ಮೈಸೂರು- ಕಲಾವಿದರು ಸಾಧನೆ ಇಲ್ಲದೆ ಸತ್ತರೆ ಅದು ಸಾವಿಗೆ ಅವಮಾನ. ಆದರ್ಶವಿಲ್ಲದೆ ಬದುಕಿದರೆ ಅದು ಬದುಕಿಗೆ ಅಪಮಾನ ಆಗಲಿದೆ ಎಂದು ರಂಗಾಯಣದ ನಿರ್ದೇಶಕರಾದ ಅಡ್ಡಂಡ ಸಿ. ಕಾರ್ಯಪ್ಪ ಹೇಳಿದರು.
ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಯುವ ಸೌರಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ನೀತಿಗಳಲ್ಲಿಯೂ ಶಿಕ್ಷಣದಲ್ಲಿ ಸಂಗೀತ ಹಾಗೂ ಜನಪದಕ್ಕೆ ಆದ್ಯತೆಯಿದೆ. ಮುಂದಿನ ದಿನಗಳ ಕಲಾವಿದರಿಗೆ ಆಶಾದಾಯಕವಾಗಿ, ಉತ್ಸಾಹಿ ಚಿಲುಮೆಗಳಾಗಿ ಕಲೆಯನ್ನು ಕಟ್ಟೋಣ. ಅದಕ್ಕೆ ಬೇಕಾದ ತಯಾರಿಗೆ ರಂಗಾಯಣ ಯಾವಾಗಲೂ ಸಿದ್ಧ ಎಂದರು.
ಈಗ ಹವ್ಯಾಸಿ ಕಲಾವಿದರಿಗಾಗಿ ಭೂಮಿಗೀತದಲ್ಲಿ ‘ಪರ್ವ’ ನಾಟಕ ಪ್ರತರ್ಶನಕ್ಕೆ 35 ಕಲಾವಿದರು ಹಾಗೂ ‘ಸಂವಿಧಾನ’ ನಾಟಕಕ್ಕೂ ತಯಾರಿ ನಡೆಸುತ್ತಿದ್ದಾರೆ. ಎಂಟು ತಿಂಗಳಿಂದ ನಾನಾ ಅಭ್ಯಾಸ ಮಾಡುತ್ತಿದ್ದ ಕಲಾವಿದರಿಗೆ ಈಗ ಕಲೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಜ.2ರಿಂದ “ರಾಗ-ರಂಗಾಯಣ” ಹವ್ಯಾಸಿ ಕಲಾವಿದರಿಗಾಗಿ ನಿರಂತರ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್. ಮಂಜುನಾಥಸ್ವಾಮಿ ಅವರು, ಕೊರೋನಾದಿಂದ ರಾಜ್ಯದಲ್ಲಿ ಬಹಳಷ್ಟು ಮಂದಿ ನೋವನ್ನು ಅನುಭಸುತ್ತಿದ್ದು, ಇಲ್ಲಿಯವರೆಗೆ ಯಾವುದೇ ರೀತಿಯ ಸಾಮೂಹಿಕ ಚಟುವಟಿಕೆಗಳನ್ನು ನಡೆಸಲು ಆಗಿರಲಿಲ್ಲ. ಆದರೆ ಕಳೆದ ಎರಡು ದಿನಗಳಿಂದ ರೂಪಾಂತರಗೊಂಡ ಕೊರೋನಾದಿಂದಾಗಿ ಮತ್ತೊಂದು ಸಮಸ್ಯೆ ಎದುರಾಗುವ ಆತಂಕ ಮೂಡಿದೆ. ಏನೇ ಸಂಕಷ್ಟ ಬಂದರೂ ಸಹ ಅದನ್ನು ಎದುರಿಸುತ್ತೇವೆ ಎಂಬುದಕ್ಕೆ ನಾವು ಇಂದು ಸಾಮಾಜಿಕ ಅಂತರ ಕಾಯ್ದುಕೊಂಡು ನಡೆಸುತ್ತಿರುವ ಕಾರ್ಯಕ್ರಮವೇ ಸಾಕ್ಷಿ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಹೆಚ್.