ಎಚ್.ಡಿ.ಕೋಟೆ: ತಾಲ್ಲೂಕಿನ ಕಂಚಮ್ಮಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಆದಿಶಕ್ತಿ ಮಲೆಯಾಳದಮ್ಮ ಶ್ರೀ ಜಗನ್ಮಾತೆ ಭದ್ರಮಹಾಕಾಳಿ ಅಮ್ಮ ದೇವಿಯವರ ಜಾತ್ರಾ ಮಹೋತ್ಸವ ಭಾನುವಾರ ಶನೇಶ್ವರಸ್ವಾಮಿ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ, ದೇವಸ್ಥಾನದ ಗುಡ್ಡಪ್ಪ ಕುಮಾರಸ್ವಾಮಿ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.

ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿವರ್ಷದಂತೆ ವರ್ಷವೂ ದೇವರನ್ನು ಕಪಿಲ ನದಿಗೆ ಕರೆದೋಯ್ಯದು ದೇವರ ವಿಗ್ರಹಮೂರ್ತಿಗಳನ್ನು ತೊಳೆದು ವಿಶೇಷ ಪೂಜೆ ಸಲ್ಲಿಸಿ ದೇವರನ್ನು ದೇವಸ್ಥಾನದ ಬಳಿಗೆ ಕರೆತರಲಾಯಿತು. ನಡುವೆ ಭಕ್ತರಿಂದ ಹಾಲು ಹರಿವೆ, ಬಾಯಿ ಬೀಗ ಸೇವೆ ಜರುಗಿತು. ವಾದ್ಯಗೋಷ್ಠಿಗಳು ಮೊಳಗಿದವು. ಇದಕ್ಕೂ ಮುನ್ನ ದೇವಸ್ಥಾನವನ್ನು ವಿವಿಧ ಬಣ್ಣಗಳಿಂದ ಬಳಿದು, ತಳಿರುತೋರಣ ಕಟ್ಟಿ ಸಿಂಗಾರಿಸಲಾಗಿತ್ತು. ಇದಲ್ಲದೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.

ಗ್ರಾಮದ ಪ್ರಮುಖ ಬೀದಿಯಿಂದ ಅಮ್ಮನವರ ಕಳಶದೊಂದಿಗೆ ದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ದೇವಸ್ಥಾನ ಬಳಿಗೆ ಕರೆತರಲಾಯಿತು. ದಾರಿಯುದ್ದಕ್ಕೂ ಭಕ್ತರಿಂದ ವಿವಿಧ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಇದರೊಂದಿಗೆ ಜಾನಪದ ಕಲಾ ತಂಡಗಳು ನೃತ್ಯ ಪ್ರದರ್ಶಿಸಿದವು. ಇದರೊಂದಿಗೆ ವೀರಗಾಸೆ ನೃತ್ಯವನ್ನು ಮಾಡಲಾಯಿತು. ದೇವಸ್ಥಾನದ ಗುಡ್ಡಪ್ಪ ಕುಮಾರಸ್ವಾಮಿ ಅವರು ದೇವರ ವಿಗ್ರಹವನ್ನು ದೇವಸ್ಥಾನದ ಬಳಿಗೆ ಕರೆತಂದರು.

ನಂತರ ದೇವಸ್ಥಾನದಲ್ಲಿ ದೇವತೆಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಮಾಡಿದರು. ಬಸವ, ಕುದುರೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಜಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾದರು. ಹರಕೆ ತಿರಿಸಿದರು. ನಂತರ ಅನ್ನ ಸಂತರ್ಪಣೆ ನಡೆಯಿತು.

ಧಾರ್ಮಿಕ ಸಭೆ: ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಅವರು ಧಾರ್ಮಿಕ ಸಭೆಯನ್ನು ಉದ್ಘಾಟಿಸಿ, ಧಾರ್ಮಿಕ ಕಾರ್ಯಕ್ರಮಗಳು ಸಂಸ್ಕೃತಿಯನ್ನು ಬಿಂಬಿಸಲಿದ್ದು, ಆಚಾರ-ವಿಚಾರಗಳನ್ನು ನೆನಪಿಗೆ ತರಲಿವೆ. ಪುರಾತನ ಕಾಲದಿಂದಲೂ ದೇವರ ಬಗ್ಗೆ ಜನರಲ್ಲಿ ನಂಬಿಕೆಯಿದೆ ಎಂದು ಅವರು ತಿಳಿಸಿದರು. ಉದ್ಯಮಿ ಮಂಜೇಗೌಡ, ಮಲ್ಲೇಶ್ ಶಿರಮ್ಮಳ್ಳಿ, ನಗರ ಪಾಲಿಕೆ ಗುತ್ತಿಗೆದಾರ ಶಿವಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೋವಿಂದನಾಯಕ, ಉಪಾಧ್ಯಕ್ಷ ರಂಗಸ್ವಾಮಿ, ಸದಸ್ಯರಾದ ಶೇಖರ್, ಮಲ್ಲೇಶ್, ಶಿವಣ್ಣ, ರಾಜ್ಯ ಕಲ್ಯಾಣ ರೈತ ಸಂಘದ ಅಧ್ಯಕ್ಷ ಚಂದನ್‌ಗೌಡ, ಸ್ವಾಮಿ, ಮಹದೇವಪ್ಪ, ಸ್ವಾಮಿ, ಸಿದ್ದರಾಮು, ಪ್ರಕಾಶ್, ಶ್ರೀಧರ್, ಎಚ್.ವಿ.ಮಂಜುನಾಥ್, ಕಲ್ಲಹಳ್ಳಿ ನಾರಾಯಣ್, ಉದಯ್‌ಕುಮಾರ್, ರವಿ ಸೇರಿದಂತೆ ದೇವಸ್ಥಾನ ಕಮಿಟಿ ಸದಸ್ಯರು, ಭಕ್ತರು ಭಾಗವಹಿಸಿದ್ದರು.