
ಮೈಸೂರುನಂಟು ಮುಂದುವೆರೆದುದು...:ಮದುವೆಯಾದಂದಿನಿಂದ ಸುಮಾರು ೨೫ವರ್ಷ ಪರ್ಯಂತ ಹೆಂಡ್ತಿ ಜತೆಗೆ ಸಾಲಿಗ್ರಾಮದ ಅತ್ತೆಮನೆಗೆ ಹೋಗುವಾಗ-ಬರುವಾಗ ಪ್ರತಿಸಲವೂ ತಪ್ಪದೆ ಚಾಮುಂಡಿಬೆಟ್ಟ/ನಂಜನಗೂಡು/ಕನ್ನಂಬಾಡಿಕಟ್ಟೆ/ಹೋಟೆಲ್‌ಊಟ/ಪಿಕ್ಚರ್ ಪ್ರೊಗ್ರಾಂ ತಪ್ಪಿಸುತ್ತಲೇ ಇರಲಿಲ್ಲ. ಗಂಡಹೆಂಡಿರು ಸಾಕ್ಷಾತ್ ಶಿವಪಾರ್ವತಿಯಂತಿದ್ದರು. ಸಾಲಿಗ್ರಾಮದಲ್ಲಿದ್ದ ಬಾಮೈದುನರಿಗೆ[ಎಸ್.ಎ. ಚಿನ್ನೇಗೌಡ,ಎಸ್.ಎ.ಗೋವಿಂದರಾಜ್,ಎಸ್.ಎ.ಭರತರಾಜ್] ಎಂಥ ಸಂದರ್ಭದಲ್ಲೂ ಕಾಸುಕೊಟ್ಟ ಉದಾಹರಣೆ ಒಂದೂಇಲ್ಲ? ರಾಜ್ ತಮ್ಮ ಜೇಬಲ್ಲಿ ಎಂದೂ ಹಣ ಇಟ್ಟು ಕೊಂಡವರಲ್ಲ! ಎಲ್ಲ ಬಗೆಯ ಆಡಳಿತ ಚುಕ್ಕಾಣಿ (ಪಾರ್ವತಮ್ಮನವರ ಕೋಲಿಗೆ ಬರುವತನಕ) ಪೈ-ಟು-ಪೈ ಹಣ/ಲೆಕ್ಖ ಇಟ್ಟುಕೊಂಡಿದ್ದವರು ಎಸ್.ಪಿ.ವರದರಾಜ್. ರಾಜ್ ೧೦೦ರೂಪಾಯಿ ಮೌಲ್ಯಕ್ಕಿಂತ ಹೆಚ್ಚಿನ ಮೌಲ್ಯದ ನೋಟನ್ನು ನೋಡಿದವರೆ ಅಲ್ಲ?! ೧, ೨, ೫, ೧೦ರೂ. ಮೌಲ್ಯದ ಹತ್ತು ಸಾವಿರ ರೂಪಾಯಿ ಮೊತ್ತ ಎಣಿಸಲು ಪ್ರಯತ್ನಿಸಿ ಇಡೀ ಕುಟುಂಬದವರಿಂದ ಲಘು ಹಾಸ್ಯಕ್ಕೂ ಈಡಾಗಿದ್ದರು! ಒಮ್ಮೆ ತಮ್ಮನ್ನು ಗೋಗರೆದ ಭಿಕ್ಷುಕನಿಗೆ ೧೦೦ ರೂಪಾಯಿ ಕೊಡುವಂತೆ ಹೇಳಿದಾಗ ವರದಪ್ಪ ಒಂದೇ (೫೦೦ಮೌಲ್ಯದ) ನೋಟು ನೀಡಿದಾಗ ಕೋಪಗೊಂಡ ರಾಜಣ್ಣನಿಗೆ ೧೦೦ರ ಐದು ನೋಟಿಗೆ ಅದು ಸಮವೆಂದು 'ಎಕ್ಸ್‌ಪ್ಲ್ಲನೇಶನ್' ನೀಡಿ ಮನವರಿಕೆ ಮಾಡಿದ ಪ್ರಸಂಗವನ್ನಂತು ಮರೆಯುವಂತಿಲ್ಲ!
