ಅಭಿನಯಶಾರದೆ ದಿಟ್ಟಕಲಾವಿದೆ ಜಯಂತಿಯ ಮೂಲ ಹೆಸರು ಕಮಲಕುಮಾರಿ. ೧೯೪೫ರಲ್ಲಿ ಬಳ್ಳಾರಿಯಲ್ಲಿ ಜನಿಸಿ ೨೦೨೧ರಲ್ಲಿ ಬೆಂಗಳೂರಲ್ಲಿ ನಿಧನರಾದ ಈಕೆ ಚಂದನವನದ ಅತ್ಯಂತ ಬೋಲ್ಡ್ & ಬ್ಯುಟಿಫ಼ುಲ್ ಹೀರೋಯಿನ್! ವರನಟನನ್ನು ‘ರಾಜ್’ ಎಂದು ಕರೆಯುತ್ತಿದ್ದ ಏಕೈಕ ನಟಿ! ‘ಜೇನುಗೂಡು'[೧೯೬೩] ಚಿತ್ರದ ಮೂಲಕ ಎಂಟ್ರಿ ನೀಡಿದ ಜಯಂತಿ ರಾಜ್‌ಕುಮಾರ್ ಜತೆ ನಟಿಸಿದ ಚೊಚ್ಚಲ ಫ಼ಿಲಂ ‘ಚಂದವಳ್ಳಿಯತೋಟ'[೧೯೬೪]. ಆನಂತರ ಡಾ||ರಾಜ್‌ಜತೆ ೩೯ಚಿತ್ರಗಳಲ್ಲಿ ನಟಿಸಿ ರಾಜಣ್ಣನೆದುರು ನಟಿಸಿದ ನಾಯಕಿಯರಲ್ಲಿ ಪ್ರಥಮಸ್ಥಾನ ಗಳಿಸಿದ್ದರು! ಜೇಡರಬಲೆ-ಬಹದ್ದೂರ್‌ಗಂಡು ಚಿತ್ರಗಳಲ್ಲಿ ಈಜುಡುಗೆ ತೊಟ್ಟು, ಬೆಟ್ಟದಹುಲಿ ಚಿತ್ರದಲ್ಲಿ ಮೈಮಾಟ ಪ್ರದರ್ಶಿಸಿ ಪಡ್ಡೆಹುಡುಗರ ನಿದ್ದೆಗೆಡಿಸಿದ್ದ ರತಿ! ರಾಜ್-ಕಲ್ಯಾಣ್-ಉದಯ್-ಅರುಣ್‌ಕುಮಾರರುಗಳಲ್ಲದೇ, ರಾಜೇಶ್, ಶ್ರೀನಾಥ್, ವಿಷ್ಣುವರ್ಧನ್, ಅಂಬರೀಷ್ ಒಳಗೊಂಡಂತೆ ಕನ್ನಡದ ಬಹುತೇಕ ಎಲ್ಲಾ ಹೀರೋಗಳ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದರು. ೪ಬಾರಿ ಅತ್ಯುತ್ತಮನಟಿ, ೨ಬಾರಿ ಅತ್ಯುತ್ತಮ ಪೋಷಕನಟಿ ಕರ್ನಾಟಕ ರಾಜ್ಯ ಪ್ರಶಸ್ತಿ ಲಭಿಸಿತ್ತು. ೫ಬೇರೆಬೇರೆ ರಾಜ್ಯಗಳ ಪ್ರಶಸ್ತಿ, ಫ಼ಿಲಂಫ಼ೇರ್ ಪ್ರಶಸ್ತಿ ಹಾಗೂ ರಾಷ್ಟ್ರಪ್ರಶಸ್ತಿಯನ್ನೂ ಗಳಿಸಿದ್ದರು!

