ಮೈಸೂರು, ನವೆಂಬರ್. 13(ಕರ್ನಾಟಕ ವಾರ್ತೆ):- ಕಂದಾಯ ವಿಷಯಗಳ ಸಂಬಂಧ ಜಿಲ್ಲೆಯ ಎಲ್ಲಾ ತಾಲ್ಲೂಕು ಅಧಿಕಾರಿಗಳ ಜೊತೆಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ವಿಡಿಯೋ ಸಂವಾದದ ಮೂಲಕ ಶುಕ್ರವಾರ ಸಭೆ ನಡೆಸಿ ಚರ್ಚಿಸಿದರು.

ಈ ವೇಳೆ ಅವರು ಮಾತನಾಡಿ, ನವೆಂಬರ್ ಮಾಹೆಯ ಕೊನೆಯ ವಾರದಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಭೇಟಿ ನೀಡಲಿದ್ದು, ಸದರಿ ಭೇಟಿಯ ದಿನದಂದು ಸಾರ್ವಜನಿಕರ ಕುಂದು ಕೊರತೆಗಳ ಆಲಿಸಲು ‘ಸ್ವಂದನ ಕಾರ್ಯಕ್ರಮ’ ನಡೆಸಿ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಆರ್.ಟಿ.ಸಿ. ಕಾಲಂ 3 ಮತ್ತು 9 ಹಾಗೂ ಪೈಕಿ ಆರ್‌ಟಿಸಿ ಗಳನ್ನು ಒಗ್ಗೂಡಿಸುವ ಪ್ರಕ್ರಿಯೆಯ ವ್ಯತ್ಯಾಸವನ್ನು ಸರಿಪಡಿಸುವ ನಿಟ್ಟಿನಲ್ಲಿ ಎಚ್.ಡಿ.ಕೋಟೆ, ಸರಗೂರು ಹಾಗೂ ನಂಜನಗೂಡು ತಾಲ್ಲೂಕಿನಲ್ಲಿ ಶೇಖಡಾವಾರು ಕಡಿಮೆ ಇದ್ದು, ಡಿಸೆಂಬರ್ ಮಾಹೆಯೊಳಗೆ ನಿಗಧಿಪಡಿಸಿರುವ ಗುರಿಗಿಂತ ಹೆಚ್ಚು ಪ್ರಗತಿ ಸಾಧಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕಂದಾಯ ವಿಷಯಗಳ ಸಂಬಂಧ ಪ್ರತಿ ಹದಿನೈದು ದಿನಗಳಿಗೊಮ್ಮೆ ಸಭೆ ನಡೆಸಿ ಎಲ್ಲಾ ತಾಲ್ಲೂಕುಗಳಲ್ಲಿ ನಿಗದಿತ ಗುರಿಯನ್ನು ಸಾಧಿಸುವ ಸಂಬಂಧ ಪರಿಶೀಲನೆ ಮಾಡಲಾಗುವುದು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥ್‌ಸ್ವಾಮಿ, ಉಪವಿಭಾಗಾಧಿಕಾರಿ ಡಾ.ಎನ್.ಸಿ.ವೆಂಕಟರಾಜು, ಭೂ ದಾಖಲೆಗಳ ಉಪ ನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರು, ಎಲ್ಲಾ ತಾಲ್ಲೂಕುಗಳ ತಹಸಿಲ್ದಾರರು ಉಪಸ್ಥಿತರಿದ್ದರು.

By admin