ಚಾಮರಾಜನಗರ: ಜಿಲ್ಲೆಯ ಪ್ರಸಿದ್ದ ಪುಣ್ಯ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟ ಸೇರಿದಂತೆ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕೌದಳ್ಳಿ-ರಾಮಾಪುರ ರಸ್ತೆ ಕಾಮಗಾರಿಯನ್ನು ಗುಣಮಟ್ಟದಿಂದ ನಿರ್ವಹಿಸುವಂತೆ ವಸತಿ, ಮೂಲಸೌಲಭ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಸೂಚಿಸಿದರು.
ಹನೂರು ತಾಲೂಕಿನ ರಾಮಾಪುರದಲ್ಲಿಂದು ೨೦ ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.
ಮಲೆ ಮಹದೇಶ್ವರರು ನಡೆದಾಡಿದ ಪುಣ್ಯ ಭೂಮಿಗೆ ಸಹಸ್ರಾರು ಜನರು ಭೇಟಿ ನೀಡುತ್ತಾರೆ. ಹೀಗಾಗಿ ರಸ್ತೆಗಳನ್ನು ಸಮರ್ಪಕವಾಗಿ ನಿರ್ವಹಿಸಿ ಅನುಕೂಲ ಕಲ್ಪಿಸಲಾಗುತ್ತಿದೆ. ೨೦ ಕೋಟಿ ರೂ. ವೆಚ್ಚದ ಅನುದಾನದಲ್ಲಿ ಪ್ರಸ್ತುತ ಕೌದಳ್ಳಿ-ರಾಮಾಪುರ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ನಿಲ್ಲದೇ ಎರಡು ಬದಿಯಲ್ಲಿ ಚರಂಡಿ ನಿರ್ಮಿಸಿ ನೀರು ಸರಾಗವಾಗಿ ಹರಿಯುವಂತೆ ಕಾಮಗಾರಿ ಕೈಗೊಳ್ಳಬೇಕು. ಗುಣಮಟ್ಟದ ಕಾಮಗಾರಿ ಆಗಬೇಕು ಎಂದು ಸಚಿವರು ತಿಳಿಸಿದರು.
ಹನೂರಿನಿಂದ ಮಲೆ ಮಹದೇಶ್ವರಬೆಟ್ಟ ಹಾಗೂ ಪಾಲರ್ ವರೆಗೆ ೧೩೦ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಯೂ ನಡೆಯಲಿದೆ. ಕಾಮಗಾರಿ ಸಂದರ್ಭದಲ್ಲಿ ತಿರುವುಗಳು ಇರುವ ಕಡೆ ತಡೆಗೋಡೆ ನಿರ್ಮಾಣ ಮಾಡಬೇಕು. ಬೆಟ್ಟದಿಂದ ಪಾಲಾರ್ ವರೆಗಿನ ರಸ್ತೆಯೂ ಸಹ ಸಮರ್ಪಕವಾಗಿ ನಿರ್ವಹಿಸಬೇಕು. ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಇನ್ನೂ ಹಲವು ಸೌಲಭ್ಯಗಳನ್ನು ಒದಗಿಸಬೇಕಿದೆ. ಇದು ನಮ್ಮ ಕರ್ತವ್ಯ ಹಾಗೂ ಸಂಕಲ್ಪವಾಗಿದೆ. ಈಗಾಗಲೇ ಕೊಳ್ಳೇಗಾಲದಿಂದ ಹನೂರಿನ ವರೆಗೆ ಕೆಶಿಪ್ ಅಡಿ ರಸ್ತೆ ಅಭಿವೃದ್ಧಿ ಪ್ರಗತಿಯಲ್ಲಿದೆ ಎಂದರು.
