ಚಾಮರಾಜನಗರ: ಸ್ಪರ್ಧಾತ್ಮಕ ಯುಗದಲ್ಲಿ ಪರೀಕ್ಷೆಗಳನ್ನು ಎದುರಿಸುವವರು ವಿದ್ಯಾಭ್ಯಾಸಕ್ಕೆ ತೊಡಕಾಗಿರುವ ಮೊಬೈಲ್ ಹಾಗೂ ಸಾಮಾಜಿಕ ಮಾಧ್ಯಮಗಳಿಂದ ದೂರವಿರುವುದು ಒಳಿತು ಎಂದು ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಅಭಿಪ್ರಾಯಪಟ್ಟರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಬ್ಲ್ಯಾಕ್ ಅಂಡ್ ವೈಟ್ ಫೌಂಡೇಶನ್ ಹಾಗೂ ನಮ್ಮ ಗುಂಡ್ಲುಪೇಟೆ ತಂಡದ ಸಂಯುಕ್ತಾಶ್ರಯದಲ್ಲಿ ವಿಶ್ವ ಸಾಮಾಜಿಕ ಜಾಲತಾಣ ದಿನಾಚರಣೆ ಅಂಗವಾಗಿ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣ ದುಷ್ಪರಿಣಾಮ ಮತ್ತು ವೈಜ್ಞಾನಿಕ ಬಳಕೆ ಹಾಗೂ ಸೈಬರ್ ಕಾನೂನು ಕುರಿತು ವಿದ್ಯಾರ್ಥಿಗಳೊಂದಿಗೆ ಏರ್ಪಡಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಮಾತನಾಡಿ ಯಾವುದೇ ವಸ್ತುವನ್ನು ಸತತವಾಗಿ ಉಪಯೋಗಿಸುತ್ತಿದ್ದರೆ ಅವುಗಳಿಂದ ನಮಗೆ ದುಷ್ಪರಿಣಾಮಗಳು ಉಂಟಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಮೊಬೈಲ್ ಜೀವನದ ಅವಿಭಾಜ್ಯ ಅಂಗವಾಗಿದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಇದ್ದ ಪುಸ್ತಕ ಜ್ಞಾನದಿಂದ ಇಡೀ ದೇಶಕ್ಕೆ ಉತ್ತಮ ಸಂವಿಧಾನ ಕೊಟ್ಟರು. ವಿದ್ಯಾರ್ಥಿಗಳು ಇವರನ್ನು ಮಾದರಿಯಾಗಿಟ್ಟುಕೊಂಡು ಓದುವಿನ ಕಡೆ ಗಮನಹರಿಸಬೇಕು ಎಂದರು.


ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಮೊಬೈಲ್ ಹಾಗೂ ಸಾಮಾಜಿಕ ಜಾಲಾತಾಣಗಳಿಂದ ಸಾಕಷ್ಟು ಮಾಹಿತಿ ಸಿಕ್ಕರು ಕೂಡ ಅವಶ್ಯಕತೆಗಿಂತ ಹೆಚ್ಚು ಉಪಯೋಗಿಸಿ ಓದಿನ ಕಡೆ ಗಮನ ಹರಿಸದೆ ಇರುವುದು ವಿಪರ್ಯಾಸವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲಾತಾಣಗಳಿಂದ ದೂರವಿರುವುದು ಒಳಿತು. ಈಗಾಗಲೇ ದೇಶದಲ್ಲಿ ಶೇ. ೪೦ರಷ್ಟು ನಿರುದ್ಯೋಗ ಸಮಸ್ಯೆಯಿದ್ದು, ವಿದ್ಯಾರ್ಥಿಗಳು ಉದ್ಯೋಗ ಪಡೆಯುವ ನಿಟ್ಟಿನಲ್ಲಿ ದೀರ್ಘಕಾಲ ಒದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಅವಶ್ಯಕತೆಗೆ ಅನುಗುಣವಾಗಿ ಬಳಸಿ ಅದರಿಂದ ಉಂಟಾಗುವ ದುಷ್ಪರಿಣಾಮಗಳಿಂದ ದೂರವಿರಬೇಕು ಎಂದರು.
ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಡೀನ್ ಮತ್ತು ನಿರ್ದೇಶಕರಾದ ಡಾ. ಜಿ.ಎಂ. ಸಂಜೀವ್ ಅವರು ಮಾತನಾಡಿ ಮೊಬೈಲ್ ಹಾಗೂ ಸಾಮಾಜಿಕ ಜಾಲಾತಾಣಗಳ ಪ್ರಭಾವ ಹೆಚ್ಚಾದಂತೆ ಸಂಬಂಧಗಳಿಗೆ ಬೆಲೆ ಕೊಡುವುದನ್ನು ಮರೆತಿದ್ದೇವೆ. ವಿದ್ಯಾರ್ಥಿಗಳು ಓದುವುದರ ಕಡೆ ಗಮನವಿಲ್ಲದೆ ಪಬ್‌ಜೀ ಗಳಂತಹ ವಿಡೀಯೊ ಗೇಮ್ಸ್‌ಗಳಿಗೆ ಒಳಗಾಗಿರುವುದು ವಿಷಾಧನೀಯವಾಗಿದೆ ಇಂತಹ ವೀಡೀಯೊ ಗೇಮ್‌ಗಳಿಂದ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ ಹದಗೆಡುತ್ತದೆ. ಸತತವಾಗಿ ಓದುವುದನ್ನು ಮೈಗೂಡಿಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳು ಇದರಿಂದ ಹೊರಬರಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ. ಪಿ. ದೇವರಾಜ್ ಅವರು ಮಾತನಾಡಿ ಈಗಿನ ಕಾಲದ ವಿದ್ಯಾರ್ಥಿಗಳು ಬ್ಯಾಗ್, ಪುಸ್ತಕಗಳ ಬದಲಾಗಿ ಹೆಚ್ಚು ಸಮಯ ಮೊಬೈಲ್‌ನಲ್ಲಿ ಕಳೆಯುತ್ತಾರೆ. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಳ್ಳದಿದ್ದರೆ ಅದರ ದುಷ್ಪರಿಣಾಮವನ್ನು ನಾವೇ ಅನುಭವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಇವುಗಳ ದುಷ್ಪರಿಣಾಮಗಳ ಅರಿವು ಅಗತ್ಯ ಎಂದರು.
ಜಿಲ್ಲೆಯ ಸೆನ್ ಕ್ರೈಂ ಪೊಲೀಸ್ ಠಾಣೆ ಮತ್ತು ಡಿ.ಎಸ್.ಬಿ. ಬ್ರಾಂಚ್, ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಎಂ. ಮಹಾದೇವಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಬಿ. ಮಲ್ಲಿಕಾರ್ಜುನ್, ಬ್ಲ್ಯಾಕ್ ಅಂಡ್ ವೈಟ್ ಫೌಂಡೇಶನ್ ಅಧ್ಯಕ್ಷರಾದ ಶಾಂತರಾಜ್ ಕೆಸ್ತೂರು, ನಮ್ಮ ಗುಂಡ್ಲುಪೇಟೆ ತಂಡದ ಅರುಣ್ ಮಹಾದೇವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.