಗೊತ್ತಾಗುತ್ತೆ. ಕನ್ನಡದಲ್ಲಿ ಮೂವತ್ತು ಸಾವಿರ ಶಾಸನಗಳು ಸಿಗ್ತಾವೆ. ಎಷ್ಟು ಜನಕ್ಕೆ ಗೊತ್ತು ಮೂವತ್ತು ಸಾವಿರ ಶಾಸನಗಳು? ತಮಿಳಿನಲ್ಲಿ ನಲವತ್ತು ಸಾವಿರ ಶಾಸನಗಳು ಸಿಗುತ್ತೆ. ಒಂದು ಶಾಸನ ಹಾಕಿಸ್ತಾರೆ ಅಂದ್ರೆ ಆ ನಾಡು ಎಷ್ಟು ಸಂಮೃದ್ಧವಾಗಿತ್ತು ಅನ್ನೋದಕ್ಕೆ ಅದು ಸೂಚನೆ. ಭಾರತದ ಯಾವ ಪ್ರದೇಶದಲ್ಲೂ ಇಷ್ಟೊಂದು ಶಾಸನ ಸಂಪತ್ತು ಇಲ್ಲ. ಅದು ಕನ್ನಡದ ದೊಡ್ಡ ಸಂಪತ್ತು. ನಿಮಗೆ ಗೊತ್ತಿರಬಹುದು, ಕನ್ನಡದ ಮೊದಲನೆಯ ಶಾಸನ ಹಲ್ಮಿಡಿ ಶಾಸನ. ಬಂಧುಗಳೇ ನಿಮ್ಗೆಲ್ಲಾ ಗೊತ್ತಿರಬಹುದು. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನವನ್ನು ಕೊಟ್ರು, ಮೊದಲು ಕೊಟ್ಟಿದ್ದು ತಮಿಳಿಗೆ, ೨೦೦೪ರಲ್ಲಿ. ನಾವು ಕನ್ನಡಿಗರು ಯಾವುದರಲ್ಲೂ ಕಡಿಮೆ ಇಲ್ದೇ ಇದ್ರೂ ನಮಗೆ ಶಾಸ್ತ್ರೀಯ ಸ್ಥಾನಮಾನವನ್ನು ಪಡ್ಕೋಳಕೆ ಅಂತ ಹೋರಾಡಬೇಕಾಯಿತು. ಕನ್ನಡಿಗರ ಒಂದು ದೌರ್ಬಲ್ಯ ಇದೆ. ನಾವು ಎಷ್ಟೇ ಅಭಿಮಾನಿಗಳು ಅಂದರೂ ಕನ್ನಡಿಗರು ಎದ್ದರೆ ಆಳಲ್ಲ, ಆದ್ರೆ ಏಳದೇ ಇಲ್ವಲ್ಲ! ಆ ತರಹದ ಒಂದು ಸ್ಥಿತಿ ನಮ್ಮ ಕನ್ನಡ ನಾಡಿಗೆ ಇತ್ತು. ೨೦೦೮ರಲ್ಲಿ ನಮಗೆ ಶಾಸ್ತ್ರೀಯ ಸ್ಥಾನಮಾನ ಬಂತು. ಇದು ಕಡಿಮೆಯ ಸಾಧನೆಯಲ್ಲ, ಕನ್ನಡವನ್ನು ಗುರುತಿಸುವಂತದ್ದು. ೨೫೦೦ ವರ್ಷಗಳ ಒಂದು ಇತಿಹಾಸವನ್ನ ಹೊಂದಿರುವಂತದ್ದು ಕನ್ನಡ. ಅದು ಇವತ್ತು ಬೆಳೆದಿರೋದಲ್ಲ ಇವತ್ಯಾರೂ ಬೆಳೆಸಿಲ್ಲ, ಬೆಳೆದು ಬಂದಿದೆ.

ಯಾವ ಮುಖ್ಯಮಂತ್ರಿಗಳ ಹಿತ್ಲಲ್ಲಿ ಆಗ್ಲಿ ಅಥವಾ ರಾಜಕಾರಣಿಗಳ ಹಿತ್ಲಲ್ಲಿ ಆಗ್ಲಿ ಕನ್ನಡ ಬೆಳೆಯೋಲ್ಲ ಸ್ವಾಮಿ, ನಿಮ್ಮ ನಮ್ಮ ನಡುವೆ ಬೆಳೆಯುವಂತದ್ದು ಕನ್ನಡ. ಆ ಕನ್ನಡ ನಮ್ಮದು. ನಾವು, ನಾವು ಬೆಳೆಸೋರು. ನಾವು ಇಲ್ಲಿ ಎಂ.ಎ. ಪಿ.ಎಚ್.ಡಿ. ಅನ್ನೋವಂತ ಪ್ರಶ್ನೆ ಅಲ್ಲ, ಜನಪದ ಅನ್ನೋದು ಒಂದಿದೆ. ಆ ಜನಪದ ಅಂದ್ರೆ ಜನರು, ಆ ದೇಶದ ಜನವರ್ಗ. ಅವರು ಬೆಳೆಸುವಂತದ್ದು ಕನ್ನಡ. ಒಮ್ಮೆ ನನ್ನ ಗುರುಗಳಾದಂತಹ ಹಾ.ಮಾ ನಾಯಕ್ರು ಒಂದು ಸಾಹಿತ್ಯ ಸಮ್ಮೇಳನದಲ್ಲಿ ಭಾಷಣವನ್ನು ಮಾಡ್ತ ಇದ್ರು. ಅವತ್ತು ಡಿ.ದೇವರಾಜು ಅರಸು ಅವ್ರು ಮುಖ್ಯಮಂತ್ರಿಗಳಾಗಿದ್ರು. ಧರ್ಮಸ್ಥಳದಲ್ಲಿ ನಡೆದಂತ ಸಾಹಿತ್ಯ ಸಮ್ಮೇಳನ. ಎಂಟು ಗಂಟೆಗೆ ಧ್ವಜಾರೋಹಣ ಆಗ್ಬೇಕಾಗಿತ್ತು. ಮುಖ್ಯಮಂತ್ರಿಗಳು ಬಂದು ಧ್ವಜಾರೋಹಣ ಮಾಡ್ಬೇಕಾಗಿತ್ತು. ಅವರು ಕರೆಕ್ಟಾಗಿ ಅದೇ ಸಮಯಕ್ಕೆ ಬರ್ಲಿಲ್ಲ. ಧ್ವಜಾರೋಹಣವನ್ನು ಅವತ್ತಿನ ಅಧ್ಯಕ್ಷರಾದಂತಹ ಗೋಪಾಲಕೃಷ್ಣ ಅಡಿಗರಿಂದ ಮಾಡಿಸಿದ್ರು. ಮಾಡಿಸಿ, ಮೆರವಣಿಗೆ ಪ್ರಾರಂಭಿಸಿದ್ರು. ಮೆರವಣಿಗೆ ಮಧ್ಯದಲ್ಲಿ, ಬಂದು ಮುಖ್ಯಮಂತ್ರಿಗಳು ಸೇರ್ಕಂಡ್ರು. ಮುಖ್ಯಮಂತ್ರಿಗಳು ಒಂದು ಮಾತು ಹೇಳಿದ್ರು; “ನೋಡಿ ಕನ್ನಡ, ಕನ್ನಡದ ಸಂಸ್ಕೃತಿ ಅಂದ್ರೆ ನನ್ನಂಥ ಒಬ್ಬ ಮುಖ್ಯಮಂತ್ರಿ ಕೂಡ, ತಗ್ಗಿ ಬಗ್ಗಿ ನಡಿಬೇಕು”. ಕನ್ನಡಕ್ಕೋಸ್ಕರ ಕೆಲಸ ಮಾಡುವಂತವರು ಯಾವ ರೀತಿ ಇರ್ತಾರೆ ಅಂತ ಹಾ.ಮಾ ನಾಯಕರು ಅವತ್ತು ಒಂದು ಮಾತನ್ನು ಹೇಳಿದ್ದು ಇವತ್ತಿಗೂ ಚೆನ್ನಾಗಿ ನೆನಪಿದೆ. ಏನ್ ಹೇಳಿದ್ರು ಅಂದ್ರೆ; “ಸ್ವಾಮಿ ಕನ್ನಡ ಬೆಳೆಯುವಂತದ್ದು ಜನರ ನಡುವೆ, ಮುಖ್ಯಮಂತ್ರಿಗಳ ಹಿತ್ತಲಿನಲ್ಲಿ ಆಗ್ಲಿ ಅಥವಾ ಅವರ ಪರಿವಾರದಲ್ಲಿ ಆಗ್ಲಿ ಕನ್ನಡ ಬೆಳೆಯೊಲ್ಲ” ಅಂತ ಹೇಳಿದ್ರು. ಅಂತಹ ಧೈರ್ಯ ಹಾ.ಮಾ ನಾಯಕರದು. ಅವರ ಒಂದು ಮಾರ್ಗದರ್ಶನದಲ್ಲಿ ನಾನು ಬೆಳೆದಂತವನು. ಅವರು ಮಾಡ್ತಿದ್ದು ಏನಪ್ಪ ಅಂದ್ರೆ; ಸಮಯ ಪಾಲನೆ. ತಪ್ಪು ಭಾವಿಸಬಾರದು ತಾವು, ಯಾವುದೇ ಸಮಾರಂಭ ಇರಬಹುದು, ಅದೆಂಥದೇ ಸಮಾರಂಭ ಇರಬಹುದು, ಸಮಾರಂಭ ಸರಿಯಾದ ಸಮಯಕ್ಕೆ ಸರಿಯಾಗಿ ನಡೀಬೇಕು ಅಂಥಾ. ಅದನ್ನ ನಮಗೆ ಕಲಿಸಿ ಕೊಟ್ರು.
