ಪಿರಿಯಾಪಟ್ಟಣ: ಗೋಮಾಂಸ ಮಾರಾಟ, ಕಾರು ಹಾಗೂ ದ್ವಿಚಕ್ರ ವಾಹನ ಕಳ್ಳತನದಲ್ಲಿ ತೊಡಗಿಸಿಕೊಂಡಿದ್ದ ಆರೋಪಿಗಳನ್ನು ಬೆಟ್ಟದಪುರ ಠಾಣೆ ಪೊಲೀಸರು ಬಂಧಿಸಿ, 6 ಲಕ್ಷ ಮೌಲ್ಯದ ವಾಹನ ಮತ್ತು ಜಾನುವಾರು ಮಾಂಸ ಮಾರಾಟ ಮಾಡಿ ಬಂದ ನಗದು 1 ಲಕ್ಷ ರೂ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಹುಣಸೂರು ಪಟ್ಟಣದ ಶಿವಜ್ಯೋತಿ ನಗರದ ನಸ್ರುಲ್ಲಾ ಅಲಿಯಾಸ್ ಬಾಬು, ಕೊಡಗು ಜಿಲ್ಲೆ ಸುಂಟಿಕೊಪ್ಪ ಗ್ರಾಮದ ಮಧರಮ್ಮ ಬಡಾವಣೆಯ ಶಾಹೀಲ್ ಪಾಷಾ ಅಲಿಯಾಸ್ ಲಾನ್, ಕುಶಾಲನಗರ ಬಳಿಯ ಗುಡ್ಡೆಹೊಸೂರು ಗ್ರಾಮದ ಹಾಲಿ ಕುಶಾಲನಗರ ಬಳಿಯ ಕೂಡಿಗೆಯಲ್ಲಿ ವಾಸವಿದ್ದ ಜೈನವುದ್ದೀನ್ ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳ ಪೈಕಿ ಪಿ ಜೈನವುದ್ದೀನ್ ಎಂಬಾತ ಬೆಟ್ಟದಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸೂಳೆಕೋಟೆ ಗ್ರಾಮದ ಬಳಿ ಕೆಲ ದಿನಗಳ ಹಿಂದೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಆತನನ್ನು ಹಿಡಿದು ವಿಚಾರಣೆಗೊಳಪಡಿಸಿಸಲಾಗಿತ್ತು. ಈ ವೇಳೆ ಅಂತರ್ ಜಿಲ್ಲೆಗೆ ಜಾನುವಾರು ಮಾಂಸ ಸಾಗಾಣೆ ಹಾಗೂ ಸ್ಥಳೀಯವಾಗಿ ಕಾರು ಹಾಗೂ ಬೈಕ್ ಗಳನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿತ್ತು. ಪಿಎಸ್ಐ ಬಿ.ಕೆ ಮಹೇಶ್ ಕುಮಾರ್ ನೇತೃತ್ವದ ಸಿಬ್ಬಂದಿಗಳ ತಂಡ ತನಿಖೆ ಚುರುಕುಗೊಳಿಸಿದಾಗ ಈತನೊಂದಿಗೆ ಇನ್ನೊಂದಷ್ಟು ಆರೋಪಿಗಳು ಭಾಗಿಯಾಗಿರುವುದು ಬೆಳಕಿಗೆ ಬಂದಿದ್ದು ಅದರಂತೆ ಅವರನ್ನು ಬಂಧಿಸಲಾಗಿದೆ.
ಬಂಧಿತ ಆರೋತನಿಖೆ ವೇಳೆ ಆರೋಪಿಗಳು 12 ಪ್ರಕರಣಗಳಲ್ಲಿ ಜಾನುವಾರು ಕಡಿದು ಮಾಂಸ ಸಾಗಿಸಿರುವುದಾಗಿ ಮತ್ತು 2 ಕಾರು ಹಾಗೂ 2 ಮೋಟರ್ ಸೈಕಲ್ ಗಳನ್ನು ಕಳುವು ಮಾಡಿರುವುದು ಮತ್ತು 2 ಕಾರುಗಳನ್ನು ಕೃತ್ಯಕ್ಕೆ ಬಳಸಿರುವುದಾಗಿ ಪತ್ತೆಯಾಗಿದೆ.
