ಸುಬ್ಬಯ್ಯನಾಯ್ಡು-ಸತೀ ಸುಲೋಚನ ತ್ರಿಪುರಾಂಭ
ಇಡೀಭಾರತದಲ್ಲೆ ಗ್ಲಿಸರಿನ್ ಬಳಸದೆ ಕಣ್ಣೀರಿನ ದೃಶ್ಯ ಚಿತ್ರೀಕರಿಸಿದ ಚೊಚ್ಚಲಚಿತ್ರ ಕನ್ನಡದ ಮೊಟ್ಟಮೊದಲ ಫ಼ಿಲಂ ‘ಸತೀ ಸುಲೋಚನ’ ೧೯೩೪ರಲ್ಲಿ ತೆರೆಕಂಡಿತು! ಈ ಚಿತ್ರಕ್ಕೆ ಆರ್.ನಾಗೇಂದ್ರರಾವ್ ಹೀರೋ ಮತ್ತು ಲಕ್ಷ್ಮಿಬಾಯಿ ಹೀರೋಯಿನ್ ಎಂದು ಸರ್ವಾನುಮತದಿಂದ ನಿರ್ಧರಿಸಲಾಗಿತ್ತು. ದುರದೃಷ್ಟವಶಾತ್ ಇವರಿಬ್ಬರ ಕೈತಪ್ಪಿ ಉಪನಾಯಕ-ಉಪನಾಯಕಿಯಾಗಿದ್ದ ಸುಬ್ಬಯ್ಯನಾಯ್ಡು ಮತ್ತು ತ್ರಿಪುರಾಂಭ ರವರಿಗೆ ಹೀರೋ-ಹೀರೋಯಿನ್ ಆಗುವ ಸುವರ್ಣಾವಕಾಶ ಒದಗಿತು! ಎಲ್ಲರ ಲೆಕ್ಕಾಚಾರ ತಲೆ ಕೆಳಗಾಗಲು ಪ್ರಮುಖ ಕಾರಣ ನಿರ್ಮಾಪಕನಾದ ರಾಜಸ್ಥಾನ್ ಮೂಲದ ಬೆಂಗಳೂರು ವರ್ತಕ ಷಾ ಬೂರ್ಮಲ್ ಚಮನ್‌ಲಾಲ್ ಡುಂಗಾಜಿ! ಬಜೆಟ್ ರೂ.೪೮,೫೧೦/- ಒಟ್ಟುಗಳಿಸಿದ ಗಲ್ಲಾಪೆಟ್ಟಿಗೆ ರೂ.೫೮,೯೦೦/-ಇದರ ನಿರ್ದೇಶಕ ವೈ.ವಿ.ರಾವ್[ಜೂಲಿ ಲಕ್ಷ್ಮಿಯ ತಂದೆ]ಛಾಯಾಗ್ರಾಹಕ ಸಚಿನ್‌ನಾಯಕ್ ಸಂಗೀತ ಹೆಚ್‌ಆರ್.ಪದ್ಮನಾಭಶಾಸ್ತ್ರಿ ಮತ್ತು ಆರ್‌ಎನ್‌ಆರ್. ಹಿನ್ನೆಲೆಗಾಯಕರು ಆರ್.ನಾಗೇಂದ್ರರಾವ್, ಲಕ್ಷ್ಮೀಬಾಯಿ.