ಕುವೆಂಪು ಒಂದು ಮಾತು ಹೇಳಿದ್ದಾರೆ; “ಶ್ರೀಸಾಮಾನ್ಯನೇ ಭಗವನ್ ಮಾನ್ಯನ್”. ಯಾರು ಭಗವಂತನಿಗೆ ಹತ್ತಿರವಾಗಿರೋರು ಅಂದ್ರೆ, ಶ್ರೀಸಾಮಾನ್ಯ ಅಂತೆ. ಶ್ರೀಸಾಮಾನ್ಯ ಎಂಬ ಪದವನ್ನು ಕೊಟ್ಟಂತವರು ಕುವೆಂಪು. ಅವನು ಸಾಮಾನ್ಯ ಅಲ್ಲ ಶ್ರೀಸಾಮಾನ್ಯ. ಅಂದ್ರೆ ಎಲ್ರಿಗೂ ಬೆಲೆ ಇದೆ. ಇದು ಪ್ರಜಾಪ್ರಭುತ್ವದ ನಾಡು. ಈ ನಾಡಿನಲ್ಲಿ ಪ್ರತಿಯೊಬ್ಬರಿಗೂ ಒಂದು ಗೌರವ ಬೆಲೆ ಅನ್ನುವಂತದ್ದು ಇದೆ. ಆದ್ರೆ ನಮ್ಮ ರಾಜಕಾರಣ ನಮ್ಮನ್ನ ತೊತ್ತಳ ತುಳಿದಿದೆ. ಆ ವಿಚಾರಕ್ಕೆ ನಾನು ಹೋಗೋದಿಲ್ಲ. ಕನ್ನಡ ವಿಚಾರದಲ್ಲಿ ಮಾತನಾಡೋಕ್ಕೆ ಬಂದ್ರೆ, ನಾನು ಹೇಳ್ದೆ ೨೫೦೦ ವರ್ಷಗಳ ಒಂದು ಪರಂಪರೆ ಇದೆ ಅಂತ. ಏನು ಕನ್ನಡದ ಪರಂಪರೆ ಅಂದ್ರೆ? ಏನು ಕನ್ನಡ ಸಂಸ್ಕೃತಿ ಅಂದ್ರೆ? ಮಿತ್ರರೇ ನಾನು ಒಂದೇ ಒಂದು ಪದ್ಯವನ್ನು ಈ ಹೊತ್ನಲ್ಲಿ ಹೇಳಿ ಆ ಕನ್ನಡ ಸಂಸ್ಕೃತಿ ಅನ್ನುವಂತದ್ದನ್ನ ಹೇಳ್ತೀನಿ. ನಾವು ರಾಜ್ಯೋತ್ಸವ ತಿಂಗಳಿನಲ್ಲೇ ಕನ್ನಡವನ್ನು ನೆನಿಬೇಕು ಅಂತೇನಿಲ್ಲ. ಈಗ ಅದು ಕನ್ನಡ ರಾಜ್ಯೋತ್ಸವ ಅಲ್ಲ. ಅದನ್ನು ನಾನ್ ಹೇಳೋದು ಕನ್ನಡೋತ್ಸವ ಅಂಥ. ರಾಜ್ಯೋತ್ಸವ ಮುಗಿದೋಯ್ತು ಈಗ. ರಾಜ್ಯ ಉದಯವಾಯ್ತು, ಕರ್ನಾಟಕ ಅಂತಾಯ್ತು. ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಇದು ಕುವೆಂಪು ಅವ್ರ ಮಾತು. ಈಗ ಕನ್ನಡ ಉಸಿರಾಗ್ಬೇಕು. ಎಲ್ಲಿದೆ ಉಸಿರಾಗುವಂತದ್ದು! ನಿಮ್ಗೆ ಗೊತ್ತಿದೆ, ರಾಜ್ಯಾಂಗದಲ್ಲಿ ೨೨ ಭಾಷೆಗಳಿವೆ. ಆ ೨೨ ಭಾಷೆಗಳೂ ರಾಷ್ಟ್ರ ಭಾಷೆಗಳೇ. ಹಿಂದಿ ರಾಷ್ಟ್ರ ಭಾಷೆನ? ತಮಿಳು ರಾಷ್ಟ್ರ ಭಾಷೆನ? ತೆಲುಗು ರಾಷ್ಟ್ರ ಭಾಷೆನ? ಅಲ್ಲ. ೨೨ ಭಾಷೆಗಳೂ ರಾಷ್ಟ್ರ ಭಾಷೆಗಳೇ. ಕನ್ನಡ, ಕನ್ನಡಿಗರು ಅತ್ಯಂತ ಉದಾರಿಗಳು. ಅವರು ತುಂಬಾ ಔದಾರ್ಯದಲ್ಲಿ ನಡ್ಕೊಂಡೋರು. ಇದು ಇವತ್ತಿನ್ದು ಅಲ್ಲ, ಇದು ಕದಂಬರ ಕಾಲ್ದಿಂದ್ಲೂ ಅತ್ಯಂತ ಉದಾರವಾಗಿ ಕನ್ನಡಿಗರು, ಕನ್ನಡ ರಾಜರು ನಡ್ಕೊಂಡು ಬಂದಿದ್ದಾರೆ.
ನಾನು ಇಲ್ಲಿ ಒಂದು ಪದ್ಯವನ್ನು ಹೇಳ್ತೀನಿ. ಇದು ವಿಜಯನಗರ ಕಾಲದಲ್ಲಿ ಲಕ್ಷ್ಮೀಧರ ಅನ್ನುವಂತಹ ಒಬ್ಬ ಮಂತ್ರಿಗೆ ಸಂಬಂಧಿಸಿದ್ದು. ಆ ಕಾಲದಲ್ಲಿ ಒಂದು ಶಾಸನವನ್ನು ಹಾಕ್ಸಿದಾರೆ. ಆ ಒಂದು ಪದ್ಯವನ್ನು ತಮಗೆ ಹೇಳ್ಬೇಕು ಅಂತ ನನಗೆ ಅನ್ನಿಸ್ತಾ ಇದೆ. ಕನ್ನಡ ಸಂಸ್ಕೃತಿ ಅಂದ್ರೇನು? ಏನ್ ತಿಳ್ಕೊಂಡ್ಡಿದ್ದೀವಿ ನಾವು ಕನ್ನಡ ಸಂಸ್ಕೃತಿ ಅಂದ್ರೆ; ಕನ್ನಡವನ್ನು ಮಾತಾಡೋದಷ್ಟೇ ಅಲ್ಲ, ಜೀವನ್ದಲ್ಲಿ ಏನ್ ಮೌಲ್ಯಗಳಿರ್ಬೇಕು? ಆ ಮೌಲ್ಯಗಳು ಕನ್ನಡ್ದಿಂದ ಬರುತ್ತವೆ. ಮನೆಯೆ ಮೊದಲು ಪಾಠ ಶಾಲೆ, ಜನನಿ ತಾನೇ ಮೊದಲ ಗುರುವು. ಜನನಿಯಿಂದ ಪಾಠ ಕಲಿತ ಜನರು ಧನ್ಯರು. ಇವತ್ತು ನಮ್ಮ ಕನ್ನಡ ಅನ್ನುವಂತದ್ದು ಬಹಳಷ್ಟು ಒತ್ತಡಗಳಲ್ಲಿದೆ. ನಾವೇನ್ ತಿಳ್ಕೋತ್ತೀವಿ ಅಂದ್ರೆ ಇಂಗ್ಲಿಷ್ ಕಲಿತ್ಬಿಟ್ರೆ, ಇಂಗ್ಲಿಷ್ನಾ ಮಾತ್ನಾಡ್ಬಿಟ್ರೆ ಅವನು ಎತ್ತರದ ವ್ಯಕ್ತಿ ಅಂಥ ತಿಳಿತೇವೆ. ಇಂಗ್ಲಿಷ್ ಗೊತ್ತಿದ್ರೆ ಜಗತ್ನಲ್ಲಿ ಎಲ್ಬೇಕಾದ್ರು ಬದುಕ್ಬುಹುದು ಅಂತ ಭ್ರಮೆಯಲ್ಲಿದ್ದೇವೆ. ಯಾಕೆ? ಕನ್ನಡ ಕಲಿತ್ರೆ, ಕನ್ನಡವನ್ನ ಮಾತಾಡಿದ್ರೆ ಜಗತ್ನಲ್ಲಿ ಬದ್ಕೋಕೆ ಆಗೊಲ್ವಾ? ನಮ್ದು ಅನ್ನೋದ್ ಒಂದ್ ಇದೆ. ಅದೇನ್ ಅಂದ್ರೆ; ಅದು ನಮ್ಮ ಅಸ್ಮಿತೆ. ನಮ್ಮದು ಕನ್ನಡ, ಕನ್ನಡ ನಂದು. ಅದನ್ನ ಕೈ ಹಿಡಿದ್ ನಡಿಸ್ಬೇಕಾದವರು ನಾವು. ಇಂಗ್ಲೆಂಡ್ನಲ್ಲಿ ಯಾವನೂ ಕನ್ನಡವನ್ನ ಮಾತಾಡಲ್ಲ.

ಸ್ನೇಹಿತರೇ, ಒಂದು ವಿಚಾರವನ್ನ ಇಲ್ಲಿ ಹೇಳ್ಬೇಕು; ನಾವು ಕನ್ನಡವನ್ನು ಎಷ್ಟು ಬೆಳೆಸ್ತೀವಿ ಅಂತ. ನಾನು ಅನೇಕ ಕಡೆ ಭಾಷಣವನ್ನು ಮಾಡ್ತೇನೆ. ಮೈಸೂರಿನಲ್ಲಿ ಆಡಳಿತ ತರಬೇತಿ ಸಂಸ್ಥೆ ಅನ್ನುವಂತದ್ದು ಒಂದು ಸಂಸ್ಥೆ ಇದೆ. ಅದು ನಮ್ಮ ಆಡಳಿತ ಅಧಿಕಾರಿಗಳನ್ನು ತಯಾರುಮಾಡುವಂಥ ಒಂದು ವ್ಯವಸ್ಥೆ. ಅಲ್ಲಿ ನಾನು ಆಡಳಿತದಲ್ಲಿ ಕನ್ನಡವನ್ನ ಹೇಗೆ ಅನುಷ್ಠಾನ ಗೊಳಿಸಬೇಕು ಎಂಬ ಬಗ್ಗೆ ಬೋಧಿಸ್ತೇನೆ. ನಾನು ಒಂದು ಪ್ರಶ್ನೆ ಕೇಳ್ತೇನೆ ನನ್ನ ಮಿತ್ರರಿಗೆಲ್ಲಾ ಅಲ್ಲಿ. ಸ್ವಾಮಿ, ನೀವು ಕನ್ನಡದ ಅಧಿಕಾರಿಗಳು, ಕನ್ನಡವನ್ನು ಬೆಳ್ಸೋದಕ್ಕೆ ಹೋಗ್ತಾ ಇರೋರು, ಕನ್ನಡದಲ್ಲಿ ನೀವು ಆಡಳಿತವನ್ನು ಮಾಡುವಂತವರು, ನೀವು ಎಷ್ಟು ಜನ ಕನ್ನಡದಲ್ಲಿ ಸಹಿ ಮಾಡ್ತೀರಿ? ನಿಮಗೆ ಆಶ್ಚರ್ಯ ಆಗ್ಬಹುದು! ಅರವತ್ತೈದು ಜನರಲ್ಲಿ ಇಬ್ರು ಕೈ ಎತ್ತುದ್ರು! ನಾನ್ ಹೇಳ್ದೆ; ಇದು ನಮ್ಮ ಕನ್ನಡಾಭಿಮಾನ! ಯಾರ್ ನೀವು? ನೀವ್ಯಾರು? ಕನ್ನಡದ ಅಧಿಕಾರಿಗಳು. ನೀವು ಕನ್ನಡವನ್ನ ಮುಂದೆ ಉಳ್ಸೋರು. ಶ್ರೀಸಾಮಾನ್ಯರ ಜೊತೆ ನೀವು ಮಾತ್ನಾಡೋ ಅಂತವ್ರು. ಶ್ರೀಸಾಮಾನ್ಯರಿಗೆ ನಮ್ಮ ಕಾನೂನಿನ ಅರಿವನ್ನ ಮಾಡ್ಕೊಡುವಂತವ್ರು. ನಮ್ಮ ಅಸ್ಮಿತೆ ಏನು? ಕನ್ನಡ. ಕನ್ನಡದ ಅಸ್ಮಿತೆ ಅಂದ್ರೆ; ನಾನು ಕನ್ನಡದಲ್ಲಿ ಸಹಿ ಮಾಡ್ಬೇಕು. ನಿಜ ಸಹಿ ಅದು ವೈಯಕ್ತಿಕ. ಆದರೆ ಯಾವತ್ತೋ ಮಾಡಿದಂತದನ್ನು ನಾವು ಇವತ್ತು ಪಾಲಿಸುವ ಅಗತ್ಯ ಇಲ್ಲ. ಇವತ್ತು ನಮ್ಮ ಅಸ್ಮಿತೆ ಏನಂದ್ರೆ ನಾನು ಅಂದ್ರೆ ಕನ್ನಡ, ಕನ್ನಡ ಅಂದ್ರೆ ನಾನು. ನಾನು ಎಂದರೆ ಇದು ಅಹಂಕಾರವಲ್ಲ. ಕನ್ನಡ ನನ್ನದು, ಅದನ್ನು ನಾನು ಯಾವತ್ತೂ ಕೈ ಹಿಡಿಬೇಕು ಅಂತ. ಇದು, ಪಾಲಿಸ್ಬೇಕಾದಂತದ್ದು. ಏಕೆಂದರೆ ನೀವು ಕನ್ನಡ ಅಧಿಕಾರಿಗಳು, ನೀವು ನನಗೆ ಒಂದು ಆದೇಶ ಮಾಡ್ಕೊಡ್ತೀರಿ, ನನ್ನಂಥ ಶ್ರೀಸಾಮಾನ್ಯನಿಗೆ ಆ ಆದೇಶದಲ್ಲಿ ಕನ್ನಡದ ಸಹಿ ಇರ್ಬೇಕು, ಹೀಗೆ ನಾನು ಹೇಳಿದ್ದೆ.
ನಿಮಗೆ ಗೊತ್ತಿರ್ಬೇಕು ಎಂ ಜಿ ರಾಮಚಂದ್ರನ್ ಅಂತ ತಮಿಳಿನ ನಟರು, ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದಂಥೋರು. ಒಬ್ಬ ಐ.ಎ.ಎಸ್ ಆಫೀಸರ್, ಅವ್ರತ್ರ ಒಂದು ಟಿಪ್ಪಣಿಯನ್ನ ತೆಗೆದುಕೊಂಡು ಹೋದ್ನಂತೆ. ಆ ಟಿಪ್ಪಣಿ ಇಂಗ್ಲಿಷ್ನಲ್ಲಿತ್ತು. ಅವ್ರು ಹೇಳಿದ್ರಂತೆ “ನೀನು ಟಿಪ್ಪಣಿಯನ್ನ ಇಂಗ್ಲಿಷ್ನಲ್ಲಿ ಮಾಡಿದೀಯ, ನೀನು ಐ.ಎ.ಎಸ್ ಅಧಿಕಾರಿ, ಒಪ್ಕೋತ್ತೀನಿ, ನನಗೆ ಅದ್ನ ತಮಿಳಿನಲ್ಲಿ ಮಾಡ್ಕೊಂಡ್ ಬಾ ಅವಾಗ್ ಮಾತ್ರ ನಾನ್ ಸಹಿ ಹಾಕ್ತೀನಿ”. ಇದು ನಾವು ಪಾಲಿಸ್ಬೇಕಾದುದು. ಜೀವನದಲ್ಲಿ ಕನ್ನಡ ಅಂದ್ರೆ ಜೀವನದಲ್ಲಿ ಕನ್ನಡವನ್ನ ನಾವು ಎಷ್ಟು ಅನುಷ್ಠಾನ ಮಾಡ್ತೀವಿ ಅನ್ನುವಂತದ್ದು. ಅದು ಅಧಿಕಾರದಲ್ಲಿರಬಹುದು, ರಾಜಕಾರಣದಲ್ಲಿರಬಹುದು ಅಥವಾ ಆಡಳಿತ ವ್ಯವಸ್ಥೆಯಲ್ಲಿರಬಹುದು.