ಚಿನ್ನದಂಥಗಂಡಂಗೆ ರನ್ನದಂಥಹೆಂಡ್ತಿ ಹೇಳಿದಸುಳ್ಳು?:- ಮದುವೆಯಾದ ಹೊಸತರಲ್ಲಿ ಅಡುಗೆ ಮಾಡಲು ಬಂದರೆ ಮಾತ್ರ ಮದ್ರಾಸಿಗೆ ಕರೆದೊಯ್ಯುವೆ ಎಂದ ಗಂಡನಿಗೆ ಓ..ನನಗೆಲ್ಲಾ ಅಡುಗೆ ಚೆನ್ನಾಗಿ ಬರುತ್ತದೆ ಎಂದು ಶುದ್ಧ ಸುಳ್ಳು ಹೇಳಿ ಸೆರಗಿನೊಳಗೇ ನಕ್ಕಿದ್ದ ಪುಟ್ಟಹೆಂಡ್ತಿ ಪಾರ್ವತಿ ೫-೬ ವರ್ಷದ ನಂತರ ಅಡುಗೆ ಕಲಿತರು! ಗಂಡನಿಗಿಂತ ೩ಪಟ್ಟು ಹೆಚ್ಚು ವಿದ್ಯಾವಂತೆ ಹೆಂಡ್ತಿ?:- ಹೌದು! ಪಾರ್ವತಮ್ಮ ೯ನೇ ಕ್ಲಾಸ್‌ವರೆಗೆ ವಿದ್ಯಾಭ್ಯಾಸ ಮಾಡಿದ್ದರು, ರಾಜ್ ೩ನೇ ತರಗತಿವರೆಗಷ್ಟೆ ಓದಿದ್ದರು! ಗಂಡ-ಹೆಂಡ್ತಿ ಜಗಳ-ಕದನ ಬಹುಶಃ ಇರಲೇ ಇಲ್ಲವೇನೊ? ಸೋತು ಬಾಳಿದರೆ ಸ್ವರ್ಗಸುಖ ನಾಣ್ಣುಡಿ ಇಬ್ಬರಿಗೂ; ವಿಶೇಷವಾಗಿ ರಾಜಣ್ಣಂಗೆ ಹೆಚ್ಚು ಒಪ್ಪುತ್ತಿತ್ತೇನೊ! ಅತ್ತೆ-ಸೊಸೆಯರೂ ಸಹ ಅನ್ಯೋನ್ಯವಾಗಿದ್ದು ತಮ್ಮ ಅತ್ತೆಯವರಿಗೆ ಎಂದೂ ಎದುರು ಜವಾಬು ನೀಡುತ್ತಿರಲಿಲ್ಲವಂತೆ? ಪಾರ್ವತಮ್ಮ- ರಾಜ್ ಆದರ್ಶ ದಂಪತಿಗಳಾಗಿ ತುಂಬು ಜೀವನ ಹೊರೆದು ಇಹಲೋಕ ತ್ಯಜಿಸಿ ಪರಲೋಕದಲ್ಲಿ ಒಂದುಗೂಡಿರಬಹುದು.
