ಚಾಮರಾಜನಗರ: ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಇಲಾಖೆಗಳು ಕ್ರಿಯಾಯೋಜನೆ ತಯಾರಿಸಿ ಮೇ ೧೫ರೊಳಗೆ ಅಗತ್ಯ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮತ್ತು ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿಯೂ ಆಗಿರುವ ಬಿ.ಬಿ. ಕಾವೇರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ಅನುಷ್ಟಾನಗೊಳಿಸುವ ಅಭಿವೃದ್ಧಿ ಕಾಮಗಾರಿ, ಕಾರ್ಯಕ್ರಮಗಳಿಗೆ ಕ್ರಿಯಾಯೋಜನೆ ರೂಪಿಸಬೇಕು. ವಿವಿಧ ಇಲಾಖೆಗಳು ತಯಾರಿಸುವ ಕ್ರಿಯಾಯೋಜನೆಗೆ ಅನುಮೋದನೆ ಪಡೆಯಬೇಕು. ಕ್ರಿಯಾಯೋಜನೆಯಲ್ಲಿ ಸ್ಪಷ್ಟತೆ ಇರಬೇಕು. ಅತೀ ಅವಶ್ಯವಿರುವ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡಬೇಕು. ಅದರಲ್ಲೂ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಗಳ ಕಾರ್ಯಕ್ರಮಗಳಿಗೆ ಪ್ರಥಮಾದ್ಯತೆ ನೀಡಿ ಅನುದಾನಕ್ಕೆ ಅಂದಾಜುಪಟ್ಟಿ ಸಲ್ಲಿಸುವಂತೆ ತಿಳಿಸಿದರು.
ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಿಯಾಯೋಜನೆ ತಯಾರಿಸಿ ಅನುಮೋದನೆಗೆ ಸಲ್ಲಿಸಬೇಕು. ಕಾರ್ಯಕ್ರಮಗಳನ್ನು ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಬಿಡುಗಡೆಯಾಗುವ ಅನುದಾನ ಸದ್ಬಳಕೆಯಾಗಬೇಕು. ಯಾವುದೇ ಕಾರಣಕ್ಕೂ ಅನುದಾನ ಸರ್ಕಾರಕ್ಕೆ ವಾಪಸ್ಸಾಗದಂತೆ ಎಲ್ಲಾ ಅಧಿಕಾರಿಗಳು ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಮೇ ತಿಂಗಳ ೧೫ರೊಳಗೆ ಕ್ರಿಯಾಯೋಜನೆ ರೂಪಿಸಿ ಅನುಮೋದನೆ ಪಡೆದು ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಎಲ್ಲಾ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ೧೪೨೩ ಅಂಗನವಾಡಿ ಕೇಂದ್ರಗಳಿದ್ದು, ಕೆಲ ಅಂಗನವಾಡಿಗಳು ಸ್ವಂತ ಕಟ್ಟಡ ಹೊಂದಿದ್ದು, ಉಳಿದಂತೆ ಬಾಡಿಗೆ ಕಟ್ಟಡದಲ್ಲಿ ನಿರ್ವಹಣೆಯಾಗುತ್ತಿವೆ. ಬಾಡಿಗೆ ಕಟ್ಟಡದ ಸಾಕಷ್ಟು ಅಂಗನವಾಡಿಗಳು ಶಿಥಿಲಾವಸ್ಥೆಯಲ್ಲಿವೆ. ಹೊಸ ಅಂಗನವಾಡಿ ಕಟ್ಟಡಕ್ಕೆ ೩೬ ಶಾಲೆಗಳಲ್ಲಿ ಈಗಾಗಲೇ ಜಾಗ ಗುರುತಿಸಲಾಗಿದೆ. ಅಂಗನವಾಡಿಗಳಲ್ಲಿ ಕುಡಿಯುವ ನೀರು, ಆಡುಗೆಮನೆ, ಶೌಚಾಲಯ, ಕೈತೋಟ, ಆಟದ ಮೈದಾನ ಸೇರಿದಂತೆ ಇತರೆ ಮೂಲಸೌಲಭ್ಯಗಳು ಸಮರ್ಪಕವಾಗಿ ನಿರ್ವಹಣೆಯಾಗಬೇಕು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅಂಗನವಾಡಿಗಳಿಗೆ ಖುದ್ದು ಭೇಟಿ ಅಲ್ಲಿನ ನಿರ್ವಹಣೆ ಪರಿಶೀಲಿಸಬೇಕು. ತಪ್ಪಿದಲ್ಲಿ ಗಂಭೀರವಾಗಿ ಪರಿಣಿಸುವುದಾಗಿ ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿಯವರು ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಈ ಬಾರಿ ೧೧೫೪೮ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗಿದ್ದು, ಪರೀಕ್ಷಾ ಮೌಲ್ಯಮಾಪನಾ ಕಾರ್ಯ ಆರಂಭವಾಗಿದೆ. ಮೇ ಮೊದಲ ವಾರದಲ್ಲಿ ಫಲಿತಾಂಶ ನಿರೀಕ್ಷಿಸಬಹುದಾಗಿದೆ. ಅಕ್ಷರದಾಸೋಹ ಯೋಜನೆಯಡಿ ಈ ಸಾಲಿನಲ್ಲಿ ಪ್ರಾದೇಶಿಕ ಆಹಾರ ರಾಗಿಗೆ ಆದ್ಯತೆ ನೀಡುವಂತೆ ಮಾರ್ಗಸೂಚಿ ಬಿಡುಗಡೆಯಾಗಿದೆ. ಅದರನ್ವಯ ಮಕ್ಕಳಿಗೆ ರಾಗಿ ಆಹಾರವನ್ನು ನಿಗದಿತ ಮೆನು ಜೊತೆ ನೀಡುವಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಗಳನ್ನು ಅನುಷ್ಠಾನಗೊಳಿಸುವ ಇಲಾಖೆಗಳಿಗೆ ಸಮಾಜ ಕಲ್ಯಾಣ ನೋಡೆಲ್ ಇಲಾಖೆಯಾಗಿದೆ. ಎಲ್ಲಾ ಇಲಾಖೆಗಳ ಕಾರ್ಯಕ್ರಮಗಳನ್ನು ಚುರುಕುಗೊಳಿಸಬೇಕು. ಇಲಾಖೆಯ ವಸತಿ ಶಾಲೆಗಳಲ್ಲಿ ಉತ್ತಮ ಫಲಿತಾಂಶಕ್ಕಾಗಿ ಅಲ್ಲಿನ ಶಿಕ್ಷಕರಿಗೆ ತರಬೇತಿಯ ಅಗತ್ಯವಿದೆ. ತರಬೇತಿಯಿಂದ ಶಿಕ್ಷಕರ ಬೋಧನಾ ಗುಣಮಟ್ಟ ಹೆಚ್ಚಲಿದೆ ಎಂದು ತಿಳಿಸಿದರು.
ಮಲೆಮಹದೇಶ್ವರ ಬೆಟ್ಟದಲ್ಲಿ ೩೦ ಹಾಗೂ ಹನೂರಿನಲ್ಲಿ ೧೦೦ ಹಾಸಿಗೆಗಳ ಆಸ್ಪತ್ರೆ, ಡಯಲಿಸಿಸ್ ಯುನಿಟ್, ಹಾಗೂ ಕೌದಳ್ಳಿಯಲ್ಲಿ ಟ್ರಾಮಾಕೇರ್ ಸೆಂಟರ್ ನಿರ್ಮಾಣಕ್ಕಾಗಿ ಅಗತ್ಯ ಕ್ರಿಯಾಯೋಜನೆ ತಯಾರಿಸಿ ಅನುಮೋದನೆ ಪಡೆಯಬೇಕು. ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ ಆರೋಗ್ಯ ಕಾರ್ಡುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಿತರಿಸಬೇಕು. ಪಿ.ಎಚ್.ಸಿ ಹಾಗೂ ಸಿ.ಎಚ್.ಸಿ ಸೇರಿದಂತೆ ಆರೋಗ್ಯ ಉಪ ಕೇಂದ್ರಗಳಿಗೆ ವೈದ್ಯರು ಪ್ರತಿದಿನ ಹಾಜರಾಗುವಂತೆ ನಿರ್ದೇಶನ ನೀಡುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಉಳಿದಂತೆ ಸಾಮಾಜಿಕ ಅರಣ್ಯ, ರೇಷ್ಮೆ, ಪರಿಶಿಷ್ಟ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮಗಳು, ವಿಕಲಚೇತನರು, ಆಹಾರ, ಗ್ರಾಮೀಣ ಕೈಗಾರಿಕೆ, ಜಲ ಜೀವನ್ ಮಿಷನ್ ಯೋಜನೆ ಹಾಗೂ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿ, ಕಾರ್ಯಕ್ರಮಗಳ ಕುರಿತು ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಬಿ.ಬಿ. ಕಾವೇರಿ ಅವರು ಸಮಗ್ರವಾಗಿ ಪರಿಶೀಲನೆ ನಡೆಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