ವಾಲ್ಮೀಕಿ ರಾಮಾಯಣದ ಕತೆಗೆ ಚಿತ್ರಕಥೆ-ಸಂಭಾಷಣೆ-ಹಾಡುಗಳನ್ನು ಬರೆದಿದ್ದವರು ಬೆಳ್ಳಾವೆನರಹರಿಶಾಸ್ತ್ರಿ. ಪೂನಾದ ಪ್ರಭಾತ್ ಸ್ಟುಡಿಯೊ ಮತ್ತು ಕೊಲ್ಲಾಪುರದ ಛತ್ರಪತಿ ಶಿವಾಜಿ ಸ್ಟುಡಿಯೋಗಳಲ್ಲಿ ಚಿತ್ರೀಕರಣಗೊಂಡ ೧೭೫ನಿಮಿಷ ಅವಧಿಯ ಫ಼ಿಲಂ ಹಳೇ ಮೈಸೂರು ರಾಜ್ಯದಾದ್ಯಂತ ೧೩ಕೇಂದ್ರಗಳಲ್ಲಿ ದಿ.೩.೩.೧೯೩೪ರಂದು ಬಿಡುಗಡೆಗೊಂಡು ೪ಕೇಂದ್ರಗಳಲ್ಲಿ ೫೦ದಿನ,೩ಕೇಂದ್ರದಲ್ಲಿ ೧೦೦ದಿನ ಹಾಗೂ ೨ಕೇಂದ್ರದಲ್ಲಿ ಸಿಲ್ವರ್ ಜ್ಯುಬಿಲಿ ಪ್ರದರ್ಶನ ಕಂಡಿತು! ಮೈಸೂರು ಮಹಾರಾಜರು ಇದರ ಪ್ರಿಂಟ್ ತರಿಸಿಕೊಂಡು ಅರಮನೆಯ ಸ್ವಂತ ಬೆಳ್ಳಿಪರದೆ ಮೇಲೆ ಮಂತ್ರಿ ಮಂಡಲ-ಬಂಧು-ಬಳಗದೊಡನೆ ನೋಡಿ ಆನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹಲವಾರು ನೂತನ ದಾಖಲೆ ನಿರ್ಮಿಸಿದ ಸತೀ ಸುಲೋಚನದ ತಾರಾಗಣದಲ್ಲಿ;ಆರ್.ನಾಗೇಂದ್ರರಾವ್, ಮೂರ್ತಿರಾವ್, ಶೇಷಾಚಲಂ, ಯರ್ರಗುಡಿಪತಿ ವರದರಾವ್,ಕೆಂಪರಾಜೆಅರಸು,ಲಕ್ಷ್ಮೀಬಾಯಿ,ಕಮಲಬಾಯಿ,ಇಂದುಬಾಲ,ಸ್ವರ್ಣಮ್ಮ, ಎಸ್.ಕೆ.ಪದ್ಮಾದೇವಿ, ಮುಂತಾದವರು ನಟಿಸಿದ್ದರು.
ಸ್ಯಾಂಡಲ್‌ವುಡ್‌ನ ಪ್ರಪ್ರಥಮ ಹೀರೋ ಎಂ.ವಿ.ಸುಬ್ಬಯ್ಯನಾಯ್ಡು ತಾವು ಜೀವಿಸಿರುವವರೆಗೆ ನಡೆದುಬಂದ ದಾರಿಯನ್ನು ಮರೆಯದೆ ನಾಟಕಗಳಲ್ಲು ಪಾತ್ರವಹಿಸುತ್ತಾ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಅಂದಿನ ಮೈಸೂರು ರಾಜ್ಯ ಮಾದಲಾಪುರದ ಶ್ರೀಮತಿ/ಶ್ರೀ ವೀರಯ್ಯನಾಯ್ಡು-ವೆಂಕಟಮ್ಮ ದಂಪತಿಗಳ ಪುತ್ರರಾಗಿ ೨೧.೭.೧೮೯೬ರಂದು ಜನಿಸಿ ೧೯೧೬ರಲ್ಲಿ ತಮ್ಮದೇ ನಾಟಕ ಕಂಪನಿ ಆರಂಭಿಸಿದ್ದರು. ೧೨.೦೭.೧೯೬೨ರಲ್ಲಿ ದೈವಾಧೀನರಾದರು.