ರಾಜ್ ಕುಟುಂಬದ[ತಾಯಿ ಲಕ್ಷ್ಮಮ್ಮ ಮತ್ತು ಮಗಳು ಲಕ್ಷ್ಮೀ ಹೊರತುಪಡಿಸಿ] ಎಲ್ಲರೂ ಕಲಾವಿದರೆ:-ಎಸ್.ಪುಟ್ಟಸ್ವಾಮಯ್ಯ ನಟಿಸಿದ ಏಕೈಕ ಫ಼ಿಲಂ 'ಜೀವನನಾಟಕ(೧೯೪೨)', ಬಾಲನಟ-ನಟಿಯಾಗಿ ವರದರಾಜ್-ಶಾರದಮ್ಮ ನಟಿಸಿದ ಚಿತ್ರ 'ಕೃಷ್ಣಲೀಲ(೧೯೪೭)'!. ಇನ್ನುಳಿದಂತೆ ಪ್ರತಿಯೊಬ್ಬರೂ ಒಂದಿಲ್ಲೊಂದು ಚಿತ್ರದಲ್ಲಿ ನಟಿಸಿದ್ದಾರೆ. 'ದೇಹ'ಎರಡಾದರೂ 'ಪ್ರಾಣ'ಒಂದೇ ಆಗಿ ರಾಮ-ಲಕ್ಷಣರಂತೆ ಬದುಕಿದ್ದ ರಾಜ್-ವರದರಾಜ್ ಹುಟ್ಟುತ್ತ ಅಣ್ಣ-ತಮ್ಮ ಬೆಳೆಯುತ್ತ ದಾಯಾದಿ ನಾಣ್ಣುಡಿಯನ್ನು ಸುಳ್ಳಾಗಿಸಿದ್ದರು! ನರಹಂತಕ ವೀರಪ್ಪನ್ ಬಲೆಯಲ್ಲಿ [೩೦.೭.೨೦೦೦-೧೫.೧೧.೨೦೦೦]೧೦೮ದಿನವಿದ್ದು ಸಾವುಗೆದ್ದು ಬಂದರೂ ದೈಹಿಕ-ಮಾನಸಿಕ ಶಕ್ತಿ-ಕಳಾಹೀನರಾದರು. ಸಣ್ಣಪುಟ್ಟ ಕೌಟುಂಬಿಕ ಕಾರಣದಿಂದ ಮತ್ತು ಪಂಚಪ್ರಾಣವಾಗಿದ್ದ ವರದಪ್ಪ ನಿಧನ(೮.೨.೨೦೦೬)ನಂತರ ಚಿಂತೆಯಚಿತೆಯಲ್ಲಿ ಬೆಂದುನೊಂದು ಕೊರಗಿಕೃಶರಾಗಿ ಪ್ರತಿಘಳಿಗೆ ನೆನೆನೆನೆದು ಕಣ್ಣೀರಿಡುತ್ತ ೬೨ನೇ ದಿನ(೧೨.೪.೨೦೦೬)ಕ್ಕೆ ಸರಿಯಾಗಿ ತಮ್ಮನನ್ನು ಸೇರಲು ಅಣ್ಣ ಹೊರಟೇ ಬಿಟ್ಟರು, ಇದು ಸಹೋದರರ ಸಹಿಸಲಾರದ ನೋವಿನ ಚರಿತ್ರಾರ್ಹ ಸಾವು!!
ಆಶ್ಚರ್ಯವೆಂದರೆ:-ಪಂಡರೀಬಾಯಿ(ವಾಣಿ,೧೯೪೪) ಮತ್ತು ಲೀಲಾವತಿ (ಸೌಭಾಗ್ಯಲಕ್ಷ್ಮಿ,೧೯೫೩) ರಾಜ್‌ಗಿಂತ ಮೊದಲೆ ಚಿತ್ರರಂಗ ಪ್ರವೇಶಿಸಿದ್ದ ಸೀನಿಯರ್‍ಸ್! ರಾಜ್-ಲೀಲಾ-ವಿನೋದ (ವಿ)ಕೃತಿಯು [ಸತ್ಯ-ಸುಳ್ಳು] ಕಟ್ಟುಕತೆ ಅಂತೆ ಕಂತೆ? ಇದೊಂದು ಚಿದಂಬರ ರಹಸ್ಯ? ಅಮಾಯಕ ವ್ಯಕ್ತಿತ್ವದ ಅಪ್ರತಿಮ ಕಲಾತಪಸ್ವಿ ಪರಮಪೂಜ್ಯ ದಿವಂಗತರ ಬಗ್ಗೆ ಯಾರ್‍ಯಾರೋ ಕ್ಯಾರೆಕ್ಟರ್ ಅಸಾಸಿನೇಶನ್ ಮಾಡುತ್ತಿದ್ದಾರೆ. ಈಗಲಾದರೂ ಭುವಂಗತ ತಾಯಿ+ಮಗ ದೇವರು ಮೆಚ್ಚುವಂತೆ ಕಟುಸತ್ಯ ರುಜುವಾತು ಪಡಿಸಿ ಕಿಡಿಗೇಡಿಗಳ ಬಾಯಿ ಮುಚ್ಚಿಸಬಹುದಲ್ಲ? ಇಲ್ಲದಿದ್ದರೆ ದಿನಾ ಸಾಯೋರಿಗೆ ಅಳೋರ್‍ಯಾರು? ನಾಯಿ ಬೊಗಳಿದರೆ ಆನೆಗೇನು? ಎಂದು ಸುಮ್ಮನಾಗುತ್ತಾರೆ! ಮತ್ತೊಂದು ಆಶ್ಚರ್ಯವೇನೆಂದರೆ:- 'ಮಲ್ಲಿಮದುವೆ' ಚಿತ್ರದಲ್ಲಿ ರಾಜ್‌ಗೆ ನಾಯಕಿಯಾಗಿದ್ದುದು ಸಾಹುಕಾರ್ ಜಾನಕಿ, ಲೀಲಾವತಿ ಜತೆ ನಟಿಸಿದ್ದು ರಾಜಾಶಂಕರ್! ರಾಜ್ ನಾರದಮುನಿಯಾಗಿ ನಟಿಸಿದ್ದ 'ಮಹಾಸತಿಅನಸೂಯ'ದಲ್ಲಿ ಸುಮತಿ ಪಾತ್ರದ ಲೀಲಾವತಿಯೊಡನೆ ಕುಷ್ಠರೋಗಿ ಗಂಡನಾಗಿ ನಟಿಸಿದ್ದು ಬಾಲಣ್ಣ! 'ಪ್ರೇಮಮಯಿ' ಚಿತ್ರದಲ್ಲೂ ರಾಜಕುಮಾರ್ ಅತ್ತಿಗೆಯಾಗಿ ಲೀಲಾವತಿ ಅಭಿನಯಿಸಿದ್ದಾರೆ! ರಾಜ್-ಲೀಲಾವತಿ ನಟಿಸಿದ ಕಟ್ಟಕಡೆಯ ಫ಼ಿಲಂ 'ನಾನಿನ್ನ ಮರೆಯಲಾರೆ'ಯಲ್ಲಿ ರಾಜ್‌ರ ಅತ್ತೆಯ ಪಾತ್ರದಲ್ಲಿ ಲೀಲಾವತಿ ನಟಿಸಿದ್ದರು! ರಾಜ್‌ಕುಮಾರ್ ನಟಿಸಿದ ಮೊಟ್ಟಮೊದಲ ಸಾಮಾಜಿಕ ಚಲನಚಿತ್ರ 'ರಾಯರಸೊಸೆ' ಹಾಗೂ ಕೃಷ್ಣಮೂರ್ತಿ ಪುರಾಣಿಕರ ಧರ್ಮದೇವತೆ ಕಾದಂಬರಿ ಆಧಾರಿತ ಪ್ರಪ್ರಥಮ ಸಿನಿಮ 'ಕರುಣೆಯೇ ಕುಟುಂಬದ ಕಣ್ಣು'.
