ಚಾಮರಾಜನಗರ: ಬಾಲ್ಯವಿವಾಹ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ಸಂಬಂಧಪಟ್ಟ ಇಲಾಖೆಗಳಿಗೆ ಸಹಕಾರ ನೀಡುವಂತೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಸದಾಶಿವ ಎಸ್ ಸುಲ್ತಾನ್‌ಪುರಿ ಅವರು ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆ.ಡಿ.ಪಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ವಕೀಲರ ಸಂಘ, ನಗರದ ಪಿಎಂಎಸ್‌ಆರ್ ಹಾಗೂ ಬೆಂಗಳೂರಿನ ಚೈಲ್ಡ್ ರೈಟ್ಸ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬಾಲ್ಯವಿವಾಹ ನಿಷೇಧ ಕುರಿತು ಜಿಲ್ಲಾಮಟ್ಟದ ಸಮಾಲೋಚನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ್ಯ ವಿವಾಹದಲ್ಲಿ ಹೆಣ್ಣು ಅಥವಾ ಗಂಡಿನ ವಯಸ್ಸು ಕಾನೂನು ನಿಗದಿ ಪಡಿಸಿರುವ ವಯಸ್ಸಿಗಿಂತ ಕಡಿಮೆ ಇರುತ್ತದೆ. ಅವರಿಗೆ ಮಾನಸಿಕ, ದೈಹಿಕವಾಗಿ ತಿಳುವಳಿಕೆಯ ಕೊರತೆಯಿರುತ್ತದೆ. ಹಾಗಾಗಿ ಸಣ್ಣ ವಯಸ್ಸಿಗೆ ಮದುವೆ ಮಾಡುವುದರಿಂದ ಸಾಕಷ್ಟು ತೊಂದರೆ ಎದುರಾಗುತ್ತದೆ. ವಿಶೇಷವಾಗಿ ಹೆಣ್ಣುಮಕ್ಕಳಿಗೆ ಹೆರಿಗೆಯ ಸಂದರ್ಭದಲ್ಲಿ ಸಾಕಷ್ಟು ಸಾವು ನೋವಿಗೆ ಬಾಲ್ಯವಿವಾಹ ಕಾರಣವಾಗುತ್ತದೆ. ಅಂತಹವರಿಗೆ ಹುಟ್ಟುವ ಮಕ್ಕಳಲ್ಲಿ ಅಂಗಾಂಗ ನ್ಯೂನತೆ ಸಂಭವಿಸುವ ಸಾಧ್ಯತೆ ಇರುತ್ತದೆ ಎಂದರು.

ಬಾಲ್ಯವಿವಾಹ ಕಾಯ್ದೆ ಕೇವಲ ಹೆಣ್ಣು ಮಕ್ಕಳಿಗೆ ಮಾತ್ರವಲ್ಲದೇ ಗಂಡು ಮಕ್ಕಳಿಗೂ ಅನ್ವಯಿಸುತ್ತದೆ. ಕಾನೂನಿನ ಪ್ರಕಾರ ೨೧ ವರ್ಷಕ್ಕಿಂತ ಕಡಿಮೆ ವಯಸ್ಸಿನ ಗಂಡುಮಕ್ಕಳಿಗೆ ವಿವಾಹ ಮಾಡುವುದು ಅಪರಾಧವಾಗಿದೆ. ಬಾಲ್ಯವಿವಾಹಕ್ಕೆ ಒಳಗಾದ ಹೆಣ್ಣು ಅಥವಾ ಗಂಡು ಮದುವೆಯಾದ ಎರಡು ವರ್ಷದೊಳಗೆ ಈ ಮದುವೆ ಅಸಿಂಧೂ ಎಂದು ದೂರು ದಾಖಲಿಸಬಹುದಾಗಿದೆ ಎಂದು ನ್ಯಾಯಾಧೀಶರು ತಿಳಿಸಿದರು.