ಆರೋಪಿಗಳ ವಿರುದ್ಧ ಹುಣಸೂರು ಗ್ರಾಮಾಂತರ ಠಾಣೆ 4 ಹಸು ಕಳ್ಳತನ, ಕೆ.ಆರ್ ನಗರ ಪೊಲೀಸ್ ಠಾಣೆ 2 ಹಸು ಮತ್ತು 1 ಕುರಿ, ಆಡು ಕಳ್ಳತನ, ಪಿರಿಯಾಪಟ್ಟಣ ಪೊಲೀಸ್ ಠಾಣೆ 2 ಹಸು ಕಳ್ಳತನ, ಬೆಟ್ಟದಪುರ ಪೊಲೀಸ್ ಠಾಣೆ 1 ಹಸು ಕಳ್ಳತನ, ಬೈಲುಕುಪ್ಪೆ ಪೊಲೀಸ್ ಠಾಣೆ 1 ಹಸು ಕಳ್ಳತನ, ಇಲವಾಲ ಪೊಲೀಸ್ ಠಾಣೆ 1 ನಾಲ್ಕು ಚಕ್ರದ ಕಾರು ವಾಹನ ಕಳ್ಳತನ, ಬಿಳಿಕೆರೆ ಪೊಲೀಸ್ ಠಾಣೆ 1 ಮೋಟಾರ್ ಸೈಕಲ್ ವಾಹನ ಕಳ್ಳತನ, ಹುಣಸೂರು ಪಟ್ಟಣ ಠಾಣೆ 1 ಬೈಕ್ ಕಳ್ಳತನ, ಅರಕಲಗೂಡು ಪೊಲಿಸ್ ಠಾಣೆ 1 ನಾಲ್ಕು ಚಕ್ರದ ಕಾರು ವಾಹನ ಕಳ್ಳತನ, ಕುಶಾಲನಗರ ಪೊಲೀಸ್ ಠಾಣೆ 1 ಹಸು ಕಳ್ಳತನ ಪ್ರಕರಣ ದಾಖಲಾಗಿದ್ದು ಒಟ್ಟು 12 ಹಸು ಕಳ್ಳತನ ಪ್ರಕರಣ ಮತ್ತು 04 ವಾಹನ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.
ಈ ಪ್ರಕರಣದ ಮುಖ್ಯ ಆರೋಪಿ ನಸ್ರುಲ್ಲಾ ಅಲಿಯಾಸ್ ಬಾಬು ಈ ಹಿಂದೆ ಮೈಸೂರು, ಕೊಡಗು, ಮಂಡ್ಯ, ಹಾಸನ, ಜಿಲ್ಲೆಯಲ್ಲಿ ವಾಹನ ಕಳವು, ಮನೆ ಕಳವು, ದನ ಮತ್ತು ಕುರಿ ಕಳವು, ದರೋಡೆ ಮುಂತಾದ 24 ಪ್ರಕರಣಗಳಲ್ಲಿ ಭಾಗಿಯಾಗಿದ್ದು 6 ಪ್ರಕರಣಗಳಲ್ಲಿ ಶಿಕ್ಷೆಯಾಗಿರುತ್ತದೆ. ಬಹಳ ದಿನಗಳಿಂದ ತಲೆಮರೆಸಿಕೊಂಡಿದ್ದ ಈತನನ್ನು ಬೆಟ್ಟದಪುರ ಠಾಣಾಧಿಕಾರಿ ಬಿ.ಕೆ ಮಹೇಶ್ ಕುಮಾರ್ ಮತ್ತು ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ರವರು ತನಿಖಾ ತಂಡವನ್ನು ಪ್ರಶಂಸಿಸಿ ನಗದು ಬಹುಮಾನ ಘೋಷಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕರಾದ ಆರ್. ಶಿವಕುಮಾರ್, ಹುಣಸೂರು ಉಪ ವಿಭಾಗ ಪೊಲೀಸ್ ಉಪಾಧೀಕ್ಷಕರಾದ ಪಿ.ರವಿಪ್ರಸಾದ್, ಪಿರಿಯಾಪಟ್ಟಣ ವೃತ್ತ ನಿರೀಕ್ಷಕರಾದ ಬಿ.ಆರ್ ಪ್ರದೀಪ್ ರವರ ಮಾರ್ಗದರ್ಶನದ ತನಿಖಾ ತಂಡದಲ್ಲಿ ಬೆಟ್ಟದಪುರ ಪೊಲೀಸ್ ಠಾಣೆ ಠಾಣಾಧಿಕಾರಿ ಬಿ.ಕೆ ಮಹೇಶ್ಕುಮಾರ್ ಮತ್ತು ಎಎಸ್ಐ ಸೋಮಶೇಖರ್, ಸಿಬ್ಬಂದಿ ಗಿರೀಶ್, ರವೀಶ್, ವಿ.ಜೆ ಮಂಜುನಾಥ, ರಘು, ಅಸ್ಲಾಂಪಾಷ, ಗಣೇಶ್, ರವಿ, ವಿಜಯ್ ಕುಮಾರ್ ಭಾಗವಹಿಸಿದ್ದರು.