ಹಿಂದಿನ ಲೇಖನದಲ್ಲಿ ನಾವು Irritable Bowel Syndrome (IBS) ಅಥವಾ ಗ್ರಹಣಿ ರೋಗದ ಪರಿಚಯ ಮತ್ತು ಕಾರಣಗಳನ್ನು ವಿವರಿಸಿದ್ದೇವೆ. ಈ ಲೇಖನದಲ್ಲಿ ಅದರ ಪ್ರಮುಖ ಲಕ್ಷಣಗಳು ಮತ್ತು ರೋಗ ನಿರ್ಧಾರ ಹೇಗೆ ಮಾಡಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಮಲವಿಸರ್ಜನೆಯ ಸಮಯದಲ್ಲಿ ಆಗುವ ಬದಲಾವಣೆಗಳಿಂದ ಈ ಕಾಯಿಲೆಯ ರೋಗ ಲಕ್ಷಣಗಳನ್ನು ಕಂಡುಹಿಡಿದುಕೊಳ್ಳಬಹುದು. ಅವುಗಳೆಂದರೆ,

  • ಊಟ ಮಾಡಿದ ತಕ್ಷಣ ಮಲವಿಸರ್ಜನೆಗೆ ಹೋಗಬೇಕೆನ್ನಿಸುತ್ತದೆ.
  • ಪ್ರತಿದಿನ ಒಂದೇ ತರಹ ಮಲವಿಸರ್ಜನೆ ಆಗುವುದಿಲ್ಲ. ಇದು ಗ್ರಹಣಿ ರೋಗದ ಮೊದಲ ರೋಗಲಕ್ಷಣ.

ಮೊದಲನೆಯ ದಿನ ಗಟ್ಟಿಯಾದ ಮಲವಿಸರ್ಜನೆ.ಎರಡನೆಯ ದಿನ ತೆಳುವಾದ ಮಲವಿಸರ್ಜನೆ. ಮೂರನೇ ದಿನ ಗಟ್ಟಿ ಹಾಗೂ ಲೋಳೆ ಮಿಶ್ರಿತ ಮಲ ವಿಸರ್ಜನೆ.

  • ಮಲವು ಕೆಲವೊಮ್ಮೆ ದ್ರವರೂಪದಲ್ಲಿ, ಕೆಲವೊಮ್ಮೆ ಒಣಗಿದಂತಹ, ಅಲ್ಪಪ್ರಮಾಣದಲ್ಲಿ ಬರುವಂತಹದ್ದು, ಗ್ಯಾಸು ಮತ್ತು ಅಜೀರ್ಣ ಆಹಾರಾಂಶಗಳೊಂದಿಗೆ ನಿರ್ಗಮಿಸುತ್ತದೆ.
  • ಕೆಲವೊಮ್ಮೆ ಭೇದಿ ಸರಿಯಾಗಿ ಆಗದಿರುವುದರಿಂದ ಅಧಿಕ ಒತ್ತಡ ಹಾಕಬೇಕಾಗುತ್ತದೆ.
  • ಹೊಟ್ಟೆ ನೋವು, ಹೊಟ್ಟೆ ಉಬ್ಬರ ಲಕ್ಷಣಗಳು ಪದೇ ಪದೆ ಕಂಡು ಬರುತ್ತವೆ. ಈ ನೋವುಗಳು ಒಂದು ಸಾರಿ ಸಾಧಾರಣವಾಗಿ ಪ್ರಾರಂಭವಾಗಿ ತೀವ್ರ ಪ್ರಮಾಣಕ್ಕೆ ತಿರುಗುತ್ತದೆ.
  • ಆಹಾರ ಸುಲಭವಾಗಿ ಜೀರ್ಣವಾಗುವುದಿಲ್ಲ. ರೋಗಿಗೆ ಅರುಚಿ ಮತ್ತು ಆಹಾರದ ಆಸೆ ಕಡಿಮೆಯಾಗಿರುತ್ತದೆ.

ಆಹಾರ ಜೀರ್ಣವಾಗುವಾಗ ಮತ್ತು ಜೀರ್ಣವಾದ ನಂತರ ಹೊಟ್ಟೆಯುಬ್ಬರ ಉಂಟಾಗುತ್ತದೆ.