ಜಿಲ್ಲೆಯು ಶೇ. ೫೨ರಷ್ಟು ಅರಣ್ಯ ಪ್ರದೇಶವನ್ನು ಹೊಂದಿದೆ. ಮಳೆಯಾಶ್ರಿತ ಪ್ರದೇಶವು ಸಾಕಷ್ಟಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಕೆರೆಗಳಿಗೆ ನೀರು ತುಂಬಿಸಲು ವಿಸ್ತೃತ ಯೋಜನೆ ತಯಾರಿಸಿ ಚಾಲನೆ ನೀಡುವ ಉದ್ದೇಶ ಹೊಂದಲಾಗಿದೆ. ಜನರಿಗೆ ಕುಡಿಯುವ ನೀರು ಇನ್ನಿತರ ಮೂಲ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಸರ್ಕಾರದ ಸವಲತ್ತುಗಳನ್ನು ಜನಸಾಮಾನ್ಯರಿಗೆ ಸರಿಯಾಗಿ ತಲುಪಿಸಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅಗತ್ಯ ನೆರವು ನೀಡಬೇಕು ಎಂದು ಸಚಿವರು ತಿಳಿಸಿದರು.
ರಾಮಾಪುರ ಆಸ್ಪತ್ರೆಯನ್ನು ೧೦೦ ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಶಾಸಕರು ಹಾಗೂ ತಾವು ಜೊತೆಗೂಡಿ ಹನೂರಿನಲ್ಲೇ ಡಯಾಲಿಸಿಸ್ ಕೇಂದ್ರವನ್ನು ತೆರೆಯಲಿದ್ದೇವೆ ಎಂದ ಸಚಿವರು ಸ್ಥಳೀಯರ ಮನವಿ ಆಲಿಸಿ ರಾಮಾಪುರ ಆಸ್ಪತ್ರೆಗೆ ಮಹಿಳಾ ವೈದ್ಯರ ನಿಯೋಜನೆಗೆ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು.
ಶಾಸಕರಾದ ಆರ್. ನರೇಂದ್ರ ಅವರು ಮಾತನಾಡಿ ಕೌದಳ್ಳಿ-ರಾಮಾಪುರ ರಸ್ತೆ ಕಾಮಗಾರಿ ಯೋಜನೆ ವ್ಯಾಪ್ತಿಗೆ ೧.೨೫ ಕಿ.ಮೀ. ನಷ್ಟು ಒಳಪಟ್ಟಿರಲಿಲ್ಲ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಉದ್ದೇಶಿತ ಅನುದಾನದಲ್ಲಿ ಉಳಿಯುವ ಹಣದಲ್ಲಿ ೧.೨೫ ಕಿ.ಮೀ ಕಾಮಗಾರಿಯನ್ನು ಪೂರೈಸಲು ಸೂಚನೆ ನೀಡಿದ್ದಾರೆ. ಇದರಿಂದ ರಸ್ತೆ ಕೆಲಸ ಪೂರ್ಣವಾಗಿ ಹಾಗೂ ಅಚ್ಚುಕಟ್ಟಾಗಿ ಆಗಲಿದೆ. ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಎಲ್ಲರ ಪರವಾಗಿ ಅಭಿನಂದಿಸುವುದಾಗಿ ನುಡಿದರು.
ರಾಮಾಪುರ ಹನೂರು ಭಾಗದಲ್ಲಿ ಹಾನಿಯಾಗಿರುವ ರಸ್ತೆಗಳ ಪಟ್ಟಿಯನ್ನು ಸಚಿವರಿಗೆ ನೀಡಲಾಗಿದೆ. ಈ ರಸ್ತೆಗಳ ಅಭಿವೃದ್ದಿಯು ಆಗಬೇಕಿದೆ. ಇದಕ್ಕಾಗಿ ಅಗತ್ಯ ನೆರವು ಒದಗಿಸಬೇಕಿದೆ ಎಂದು ಶಾಸಕರಾದ ಆರ್. ನರೇಂದ್ರ ಅವರು ತಿಳಿಸಿದರು.
ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರಾದ ಎಂ. ರಾಮಚಂದ್ರ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ದಾಕ್ಷಾಯಿಣಿ, ಉಪಾಧ್ಯಕ್ಷರಾದ ಮುರುಗೇಶ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಬಸವರಾಜು, ಮುಖಂಡರಾದ ದತ್ತೇಶ್, ಡಾ. ಪ್ರೀತನ್, ವೆಂಕಟೇಶ್, ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ರಾಥೋಡ್, ಕಾರ್ಯಪಾಲಕ ಎಂಜಿನಿಯರ್ ವಿನಯ್ ಕುಮಾರ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
