ಚಾಮರಾಜನಗರ: ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದ ಬಳಿಯಿರುವ ಕೆ.ಹೆಚ್.ಬಿ. ಕಾಲೋನಿಯಲ್ಲಿ ಒಳಚರಂಡಿ ನೀರು ದುರಸ್ಥಿ ಕಾರ್ಯ ಹಾಗೂ ಅನುಪಯುಕ್ತ ಗಿಡ ಗಂಟಿಗಳ ತೆರವುಗೊಳಿಸುವ ಕಾರ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದ ಮೇರೆಗೆ ಇಂದು ಆರಂಭಿಸಲಾಗಿದೆ.
ಬಡಾವಣೆಯ ನಿವಾಸಿಗಳು ತಮಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರವಾಣಿ ಮೂಲಕ ಗಮನಕ್ಕೆ ತಂದು ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಿಕೊಂಡರು. ಇದಕ್ಕೆ ಕೂಡಲೇ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವರು ನಗರಸಭೆ ಅಧಿಕಾರಿಗಳಿಗೆ ತಕ್ಷಣವೇ ಪರಿಹಾರ ಕ್ರಮಗಳಿಗೆ ಮುಂದಾಗುವಂತೆ ಸೂಚನೆ ನೀಡಿದರು.
ಈ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ಬಡಾವಣೆಯ ತಗ್ಗು ಪ್ರದೇಶಗಳಲ್ಲಿ ಸಂಗ್ರಹವಾಗುವ ಚರಂಡಿ ನೀರು ಬೇರೆಡೆಗೆ ಹರಿಸುವ ದುರಸ್ಥಿ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಚರಂಡಿ ನೀರು ಶೇಖರಣೆಯಾಗುವ ಪ್ರದೇಶ ಗುರುತಿಸುವ ಕೆಲಸವನ್ನು ನಿರ್ವಹಿಸಿದ್ದು ನೀರು ನಿಲ್ಲದಂತೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.
ಮನೆಗಳ ಮುಂದೆ, ತಗ್ಗು ಪ್ರದೇಶಗಳಲ್ಲಿ ನೀರು ನಿಲುಗಡೆಯಾಗುವುದನ್ನು ತಪ್ಪಿಸಿ ಜನರಿಗೆ ಆಗುವ ತೊಂದರೆ ಪರಿಹರಿಸುವ ಉದ್ದೇಶದೊಂದಿಗೆ ಜೆಸಿಬಿ ಇನ್ನಿತರ ಸಾಧನೆಗಳನ್ನು ಬಳಸಿ ಕೆಲಸ ನಿರ್ವಹಿಸಲಾಗುತ್ತಿದೆ.
ಬಡಾವಣೆಯ ಸಿಎ ನಿವೇಶನ, ಉದ್ಯಾನವನ, ರಸ್ತೆ ಬದಿಗಳಲ್ಲಿ ಅನುಪಯುಕ್ತವಾಗಿರುವ ಗಿಡ ಗಂಟಿಗಳನ್ನು ತೆರವುಗೊಳಿಸುವ ಕೆಲಸವೂ ಬಿರುಸಿನಿಂದ ಸಾಗಿದೆ. ಬಡಾವಣೆಗೆ ಬೀದಿ ದೀಪ, ಕುಡಿಯುವ ನೀರು ಪೂರೈಕೆಗೂ ಅಲ್ಲಿನ ನಿವಾಸಿಗಳು ಮನವಿ ಮಾಡಿದ್ದಾರೆ.
ಖಾಲಿ ನಿವೇಶನಗಳ ಮಾಲೀಕರು ನಿವೇಶನ ಹಾಗೂ ಸುತ್ತಮುತ್ತಲ ಸ್ಥಳಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ವಹಿಸಬೇಕಿರುವ ಅಗತ್ಯ ಕ್ರಮಗಳಿಗೆ ನಗರಸಭೆ ಅಧಿಕಾರಿಗಳು ಮುಂದಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದಾರೆ.
ನಗರಸಭೆ ಅಧ್ಯಕ್ಷರಾದ ಆಶಾ ನಟರಾಜು, ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಸ್ವಾಮಿ, ನಗರಸಭೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸಿ.ಎಂ. ನಟರಾಜು, ಸಹಾಯಕ ಎಂಜಿನಿಯರ್ ದೇವರಾಜು, ಪರಿಸರ ಎಂಜಿನಿಯರ್ ಗಿರಿಜಾ ಮತ್ತಿತ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.