ಮನಸ್ಸು ದುರ್ಬಲವಾಗಿರುತ್ತದೆ. ಈ ಸ್ಥಿತಿಯಲ್ಲಿ ವ್ಯಕ್ತಿಗೆ ಮಲವಿಸರ್ಜನೆ ಹೆಚ್ಚಾಗಬಹುದು, ಅಂದರೆ ರೋಗಿಗೆ ಒತ್ತಡ, ಆತಂಕ ಅಥವಾ ಭಯದ ಸಮಯದಲ್ಲಿ ಮಲವಿಸರ್ಜನೆಗೆ ಹೋಗಬೇಕೆನ್ನುವ ತೀವ್ರವಾದ ಭಾವನೆ (urgent feeling) ಉಂಟಾಗುತ್ತದೆ.

ದೇಹ ತೂಕ ಕಡಿಮೆಯಾಗುವುದು, ತೇಗು ಬರುವುದು. ಎದೆ ಉರಿತ, ತಲೆನೋವು, ಮಾಂಸಖಂಡಗಳ ನೋವು ಮುಂತಾದ ಇತರ ಲಕ್ಷಣಗಳು ಕಂಡು ಬರುತ್ತವೆ.

          ಇದಕ್ಕೆ ಪ್ರತ್ಯೇಕ ರೋಗ ಪತ್ತೆ ಪರೀಕ್ಷೆಗಳು ಇರುವುದಿಲ್ಲ. ಸಾಮಾನ್ಯವಾಗಿ ಈ ರೋಗ ನಿಶ್ಚಯಕ್ಕೆ ಯಾವ ರೀತಿಯ ಪರೀಕ್ಷೆಗಳು ಬೇಕಾಗದು. ಸರಿಯಾದ ರೋಗ ಇತಿಹಾಸ ಮತ್ತು ರೋಗಿಯ ಪರೀಕ್ಷೆ ಮಾತ್ರ ಸಾಕು. ಕೆಲವೊಮ್ಮೆ ಕರುಳಿನಲ್ಲಿ ಹುಣ್ಣು ಇರುವುದರ ಬಗ್ಗೆ ಅನುಮಾನ ಬಂದಾಗ sigmoidoscopy  ಅಥವಾ colonoscopy ಮಾಡಿಸಬೇಕಾಗಬಹುದು. ಕೆಲವೊಮ್ಮೆ ಬೇರೆ ಕಾಯಿಲೆ ಇಲ್ಲ ಎಂದು ನಿಗದಿಪಡಿಸಲು ರಕ್ತ ಪರೀಕ್ಷೆ ಬೇಕಾಗಬಹುದು.

ಹೆಚ್ಚಿನವರು ಈ ರೀತಿಯ ಲಕ್ಷಣಗಳನ್ನು ಸಾಮಾನ್ಯ ಎಂಬಂತೆ ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಮಲವಿಸರ್ಜನೆಯಲ್ಲಿನ ಈ ವೈಷಮ್ಯಗಳು, ಹೊಟ್ಟೆ ಉಬ್ಬರ, ಅಜೀರ್ಣ ಇತ್ಯಾದಿ ರೋಗದ ಮೂಲ ಲಕ್ಷಣವಾಗಿರಬಹುದು. ಆದ್ದರಿಂದ, ಈ ಲಕ್ಷಣಗಳು ಪದೇಪದೇ ಕಂಡುಬಂದರೆ ದಯವಿಟ್ಟು ಸಮೀಪದ ವೈದ್ಯರ ಬಳಿ ತೆರಳಿ ಸೂಕ್ತ ಸಲಹೆ ಮತ್ತು ಚಿಕಿತ್ಸೆ ಪಡೆಯುವುದು ಉತ್ತಮ.

IBS ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಉಚಿತ ಸಲಹೆಗಾಗಿ, ದಯವಿಟ್ಟು ಸರ್ಕಾರಿ ಆಯುರ್ವೇದ      ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಮೈಸೂರು ಗೆ ಭೇಟಿಕೊಡಿ. ಸಂಪರ್ಕಿಸಿ: [8762052998]

Leave a Reply