ಸ್ನೇಹಿತರೇ, ನಾನು ಹಿಂದೆ ಪ್ರಸ್ತಾಪಿಸಿದ ಹಾಗೆ ಒಂದು ಪದ್ಯವನ್ನು ಹೇಳ್ತೀನಿ. ಅದೇನೆಂದರೆ ಲಕ್ಷ್ಮೀಧರ ಅನ್ನೋ ಅಂಥವನು ಮಂತ್ರಿಯಾಗಿದ್ದಾನೆ. ವಿಜಯನಗರ ಕಾಲ್ದಲ್ಲಿ. ದೇವರಾಯನ(೧೪೦೬-೨೨) ಕಾಲ್ದಲ್ಲಿ ಅವನು ಮಂತ್ರಿ ಆಗಿದ್ದ. ಮಂತ್ರಿಯಾಗಿ ಜನಾನುರಾಗಿಯಾದಂತಹ, ಜನಮುಖಿಯಾದಂತಹ ಕೆಲಸಗಳನ್ನು ಅವ್ನು ಮಾಡಿದ್ದ. ಬೇಕಾದಷ್ಟು ಮಾಡಿದ್ದ. ಆದರೆ ಆ ಮಂತ್ರಿ ಆದ್ನಲ್ಲ! ಅದು ಯಾವ ರೀತಿ ಆದ? ಯಾವ ಆಶಯದಿಂದಾದ? ಆತನ ತಾಯಿ ಅವ್ನಿಗೆ ಚಿಕ್ಕ ಮಗುವಾಗಿದ್ದಾಗ ಹಾಲೂಡ್ಬೇಕಾದ್ರೆ, ಅವಳು ಅವ್ನ ಕಿವಿಯಲ್ಲಿ ಹೇಳ್ತಾ ಇದ್ಲಂತೆ; ಅದು ಏನು ಅಂತ ಹೇಳ್ಬಿಡ್ತೀನಿ; ನೀವೂ ಕೇಳಿ. ನಮ್ಮ ಸಂಸ್ಕೃತಿ ಏನು ಅನ್ನುವಂತದ್ದು ತಮಗೂ ಅರ್ಥ ಆಗುತ್ತೆ. ಆ ತಾಯಿ ಆಸೆ ಪಟ್ಲು, ತನ್ನ ಮಗ ಮಂತ್ರಿಯಾಗ್ಬೇಕು ಅಂತ, ಜನಹಿತ ಕಾರ್ಯಗಳನ್ನು ಮಾಡ್ಬೇಕು ಅಂತ. ಇವತ್ತು, ಏನಾಗ್ಬೇಕು ಅಂತ ಬಯಸ್ತಾರೆ ಅಂತ ನಿಮ್ಗೆಲ್ಲಾ ಗೊತ್ತು. ನಮ್ಮ ಸಮಾಜ ಬಯಸೋದು ಮಗ ಸಾಫ್ಟ್‌ವೇರ್ ಎಂಜಿನಿಯರ್ ಆಗ್ಬೇಕು, ಕೋಟ್ಯಾನು ಕೋಟಿ ರೂಪಾಯಿ ದುಡ್ ತರ್ಬೇಕು, ಇಲ್ಲ ರಿಯಲ್ ಎಸ್ಟೇಟ್ನಲ್ಲಿ ಕೋಟ್ಯಾನು ಕೋಟಿ ದುಡ್ ಮಾಡ್ಬೇಕು!
ಆ ತಾಯಿ ಬಯ್ಸಿದ್ದೇನು ಅಂದ್ರೆ ಸಮಾಜಮುಖಿಯಾಗಿ ನನ್ನ ಮಗ ಬದುಕ್ಬೇಕು ಅನ್ನೋವಂಥದ್ದು. ಅದು ದೊಡ್ಡ ಆಶಯ! ಅದು ಕನ್ನಡಿಗರದ್ದೂ ಹೌದು. ಆಕೆ ಹೇಳ್ತಾ ಇದ್ಲಂತೆ; ಮಗನನ್ನು ತೊಡೆಮೇಲ್ ಹಾಕ್ಕೊಂಡು ಹಾಲೂಡ್ತಾ ಇದ್ಲು, ಆ ಹಾಲೂಡ್ಬೇಕಾದ್ರೆ ಆಕೆ ಹೇಳ್ತಾ ಇದ್ಲು; “ಕೆರೆಯಂ ಕಟ್ಟಿಸು” ಎಂಥಾ ಜನೋಪಕಾರ್ಯ ಸ್ವಾಮಿ ಕೆರೆ ಕಟ್ಸೋದು! ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ಕೆರೆ ಕಟ್ಟಿಸಪ್ಪ – ಬಾವಿಯನ್ನ ತೋಡಿಸು, ದೇವಾಗಾರಮಮ್ ಮಾಡಿಸು – ದೇವಾಲಯಗಳನ್ನು ಕಟ್ಟಿಸಪ್ಪ. ನಿಮ್ಗೆ ಗೊತ್ತಿರ್ಬಹುದು ಕರ್ನಾಟಕದಲ್ಲಿ ಇರುವಷ್ಟು ದೇವಾಲಯಗಳು, ತಮಿಳುನಾಡ್ನಲ್ಲಿ ಇರುವಷ್ಟು ದೇವಾಲಯಗಳು ಭಾರತದ ಬೇರೆ ಕಡೆ ಇಲ್ಲ. ಒಂದು ಧರ್ಮ, ಧರ್ಮ ಅಂದ್ರೆ ಮನುಷ್ಯ ಧರ್ಮ. ಮನುಷ್ಯ ಒಬ್ಬ ಮನುಷ್ಯನಾಗಿ ಬದುಕ್ಬೇಕು. ಪುರಂದರದಾಸರು ಒಂದು ಕಡೆ ಹೇಳ್ತಾರೆ “ಅರ್ಥದಲ್ಲೇ ಮನಸು ಆಸಕ್ತವಾಗಿದ್ದು ವ್ಯರ್ಥವಾಯಿತು ಜೀವ ವಸುಧೆಯೊಳಗೆ” ಅಯ್ಯೋ! ಏನ್ರೀ ದುಡ್ಡು ದುಡ್ಡು ಅಂತ ಅರ್ಥದಲ್ಲೇ ಮನಸು ಆಸಕ್ತವಾಗಿದ್ದು ವ್ಯರ್ಥವಾಯಿತು ಜೀವ ವಸುಧೆಯೊಳಗೆ, ಭೂಮಿ ಮೇಲೆ ಜೀವ ವ್ಯರ್ಥವಾಯ್ತಂತೆ. ಅಂದ್ರೆ ಹಣ, ನಿಮ್ಗೆ ಗೊತ್ತಿದೆ. ಸ್ನೇಹಿತ್ರೇ, ಅದ್ನೆಲ್ಲಾ ಹೇಳೋಕ್ ಹೋಗೊಲ್ಲ. ಇವತ್ ಏನಿದೆ? ಹಣದ್ ಬಗ್ಗೆ ಅಪಾರ ವ್ಯಾಮೋಹ. ಮನುಷ್ಯತ್ವವನ್ನೇ ಕೊಲ್ಲುವಷ್ಟು ಒಂದು ವಿಕೃತವಾದ ರೋಗವಾಗಿ ಅದು ನಮ್ಮ ಸಮಾಜವನ್ನು ಕಾಡ್ತಾ ಇದೆ.ಆ ವಿಚಾರಕ್ಕೆ ನಾನ್ ಹೋಗಲ್ಲ.