ಚಂದನವನದ ಚೊಚ್ಚಲ ಹೀರೋಯಿನ್ ತ್ರಿಪುರಾಂಭ ಹೇಳಿಕೊಳ್ಳುವಷ್ಟು ಸುಂದರಿಯೇನಲ್ಲ. ಆದರೂ ಆಕರ್ಷಣೀಯ ಅಭಿನಯದೊಡನೆ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಸತತ ೩ವರ್ಷ ತೆರೆಕಂಡ ಎಲ್ಲ ಕನ್ನಡ ಚಿತ್ರಗಳಲ್ಲು ಪಾತ್ರವಹಿಸಿದ್ದ ಈಕೆ ‘ಚಕ್ರವರ್ತಿ ತಿರುಮಗಳ್’ ಮತ್ತು ‘ದಾನಶೂರ ಕರ್ಣ’ ತಮಿಳು ಚಿತ್ರಗಳಲ್ಲೂ ನಟಿಸಿದ್ದರು. ಪ್ರತಿಯೊಂದು ಸಿನಿಮಾದ ಶೂಟಿಂಗ್ ಪ್ರಾರಂಭವಾಗುವ ಮುನ್ನ ಈಕೆಯು ತಮ್ಮ ಮನೆಯ ಒಳಗೆ-ಹೊರಗೆ ಬಹಳಷ್ಟು ‘ರಿಹರ್ಸಲ್’ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದರು, ಕಲೆಗೋಸ್ಕರ ತಮ್ಮನ್ನು ತಾವೇ ಅರ್ಪಿಸಿಕೊಂಡಿದ್ದರು! ಹಲವಾರು ಪ್ರಪ್ರಥಮಗಳ ದಾಖಲೆಯೊಂದಿಗೆ ಚಂದನವನ ಇತಿಹಾಸದ ಸುವರ್ಣಪುಟ ಸೇರಿದ ಇಂಥ ಮಹಾನ್ ಕಲಾವಿದರು ಅಭಿನಯಿಸಿದ ಚಲನಚಿತ್ರಗಳು:-
ದಿ||ಸುಬ್ಬಯ್ಯನಾಯ್ಡು ನಟಿಸಿದ ಚಿತ್ರಗಳು ದಿ||ತ್ರಿಪುರಾಂಭ ನಟಿಸಿದ ಚಿತ್ರಗಳು
ಕ್ರ.ಸಂ. ಚಲನಚಿತ್ರ ಇಸವಿ ಕ್ರ.ಸಂ. ಚಲನಚಿತ್ರ ಇಸವಿ
೧ ಸತೀ ಸುಲೋಚನ – ೧೯೩೪ ೧ ಸತೀ ಸುಲೋಚನ – ೧೯೩೪
೨ ವಸಂತ ಸೇನಾ- ೧೯೪೧ ೨ ಭಕ್ತ ಧ್ರುವ – ೧೯೩೪
೩ ಸತ್ಯ ಹರಿಶ್ಚಂದ್ರ -೧೯೪೩ ೩ ಸದಾರಮೆ – ೧೯೩೫
೪ ಮಹಾತ್ಮ ಕಬೀರ್- ೧೯೪೭ ೪ ಸಂಸಾರನೌಕ – ೧೯೩೬
೫ ಭೂ ಕೈಲಾಸ – ೧೯೫೮ ೫ ಚಿರಂಜೀವಿ – ೧೯೩೭
೬ ಧರ್ಮಸ್ಥಳ ಮಹಾತ್ಮೆ -೧೯೬೨ ೬ ರಾಜಸೂಯ ಯಾಗ – ೧೯೩೭
೭ ದಾನಶೂರಕರ್ಣ[ತಮಿಳು]- ೧೯೬೧ ೭ ಪುರಂದರದಾಸ – ೧೯೩೭

ಕುಮಾರಕವಿ ನಟರಾಜ್ (೯೦೩೬೯೭೬೪೭೧)
ಬೆಂಗಳೂರು–೫೬೦೦೭೨