ದಾಖಲೆಗಳ ಸಾಮ್ರಾಟ:-ಪ್ರಪಂಚದ ೬ ಭಾಷೆಗಳಲ್ಲಿ ಬಯೊಗ್ರಫ಼ಿ, ಭಾರತದ ೧೨ ಭಾಷೆಗಳಲ್ಲಿ ಜೀವನಚರಿತ್ರೆ ಹಾಗೂ ಸುಧಾ, ಪ್ರಜಾಮತ ಮುಂತಾದ ಪ್ರತಿಷ್ಠಿತ ನಿಯತಕಾಲಿಕೆಗಳಲ್ಲಿ ಕಥಾನಾಯಕನ ಕಥೆ ಶೀರ್ಷಿಕೆಯಡಿ ಧಾರಾವಾಹಿ ಪ್ರಕಟಗೊಂಡ ಪ್ರಪಂಚದ ಮೊಟ್ಟ ಮೊದಲ ಚಿತ್ರನಟ! ‘ಬಂಗಾರದ ಹೂವು’ ಕುಷ್ಠರೋಗ ಅರಿವಿನ ಬಗ್ಗೆ ತೆರೆಕಂಡ ಭಾರತದ ಮೊಟ್ಟಮೊದಲ ಫ಼ಿಲಂ. ಭಾಗ್ಯದ ಬಾಗಿಲು ೧೪ ವರ್ಷಾವಧಿಯಲ್ಲಿ ೧೦೦ ಚಿತ್ರಗಳಲ್ಲಿ ನಟಿಸಿದ ಭಾರತದ ಪ್ರಪ್ರಥಮ ಹೀರೋ. ‘ನಟಸಾರ್ವಭೌಮ’ ಭಾರತದ ಮೊಟ್ಟಮೊದಲ ಸಿನಿಮಾ ನಟನೊಬ್ಬನ ಸಾಕ್ಷ್ಯಚಿತ್ರ! ಸರ್ಕಸ್ ಕಲಾವಿದರ ನೋವು-ನಲಿವು ಬಗ್ಗೆ ಬಿಡುಗಡೆಯಾದ ದ.ಭಾರತದ/ಕನ್ನಡದ ಪ್ರಪ್ರಥಮ ಫ಼ಿಲಂ ‘ಧೂಮಕೇತು’. ಬೆಂಗಳೂರು ಸ್ಟೇಟ್ಸ್ ಚಿತ್ರಮಂದಿರ ಬಳಿ ೭೭ಅಡಿ ಎತ್ತರದ ದ್ವಿಪಾತ್ರದ ‘ಡಬ್ಬಲ್‌ಕಟೌಟ್’ ನಿಲ್ಲಿಸಿದ್ದ ಭಾರತದ ಏಕೈಕ ಚಿತ್ರ ‘ಭಲೇಜೋಡಿ’! ಗಾಯಕ-ನಾಯಕ ಫ಼ೈಟ್/ಸ್ಟಂಟ್ ಮಾಡುತ್ತಲೆ ಒಂದು ಹಾಡು ಪೂರ್ತಿ ಮುಗಿಸಿದ ದೃಶ್ಯಾವಳಿಯುಳ್ಳ ವಿಶ್ವದ ಏಕೈಕ ಫ಼ಿಲಂ ‘ಹಾವಿನಹೆಡೆ’ಯ ನಟ. ರಾಜ್ ನಿರ್ಮಿಸಿದ ಪ್ರಪಂಚದ/ಭಾರತದ ದಾಖಲೆಯ ಮೈಲಿಗಲ್ಲುಗಳು ಬಹಳಷ್ಟಿವೆ…..! ಅಂದಿನ ಪ್ರಧಾನಿ ಇಂದಿರಾಗಾಂಧಿ ಗಡಗಡ ನಡುಗುವಂತೆ ಮಾಡಿದ್ದ ಪ್ರಸಂಗದ ಜತೆಗೆ ಇನ್ನಿತರ ಅನೇಕ ರೋಚಕ ಮಾಹಿತಿಗಳು ಮುಂದಿನ ವಾರದ ಚಂದನವನ ಚರಿತ್ರೆಯಲ್ಲಿ ಮುಂದುವರಿಯಲಿದೆ…..!

ಕುಮಾರಕವಿ ನಟರಾಜ್ [೯೦೩೬೯೭೬೪೭೧]
ಬೆಂಗಳೂರು-೫೬೦೦೭೨