ಕೆರೆಯಂ ಕಟ್ಟಿಸು, ಬಾವಿಯಂ ಸವೆಸು ದೇವಾಗಾರಮಮ್ ಮಾಡಿಸು, ಅಜ್ಜರೆಯೊಳ್ ಸಿಲ್ಕಿದ – ಕಷ್ಟದಲ್ಲಿ ಸಿಲ್ಕಿದ ಅನಾಥರಂ ಬಿಡಿಸು, ಒಬ್ಬ ಮಂತ್ರಿ ಏನ್ ಮಾಡ್ಬೇಕು, ಅಜ್ಜರೆಯಲ್ಲಿ (ಕಷ್ಟದಲ್ಲಿ) ಸಿಲುಕಿದ ಅನಾಥರನ್ನು ಕಾಪಾಡಬೇಕು. ಮಿತ್ರರ್ಗೆ ಇಂಬುಕೈ – ಮಿತ್ರರಿಗೆ ಆಶ್ರಯ ಕೊಡು, ನಂಬಿದವರಿಗೆ ಎರವಟ್ಟಾಗಿರು – ಅಂದ್ರೆ ನಂಬಿದವರಿಗೆ ನಂಬಿಕಸ್ತನಾಗಿರು ನಂಬಿಕೆ ದ್ರೋಹಿ ಆಗ್ಬೇಡ. ಶಿಷ್ಟರಂ ಪೊರೆ, ಇದು ಬಹಳ ಮುಖ್ಯವಾದಂತ ಮಾತು ನನಗೆ. ಶಿಷ್ಟರನ್ನು ಕಾಪಾಡು ದುಷ್ಟರನ್ನಲ್ಲ. ನಮಿಗ್ ಗೊತ್ತಿದೆ. ಇವತ್ ಯಾವ್ ರೀತಿ ಇದೆ ನಮ್ಮ ಒಟ್ಟು ವ್ಯವಸ್ಥೆ? ಶಿಷ್ಟರಂ ಪೊರೆ ಒಳ್ಳೆಯವ್ರನ್ನ ಕಾಪಾಡಪ್ಪ. ಒಬ್ಬ ಮಂತ್ರಿ ಕೆಲ್ಸ ಏನು? ಒಳ್ಳೆಯವ್ರನ್ನ ಕಾಪಾಡುವಂತದ್ದು. ಶಿಷ್ಟರನ್ನ ಪೊರೆ; ಎಂದು ಇಂಥೆಲ್ಲವಂ – ಇಷ್ಟೆಲ್ಲವನ್ನು ಹಿಂದೆ ತಾಯಿ ಎರೆದಳ್ ಪಾಲೆರೆವಂದು – ತಾಯಿ ಹಾಲನ್ನು ಉಣಿಸ್ಬೇಕಾದ್ರೆ ಈ ರೀತಿ ಹೇಳಿ; ತೊಟ್ಟು ಕಿವಿಯೊಳ್ – ಕಿವಿಯಲ್ಲಿ ಲಕ್ಷ್ಮೀಧರ ಎಂಬ ಮಗುವಿಗೆ ಹೇಳಿದ್ಲಂತೆ.
ಇದು ಏನನ್ನ ಸೂಚಿಸುತ್ತೆ ಇದು. ಒಬ್ಬ ಮಂತ್ರಿ, ಇವತ್ತಿನ್ದಲ್ಲ ಇದು ೧೫ ನೆಯ ಶತಮಾನದ್ದು. ವಿಜಯನಗರ ಸಾಮ್ರಾಜ್ಯದ ಅತ್ಯುನ್ನತಿಯ ಕಾಲ್ದಲ್ಲಿ ಇದ್ದಂತದು. ಒಬ್ಬ ತಾಯಿಯ ಆಶಯ ಏನು? ಒಬ್ಬ ಮಗ ಹೆಂಗಿರ್ಬೇಕು ಒಬ್ಬ ಮಂತ್ರಿ ಆದ್ರೆ ಅವ್ನು ಯಾವ ರೀತಿ ಸಮಾಜನ ನೋಡ್ಬೇಕು, ಅಂತದೊಂದು ದೊಡ್ಡ ಆಶಯವನ್ನು ಆ ತಾಯಿ ಇಟ್ಕೊಂಡಿದ್ದಾಳೆ. ಎಷ್ಟ್ಜನ ತಾಯಂದ್ರು ಇದನ್ ಬಯಸ್ತಾರೆ ಇವತ್ತು? ಇದು ಪ್ರಶ್ನೆ. ಒಬ್ಬ ವ್ಯಕ್ತಿ ಸಮಾಜಮುಖಿಯಾಗಿ ಬದುಕ್ಬೇಕು. ಕೆರೆ ಕಟ್ಸು, ಬಾವಿ ತೋಡ್ಸು, ಬಡವ್ರಿಗೆ ಸಹಾಯ ಮಾಡು, ಕಷ್ಟದಲ್ಲಿ ಇರೋರ್ನ ನೆನಿ, ಮಿತ್ರರಿಗೆ ಆಶ್ರಯವಾಗಿರು, ಶಿಷ್ಟರನ್ನ ಪೊರೆ – ಒಳ್ಳೆಯವ್ರನ್ನ ಸಲಹು. ಒಳ್ಳೆಯವ್ರಿಗೆ ಒಂದು ಸಾಂತ್ವನ ಹೇಳು. ಈಗಾಗ್ಲೆ ಲಕ್ಷ್ಮೀಧರ ಮಂತ್ರಿಯಾಗಿ ಈ ಕೆಲ್ಸನ್ನೆಲ್ಲಾ ಮಾಡಿದ್ದಾನೆ. ಆದ್ರೆ ಈ ಕೆಲ್ಸ ಎಲ್ಲಾ ಮಾಡ್ಬೇಕಾದ್ರೆ ತಾಯಿಯ ಒಂದು ಆಶಯ, ಅವಳ ಅಂತರಂಗದೊಂದು ಅಭೀಪ್ಸೆ, ಆ ಅಭೀಪ್ಸೆ ಇವತ್ತು ಲಕ್ಷ್ಮೀಧರನನ್ನು ಒಬ್ಬ ಒಳ್ಳೆಯ ಮಂತ್ರಿಯನ್ನಾಗಿ ಮಾಡಿದೆ. ಇಂಥವರು ನಮ್ಮ ಸಮಾಜಕ್ಕೆ ಬೇಕಾದ ಮಂತ್ರಿ ಮಹೋದಯರು.ಈಗಿನ ಸಮಕಾಲೀನ ಮಂತ್ರಿಮಹೋದಯರನ್ನು ನೆನಪು ಮಾಡಿಕೊಳ್ಳಿ, ಈಗ ಏನಿದೆ? ಏನೂ ಇಲ್ಲ. ನಮ್ಮ ಪರಂಪರೆ ಎಷ್ಟು ದೊಡ್ದು. ನಮ್ಮ ಪರಂಪರೆಯ ಪಾಲುದಾರರು ನಾವು, ಆ ಪಾಲುದಾರರಾದ್ರೆ ನಾವು ಅದನ್ನೆಲ್ಲಾ ಆ ಪರಂಪರೆ ಇಂದ್ಲೆ ಗಳಿಸ್ಕೊಂಡು ಬರ್ಬೇಕು. ನಮ್ಮ ಮಕ್ಕಳನ್ನ ಸಮಾಜಮುಖಿಯಾಗಿ ಬೆಳಿಸ್ಬೇಕು.
ಕನ್ನಡ ಅನ್ನುವಂತದ್ದು ಕೇವಲ ನವೆಂಬರ್ನಲ್ಲಿ ಒಂದು ಸಮಾರಂಭವನ್ನ ಮಾಡಿ ಮುಗಿಸುವಂಥದಲ್ಲ. ಆ ಸಮಾರಂಭದ ಮೂಲಕ ನಾವು ಒಂದು ಕನ್ನಡದ ದೀಕ್ಷೆಯನ್ನ ತೊಡ್ಬೇಕಾಗುತ್ತೆ. ನಾನು ಯಾವಾಗ್ಲೂ ಹೇಳ್ತಿರ್ತೀನಿ; ಮೊದ್ಲು ನಾನು ಭಾರತೀಯ, ಆಮೇಲೆ ಕನ್ನಡಿಗ. ಕುವೆಂಪು ಅವ್ರೆ ಒಂದು ಮಾತ್ ಹೇಳಿದ್ದಾರೆ; “ನೂರು ದೇವರನೆಲ್ಲ ನೂಕಾಚೆ ದೂರ ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರ”. ನೋಡಿ, ಇದು ಕುವೆಂಪು ಅವ್ರ ಮಾತು. ದೇವ್ರು, ಧರ್ಮ ಅನ್ನೋದ್ ಇರ್ಲಿ. ಇವತ್ತು ಭಾರತಾಂಬೆಯೇ ನಮಗೆ ದೇವರು. ಇವತ್ತು ಕರ್ನಾಟಕ ಅಂದರೆ ನಾನೂ ಅದನ್ನೇ ಹೇಳ್ತೀನಿ. “ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ” ಇದು ಕುವೆಂಪು ಹೇಳಿದ್ ಮಂತ್ರ. ಅಂದ್ರೆ ಈ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ಭಾರತದ ಜನನಿಯ ತನುಜಾತೆ.
