ಚಾಮರಾಜನಗರ:ಚಾಮರಾಜನಗರದಲ್ಲಿರುವ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಕೆಂಪನಂಜಾಂಬ ಸಮೇತ ಶ್ರೀ ಚಾಮರಾಜೇಶ್ವರಸ್ವಾಮಿಯವರ ಮಹಾರಥೋತ್ಸವವು ಜುಲೈ ೧೩ರಂದು ನಡೆಯಲಿದೆ.
ಮಹಾರಥೋತ್ಸದ ಅಂಗವಾಗಿ ಜುಲೈ ೬ರಿಂದ ೧೭ರವರೆಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ. ಜುಲೈ ೬ರಂದು ಅಂಕುರಾರ್ಪಣಪೂರ್ವಕ ವೃಷಭಾಧಿವಾಸ, ೭ರಂದು ಬೆಳಿಗ್ಗೆ ೧೧.೩೦ರಿಂದ ೧೨ಗಂಟೆಗೆ ಕನ್ಯಾ ಲಗ್ನ ಮುಹೂರ್ತದಲ್ಲಿ ಧ್ವಜಾರೋಹಣ ಪೂರ್ವಕ ಬೇರಿತಾಡನಾನಂತರ ಶಿಭಿಕಾರೋಹಣೋತ್ಸವ, ೮ರಂದು ಚಂದ್ರ ಮಂಡಲಾರೋಹಣೋತ್ಸವ, ೯ರಂದು ಅನಂತ ಪೀಠಾರೋಹಣೋತ್ಸವ, ೧೦ರಂದು ಪುಷ್ಪಮಂಟಪಾರೋಹಣೋತ್ಸವ, ೧೧ರಂದು ವೃಷಭಾರೋಹಣೋತ್ಸವ, ೧೨ರಂದು ವಸಂತೋತ್ಸವ ಪೂರ್ವಕ ಗಜವಾಹನೋತ್ಸವ ಕಾರ್ಯಕ್ರಮಗಳು ನಡೆಯಲಿವೆ.
ಜುಲೈ ೧೩ರಂದು ಪೂರ್ವಾಷಾಢ ನಕ್ಷತ್ರದಲ್ಲಿ ರಥಸ್ಥಂ ವೃಷಭಾರೂಢಂ ಚಂದ್ರನಾಲಿಪ್ತ ತಾಂಡವಂ, ಸೋಪಹಾರಂ ಶಿವಂದೃಷ್ಟ್ವಾ ಪುನರ್ಜನ್ಮನವಿದ್ಯತೆ ಎಂಬ ಸಿದ್ಧಾಂತರೀತ್ಯ ಪ್ರಾತಃಕಾಲ ೧೧ ರಿಂದ ೧೧.೩೦ರ ಶುಭ ಕನ್ಯಾ ಲಗ್ನದಲ್ಲಿ ಶ್ರೀಮನ್ಮಹಾರಥಾರೋಹಣ ನಡೆಯಲಿದೆ. ಅನಂತರ ಹಂಸಾರೋಹಣಾನಂತರ ನಟೇಶೋತ್ಸವ ಜರುಗಲಿದೆ.
ಜುಲೈ ೧೪ರಂದು ಮೃಗಾಯಾತ್ರಾ ಪೂರ್ವಕ ಅಶ್ವಾರೋಹಣಾನಂತರ ಮಹಭೂತಾರೋಹಣ, ದೇವಿ ಪ್ರಣಯಕಲಹ ಸಂಧಾನೋತ್ಸವ, ೧೫ರಂದು ಹಗಲು ಚೂರ್ಣೋತ್ಸವ ಪೂರ್ವಕ ಅವಭೃತ ತೀರ್ಥಸ್ನಾನ ರಾತ್ರಿ ಧ್ವಜಾವರೋಹಣ, ಮೌನಬಲಿ, ೧೬ರಂದು ಪುಷ್ಪಯಾಗ ಪೂರ್ವಕ ಕೈಲಾಸಯಾನಾ ರೋಹಣೋತ್ಸವ, ೧೭ರಂದು ಮಹಾಸಂಪ್ರೋಕ್ಷಣ ಪೂರ್ವಕ ನಂದಿವಾಹನೋತ್ಸವ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.