೨೦೦ಕ್ಕೂ ಹೆಚ್ಚು ಕನ್ನಡ ಫ಼ಿಲಂ ಸೇರಿದಂತೆ ಹಿಂದಿ, ಮರಾಠಿ, ತೆಲುಗು, ತಮಿಳು, ಮಲಯಾಳಂ, ತುಳು ಹಾಗೂ ಇಂಗ್ಲಿಷ್ [೨೦೧೬ರಲ್ಲಿ ೧೨ಎಪಿಸೋಡ್‌ವುಳ್ಳ ೧೯೫ದೇಶಗಳಲ್ಲಿ ಟೆಲಿಕಾಸ್ಟ್‌ಗೊಂಡ ಟಿ.ವಿ.ಸೀರಿಯಲ್! ಇದಲ್ಲದೆ ತಮಿಳಿನ ವಸಂತಂ, ಕನ್ನಡದ ಅಮೃತವರ್ಷಿಣಿ ಹಾಗೂ ಒಂದೇಗೂಡಿನಹಕ್ಕಿಗಳು ಟಿ.ವಿ.ಧಾರಾವಾಹಿಗಳಲ್ಲೂ ಮನೋಜ್ಞವಾಗಿ ಅಭಿನಯಿಸಿದ್ದರು]. ಹೀಗೆ ೮ಭಾಷೆಗಳ ಒಟ್ಟು ೫೦೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಏಕೈಕ ಕನ್ನಡ ಅಕ್ಟ್ರೆಸ್! ೪೦ ವರ್ಷ[೧೯೬೧-೨೦೦೦] ಕಾಲಘಟ್ಟದ ಜಯಂತಿ ನಟನೆಯ ಫ಼ಿಲಂಸ್ ಎಂದರೆ ಸಿನಿಪ್ರೇಕ್ಷಕರು ಮುಗಿಬೀಳುತ್ತಿದ್ದರು, ಎಲ್ಲವಯಸ್ಸಿನ ಗಂಡಸರೂ ರೋಮಾಂಚನಗೊಳ್ಳುತ್ತಿದ್ದರು! ಅಪ್‌ಟುಡೇಟ್ ಹೀರೋಯಿನ್‌ಗೆ ಇರಬೇಕಾದ ಎಲ್ಲಾ ಗುಣ, ಲಕ್ಷಣ, ಪ್ರತಿಭೆ, ಸೌಂದರ್ಯ, ಹೆಚ್ಚಾಗೆ ಇದ್ದ ಜಯಂತಿಗೆ, ಜಯಂತಿಯೇ ಸರಿಸಾಟಿ ಎಂದರೆ ಅತಿಶಯೋಕ್ತಿಯಲ್ಲ?! ‘ಕಣ್ಣೀರು’ ಚಿತ್ರಪ್ರದರ್ಶನ ಅವಧಿಯು ‘ಗಿನ್ನಿಸ್’ ದಾಖಲೆ ಪುಸ್ತಕ ಸೇರಿತು!

೧೯೫೭ರಲ್ಲಿ ಬಿಡುಗಡೆಯಾದ ‘ರತಿನಿರ್ವೇದಂ’ ತಮಿಳು ಚಿತ್ರದಲ್ಲಿ ನಟಿಸಿದಾಗ ಜಯಂತಿಗೆ ಕೇವಲ ೧೨ವರ್ಷ ವಯಸ್ಸು! ಕಾಲಿವುಡ್‌ನ ಎಂಜಿಆರ್, ಶಿವಾಜಿಗಣೇಶನ್, ಜೆಮಿನಿಗಣೇಶನ್, ಎಸ್ಸೆಸ್‌ರಾಜೇಂದ್ರನ್, ಮುತ್ತುರಾಮನ್, ಜೈಶಂಕರ್, ಮುಂತಾದ ಸೂಪರ್ ಸ್ಟಾರ್‌ಗಳ ಜತೆಯಲ್ಲಿ ಪಡಕೋಟಿ, ಮೊಗರಾಸಿ, ಇರುವರ್‌ಉಳ್ಳಂ, ಕಾದಲ್‌ಪಡುತ್ತಂಪಾಡು, ಕಾರ್ತಿಕದೀಪಮ್, ಕಲೈಕೋವಿಲ್, ಅಣ್ಣಇಲ್ಲಂ, ವೀರಾಧಿವೀರನ್, ಕರ್ಣನ್, ಭಾಮಾವಿಜಯಂ, ಮುಂತಾದ ಹಲವಾರು ಫ಼ಿಲಮ್‌ಗಳಲ್ಲಿ ನಟಿಸಿ ಧೂಳೆ ಬ್ಬಿಸಿದ್ದರು. ಎನ್.ಟಿ.ಆರ್, ಅಕ್ಕಿನೇನಿನಾಗೇಶ್ವರರಾವ್, ಕಾಂತರಾವ್, ರಂಗರಾವ್, ಕೃಷ್ಣ, ಮುಂತಾದ ಅತಿರಥ ಮಹಾರಥ ನಟರುಗಳ ದ.ಭಾರತದ ಶ್ರೀಮಂತ ತೆಲುಗು ಚಿತ್ರರಂಗದಲ್ಲೂ ಜಯಂತಿ ತಮ್ಮದೇ ಛಾಪು ಮೂಡಿಸಿದ್ದರು. ನೂರಾರು ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದ ಈ ಕನ್ನಡತೀ.. ಟಾಲಿವುಡ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದರು. ಉಧಾ:-ಜಗದೇಕವೀರುನಿಕಥಾ, ಭಾರ್‍ಯಾಭರ್ತಲು, ಬೊಬ್ಬಿಲಿಯುದ್ಧಂ, ಅಗ್ಗಿಪಿಡುಗು, ಸುಮಂಗಲಿ, ರಹಸ್ಯಂ, ಭಕ್ತಪ್ರಹ್ಲಾದ, ಬಡಿಪಂತುಲು ಕಲೆಕ್ಟರ್‌ಜಾನಕಿ, ಶಾರದಾ, ಸಂಸಾರಸಾಗರಂ,