ಕನ್ನಡ, ಕರ್ನಾಟಕ ಇದಕ್ಕೊಂದು ದೊಡ್ಡ ಪರಂಪರೆ ಇದೆ. ಆ ಪರಂಪರೆಯನ್ನ ನಾವು ಉಳಿಸ್ಬೇಕು. ಕನ್ನಡ ಅನ್ನುವಂತದ್ದು ಇವತ್ತಿದ್ದು ನಾಳೆ ಹೋಗುವಂತದ್ದಲ್ಲ. ಅಯ್ಯೋ ಬಿಡಿ, ಏನ್ ಕನ್ನಡ ಕಲಿದಿದ್ರು ಆಗುತ್ತೆ ಅನ್ನುವಂಥದ್ದಲ್ಲ. ನಮ್ಮಲ್ಲಿ ಸಭೆ ಸಮಾರಂಭಗಳನ್ನ ನಡಿಸ್ತೀವಿ, ತಾವು ಎಲ್ಲಾ ಭಾಗವಹಿಸಿರ್ತೀರಿ ಊಟಕ್ಕೆ ಕೂರಿಸ್ತಾರೆ, ಊಟಕ್ಕೆ ಕೂರ್ಸಿ ಎಲೆ ಹಾಕಿ ಎಲ್ಲಾ ಆದ್ಮೇಲೆ ರೈಸ್ ಆಕ್ಲಾ ಅಂತಾರೆ. ಎಂಥಾ ಅಸಹ್ಯದ ಒಂದ್ ಪದ. ರೈಸ್ ಅಂದ್ರೆ ಅಕ್ಕಿ ರೀ. ಅನ್ನ, ಕನ್ನಡದ ಅನ್ನವನ್ನ ರೈಸ್ ಯಾಕ್ ಮಾಡ್ತೀರಿ ನೀವು? ಯಾಕ್ ಮಾಡ್ತೀರಿ ಅಂದ್ರೆ; ಇಂಗ್ಲಿಷ್ ಅಂದ್ರೆ ಏನೋ ಪ್ರತಿಷ್ಠೆ, ಅದಕ್ಕೆ. ಇದು ಸಣ್ಣ ವಿಚಾರ ಇರ್ಬೋದು. ನಾನ್ ಹೇಳುವಂತಹ ವಿಚಾರ ಅತ್ಯಂತ ಸಣ್ಣದಿರಬಹುದು. ಗೆಳೆಯರೆ ಇದು ಸಣ್ಣ ವಿಚಾರ ಅಲ್ಲ. ಕನ್ನಡ ಅಂದ್ರೆ ಎದೆ ತುಂಬ್ಕೋಬೇಕು. ರೈಸ್ ಹಾಕ್ಲ ಸರ್ ಅಂದಾಗ ಏಯ್ ಏನಪ್ಪ ನೀನು, ನನಗೆ, ಅಕ್ಕಿ ಬೇಡ ಕಣೋ, ನನಗೆ ಅನ್ನ ಹಾಕಪ್ಪ, ಅನ್ನ ಕನ್ನಡದ್ ಪದ, ಅನ್ನ ಹಾಕು ಎಂದು ಹೇಳಿ. ಕೂಳು ಅನ್ನೋ ಪದ ಇತ್ತು ಅದು ಈಗ ತಪ್ಪು ಅರ್ಥ ಕೊಡ್ತಾ ಇದೆ. ಅದು ಬೇಡ ಬಿಡಿ. ಬೋನಾ ಅನ್ನೋ ಪದ ಇದೆ, ನೀವು ಕೇಳಿದ್ದೀರೋ ಇಲ್ವೋ ಗೊತ್ತಿಲ್ಲ. ಹಳ್ಳಿಯಲ್ಲಿ ಹಾಲು ಅನ್ನ ಉಣ್ಣೋದು ಸಂಮೃದ್ಧಿಯ ಸಂಕೇತ; ಇದು ಜನಪದ ಸಂಸ್ಕೃತಿಯ ಸಂಮೃದ್ಧಿಯ ಸಂಕೇತ. ಇಂಗ್ಲಿಷ್ ಬಗ್ಗೆ ನಮ್ಗೆ ವ್ಯಾಮೋಹ ಇದೆ. ಅಂದ್ರೆ ಇಂಗ್ಲಿಷ್ನಾ ಗೆದ್ದುಬಿಟ್ರೆ ಇಡೀ ಜಗತ್ನಲ್ಲಿ ಎಲ್ಲವನ್ನೂ ಗೆದ್ಬಿಡ್ಬಹುದು ಅಂತ ಭ್ರಮೆ. ಖಂಡಿತ ಇಲ್ಲ, ಸಾಧ್ಯನೂ ಇಲ್ಲ. ಇಂಗ್ಲಿಷು ನೂರಾರು ಭಾಷೆಗಳಿಂದ ಅದರ ಸಂಪತ್ತನ್ನು ತುಂಬಿಕೊಂಡಿದೆ, ಅದರ ಪದಗಳನ್ನು ತುಂಬ್ಕೊಂಡಿದೆ. ಕನ್ನಡ ಏನ್ ಕಡಿಮೆ ಅಲ್ಲ. ಪ್ರಸಿದ್ಧ ಸಾಹಿತಿ ಯು. ಆರ್ ಅನಂತಮೂರ್ತಿ ಅವರು ಒಂದು ಮಾತನ್ನ ಹೇಳೋರು ಅದೇನಂದ್ರೆ ಕನ್ನಡಕ್ಕೆ ಕೊಂಬಿದೆ ಅಂತ. ಏನ್ ಕೊಂಬು ಅಂದ್ರೆ? ಈಗ ಪೊಲೀಸ್ ಅನ್ನುವ ಪದಕ್ಕೆ ‘ಉ’ ಸೇರಿಸ್ಬಿಟ್ರೆ ಪೊಲೀಸು, ಕನ್ನಡ ಪದ ಆಗೋಯ್ತು, ಆರಕ್ಷಕ ಠಾಣೆ ಅಂಥ ಬೇಕಾಗಿಲ್ಲ ನಮಗೆ. ಪೊಲೀಸ್ ಸ್ಟೇಷನ್ ಅರ್ಥ ಆಗುತ್ತೆ. ಇಂಗ್ಲಿಷ್’ನ ಎಲ್ಲವನ್ನೂ ನಿರಾಕರಿಸ್ಬೇಕಾಗಿಲ್ಲ. ಆಮೇಲೆ ಅಂಧಾಭಿಮಾನ ಬೇಡ ನಮ್ಗೆ, ಕನ್ನಡಕ್ಕೆ. ಕನ್ನಡ ನಮ್ದು ಅನ್ನುವ ಅಭಿಮಾನ ಬೇಕು ಆದ್ರೆ ಅಂಧಾಭಿಮಾನ ಬೇಡ. ಇಂತಹ ಸಣ್ಣ ವಿಚಾರಗಳನ್ನು ಕೂಡ ನಾವು ನಮ್ಮ ಜೀವನದಲ್ಲಿ ಆಲೋಚನೆ ಮಾಡ್ಬೇಕು, ಅಳವಡಿಸ್ಕೋಬೇಕು. ಹಾಗೆ ಅಳವಡಿಸ್ಕಂಡ್ರೆ ಮಾತ್ರ ಕನ್ನಡ ನಮ್ದು ಅನ್ಸುತ್ತೆ. ನಾನು ಕನ್ನಡದಿಂದ ಏನ್ ಪಡ್ದೆ ಅನ್ನುವಂತದ್ದು. ಕನ್ನಡವನ್ನು ಪಡಿಬೇಕಾದ್ರೆ ಕನ್ನಡ ಸಾಹಿತ್ಯ ಸಂಸ್ಕೃತಿ, ಅದ್ರ ಬಗ್ಗೆ ತಿಳ್ಕೋಬೇಕು, ಓದ್ಬೇಕು, ಓದುವಂಥ ಒಂದು ಅವಕಾಶ ಸುಯೋಗ ನೀವು ಸೃಷ್ಟಿಸಿಕೊಳ್ಳಬೇಕು.

