ಪಿರಿಯಾಪಟ್ಟಣ:ಭ್ರಷ್ಟಾಚಾರ ಮುಕ್ತ ಹಾಗೂ ಆರೋಗ್ಯಕರ ಸಮಾಜ ನಿರ್ಮಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಲೋಕಾಯುಕ್ತ ಇನ್ಸ್ಪೆಕ್ಟರ್ ರೂಪಶ್ರೀ ತಿಳಿಸಿದರು.
ಪಟ್ಟಣದ ತಾಲ್ಲೂಕು ಆಡಳಿತ ಭವನದಲ್ಲಿ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ, ತಾಲ್ಲೂಕು ಆಡಳಿತ ಹಾಗೂ ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ ಭ್ರಷ್ಟಾಚಾರದ ವಿರುದ್ಧ ಹಮ್ಮಿಕೊಂಡಿದ್ದ ಜಾಗೃತಿ ಅರಿವು ಸಪ್ತಾಪ-2023 ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರಿ ನೌಕರರು ಜನರ ಸೇವೆಗಾಗಿ ನೇಮಕಗೊಂಡಿದ್ದು, ಸಾರ್ವಜನಿಕರು ತಮ್ಮ ದಿನ ನಿತ್ಯದ ಕೆಲಸಗಳಿಗೆ ಸರ್ಕಾರಿ ಕಚೇರಿಗಳಲ್ಲಿ ಬಂದಥಹ ಸಂದರ್ಭದಲ್ಲಿ ಅವರನ್ನು ವಿನಃ ಕಾರಣ ಅಲೆಡಾಡಿಸದೆ, ಹಣಕ್ಕಾಗಿ ಬೇಡಿಕೆ ಹಿಡುವ ಬದಲಾಗಿ ತ್ವರಿತ ಗತಿಯಲ್ಲಿ ಅವರ ಕೆಲಸಗಳನ್ನು ಮಾಡಿಕೊಡಬೇಕು, ಈ ನಿಟ್ಟಿನಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡಲು ಕೈಜೋಡಿಸಬೇಕು. ವರ್ಷಾಂತ್ಯಕ್ಕೆ ಎಲ್ಲಾ ನೌಕರರು ತಮ್ಮ ಚರಾಸ್ತಿ ಮತ್ತು ಸ್ಥಿರಾಸ್ತಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು, ಲೋಕಾಯುಕ್ತ ವ್ಯಾಪ್ತಿಗೆ ದೇಶದ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಗೌರವಧನ ಅಥವಾ ವೇತನ ಪಡೆಯುವ ಸಂಸ್ಥೆಗಳು, ರಾಜ್ಯಗಳಲ್ಲಿರುವ ಸಂಘ-ಸಂಸ್ಥೆಗಳು, ಇಲಾಖೆಗಳು, ಸರ್ಕಾರೇತರ ಸಂಸ್ಥೆಗಳು ಬರುತ್ತವೆ. ಎಲ್ಲಾ ಭ್ರಷ್ಟಾಚಾರ ಕಂಡುಬಂದರೆ, ಲೋಕಾಯುಕ್ತ ದಾಳಿ ನಡೆಸುತ್ತದೆ. ಸರ್ಕಾರದ ಕೆಲಸಕ್ಕೆ ಯಾರಾದರೂ ಲಂಚ ಕೇಳಿದರೆ ಸಾರ್ವಜನಿಕರು ದೂರು ನೀಡಬೇಕು ಎಂದರು.
ತಹಶೀಲ್ದಾರ್ ಕುಂಞಿ ಅಹಮದ್ ಮಾತನಾಡಿ ಸಮಾಜದಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರವನ್ನು ತೊಲಗಿಸಿ ಅಭಿವೃದ್ಧಿಗೆ ಕೈ ಜೋಡಿಸಲು ಎಲ್ಲರೂ ಪಣ ತೊಡಗಬೇಕು. ಧರ್ಮವನ್ನು ಯಾರು ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ
2023ರ ಅಂಕಿಅಂಶಗಳ ಪ್ರಕಾರ ವಿಶ್ವದ 180 ದೇಶಗಳ ಪೈಕಿ ಭಾರತವು ಭ್ರಷ್ಟಾಚಾರದಲ್ಲಿ 85ನೇ ಸ್ಥಾನದಲ್ಲಿದೆ. ಇದನ್ನು ಶೂನ್ಯಕ್ಕಿಳಿಸಬೇಕು. ಆ ನಿಟ್ಟಿನಲ್ಲಿ ಸರ್ಕಾರಿ ನೌಕರರು ಕಾನೂನಿಗೆ ಅನುಗುಣವಾಗಿ, ನಿಯಮ ಮೀರದಂತೆ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಪೃಥ್ವಿ ಮಾತನಾಡಿ ಜನರ ಆರೋಗ್ಯ ರಕ್ಷಣೆಯ ಉದ್ದೇಶಕ್ಕಾಗಿ ನೇಮಕಗೊಂಡಿರುವ ನಾವುಗಳು ಸಾರ್ವಜನಿಕರ ಸೇವೆಗೆ ಮೊದಲ ಆದ್ಯತೆ ನೀಡಬೇಕಿದೆ, ಅದನ್ನು ಬಿಟ್ಟು ಯಾರ ಮೇಲೂ ಅಧಿಕಾರ ಚಲಾಯಿಸಬಾರದು, ಗ್ರಾಮೀಣ ಪ್ರದೇಶದ ಜನರು ನಮ್ಮನ್ನು ನಂಬಿ ಆಸ್ಪತ್ರೆಗೆ ಬರುತ್ತಾರೆ ನಾವು ಅವರ ನಂಬಿಕೆಗೆ ಚ್ಯುತಿ ಬಾರದಂತೆ ಕೆಲಸ ನಿರ್ವಹಿಸುತ್ತಿರುವ ಮೂಲಕ ಅವರ ಆರೋಗ್ಯ ರಕ್ಷಣೆಯ ಟೊಂಕ ಕಟ್ಟಿ ನಿಲ್ಲಬೇಕು , ವೈದ್ಯರು ರೋಗಿಗಳ ಬಳಿ ಹಣ ಪಡೆಯದೇ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈಖರಿ ಪರಿಶೀಲನೆ ನಡೆಸಿ ಸಾರ್ವಜನಿಕರು ಹಾಗೂ ಆಸ್ಪತ್ರೆ ಸಿಬ್ಬಂದಿಗಳಿಂದ ಆಹವಾಲು ಆಲಿಸಿದರು.
ಕಾರ್ಯಕ್ರಮದಲ್ಲಿ ಭ್ರಷ್ಟಾಚಾರದ ವಿರುದ್ಧದ ಜಾಗೃತಿ ಸಪ್ತಾಹದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಶಿರಸ್ತೇದಾರ್ ಶಕೀಲಾಬಾನು, ಉಪ ತಹಶೀಲ್ದಾರ್ ವಿನೋದ್ ಕುಮಾರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ, ಎಡಿಎಲ್ಆರ್ ಮುನಿಯಪ್ಪ, ವೈದ್ಯರಾದ ಡಾ.ಸಚ್ಚಿದಾನಂದ ಮೂರ್ತಿ, ಡಾ.ಶಿವ ಪ್ರಕಾಶ್, ಡಾ.ಚಂದ್ರಾವತಿ, ಡಾ.ಪ್ರಮೋದ್, ಡಾ.ದಿವ್ಯಶ್ರೀ, ಸಿಬ್ಬಂದಿಗಳಾದ ಜಯಂತಿ, ಗೀತಾ, ನಿಶಾಂತ್, ತ್ರಿವೇಣಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