ಬಾಲ್ಯವಿವಾಹದಲ್ಲಿ ಹೆಣ್ಣಿನ ಸಮ್ಮತಿ ಇದ್ದರೂ ಸಹ ಆಕೆಗೆ ಶಿಕ್ಷೆ ಇರುವುದಿಲ್ಲ. ಆ ಹೆಣ್ಣುಮಗಳನ್ನು ಹೊರತುಪಡಿಸಿ ಮದುವೆಗೆ ಕಾರಣರಾದ ಎಲ್ಲರಿಗೂ ೨ ವರ್ಷಗಳ ಜೈಲು ಶಿಕ್ಷೆ ಮತ್ತು ೧ ಲಕ್ಷ ರೂ ವರೆಗೂ ಕಾನೂನಿನ ಅಡಿಯಲ್ಲಿ ದಂಡ ವಿಧಿಸಿ, ಶಿಕ್ಷೆಗೆ ಒಳಪಡಿಸಲಾಗುತ್ತದೆ ಎಂದು ನ್ಯಾಯಾಧೀಶರಾದ ಸದಾಶಿವ ಎಸ್ ಸುಲ್ತಾನ್‌ಪುರಿ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ಮಾತನಾಡಿ ಬಾಲ್ಯವಿವಾಹವಾದ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿರುತ್ತಾರೆ. ಇಂತವರು ಆಸಕ್ತಿ ಇದ್ದಲ್ಲಿ ಶಿಕ್ಷಣ ಮುಂದುವರೆಸಬೇಕು. ಕೌಟುಂಬಿಕವಾಗಿ, ಸಾಮಾಜಿಕವಾಗಿ, ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುವ ಬಾಲ್ಯವಿವಾಹ ಮಾಡುವುದಿಲ್ಲ ಎಂದು ಎಲ್ಲರು ಪಣತೊಡಬೇಕು. ಸಣ್ಣ ವಯಸ್ಸಿಗೆ ಮದುವೆ ಮಾಡದಂತೆ ಪೋಷಕರಿಗೆ ಅರಿವು ಮೂಡಿಸಬೇಕು ಎಂದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಅವರು ಮಾತನಾಡಿ ಬಡತನ, ಶಿಕ್ಷಣದ ಕೊರತೆ, ಬೇಗ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳಬೇಕೆಂಬ ಜನರ ನಂಬಿಕೆಗಳಿಂದ ಬಾಲ್ಯ ವಿವಾಹ ಜರುಗುತ್ತಿವೆ. ಬಾಲ್ಯ ವಿವಾಹ ನಡೆಯದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ಸಮುದಾಯಗಳ ಸಹಾಯದಿಂದ ಬಾಲ್ಯವಿವಾಹ ನಡೆಯದಂತೆ ತಡೆಯಬಹುದಾಗಿದೆ ಎಂದು ತಿಳಿಸಿದರು. 

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ್, ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಗೀತಾಲಕ್ಷ್ಮೀ, ಜಿಲ್ಲಾ ಮಕ್ಕಳ ಕಲ್ಯಾಣಭ ಸಮಿತಿ ಅಧ್ಯಕ್ಷರಾದ ಸರಸ್ವತಿ, ಬೆಂಗಳೂರಿನ ಚೈಲ್ಡ್ ರೈಟ್ಸ್ ಕಾರ್ಯಕಾರಿ ನಿರ್ದೇಶಕರಾದ ವಾಸುದೇವ ಶರ್ಮಾ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬಾಲ್ಯ ವಿವಾಹ ನಿಷೇಧದ ಕುರಿತು ಭಿತ್ತಿಪತ್ರವನ್ನು ಕಾರ್ಯಕ್ರಮದಲ್ಲಿ ಹಾಜರಿದ್ದ ಗಣ್ಯರು ಬಿಡುಗಡೆಗೊಳಿಸಿದರು.