ನೀವ್ ಯಾರೇ ಇರ್ಬಹುದು ನಾನ್ ಹೇಳ್ತೀನಿ; ಆಯ್ತು, ನೀವು ರಾಜ್ಯೋತ್ಸವ ಆಚರಿಸ್ತೀರಿ, ವಿಜೃಂಭಣೆಯಿಂದ ಆಚರಿಸ್ತೀರಿ. ಹಾರ ತುರಾಯಿ ಶಾಲು ಎಲ್ಲಾ ಹಾಕ್ತೀರಿ, ಸಂತೋಷ. ನಾನು ನನ್ನ ಮಿತ್ರರಿಗೆ ಹೇಳ್ತೀನಿ ಎಷ್ಟು ಜನ ತಿಂಗಳಿಗೊಂದ್ ಕನ್ನಡ ಪುಸ್ತಕ ತಕ್ಕೊಳ್ತೀರಿ? ನೋಡಿ, ಪುಸ್ತಕ ಅಂದ್ರೆ ಜ್ಞಾನ. ಆ ಜ್ಞಾನ ಪಡಿಬೇಕಾದ್ರೆ ನಾವು ಓದುವಂತದ್ದು. ನಾವು ಪುಸ್ತಕವನ್ನು ಕೊಂಡು ಓದುವಂತದ್ದು. ಈಗ ನೀವು ಎಲ್ಲವನ್ನು ಕೊಳ್ಳಿ ಅಂತ ನಾನ್ ಹೇಳಲ್ಲ. ಆದ್ರೆ ತಿಂಗಳಲ್ಲಿ ಒಂದು ಪುಸ್ತಕ ಹತ್ತರೂಪಾಯಿಂದು ಕೊಳ್ಳಿ. ಆ ಜ್ಞಾನನ ಸಂಪಾದಿಸಬೇಕಾದ್ರೆ ಅದ್ಬೇಕು ಈಗ. ಅನೇಕ್ರು ಇಲ್ಲಿ ಚಾಲಕ್ರು ಇದ್ದೀರಿ. ನೀವು ಆ ಚಾಲಕರಾಗಿದ್ದಾಗ ನೀವು ಯಾವ್ದೋ ಸ್ಥಳಕ್ಕೆ ಜನರನ್ನ ಕರ್ಕೊಂಡು ಹೋಗ್ತೀರಿ, ಬಿಡ್ತೀರಿ. ನಿಮ್ಮ ಉಳಿದ ಸಮಯವನ್ನ ಏನ್ ಮಾಡ್ತೀರಿ? ವಾಟ್ಸ್ ಆ?ಯಪ್ ಮಾಡ್ಕೊಂಡ್ ಕಳಿತ್ತೀರಿ. ವೇಸ್ಟ್, ನನ್ನ ದೃಷ್ಟಿನಲ್ಲಿ, ಡಸ್ಟ್ಬಿನ್ ಅದು. ವ್ಯಾಟ್ಸ್ ಆ?ಯಪ್ ಉಪಯೋಗ ಇದೆ. ಉಪಯೋಗಕ್ಕಿಂತ ದುರುಪಯೋಗ ಜಾಸ್ತಿ ಇದೆ. ಅಂತ ಹೊತ್ನಲ್ಲಿ ಒಂದು ಪುಸ್ತಕ ಹಿಡ್ಕೊಳ್ಳಿ, ಓದಿ. ನಿಮಗೆ ಜ್ಞಾನವೂ ಆಗುತ್ತೆ, ನಿಮ್ಗೂ ಅದು ಮನನ ಆಗುತ್ತೆ.ತಾವು ಇಂತ ಕೆಲಸವನ್ನ ಮಾಡ್ಬೇಕು.
ಕನ್ನಡ ಅದು ನಮ್ಮ ಅಸ್ಮಿತೆ, ನಮ್ದು ಅದು. ನಾವು ಕೈ ಹಿಡಿದಿದ್ರೆ ಗೆಳೆಯರೇ ಯಾರೂ ಕೈ ಹಿಡಿಯಲ್ಲ. ಇದು ಬರಿ ಕೇವಲ ರಾಜ್ಯೋತ್ಸವದ ದಿನ ಅಥವಾ ರಾಜ್ಯೋತ್ಸವದ ಸಮಾರಂಭದಲ್ಲಿ ಮಾತ್ನಾಡುವಂತದಲ್ಲ. ನಮ್ಮ ಮನೆಯಲ್ಲಿ ಕನ್ನಡ ಇರ್ಬೇಕು. ನಮ್ಮ ಮನೆಯಲ್ಲಿ ಕನ್ನಡ ಇಲ್ಲ ಅಡುಗೆ ಮನೆ ‘ಕಿಚನ್’ ಆಗಿದೆ. ಅದು ಮತ್ತೆ ಅಡುಗೆ ಮನೆ ಆಗ್ಲಿ.
ಸ್ನೇಹಿತರೇ ಒಬ್ಬ ಅರಮನೆ ನೋಡಕ್ ಬರ್ತಾನೆ, ಅವನ್ಗೆ ಏನೂ ಗೊತ್ತಿರೋದಿಲ್ಲ ಅದ್ರ ಬಗ್ಗೆ. ನೀವ್ ತಿಳ್ಕೊಂಡಿರ್ಬೇಕು. ಅಷ್ಟೋ ಇಷ್ಟೋ ವಿಷಯ ಅವನ್ಗೆ ಹೇಳ್ಬೇಕು. ಏಲ್ರೂ ಗೈಡ್ ಆಗ್ಬೇಕಾಗಿಲ್ಲ. ಗೈಡ್ ಆಗ್ಬೇಕಾದ್ರೆ ಸಿಕ್ಕಾಬಟ್ಟೆ ಓದ್ಕಂಡಿರ್ಬೇಕು. ಆದ್ರೆ ಅವ್ನಿಗೆ ಒಂದು ಪ್ರಾಮಾಣಿಕವಾದಂತಹ ಒಂದ್ ವಿಚಾರವನ್ನ ಮುಟ್ಸೋ ಅಂಗಿರ್ಬೇಕು. ಇದು ನೀವ್ ಮಾಡೋವಂತ ಕೆಲ್ಸ. ಇದು ನನ್ನ ಕೆಲಸಕ್ಕಿಂತ ದೊಡ್ಡ ಕೆಲ್ಸ ಅಂತ ನಾನ್ ಅನ್ಕಂಡೀದ್ದೀನಿ. ನಾನ್ ಮೊದ್ಲೇ ಹೇಳ್ದೆ, ಕನ್ನಡದ್ ವಿಚಾರದಲ್ಲಿ ಎಲ್ಲ ಕನ್ನಡಿಗರೂ ಕನ್ನಡವನ್ನ ಎತ್ತಿ ಹಿಡಿಯುವಂತವ್ರು. ನೀವು ಎತ್ತಿ ಹಿಡಿಯುವಂತದ್ದನ್ನ ನಾವು ಎತ್ತಿ ಹಿಡಿಯುವುದಕ್ಕಾಗಲ್ಲ. ನೀವು ಪ್ರವಾಸಿಯನ್ನ ಹಂಪಿಗ್ ಕರ್ಕೊಂಡ್ ಹೋಗ್ತೀರಿ, ಅವ್ರು ಕೇಳ್ತಾರೆ ಏನಪ್ಪ ಹಂಪಿ ವಿಶೇಷ ಅಂಥ. ಸ್ವಾಮಿ ಹಂಪಿ ಎಂಥಾ ವೈಭವವಿತ್ತು ಒಂದ್ ಕಾಲಕ್ಕೆ. ಇದನ್ನ ಒಂದ್ ವಾರ ಆದ್ರೂ ನೋಡ್ಬೇಕಿತ್ತು, ನಿಮ್ಗೆ ಎಷ್ಟು ಸಮಯ ಇದೆ ಅಷ್ಟ್ರಲ್ಲಿ ನೋಡಿ ಅಂದ್ರೆ, ಅವ್ರ ದಿಕ್ ತಪ್ಪಿಸ್ದೆ ದಿಕ್ಸೂಚಿಯಾಗಿ ತಾವು ಕೆಲ್ಸ ಮಾಡ್ಬೇಕು. ದಿಕ್ಸೂಚಿಯಾಗ್ ಕೆಲ್ಸ ಮಾಡಿದ್ರೆ ನಿಮ್ಗೂ ತೃಪ್ತಿ ಮತ್ತೆ ಕನ್ನಡಿಗ್ರು ಅನ್ನೋ ಹೆಮ್ಮೆ ನಮ್ಗೂ ಇರುತ್ತೆ. ಆದ್ರಿಂದ ಇವತ್ತಿನ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಇದು ಸಣ್ಣದು ಅನ್ಸಬೋದು ನಿಮ್ಗೆ, ಇಂಥ ವಿಚಾರದಲ್ಲೂ ಒಂಚೂರು ಆಲೋಚನೆ ನಾವು ಮಾಡೋಣ.
