ಚಾಮರಾಜನಗರ: ಯಡಪುರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆಯಲ್ಲಿ ಬಿ.ಪಿ.ಎಲ್ ಕಾರ್ಡ್ ಹೊಂದಿರುವವರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಕೀಲು ಮತ್ತು ಮೂಳೆ ವಿಭಾಗದಲ್ಲಿ ಟೋಟಲ್ ಹಿಪ್ ರಿಪ್ಲೇಸ್‌ಮೆಂಟ್, ಟೋಟಲ್ ಎಲ್‌ಬೋ (ಮೊಳಸಂದಿ) ರಿಪ್ಲೇಸ್‌ಮೆಂಟ್ ಮತ್ತು ಟೋಟ್ ನಿ (ಮಂಡಿ) ರಿಪ್ಲೇಸ್‌ಮೆಂಟ್ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುತ್ತಿದೆ.
ನಗರದ ಯಡಪುರದ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆಯಲ್ಲಿಂದು ಸಂಸ್ಥೆಯ ಡೀನ್ ಡಾ. ಸಂಜೀವ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆಯಲ್ಲಿ ನೂತನ ಸುಸಜ್ಜಿತ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಕೊಠಡಿಗಳು ಮತ್ತು ಉಪಕರಣಗಳು ಲಭ್ಯವಿದೆ. ಇದರಿಂದ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಗಳಾದ ಟೋಟಲ್ ಹಿಪ್ ರಿಪ್ಲೇಸ್‌ಮೆಂಟ್, ಟೋಟಲ್ ಎಲ್‌ಬೋ (ಮೊಳಸಂದಿ) ರಿಪ್ಲೇಸ್‌ಮೆಂಟ್ ಮತ್ತು ಟೋಟ್ ನಿ (ಮಂಡಿ) ರಿಪ್ಲೇಸ್‌ಮೆಂಟ್ ಶಸ್ತ್ರ ಚಿಕಿತ್ಸೆಯನ್ನು ಬಿ.ಪಿ.ಎಲ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಉಚಿತವಾಗಿ ಮಾಡಲಾಗುತ್ತಿದೆ ಎಂದರು.
ಖಾಸಗಿ ಆಸ್ಪತ್ರೆಗಳಲ್ಲಿ ಈ ಶಸ್ತ್ರ ಚಿಕಿತ್ಸೆಗಳಿಗೆ ೨ ರಿಂದ ೩ ಲಕ್ಷ ರೂಪಾಯಿಗಳು ವೆಚ್ಚವಾಗುತ್ತಿದ್ದು, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಉಚಿತವಾಗಿ ಈ ಶಸ್ತ್ರ ಚಿಕಿತ್ಸೆಗಳನ್ನು ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆಯಲ್ಲಿ ಮಾಡಲಾಗುತ್ತಿದೆ. ಈ ಸೌಲಭ್ಯವನ್ನು ಜಿಲ್ಲೆಯ ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕೆಂದು ಡೀನ್ ಡಾ. ಸಂಜೀವ್ ಅವರು ಕೋರಿದರು.
ಮೊದಲ ಬಾರಿಗೆ ಜಿಲ್ಲೆಯ ಮುತ್ತುಗದಹುಂಡಿಯ ೭೦ ವರ್ಷದ ನಿಂಗಮ್ಮ ಎಂಬ ಮಹಿಳೆಯೋರ್ವರಿಗೆ ಟೋಟಲ್ ಹಿಪ್ ರಿಪ್ಲೇಸ್ ಮೆಂಟ್ ಶಸ್ತ್ರ ಚಿಕಿತ್ಸೆಯನ್ನು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಯಶಸ್ವಿಯಾಗಿ ನಡೆಸಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಕೀಲು ಮತ್ತು ಮೂಳೆ ವಿಭಾಗದ ಮುಖ್ಯಸ್ಥರಾದ ಡಾ. ಸಿ.ವಿ. ಮಾರುತಿ, ಅರವಳಿಕೆ ವಿಭಾಗದ ಮುಖ್ಯಸ್ಥರಾದ ಡಾ. ಎಂ.ಎಸ್. ದರ್ಶನ್ ಇತರೆ ಕೀಲು ಮತ್ತು ಮೂಳೆ ತಜ್ಞರ ತಂಡದಿಂದ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ ಎಂದರು.
ಟೋಟಲ್ ಎಲ್‌ಬೋ (ಮೊಳಸಂದಿ) ರಿಪ್ಲೇಸ್‌ಮೆಂಟ್ ಮತ್ತು ಟೋಟ್ ನಿ (ಮಂಡಿ) ರಿಪ್ಲೇಸ್‌ಮೆಂಟ್ ಶಸ್ತ್ರ ಚಿಕಿತ್ಸೆಗೆ ಈಗಾಗಲೇ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಕೆಲವರು ದಾಖಲಾಗಿದ್ದಾರೆ ಎಂದು ಡಾ. ಸಂಜೀವ್ ಅವರು ತಿಳಿಸಿದರು.
ಜಿಲ್ಲಾ ಸರ್ಜನ್ ಡಾ. ಶ್ರೀನಿವಾಸ್, ಸ್ಥಾನಿಕ ವೈದ್ಯಾಧಿಕಾರಿ ಡಾ. ಹೆಚ್.ಎಸ್. ಕೃಷ್ಣಪ್ರಸಾದ್, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ನೋಡಲ್ ಅಧಿಕಾರಿ ಡಾ. ಎನ್. ಮಹೇಶ್ ಇತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.