ಗುಂಡ್ಲುಪೇಟೆ: ಗ್ರಾಪಂಗೆ ಸೇರಿದ ಕಬ್ಬಿಣದ ಹಳೆಯ ತುಂಡುಗಳನ್ನು ಗ್ರಾಪಂ ಸದಸ್ಯರು ಹಾಗು ನೀರುಗಂಟಿ ಮಾರಾಟ ಮಾಡಿ ಅಕ್ರಮ ನಡೆಸಿದ್ದರು ಸಹ ಇವರ ವಿರುದ್ಧ ಕ್ರಮ ವಹಿಸಿಲ್ಲ ಎಂದು ಆರೋಪಿಸಿ ಶಿವಪುರ ಗ್ರಾಮಸ್ಥರು ಕಳೆದ 5 ದಿನದಿಂದ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ಪಿಡಿಓ ದೂರು ನೀಡಿದ ಬಳಿಕ ಮೂವರ ವಿರುದ್ಧ ಎಫ್‍ಐಆರ್ ದಾಖಲಾದ ನಂತರ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟಿದ್ದಾರೆ.
ಕಳೆದ 5 ದಿನಗಳಿಂದ ಪ್ರತಿಭಟನೆ ಫಲವಾಗಿ ಗ್ರಾಪಂ ಸದಸ್ಯರಾದ ಮಹದೇವಪ್ಪ, ಚನ್ನಬಸಪ್ಪ, ನೀರುಗಂಟಿ ಭೋಗಪ್ಪ ಅವರ ಮೇಲೆ ಶಿವಪುರ ಗ್ರಾಪಂ ಪಿಡಿಒ ಮಂಜುನಾಥ ರಾವ್ ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ ಬೆನ್ನಲ್ಲೆ ಗುಂಡ್ಲುಪೇಟೆ ಪೊಲೀಸರು ಐಪಿಸಿ 420 ಕೇಸು ದಾಖಲಿಸಿದ್ದಾರೆ.
ಬಿಜೆಪಿ ಮುಖಂಡ ಸಿದ್ದಪ್ಪ ಪ್ರತಿಭಟನೆಯಲ್ಲಿ ಮಾತನಾಡಿ, ಗ್ರಾಪಂ ಸದಸ್ಯರು ಹಾಗು ನೀರುಗಂಟಿಯ ಮೇಲೆ ಕೇಸು ದಾಖಲಾಗಿರುವ ಕಾರಣ ಕೂಡಲೇ ಪೊಲೀಸರು ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಗ್ರಾಮದ ಬಿಜೆಪಿ ಮುಖಂಡರು ಭಾಗವಹಿಸಿದ್ದರು.
ವರದಿ: ಬಸವರಾಜು ಎಸ್.ಹಂಗಳ