ಕಡೇದಾಗಿ ನಾನ್ ಒಂದ್ ಮಾತು ಹೇಳ್ಬೇಕು, ಹೆಚ್ಚು ನಾನು ವಿಲಂಬಿಸಲ್ಲ. ಒಂದು ಮನವಿ ಇದೆ ತಮಗೆ, ಆ ಮನವಿ ಏನಂದ್ರೆ, ತಾವು ತಪ್ಪಾಗಿ ಭಾವಿಸ್ಬಾರ್ದು. ನನಗೆ ಅನೇಕ ಚಾಲಕರು ಗೊತ್ತು, ನಾನು ಟ್ಯಾಕ್ಸಿ ತಕ್ಕೊಂಡ್ ಹೋಗ್ತಿರ್ತೇನೆ. ಸಮಯ ಪ್ರಜ್ಞೆ ಅನ್ನೋದು ಮೊದ್ಲನೆಯದು; ನಿಮ್ಮ ಜೀವನದಲ್ಲಿ ಸಮಯಪ್ರಜ್ಞೆ ರೂಢಿಸಿಕೊಳ್ಳಿ. ಆರ್ಗಂಟೆಗೆ ಬರ್ಬೇಕಂದ್ರೆ ಅಟ್ ದಿ ಸ್ಟ್ರೋಕ್ ಆಫ್ ದಿ ಸಿಕ್ಸ್ ನೀವು ಹಾಜರಿರಬೇಕು. ಅವ್ರು ಹನ್ನೊಂದ್ ಗಂಟೆಗ್ ಹೋಗ್ಲಿ. ನೀವು ಆರ್ಗಂಟೆಗೆ ಬನ್ನಿ ಅಂದ್ರೆ ನೀವು ಅಲ್ಲಿರ್ಬೇಕು, ಗೊಣಗ್ ಕೂಡ್ದು. ಮತ್ತೆ ವಿನಯ್ದಿಂದ ವರ್ತಿಸ್ಬೇಕು, ವಿನಯ ಅಂದ್ರೆ ಸರೆಂಡರ್ ಅಲ್ಲ, ನಿಮ್ಗೂ ಸ್ವಾಭಿಮಾನ ಇರುತ್ತೆ. ಪ್ರಯಾಣಿಕರು ಏನ್ ಹೇಳ್ತಾರೆ ಹಾಗೆ ಕೇಳುವಂತದ್ದು, ನಡೆಯುವುದು ನಿಮ್ಮ ಕರ್ತವ್ಯದ ಭಾಗ. ಮತ್ತೆ ಅವರು ನಿಮ್ಗೆ ಪೇ ಮಾಡ್ತಾರೆ. ಆ ಪೇ’ನಲ್ಲಿ ಒಂದ್ ರೂಪಾಯಿನೂ ಬಿಡ್ಬೇಡಿ, ಇದು ಒಂದು.
ಎರಡನೇದು ನಾನು ಮೊದಲೇ ಹೇಳಿದ ಹಾಗೆ ಸಮಯವನ್ನು ಸುಮ್ನೆ ವಾಟ್ಸ್ ಆಪ್ನಲ್ಲಿ ಕಳೀಬೇಡಿ. ಒಂದು ಪುಸ್ತಕವನ್ನು ಎಲ್ಲಿದ್ರು ತಕ್ಕೊಂಡ್ ಹೋಗಿ, ನಿಮ್ಗೆ ಇಷ್ಟ ಬಂದದ್ದು. ಅದು ಚಲನಚಿತ್ರದ್ದೇ ಇರಬಹುದು, ಹಾಡಿನ್ ಪುಸ್ತಕ ಇರಬಹುದು ತಕ್ಕೊಂಡೋಗಿ ಓದಿ. ಸಮಯವನ್ನ ಸದ್ಭಳಕೆ ಮಾಡಿಕೊಳ್ಳಿ. ಮೂರ್ನೇದು ಬೇಸರಮಾಡ್ಕೋಬೇಡಿ ದುಶ್ಚಟಗಳಿಗೆ ದಯವಿಟ್ಟು ಬಲಿಯಾಗಬೇಡಿ. ಇದನ್ನ ತಪ್ಪಾಗಿ ತಾವು ಖಂಡಿತ ಭಾವಿಸ್ಬಾರ್ದು. ಅನೇಕ ಗೆಳೆಯರಿಗೆ ನಾನ್ ಏನ್ ಹೇಳ್ತೀನಿ ಅಂದ್ರೆ, ನೀನ್ ಏನಾದ್ರು ಒಂದು ತೆವಲನ್ನ ಮಾಡ್ತೀಯ, ಅಂಥಾ ಸಮಯದಲ್ಲಿ ನಿನ್ನ ಮಕ್ಳು ಮಡದಿಯನ್ನ ಕಣ್ಮುಂದೆ ತಕ್ಕೊಂಡ್ಬಾರಪ್ಪ. ಐನೂರುರೂಪಾಯಿ ಖರ್ಚು ಮಾಡ್ಬೇಕಾದ್ರೆ ನಿಮ್ ಕಣ್ಮುಂದೆ ನಿಮ್ ಮನೆ ತಕ್ಕೊಂಡ್ ಬಂದುಬಿಡಿ, ನೀವು ಚಟ ಬಿಟ್ಬುಡ್ತೀರಿ. ಇದನ್ ತಾವು ಮಾಡ್ಬೇಕು. ಗೆಳೆಯರೇ ಇದನ್ನ ನಾನು ಕಿವಿಮಾತು ಅಂತ ಹೇಳ್ತಾ ಇದ್ದೀನಿ, ತಪ್ಪು ಅಂತ ಹೇಳ್ತಾ ಇಲ್ಲ.
ಇವತ್ತಿನ ಕನ್ನಡವನ್ನ ನೀವು ಉಳ್ಸೋವಂತವ್ರು, ನೀವೇ ಅಂದ್ರೆ ಜನರು, ಜನಪದರು. ಕನ್ನಡ ಉಳಿಯುವಂತದ್ದು ನಿಮ್ಮಿಂದ ಅನ್ನುವಂತದ್ದು. ನಾವು ಬೌದ್ಧಿಕ ಮಟ್ಟದಲ್ಲಿ ಪುಸ್ತಕಗಳನ್ನ ಬರೀತೇವೆ, ವಿಶ್ವಕೋಶಗಳನ್ನ ಮಾಡ್ತೇವೆ. ನಿಜ ನಾನ್ ಇವತ್ ಹೇಳ್ತಾ ಇದ್ದೆ, ಕನ್ನಡದಲ್ಲಿ ನಾವು ವಿಶ್ವಕೋಶಗಳು ಅಂತ ಮಾಡ್ತಾ ಇದ್ದೇವೆ. ಇಡೀ ಭಾರತೀಯ ಭಾಷೆಗಳಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಆಗಿರುವಂತ ಕೆಲ್ಸ ಯಾವ್ದೇ ಭಾಷೇಲಿ ಆಗಿಲ್ಲ. ಕನ್ನಡ ಭಾಷೆಯಲ್ಲಿ ಮಾತ್ರ ಎಲ್ಲಾ ಪ್ರಥಮಗಳು ಇವೆ. ನಾವು ತಿಳಿಯುವಂತ, ಅದ್ನ ಬೆಳೆಸುವಂತ, ಅದ್ನ ನಮ್ಮ ಹೃದಯದಲ್ಲಿ ತುಂಬ್ಕಳೋವಂತ ಕೆಲ್ಸವನ್ನ ಮಾಡ್ಬೇಕು.

ಕುವೆಂಪು ಅವ್ರು ಹೇಳಿದ್ರು ‘ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡ ಗೋವಿನ ಓ ಮುದ್ದಿನ ಕರು ಕನ್ನಡತನವೊಂದಿದ್ದರೆ ನೀನೆಮಗೆ ಕಲ್ಪತರು’. ಧನ್ಯವಾದಗಳು, ನಮಸ್ಕಾರ.
-ಪ್ರೊ. ಹಾ.ತಿ ಕೃಷ್ಣೇಗೌಡ
ವಿಶ್ವಕೋಶ ವಿಭಾಗ ಗೌರವ ಸಂಪಾದಕರು,
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
ಮಾನಸ ಗಂಗೋತ್ರಿ ಮೈಸೂರು.
ದೂ:ಸಂಖ್ಯೆ – 8277 423989