ಹಾಸನ: ಜಿಲ್ಲೆಯ ಬೇಲೂರು ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ತೋಟಕ್ಕೆ ಲಗ್ಗೆಯಿಟ್ಟು ಕಾಫಿ, ಕರಿಮೆಣಸು, ಬಾಳೆ ಮುಂತಾದವುಗಳನ್ನು ನಾಶ ಮಾಡುತ್ತಿದ್ದು ಬೆಳೆಗಾರರು ಆತಂಕದಲ್ಲಿ ದಿನ ಕಳೆಯುವಂತಾಗಿದೆ.
ಮಳೆಗಾಲವಾಗಿರುವುದರಿಂದ ತೋಟಗಳಲ್ಲಿ ಹಲಸಿನ ಹಣ್ಣು ಮತ್ತು ಬಾಳೆ ಬೆಳೆದಿದ್ದು ಅವುಗಳನ್ನು ತಿನ್ನುವ ಸಲುವಾಗಿ ಅರಣ್ಯದಿಂದ ನೇರವಾಗಿ ಕಾಫಿ ತೋಟಗಳಿಗೆ ಬರುತ್ತಿದ್ದು, ಸಾಗುವ ಹಾದಿಯಲ್ಲಿ ಸಿಕ್ಕ ಕಾಫಿ ಗಿಡಗಳು, ಬಾಳೆಯನ್ನು ತಿಂದು, ತುಳಿದು ನಾಶಮಾಡುತ್ತಿವೆ. ಈಗಾಗಲೇ ಬೇಲೂರು ತಾಲೂಕಿನ ಮಲೆನಾಡು ಭಾಗವಾಗಿರುವ ಚೀಕನಹಳ್ಳಿ, ದೊಡ್ಡಸಾಲವಾರ, ಅರೇಹಳ್ಳಿ ಸೇರಿದಂತೆ ಸುತ್ತಮುತ್ತ ಪ್ರದೇಶದಲ್ಲಿ ಕಾಡಾನೆಗಳು ಹಿಂಡು ಹಿಂಡಾಗಿ ಬೀಡು ಬಿಟ್ಟಿದ್ದು, ನೂರಾರು ಎಕರೆ ಪ್ರದೇಶದಲ್ಲಿದ್ದ ಕಾಫಿ, ಬಾಳೆ ಸೇರಿದಂತೆ ರೈತರು ಬೆಳೆಸಿದ್ದ ತೆಂಗು, ಅಡಿಕೆಯನ್ನು ನಾಶ ಮಾಡಿವೆ.
ಕಾಡಾನೆಗಳ ಹಾವಳಿ ಕುರಿತಂತೆ ಮಾತನಾಡಿರುವ ಚೀಕನಹಳ್ಳಿ ಮಂಡಲದ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಪ್ರಸನ್ನಗೌಡ ಅವರು ಸುಮಾರು ಮೂರ್ನಾಲ್ಕು ದಿನಗಳ ಹಿಂದೆ ಹಿಂಡು ಹಿಂಡಾಗಿ ಸುಮಾರು 15 ಕಾಡಾನೆಗಳು ಕಾಫಿತೋಟಗಳಲ್ಲಿ ಕಾಣಿಸಿಕೊಂಡಿದ್ದು, ಎಲ್ಲೆಂದರಲ್ಲಿ ಅಲೆಯುತ್ತಾ ಕಾಫಿ ಗಿಡಗಳನ್ನು ತುಳಿದು ನಾಶ ಮಾಡಿವೆ. ಇದರಿಂದ ವರ್ಷಾನುಗಟ್ಟಲೆ ದುಡಿದು ಬೆಳಸಿದ ಕಾಫಿ, ಕರಿಮೆಣಸು ನಾಶವಾಗಿದ್ದು, ಮೊದಲೇ ಕಷ್ಟದಲ್ಲಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಹೇಳಿದ್ದಾರೆ.
ಇನ್ನೊಂದೆಡೆ ಕಾಡಾನೆಗಳು ಕಾಫಿ ತೋಟದಲ್ಲಿ ವಾಸ್ತವ್ಯ ಹೂಡುತ್ತಿರುವುದರಿಂದ ತೋಟದಲ್ಲಿ ಕೆಲಸ ಮಾಡಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಡಾನೆ ಹಾವಳಿ ಕುರಿತಂತೆ ವಲಯ ಅರಣ್ಯಾಧಿಕಾರಿ ಯಶ್ಮಾ ಮಾಚಮ್ಮ ಮಾತನಾಡಿ ಈಗಾಗಲೇ ಗುಂಪಿನಲ್ಲಿರುವ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿದ್ದು, ಅವುಗಳ ಚಲನ ವಲನಗಳನ್ನು ಗಮನಿಸಲಾಗುತ್ತಿದ್ದು, ಅದಷ್ಟು ಬೇಗ ಅವುಗಳನ್ನು ಇಲ್ಲಿಂದ ಓಡಿಸಲಾಗುವುದು. ಬೆಳೆಗಳ ಹಾನಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸರ್ಕಾರಕ್ಕೆ ನೀಡಿ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.