ಮೈಸೂರು,ನವೆಂಬರ್ : *ಸಕಾಲ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ “ಸಕಾಲ ಸಪ್ತಾಹ” ಅಂಗವಾಗಿ ಕಂದಾಯ, ಸಾರಿಗೆ, ನಗರಾಭಿವೃದ್ಧಿ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಲ್ಲಿ ನವೆಂಬರ್ 30 ಸೋಮವಾರದಿಂದ ಸಕಾಲ ಯೋಜನೆಯಡಿ ಅರ್ಜಿ ಸ್ವೀಕಾರ, ಸಮೀಕ್ಷೆ ಹಾಗೂ ಜಾಗೃತಿ ಕಾರ್ಯಕ್ರಮ ಆರಂಭವಾಗಿದೆ.

ಸರ್ಕಾರದ ನಿರ್ದೇಶನದಂತೆ ಎಲ್ಲಾ ತಹಶೀಲ್ದಾರ್ ಕಚೇರಿಗಳು, ಎಲ್ಲಾ ನಾಡಕಚೇರಿಗಳು, ನಗರ ಪಾಲಿಕೆ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಆಹಾರ ಇಲಾಖೆಯ ಕಚೇರಿಗಳಲ್ಲಿ ಬ್ಯಾನರ್ ಹಾಕಿ, ಅರ್ಜಿಗಳನ್ನು ಸಕಾಲ ಯೋಜನೆಯಡಿ ಸ್ವೀಕರಿಸಲಾಯಿತು.

ಅಪರ ಜಿಲ್ಲಾಧಿಕಾರಿ ಬಿ.ಎಸ್.ಮಂಜುನಾಥಸ್ವಾಮಿ ಅವರು ಮೈಸೂರು ತಾಲ್ಲೂಕು ಕಚೇರಿಗೆ ಭೇಟಿ ನೀಡಿ, ಸಕಾಲ ಸಪ್ತಾಹ ಆಚರಣೆಯನ್ನು ಪರಿವೀಕ್ಷಿಸಿದರು.
ಸಕಾಲ ಯೋಜನೆಯ ಬಗ್ಗೆ ಸಾರ್ವಜನಿಕರ ಅರಿವು ತಿಳಿಯಲು ಸಮೀಕ್ಷೆ ನಡೆಸಲಾಗುತ್ತಿದ್ದು, ಈ ಬಗ್ಗೆ ಅಪರ ಜಿಲ್ಲಾಧಿಕಾರಿಗಳು ಸಾರ್ವಜನಿಕರೊಂದಿಗೆ ಮಾತನಾಡಿದರು. ಅರ್ಜಿಗಳನ್ನು ಸಕಾಲ ಯೋಜನೆಯಡಿಯೇ ಸ್ವೀಕರಿಸಿ, ತ್ವರಿತವಾಗಿ ವಿಲೇ ಮಾಡಬೇಕು ಎಂದು ಸೂಚನೆ ನೀಡಿದರು.

ಸಕಾಲ ಯೋಜನೆಯಲ್ಲಿ ನಾಗರಿಕರಿಗೆ ನೀಡುವ ವಿವಿಧ ಸೇವೆಗಳನ್ನು ನಿಗದಿತ ಸಮಯದಲ್ಲಿ ವಿಲೇ ಮಾಡದಿದ್ದರೆ ದಂಡ ವಿಧಿಸಲು ಅವಕಾಶವಿದೆ. ಆದಾಗ್ಯೂ ಕೆಲವು ಪ್ರಕರಣಗಳಲ್ಲಿ ವಿಳಂಬ ಆಗುತ್ತಿರುವುದರಿಂದ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಲು ಮೂರು ಹಂತದಲ್ಲಿ “ಸಕಾಲ ಸಪ್ತಾಹ”ವನ್ನು ಸಕಾಲ ಮಿಷನ್ ಹಮ್ಮಿಕೊಂಡಿದೆ.

ಸಕಾಲ ಸಪ್ತಾಹ ಕಾರ್ಯಕ್ರಮವು ಮೊದಲ ಹಂತದಲ್ಲಿ ನವೆಂಬರ್ 30 ರಿಂದ ಡಿಸೆಂಬರ್ 5ರವರೆಗೆ ನಗಾರಾಭಿವೃದ್ಧಿ, ಕಂದಾಯ, ಸಾರಿಗೆ, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆಯಲ್ಲಿ ನಡೆಯಲಿದೆ. 2ನೇ ಹಂತದಲ್ಲಿ ಡಿ.7ರಿಂದ ಡಿ.11ರವರೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ, 3ನೇ ಹಂತದಲ್ಲಿ ಡಿ.14 ರಿಂದ ಡಿ.19ರವರೆಗೆ ಉಳಿದ ಎಲ್ಲಾ ಇಲಾಖೆಗಳಲ್ಲಿ ನಡೆಯಲಿದೆ ಎಂದರು. ಈ ಸಕಾಲದಲ್ಲಿ ಒಟ್ಟು 1025 ಸೇವೆಗಳು ದೊರೆಯುತ್ತದೆ.

ಸಕಾಲ ಸಪ್ತಾಹ ಕಾರ್ಯಕ್ರಮಕ್ಕೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಹಾಗೂ ಸಕಾಲ ಸಚಿವರಾದ ಸುರೇಶ್ ಕುಮಾರ್ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ವರ್ಚುವಲ್ ಆಗಿ ಸೋಮವಾರ ವಿಧಾನಸೌಧದಲ್ಲಿ ಚಾಲನೆ ನೀಡಿದರು.

ಈ ಉದ್ಘಾಟನಾ ಕಾರ್ಯಕ್ರಮವನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಮೈಸೂರಿನ ಅಪರ ಜಿಲ್ಲಾಧಿಕಾರಿ ಬಿ.ಎಸ್. ಮಂಜುನಾಥಸ್ವಾಮಿ, ಹಾಗೂ ಇತರೆ ಇಲಾಖೆ ಅಧಿಕಾರಿಗಳು ವೀಕ್ಷಿಸಿ, ಸಚಿವರು ನೀಡಿದ ಸೂಚನೆಗಳನ್ನು ದಾಖಲಿಸಿಕೊಂಡರು.

ಪಿರಿಯಾಪಟ್ಟಣಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ” ಸಕಾಲ ಸಪ್ತಾಹ” ಆಚರಣೆ ಬಗ್ಗೆ ತಾಲ್ಲೂಕು ಆಡಳಿತ‌ ಕೈಗೊಂಡ ಕ್ರಮಗಳನ್ನು ವೀಕ್ಷಿಸಿ, ಸಕಾಲದಲ್ಲಿ ಉತ್ತಮ‌ ಸೇವೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯದರ್ಶಿರಾದ ಟಿ.ಎಂ. ವಿಜಯ್ ಭಾಸ್ಕರ್, ಸಕಾಲ ಮಿಷನ್ ಅಪಾರ ನಿರ್ದೇಶಕರಾದ ಡಾ.ಬಿ.ಆರ್.ಮಮತಾ ಸೇರಿದಂತೆ ಇತರರು ಹಾಜರಿದ್ದರು.

By admin