ಮೈಸೂರು: ತಂತ್ರಜ್ಞಾನವು ಬಹಳಷ್ಟು ಅಭಿವೃದ್ಧಿ ಹೊಂದಿದ್ದು ಅದನ್ನು ಶಿಕ್ಷಣ ಕ್ಷೇತ್ರಕ್ಕೆ ಸಮರ್ಪಕವಾಗಿ ಅಳವಡಿಸಿಕೊಳ್ಳಬೇಕಾಗಿದೆ. ಆಗ ಮಾತ್ರ ಉನ್ನತ ಶಿಕ್ಷಣದಲ್ಲಿ ಪ್ರಗತಿ ಸಾಧಿಸಲು ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ. ಹೇಮಂತ್‌ಕುಮಾರ್ ಹೇಳಿದರು.
ಮೈಸೂರು ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ’ಐಕ್ಯುಎಸಿ’ ಆಶ್ರಯದಲ್ಲಿ ಏರ್ಪಡಿಸಿದ್ದ ’ಆನ್‌ಲೈನ್ ಬೋಧನೆಯಲ್ಲಿ ಉತ್ತಮ ಅಭ್ಯಾಸಗಳು’ ಎಂಬ ವಿಷಯ ಕುರಿತ ಒಂದು ದಿನದ ವೆಬಿನಾರ್ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು ಆನ್‌ಲೈನ್ ಎಂಬುದು ಎಲ್ಲಾ ಕ್ಷೇತ್ರಗಳನ್ನು ವ್ಯಾಪಿಸಿಕೊಂಡಿದೆ. ಇಂದಿನ ಪರಿಸ್ಥಿತಿಯಲ್ಲಿ ಶಿಕ್ಷಣಕ್ಷೇತ್ರದಲ್ಲಿಯೂ ಆನ್‌ಲೈನ್ ಆಧಾರಿತ ವ್ಯವಸ್ಥೆಯನ್ನು ಅನುಸರಿಸಬೇಕಾಗಿದೆ. ಆನ್‌ಲೈನ್ ಶಿಕ್ಷಣದಲ್ಲಿ ಅಧ್ಯಾಪಕನಿಗೆ ಬಹಳಷ್ಟು ಸವಾಲುಗಳಿವೆ. ಹಾಗೆಯೇ ನೋಡಿದರೆ ನಾಲ್ಕು ಗೋಡೆಗಳ ನಡುವೆ ಬೋಧಿಸುವ ರೀತಿಗಿಂತ ಇದು ಭಿನ್ನವಾದುದು. ಇದಕ್ಕೆ ವಿಶೇಷ ಕೌಶಲ್ಯಗಳು ಇರಬೇಕಾಗುತ್ತವೆ. ಈ ಕೌಶಲ್ಯವು ವಿಷಯದಿಂದ ವಿಷಯಕ್ಕೆ ಭಿನ್ನವಾದುದು. ಕಾರಣ ಭಾಷಾ ಬೋಧನೆಗಿಂತ ವಿಜ್ಞಾನ, ವಾಣಿಜ್ಯ ಬೋಧನೆಗೆ ಕೌಶಲ್ಯ ಭಿನ್ನವಾಗಿರಬೇಕಾಗುತ್ತದೆ. ಆಗ ಮಾತ್ರ ಆನ್‌ಲೈನ್ ಬೋಧನೆ ಪರಿಣಾಮಕಾರಿಯಾಗಿರಲು ಸಾಧ್ಯ ಎಂದರು.
ಇಂದಿನ ಪರಿಸ್ಥಿತಿಯಲ್ಲಿ ಅಧ್ಯಾಪಕನಿಗೆ ಆನ್‌ಲೈನ್ ಬೋಧನೆ ಒಂದು ಸವಾಲೇ ಆಗಿದೆ. ಆ ಸವಾಲನ್ನು ಸ್ವೀಕರಿಸಿ ಉತ್ತಮ ಕೌಶಲ್ಯಗಳನ್ನು ರೂಢಿಸಿಕೊಂಡು ಉತ್ತಮವಾಗಿ ಬೋಧನೆ ಮಾಡಿದರೆ, ವಿದ್ಯಾರ್ಥಿಗಳೂ ಕೂಡ ಆನ್‌ಲೈನ್ ಕಲಿಕೆಯಲ್ಲಿ ವಿಶೇಷವಾಗಿ ತೊಡಗಿಸಿಕೊಂಡರೆ ಈ ಮಾಧ್ಯಮದಲ್ಲಿಯೂ ಉತ್ತಮವಾದುದುದನ್ನು ಕಲಿತು ಉನ್ನತವಾದುದನ್ನು ಸಾಧಿಸಲು ಸಾಧ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಸಿ.ಜಿ. ಬೆಟಸೂರಮಠ ಮಾತನಾಡಿ ಇಂದು ಜಗತ್ತು ಬಹಳಷ್ಟು ಬದಲಾವಣೆಯನ್ನು ಹೊಂದುತ್ತಾ ಸಾಗುತ್ತಿದೆ. 21 ನೇ ಶತಮಾನವು ಸಂಕೀರ್ಣವಾದ ಕಾಲಘಟ್ಟವಾಗಿದೆ. ಪ್ರತಿಯೊಬ್ಬನಿಗೂ ಸವಾಲುಗಳಿವೆ. ಸವಾಲುಗಳನ್ನು ಸ್ವೀಕರಿಸಿಯೇ ಮುನ್ನಡೆಯಬೇಕಾಗಿದೆ. ಇಲ್ಲದಿದ್ದರೆ ಬದುಕೇ ದುಸ್ತರವಾಗಬಹುದು. ಆದ್ದರಿಂದ ಅನಿರೀಕ್ಷಿತವಾಗಿ ಬರುವ ಯಾವುದೇ ಸವಾಲನ್ನು ಎದುರಿಸಲು ನಾವು ಸದಾ ಸಿದ್ಧರಾಗಿರಬೇಕಾಗುತ್ತದೆ ಎಂದರು.
ಕಾಲೇಜು ಸಮುಚ್ಚಯದ ಮುಖ್ಯ ಕಾರ್ಯನಿರ್ವಾಹಕ ಪ್ರೊ. ಬಿ.ವಿ. ಸಾಂಬಶಿವಯ್ಯ, ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆಚ್.ಸಿ. ಹೊನ್ನಪ್ಪ, ಡಾ. ಎನ್. ರಾಜೇಂದ್ರ ಪ್ರಸಾದ್ ಉಪಸ್ಥಿತರಿದ್ದರು.