ಚನ್ನಪ್ಪ ಅವರು ಮಾತನಾಡಿ, ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಂಗೀತಕ್ಕೆ ಕಟಿ ಬದ್ಧ್ದವಾಗಿದ್ದು, ಇಡೀ ದೇಶದಲ್ಲೇ ಸಂಸ್ಕೃತಿಗೆ ಒಂದು ಇಲಾಖೆಯನ್ನು ತೆರದು ಅದರ ಮೂಲಕ ಕಲೆಯನ್ನ ಪೆÇ್ರೀತ್ಸಾಹಿಸುತ್ತಿರುವುದು ನಮ್ಮ ಹಿರಿಮೆಯಾಗಿದೆ. ಬಾಲಕರಿಂದ ಹಿಡಿದು ವಯೋವೃದ್ಧರವರೆಗೆ ವರ್ಷ ಪೂರ್ತಿ ವೈವಿದ್ಯಮಯ ಕಾರ್ಯಕ್ರಮಗಳನ್ನ ರೂಪಿಸಿ ಅವರಿಗೆ ವೇದಿಕೆಯನ್ನು ಕಲ್ಪಿಸಿಕೊಡುವ ಮೂಲಕ ಕಲೆಯನ್ನು ಉಳಿಸಿ ಬೆಳೆಸುವ ಕೆಲಸವನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡುತ್ತಾ ಬಂದಿದೆ ಎಂದು ಹೇಳಿದರು.
ಯುವ ಸೌರಭ ಕಾರ್ಯಕ್ರಮಕ್ಕೆ ಪ್ರತಿವರ್ಷ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವ ಕಾಲೇಜನ್ನು ಆಯ್ಕೆ ಮಾಡಿಕೊಂಡು ಕಾರ್ಯಕ್ರಮವನ್ನು ರೂಪಿಸಲಾಗುತ್ತಿತ್ತು. ಆದರೆ ಕೋವಿಡ್ 19ರ ಕಾರಣದಿಂದ ಈ ಕಿರುರಂಗಮಂದಿರಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಇಲಾಖೆಯ ಮಾರ್ಗಸೂಚಿಯಂತೆ ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸುವುದು ಮತ್ತು ಕಲಾವಿದರ ಪ್ರದರ್ಶನವನ್ನು ಜನರಿಗೆ ತಲುಪಿಸುವಂತೆ ಮಾಡುವುದಾಗಿತ್ತು. ಆದರೆ ಈ ಸಂದರ್ಭದಲ್ಲಿ ಎಲ್ಲಾ ಜನರನ್ನು ಒಗ್ಗೂಡಿಸಿಕೊಂಡು ಕಾರ್ಯಕ್ರಮವನ್ನು ಪ್ರದರ್ಶನ ಮಾಡುವ ಸಂದರ್ಭ ಇಲ್ಲದ ಕಾರಣ ಕಡಿಮೆ ಸಂಖ್ಯೆಯ ಜನರನ್ನ ಆಹ್ವಾನಿಸಿ ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿಕೊಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಕೋವಿಡ್ ಸಮಸ್ಯೆಯಿಂದಾಗಿ 8 ತಿಂಗಳ ಕಾಲ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಂಸ್ಕೃತಿ ಕಾರ್ಯಕ್ರಮಗಳು ವಿರಳವಾಗಿದ್ದು, ಪಂಚಾಯಿತಿ ಚುನಾವಣೆಯ ನೀತಿ ಸಂಹಿತೆಯು ಮುಗಿದ ತಕ್ಷಣ ಸರ್ಕಾರದ ಆದೇಶದಂತೆ ನೀತಿ ನಿಯಮಗಳನ್ನ ರೂಪಿಸಿಕೊಂಡು ಜಿಲ್ಲಾದ್ಯಂತ ಕಾರ್ಯಕ್ರಮ ರೂಪಿಸುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ರಂಗಾಯಣ ಜಂಟಿ ನಿರ್ದೇಶಕರಾದ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ರಂಗಕರ್ಮಿ ಬಿ.ಎಂ.ರಾಮಚಂದ್ರ ಸೇರಿದಂತೆ ಇತರರು ಹಾಜರಿದ್ದರು.

By admin