ಗಾಂಧಿಪುಟ್ಟಿನದೇಶಂ,ಬಂಗಾರುಬಾಬು,ದೇವದಾಸು,ಅಮ್ಮಮನಸು,ಕುಲಗೌರವಂ,ದೇವುಡುಚೇಸಿನಪೆಳ್ಳಿ,ರಾಮಯ್ಯತಂಡ್ರಿ,ಬೊಮ್ಮರಿಲ್ಲುಕುಮಾರರಾಜ,ಕಮಲಮ್ಮಕಮಟಂ,ಅಂತುಲೇನಿವಿಂತಕಥಾ,ಕೊಂಡವೀಟಿಸಿಂಹಂ,ಅಗ್ನಿಪೂಲು,ಜಸ್ಟಿಸ್‌ಚೌಧ್ರಿ,ಗರ್ಲ್‌ಫ಼್ರೆಂಡ್, ಇತ್ಯಾದಿ ಸಿನಿಮಾಗಳಲ್ಲಿ ನಟಿಸಿ ಕೀರ್ತಿಗಳಿಸಿದ್ದರು. ಪ್ರೇಮ್‌ನಜ಼ೀರ್ ಮತ್ತಿತರ ಮೆಘಾಸ್ಟಾರ್‌ಗಳ ಜತೆ:-ಪಲಟ್ಟುಕೋಮನ್, ಕಟ್ಟುಪೂಕ್ಕಳ್, ಲಕ್ಷ ಪ್ರಭು, ಕಳಿಯೋದಂ, ಕರುತಪೌರ್ಣಮಿ, ವಿಲಕ್ಕಪ್ಪೆಟ್ಟಕಣಿ ಮುಂತಾದ ಮಲಯಾಳಂ ಚಿತ್ರಗಳಲ್ಲಿ ನಟಿಸಿ ಮಾಲಿವುಡ್‌ನಲ್ಲೂ ನೂತನ ಚರಿತ್ರೆ ಬರೆದಿದ್ದರು. ಹಿಂದಿ[ಮರಾಠಿ]ಯ ಲಾಲ್‌ಬಾಂಗ್ಲಾ, ತೀನ್‌ಬಹುರಾಣಿಯಾ, ಗೂಂಡಾ, ತುಮ್ಸೆಅಚ್ಚಾಕೌನ್‌ಹೈ, ಇತ್ಯಾದಿ ಸಿನಿಮಾ ಗಳಲ್ಲೂ ನಟಿಸುವ ಮೂಲಕ ಬಾಲಿವುಡ್‌ನ ಮೈಲುಗಲ್ಲಾಗಿ ಉಳಿದಿದ್ದಾರೆ!
ಶ್ರೀಕೃಷ್ಣದೇವರಾಯನ ಪಟ್ಟದರಸಿ, ನಾಗರಹಾವಿನ ಒನಕೆಓಬವ್ವ, ಎಡಕಲ್ಲುಗುಡ್ಡದಮೇಲಿನ ಮಾಧವಿ, ಮಿಸ್‌ಲೀಲಾವತಿ, ಚಿಕ್ಕಮ್ಮ, ಮುಂತಾದ ಅನೇಕ ಅಪ್ರತಿಮ ಪಾತ್ರಧಾರಿ ಜಯಂತಿಗೆ ನಿಜ ಜೀವನದಲ್ಲಿ ಅಷ್ಟೇನೂ ಸುಖ-ಶಾಂತಿ-ನೆಮ್ಮದಿ-ತೃಪ್ತಿ ಸಿಗಲಿಲ್ಲ? ಇಷ್ಟಾದರೂ ತಾವು ಬದುಕಿರುವರೆಗೂ ಖುಷಿಯಾಗಿದ್ದು ತಾವೂ ನಗುತ್ತ, ಎಲ್ಲರನ್ನೂ ನಗಿಸುತ್ತ, ಸಾರ್ಥಕ ಬದುಕಿಗೆ ‘ವಿದಾಯ’ ಹೇಳಿದ ದ.ಭಾರತದ ಬಲು ಅಪರೂಪದ ನಟಿ. ತಮಗೆ ದೊರೆತ ಪ್ರತಿಯೊಂದು ಪಾತ್ರಕ್ಕೂ ಜೀವಕಳೆ ತುಂಬುವ ತಾಕತ್ ಅವರಿಗಿತ್ತು. ಭಾರತೀಯ ಚಿತ್ರರಂಗದಲ್ಲಿ ಕನ್ನಡದ ಕಂಪನ್ನು ಪಸರಿಸಿದ ಕಲಾರತ್ನ. ಸರಳ-ಸಜ್ಜನಿಕೆಯ ಜಯಂತಿ ಓರ್ವ ಮಹಾನ್ ಕಲಾವಿದೆ, ಕನ್ನಡಿಗರ ಪಾಲಿಗೆ ಸುಂದರ ಅಮರ ಅಭಿನೇತ್ರಿ! ಕಲೆ ಚಿರಸ್ಮರಣೀಯ!

ಕುಮಾರಕವಿ ಬಿ.ಎನ್.ನಟರಾಜ್ (೯೦೩೬೯೭೬೪೭೧)
ಬೆಂಗಳೂರು-೫೬೦೦೭೨